ಧಾರವಾಡದ ಪುಷ್ಪಾ ಹಾಲಭಾವಿ ಅವರ ಕವನವನ್ನು ತಪ್ಪದೆ ಮುಂದೆ ಓದಿ…
ಒಳಗೊಳಗೆ ನೋವುಂಡು ಮೇಲೆ ನಗುವ
ಅವಳ ಮುಖದಾವರೆಯ ನೋಟ
ಅಂತರಂಗದಲಿ ಹುದುಗಿಟ್ಟ ಆಸೆಗಳ
ತೆರೆದು ನೋಡದೆ ನಿರಂತರ ಸಾಗುವ ಓಟ
ನಿರಂತರ ಓಟದಲಿ ಕಳೆದಿದೆ ಶತಮಾನ
ಇಂದರಿವಾಗಿದೆ ಕಳೆದುಕೊಂಡ ತನ್ನತನ
ಭೂತದಲಿ ಕಾಣದ ಹೆಜ್ಜೆಯ ಗುರುತು
ಮೂಡಿಸಿದೆ ಛಲ ತನ್ನಸ್ಮಿತೆಯ ಬಿಂಬಿಸಲು
ಭಾವನೆಗಳ ಬದಿಗೊತ್ತಿ ಸ್ವಂತಿಕೆಯ ಮೆರೆದಿಹಳು
ಹುದುಗಿರುವ ತನ್ನಾತ್ಮದ ಚೆಲುವ ತೋರಿರುವಳು
ತಾನೂ ಬಲವಿರುವ ಹೆಣ್ಣೆಂದು ಬೀಗುತಿರುವಳು
ಹೆಣ್ಣಿಂದಲೇ ಜಗವೆಂಬ ಮಾತು ತೇಲಿ ಬಿಟ್ಟಿರುವಳು.
- ಪುಷ್ಪಾ ಹಾಲಭಾವಿ – ಧಾರವಾಡ.