ದಾಂಪತ್ಯ ಎಂದರೆ ದಿವ್ಯ ಅನುಸಂಧಾನ

ದಾಂಪತ್ಯ ಎನ್ನುವುದು ಒಂದು ಸಾಂಪ್ರದಾಯಕ ಹಾಗೂ ಕಾನೂನಾತ್ಮಕ ಆಚರಣೆಯಾಗಿದೆ. ದಾಂಪತ್ಯ ಎಂದರೆ ಕೇವಲ ಒಬ್ಬರ ಜೊತೆ ಒಬ್ಬರು ಇರುವುದಲ್ಲ. ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವಿಸುವುದೇ ಆಗಿದೆ. ಪುಷ್ಪಾ ಹಾಲಭಾವಿ ಅವರ ಚಿಂತನ ಲೇಖನವನ್ನು ತಪ್ಪದೆ ಓದಿ…

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದ ಎರಡು ಜೀವಗಳು ಭಾವನಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ಅರ್ಥಿಕವಾಗಿ ಹೊಂದಾಣಿಕೆ ಮಾಡಿಕೊಂಡು ತಮ್ಮ ಬದುಕನ್ನು ಕಟ್ಟಿ ಕೊಳ್ಳುವುದೇ ದಾಂಪತ್ಯವಾಗಿದೆ. ಮದುವೆಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುವ ಹದಿ ಹರೆಯದ ಎರಡು ಹೃದಯಗಳ ಸಮ್ಮಿಲನವಿದು ಮದುವೆ. ಇಲ್ಲಿ ಮೊದಲ ಎರಡಕ್ಷರ ಮದು ಎಂದರೆ ಜೇನು. ಮದುವೆಯ ಬಂಧನಕ್ಕೆ ಒಳಗಾದ ಪತಿ, ಪತ್ನಿಯರು ಕೂಡಿ ಇದ್ದರೆ ಬದುಕು ಜೇನಾಗುವುದು.

ಸೀತಾ ಪರಿಣಯದ ಸಂದರ್ಭದಲ್ಲಿ ಜನಕ ಮಹಾರಾಜ ಸೀತೆಯನ್ನು ಶೀರಾಮ ಚಂದ್ರನಿಗೆ ಪರಿಚಯ ಮಾಡಿಕೊಡುತ್ತ ಒಂದು ಮಾತು ಹೇಳುತ್ತಾನೆ . “ಇಯಂ ಸೀತಾ ,ಮಮ ಸುತಾ ,ತಮ ಧರ್ಮ ಚರಿತವ…”ನನ್ನ ಮಗಳು ಸೀತೆ ಇನ್ನು ನಿನಗೆ ಧರ್ಮ ಪತ್ನಿ . ಅವಳು ಯಾವಾಗಲೂ ನಿನ್ನ ನೆರಳಾಗಿ ಇರುತ್ತಾಳೆ. ಬೆಳಿಗ್ಗೆ ಸೂರ್ಯನಿಗೆ ಎದುರು ನಿಂತಾಗ ನಿನ್ನ ನೆರಳು ನಿನ್ನ ಹಿಂದೆ ಇರುವಂತೆ ಅವಳು ನಿನ್ನ ಬದುಕಿನ ಉತ್ಕರ್ಷದಲ್ಲಿ ನಿನಗೆ ಸಹಾಯ ಮಾಡುತ್ತ ಹಿಂದೆ ಇರುತ್ತಾಳೆ. ನಡು ಮಧ್ಯಾನ್ಹ ನಿನ್ನ ನೆರಳು ನಿನ್ನ ಕಾಲ ಬುಡದಲ್ಲೇ ಇರುತ್ತೆ ಅಂದ್ರೆ ನಿನ್ನ ಕಷ್ಟ ಕಾಲದಲ್ಲಿ ನನ್ನ ಮಗಳು ನಿನ್ನ ಜೊತೆಯಲ್ಲೇ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯುತ್ತಾಳೆ.ಸಂಜೆ ಅಂದ್ರೆ ನಿನ್ನ ಇಳಿ ವಯಸ್ಸಿನಲ್ಲಿ ನಿನ್ನ ಶಕ್ತಿ ಕುಂದಿದಾಗ ,ರೋಗ ರುಜಿನಗಳು ಬಂದಾಗ ಅವಳು ನಿನ್ನನ್ನು ತಾಯಿಯಂತೆ ನೋಡಿ ಕೊಳ್ತಾಳೆ. ಆಗ ಸೂರ್ಯ ನಿನ್ನ ಹಿಂದೆ ನೆರಳು ನಿನ್ನ ಮುಂದೆ ಇರುತ್ತದೆ. ಹೀಗೆ ನೆರಳಿನ ಬಗ್ಗೆ ಹೇಳುತ್ತ ಇದು ಭಾರತೀಯ ಸನಾತನ ಧರ್ಮದ ದಾಂಪತ್ಯ ದ ಪರಿಕಲ್ಪನೆ ಎನ್ನುತ್ತಾರೆ ಗುರುರಾಜ ಕರ್ಜಗಿಯವರು . ಮುಂದುವರಿದು ಬದುಕ ಪಯಣದಲ್ಲಿ ಕೇವಲ ಹೆಣ್ಣಷ್ಟೇ ನೆರಳಾದರೆ ಸಾಲದು, ಗಂಡೂ ಸಹ ಹೆಣ್ಣಿಗೆ ನೆರಳಾಗಿ ಸಾಗಿದರೆ ಮಾತ್ರ ಅದೊಂದು ಯಶಸ್ವಿ ದಾಂಪತ್ಯ ಎನ್ನಬಹುದು ‌ಎನ್ನುತ್ತಾರೆ.

ಫೋಟೋ ಕೃಪೆ : google

ಬಹುಶಃ ಹೆಣ್ಣಿಗಿರುವ ಸಹನೆಯೇ ಅವಳನ್ನು ಗಂಡನ ನೆರಳಾಗಿಸಿರಬೇಕು.ಹಿಂದೆಲ್ಲ ಹೆಣ್ಣು ಮನೆಯಲ್ಲಿದ್ದುಕೊಂಡೇ ಮನೆಯ ಜವಾಬ್ದಾರಿ ವಹಿಸಿಕೊಂಡು ಅತ್ತೆ,ಮಾವ,ಮಕ್ಕಳು,ಸಂಸಾರವನ್ನು ನಿಭಾಯಿಸುತಿದ್ದಳು.ಆದರೆ ಇಂದಿನ ದಿನಗಳಲ್ಲಿ ಹೆಣ್ಣು ಹೊರಗೆ ದುಡಿಯುತ್ತಲೇ ಮನೆಯನ್ನೂ, ಸಂಸಾರವನ್ನೂ ಸಂಭಾಳಿಸುತ್ತಾಳೆ.ಅದಕ್ಕೇ ಇರಬೇಕು.

ಕೆ.ಎಸ್ ನರಸಿಂಹ್ವಾಮಿಯವರು…. ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ … ಎಂದು ತಮ್ಮ ಒಂದು ಕವಿತೆಯಲ್ಲಿ ಹೇಳುತ್ತಾರೆ. ಇದು ಹೆಂಡತಿಯ ಬಗ್ಗೆ ಅಭಿಮಾನದಿಂದ ಹೇಳುವ ಮಾತು. ಇಲ್ಲಿ ಕವಿಗೆ ಹೆಂಡತಿಯೇ ಸರ್ವಸ್ವ, ಅವಳಿದ್ದರೆ ಅವನ ಬಳಿ ಹಣವಿರದಿದ್ದರೂ ಕೋಟಿ ರೂಪಾಯಿ ಇದ್ದಷ್ಟು ಧೈರ್ಯ, ಹತ್ತಿರ ಹೆಂಡತಿ ಇದ್ದರೆ ತಾನೊಬ್ಬ ಸಿಪಾಯಿಯಾಗುತ್ತೇನೆ ಎನ್ನುವ ಕವಿ ಹೆಂಡತಿ ಇಲ್ಲದಿರೆ ಬದುಕಿಲ್ಲ ಎಂಬ ಮಾತನ್ನು ಹೇಳುತ್ತಾರೆ.

‘ಬೆಚ್ಚನೆಯ ಮನೆಯಾಗಿ ವೆಚ್ಚಕ್ಕೆ ಹೊನ್ನಾಗಿ ಇಚ್ಚೆಯನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’. ಹೀಗೆ ಗಂಡನ ಇಚ್ಚೆಯನರಿತು ನಡೆಯುವ ಸತಿಯಿದ್ದರೆ ಬದುಕು ಸ್ವರ್ಗವಾಗುತ್ತದೆ ಅಂತ ಸರ್ವಜ್ಞ ಹೇಳುತ್ತಾನೆ. ಆದರೆ ಯಾವಾಗಲೂ ಸತಿಯೇ ಪತಿಯ ಇಚ್ಛೆಯನರಿತು ನಡೆದರೆ ಸಾಲದು‌. ಪತಿಯೂ ಸತಿಯ ಇಚ್ಛೆ ಯನರಿತು ನಡೆದರೆ ಮಾತ್ರ ಬದುಕು ಸ್ವರ್ಗವಾಗುವುದು. ಗಂಡ, ಹೆಂಡತಿ ಇಬ್ಬರೂ ಬದುಕೆಂಬ ಗಾಡಿಯ ಎರಡು ಗಾಲಿಗಳು .ಎರಡೂ ಗಾಲಿಗಳು ಸರಿಸಮನಾಗಿ ಗಾಡಿ ಎಳೆದರೆ ಗಾಡಿ ಯಾವ ಅಡೆತಡೆಯಿಲ್ಲದೆ ಮುಂದೆ ಸಾಗುವುದು.

ಒಂದು ಗಾಲಿ ಸಡಿಲವಾದರೆ ಬಂಡಿ ಮುಂದೆ ಸಾಗಲು ತೊಂದರೆಯಾಗುತ್ತದೆ.

ಫೋಟೋ ಕೃಪೆ : google

ವಿವಾಹವೆಂದರೆ :

ವಿ–ವ:(ಹ) ಇತಿ ವಿವಾಹ. ವಿ ಎಂದರೆ ಸಂಗಡ, ವಹ ಎಂದರೆ‌ ಹರಿಯುವುದು, ಅರ್ಥಾತ್‌ ಜೊತೆಯಾಗಿ ಹರಿಯುವುದು ಅಥವಾ ಜೊತೆಯಾಗಿ ಬದುಕ ಪಯಣದಲ್ಲಿ ಮುಂದೆ ಸಾಗುವುದು. ಬೇರೆ, ಬೇರೆ ಪರಿಸರದಲ್ಲಿ ಹುಟ್ಟಿ ಬೆಳೆದು ದಾಂಪತ್ಯದ ಬಂಧನದಲ್ಲಿ ಸಿಲುಕುವ ಗಂಡು, ಹೆಣ್ಣು ಇಬ್ಬರೂ ಬೇರೆ ಬೇರೆ ವ್ಯಕ್ತಿತ್ವಗಳನ್ನು ಹೊಂದಿರುತ್ತಾರೆ . ಪತಿಗೆ ತನ್ನದೇ ಆದ ವಿಚಾರಗಳು, ನಂಬಿಕೆಗಳು,ಭಾವನೆಗಳು, ಆಸೆ ಆಕಾಂಕ್ಷೆಗಳು ಇದ್ದಂತೆ ಸತಿಗೂ ಇರುತ್ತವೆ.ಇಬ್ಬರೂ ವಿಭಿನ್ನ ವ್ಯಕ್ತಿತ್ವ ಹೊಂದಿಯೂ ಸಂಸಾರದಲ್ಲಿ‌‌‌‌ ಸಮಾನರು.ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಗಂಡ ಹೆಂಡತಿಯ ಗುಲಾಮನಲ್ಲ.ಹೆಂಡತಿ ಸಹ ಗಂಡನ ಅಡಿಯಾಳಲ್ಲ. ಯಾರೂ ಯಾರ ಭಾವನೆಗಳಿಗೆ ಧಕ್ಕೆಯಾಗದಂತೆ ಪ್ರೀತಿ, ವಿಶ್ವಾಸದಿಂದ ನಡೆದರೆ ಸಂಸಾರದಲ್ಲಿ ನೆಮ್ಮದಿ ಇರುತ್ತದೆ. ದಾಂಪತ್ಯದ ಭದ್ರ ಬುನಾದಿ ಎಂದರೆ ಸತಿ, ಪತಿಗಳಲ್ಲಿ ಪರಸ್ಪರರ ಬಗ್ಗೆ ಇರಬೇಕಾದ‌ ನಂಬಿಕೆ. ಆ ನಂಬಿಕೆಗೆ ಚ್ಯುತಿ ಬಂದಾಗ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ. ಏನೇ ಭಿನ್ನಾಭಿಪ್ರಾಯ ಬಂದರೂ ದಂಪತಿಗಳು ನೇರ ಮಾತುಕತೆಯಿಂದ‌ ಬಗೆಹರಿಸಿ ಕೊಳ್ಳದಿದ್ದರೆ ತಪ್ಪು ತಿಳುವಳಿಕೆ ಉಂಟಾಗಿ ವೈಮನಸ್ಸಿಗೆ ಕಾರಣವಾಗುತ್ತದೆ

ಈಗ ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣು, ಗಂಡು ಇಬ್ಬರೂ ಸಮಾನರು. ಇಂದಿನ ಗಂಡು,ಹೆಣ್ಣು ಓದು ಮುಗಿಸಿ ನೌಕರಿ ಮಾಡುವ ಹಂತಕ್ಕೆ ಬಂದಾಗ ಪ್ರಾಪ್ತ ವಯಸ್ಕರಾಗಿರುತ್ತಾರೆ. ಅವರಿಗೆ ಅವರದೇಯಾದ‌ ಕನಸುಗಳಿರುತ್ತವೆ ಭಾವನೆಗಳಿರುತ್ತವೆ ಸುಂದರ ಬದುಕನ್ನು ಕಟ್ಟಿಕೊಳ್ಳುವ ಆಸೆ ಇರುತ್ತದೆ. ಹೆತ್ತವರಿಂದ, ಬಂಧು ಬಳಗದವರಿಂದ ದೂರವಿರುವ ಹದಿ ಹರೆಯದ ಮನಸುಗಳು ಪ್ರೀತಿಯ ಬಲೆಗೆ ಸಿಕ್ಕು ಲಿವ್ ಇನ್ ರಿಲೇಷನ್ ಶಿಪ್ ಲ್ಲಿ ಒಂದಾಗುತ್ತಾರೆ.ಇಲ್ಲಿ ಯಾವುದೇ ಬಂಧನಗಳಿಲ್ಲ,ಹಿರಿಯರ ಆಶೀರ್ವಾದವಿಲ್ಲ, ಮಾರ್ಗದರ್ಶನವಿಲ್ಲ, ಭವಿಷ್ಯದ ಬದುಕಿನ ಅಡೆತಡೆಗಳ ಕಲ್ಪನೆಯಿಲ್ಲ. ಹಣವಿದೆ, ಸ್ವಾತಂತ್ರ್ಯವಿದೆ.

ಫೋಟೋ ಕೃಪೆ : google

ಯೌವ್ವನವಿದೆ ಅನುಭವಿಸ ಬೇಕೆಂಬ ಉತ್ಕಟ ‌ಆಕಾಂಕ್ಷೆ ಇದೆ ಅಷ್ಟೆ. ಇಂತಹ ಬದ್ಧತೆಯಿಲ್ಲದ ಬದುಕಿನಲ್ಲಿ ಅರ್ಥಿಕವಾಗಿಯೋ,ಕಾಮದ ಕಾರಣವಾಗಿಯೋ ತಂಟೆಯಾದಾಗ ಸಂಬಂಧ ಕಡಿದುಕೊಂಡು ಹೊರ ಬರುತ್ತಾರೆ.ಇಂಥ ಸಂಬಂಧದಲ್ಲಿ ಮದುವೆ,ದಾಂಪತ್ಯಕ್ಕೆ ಅರ್ಥವಿಲ್ಲ.

ಹಿಂದೂ ಸಮಾಜದಲ್ಲಿ ಮದುವೆಗೆ ಅದರದೇ ಆದ ಪ್ರಾಮುಖ್ಯತೆ ಇದೆ.ಮದುವೆಯ ಸಮಯದಲ್ಲಿ ವಧು, ವರರು ಪರಸ್ಪರ ಮಾಡಿಕೊಳ್ಳುವ ಒಡಂಬಡಿಕೆ ಎಂದರೆ ಧರ್ಮೇಚ, ಅರ್ಥೇಚ, ಕಾಮೇಚ, ನಾತಿಚರಾಮಿ, ನಾತಿಚರಿತವ್ಯಂ. ಇದು ದಾಂಪತ್ಯದ ಹೊಸ್ತಿಲಲ್ಲಿ ನಿಂತಿರುವ
ಗಂಡು, ಹೆಣ್ಣು ತಾವೇ, ತಮ್ಮಿಬ್ಬರ ನಡುವೆ ಕೊಟ್ಟು ಕೊಳ್ಳುವ ಭಾಷೆಯಾಗಿದೆ. ಇದು ಧರ್ಮದಿಂದಾಗಲಿ, ಸಂಪತ್ತಿಗಾಗಿ ಅತಿ ಆಸೆ ಪಡದೆ,ಕಾಮತೃಷೆಗಾಗಿ ಅನ್ಯರೊಡನೆ ಸಂಪರ್ಕ ಇಟ್ಟುಕೊಳ್ಳದೆ ಇದ್ದರೆ ಅಂತಹ ಜೋಡಿ ನೆಮ್ಮದಿಯ ಬದುಕನ್ನು ಬದುಕ ಬಹುದು ಎಂಬುದು ನಮ್ಮ ಹಿರಿಯರ ಅನುಭವದ ಮಾತು.

ದಾಂಪತ್ಯ ಎನ್ನುವುದು ಒಂದು ದಿವ್ಯ ಅನುಸಂಧಾನ.ದಿವ್ಯ ಎನ್ನುವುದಕ್ಕೆ ಪವಿತ್ರ, ಸುಂದರ, ಶ್ರೇಷ್ಠ ಎನ್ನುವ ಅರ್ಥದ ಜೊತೆಗೆ ಪರೀಕ್ಷೆ ಎನ್ನುವ ಇನ್ನೊಂದು ಅರ್ಥವೂ ಇದೆ. ಪವಿತ್ರವಾದ ದಾಂಪತ್ಯದ ನಂಟಿನಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ವೈವಾಹಿಕ ಬದುಕಿಗೆ ಕಾಲಿಟ್ಟ ಘಳಿಗೆಯಿಂದ‌ ಗಂಡು,ಹೆಣ್ಣು ಪರಸ್ಪರ ಅವಲಂಬಿತರಾಗಿರುತ್ತಾರೆ. ಈ ಬದುಕ ಪಯಣದಲ್ಲಿ ಬದುಕಿನ ಏರಿಳಿತಗಳು, ಕತ್ತಲು ಬೆಳಕುಗಳು, ಆಕರ್ಷಣ, ವಿಕರ್ಷಣಗಳು ದಾಂಪತ್ಯದ ನಿಜದ ಪರೀಕ್ಷೆಗಳು. ಈ ಎಲ್ಲ ಪರೀಕ್ಷೆಗಳನ್ನು ದಂಪತಿಗಳು ಒಬ್ಬರಿಗೊಬ್ಬರು ಸಹಕಾರದಿಂದ ಎದುರಿಸಿದರೆ ಬದುಕು ಭಾರವೆನಿಸುವುದಿಲ್ಲ.

ದಾಂಪತ್ಯವೆನ್ನುವುದೇ ಒಂದು ಧರ್ಮ. ಅದಕ್ಕೆ ಬದ್ಧರಾಗಿ ಅದರ ಅನುಶಾಸನದಂತೆ ನಡೆದರೆ ಅದೊಂದು ಸ್ವರ್ಗ. ದರ್ಮೇಚ ನಾತಿಚರಾಮಿ ಎನ್ನುವ ಮಾತಿಗೆ ಅರ್ಥ ಬರುತ್ತದೆ. ಅರ್ಥೇಚ ಎನ್ನುವುದು ಕೇವಲ ಹಣ ಗಳಿಕೆಯೇ ಮುಖ್ಯವಾಗಿ ಇತರ ಬಯಕೆಗಳನ್ನು ಅದುಮಿಟ್ಟರೆ ಸಂಸಾರದ ಸುಖ ನಾಶವಾಗುತ್ತದೆ.ಕಾಮೇಚ ನಾತಿಚರಾಮಿ ಎನ್ನುವುದು ಕೇವಲ ದೈಹಿಕ ಸುಖದ ನಿಗ್ರಹಣೆಯಲ್ಲ ಬದಲಿಗೆ ಅದು ಲೌಕಿಕದ ಇತರ ಆಚರಣೆಯಿಂದಲೂ ಮುಕ್ತವಾಗುವ ಉಪಾಯ.

ಫೋಟೋ ಕೃಪೆ : google

ದಾಂಪತ್ಯ ದಲ್ಲಿ ಪ್ರೀತಿ, ಪಾವಿತ್ರ್ಯ, ನಿಷ್ಟೆ, ಸಾಮರಸ್ಯಗಳನ್ನು ಉಳಿಸಿ ಬೆಳೆಸಿ ಕೊಳ್ಳುವುದು ನಿಜಕ್ಕೂ ದಿವ್ಯವೇ.ದಾಂಪತ್ಯ ದಿವ್ಯದಲ್ಲಿ ಮಿಂದು ಪವಿತ್ರವಾಗುವ ಜೋಡಿಗೆ ದಾಂಪತ್ಯವೆನ್ನುವುದು ಕೇವಲ ದೈಹಿಕ ಕಾಮನೆಯ ಅಥವಾ ವ್ಯಾವಹಾರಿಕತೆಯ ಕುರುಹಲ್ಲ,ಬದಲಿಗೆ ಅದು ಅವರ ವ್ಯಕ್ತ ಜೀವನದ ಉದಾತ್ತೀಕರಣ ಮತ್ತು ಸಮಷ್ಟಿಯ ಹಿತ ಸಾಧನ. ಪರಿಶುದ್ದ ವೈವಾಹಿಕ ಜೀವನ ಹಾಗೂ ಹಿತವಾದ ಕೌಟುಂಬಿಕ ಬಾಂಧವ್ಯ ಧರ್ಮೇಚ,ಅರ್ಥೇಚ,ಕಾಮೇಚ ಎಂದು ವಾಗ್ದಾನ ಮಾಡಿದವರೆಲ್ಲರೂ ಅದಕ್ಕೆ ಬದ್ಧರಾದರೆ ವಿಚ್ಚೇದನಗಳ
ಪ್ರಾಬಲ್ಯ ಕಡಿಮೆಯಾದೀತು.

ಸುಖ ದಾಂಪತ್ಯಕ್ಕೆ ಸತಿ, ಪತಿ ಇಬ್ಬರೂ ಬಾಧ್ಯಸ್ತರು. ಎರಡು ಕೈ ಕೂಡಿದರೆ ಚಪ್ಪಾಳೆ ಎನ್ನುವಂತೆ ಇಬ್ಬರೂ ದಾಂಪತ್ಯ ಜೀವನದ ಯಶಸ್ಸಿಗೆ ಕಾರಣ ಕರ್ತರು .ದಂಪತಿಗಳು ಪರಸ್ಪರರ ಕೊರತೆಗಳನ್ನು ತಿಳಿದು ಕೊಳ್ಳ ಬೇಕು, ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳ ಬೇಕು. ಕೊರತೆಗಳನ್ನೇ ವೈಭವೀಕರಿಸದೆ. ಆ ಕೊರತೆಗಳನ್ನು ಒಬ್ಬರಿಗೊಬ್ಬರು  ಪೂರೈಸಬೇಕು. ಅದರ ಹೊರತಾಗಿ ಒಬ್ಬರ ಮೇಲೊಬ್ಬರು ಪೈಪೋಟಿ ಮಾಡ ತೊಡಗಿದಾಗ ಅಲ್ಲಿ ಸಂಬಂಧದಲ್ಲಿ ಬಿರುಕು ಮೂಡುತ್ತವೆ. ಆಗ ಅಲ್ಲಿ ಸಹಮತ,ಸಹಬಾಳ್ವೆ ಇರದೆ ಕೇವಲ ಒಂದು ಚೌಕಟ್ಟಿನಲ್ಲಿ ವ್ಯವಸ್ಥೆ ಇರುತ್ತದೆ.

ದಾಂಪತ್ಯದಲ್ಲಿ ಪ್ರೀತಿ ಮತ್ತು ಬದ್ಧತೆ, ನಿಷ್ಟೆ, ಪ್ರಾಮಾಣಿಕತೆ, ನಂಬಿಕೆ, ಸಮಯ ಪರಿಪಾಲನೆ , ಸಂವಹನ ಅತಿ ಮುಖ್ಯವಾಗುತ್ತವೆ. ದಂಪತಿಗಳು ತಮ್ಮ ಸಂಗಾತಿಯ ಜೊತೆ ಮನಬಿಚ್ಚಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳ ಬೇಕು. ಇಬ್ಬರೂ ಮನೆ ಕೆಲಸಗಳನ್ನು ಹಂಚಿಕೊಂಡು ಮಾಡಬೇಕು. ಸಂಗಾತಿಗೆ ಗುಣ ಮಟ್ಟದ ಸಮಯ ಕೊಟ್ಟರೆ ಅದು ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ. ತಮ್ಮ ಭಾವನೆಗಳು, ಅನುಮಾನಗಳು, ಭಯಗಳು, ಆಲೋಚನೆಗಳು, ನಂಬಿಕೆಗಳು. ಮೌಲ್ಯಗಳು, ಭರವಸೆ, ಕನಸುಗಳನ್ನು ಪರಸ್ಪರರು ಹಂಚಿಕೊಂಡು ಯಾರ ಭಾವನೆಗೂ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಿದರೆ ಬದುಕು ಸ್ವರ್ಗವಾಗಿ ದಾಂಪತ್ಯ ಜೀವನಕ್ಕೊಂದು ಅರ್ಥ ಬರುತ್ತೆ.


  • ಪುಷ್ಪಾ ಹಾಲಭಾವಿ – ಧಾರವಾಡ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW