ಇಂದು ವಿಶ್ವ ಹಿರಿಯ ನಾಗರಿಕರ ದಿನ

ಪ್ರತಿ ವರ್ಷ ಆಗಸ್ಟ್ 21 ರಂದು ‘ವಿಶ್ವ ಹಿರಿಯ ನಾಗರಿಕರ ದಿನ’ವೆಂದು ಆಚರಿಸಲಾಗುತ್ತದೆ. ಇದನ್ನು ಮೊದಲ ಬಾರಿಗೆ 1991ರಲ್ಲಿ ಆಚರಿಸಲಾಗಿದ್ದು. ವಿಶ್ವ ಹಿರಿಯ ನಾಗರಿಕರ ದಿನದ ಇತಿಹಾಸವು 1988 ರ ಹಿಂದಿನದು. ವಿಶೇಷ ದಿನಕ್ಕೆ ಯಶು ಅವರ ಈ ಲೇಖನವನ್ನು ತಪ್ಪದೆ ಓದಿ…

ಊರು ಹೋಗು ಅಂತಿದೆ ಕಾಡು ಬಾ ಅಂತಿದೆ ಈ ಮಾತನ್ನು ವಯಸ್ಸಾದ ಹಿರಿಯರು ಹೇಳುವ ಮಾತು. ವಯಸ್ಸಾದ ಮೇಲೆ ಸಾವಿನ ದಾರಿ ನೀರಿಕ್ಷಿಸುತ್ತಿದ್ದರೂ ಬಾರದ ಸಾವು. ದಿನ ಕಳೆಯಲು ಕಷ್ಟಪಡುವ ಜೀವಗಳ ಯಾತನೆ.ಹೀಗಾಗಿಯೇ ಈ ಮಾತುಗಳನ್ನಾಡುವರು. ಹಿಂದೆಲ್ಲಾ ಮೊಮ್ಮಕ್ಕಳ ಒಡನಾಟ ಅವರುಗಳ ಕುಶಲೋಪರಿ ಎಲ್ಲವನ್ನೂ ಹಿರಿಯರು ನೋಡಿಕೊಳ್ಳುತ್ತಿದ್ದರು. ಮೊಮ್ಮಕ್ಕಳ ಜೊತೆ ಒಳಾಂಗಣ ಆಟ ಆಡುತ್ತಿದ್ದರೆ ಮಕ್ಕಳು ಹೊರಗಡೆ ಆಟ ಆಡುವಾಗ ಮಕ್ಕಳ ಜೊತೆಯಲ್ಲಿ ಇದ್ದು ಕಾಲ ಕಳೆಯುತ್ತಿದ್ದರು.

ಆಗ ಅವರಿಗೆ ಸಮಯ ಕಳೆದು ಹೋಗಿದ್ದು ಗೊತ್ತಾಗುತ್ತಿರಲಿಲ್ಲ. ಖುಷಿಯಿಂದ ಕಾಲ ಕಳೆಯುತ್ತಿದ್ದರು. ಆದರೆ ಈಗ ಆಗೆಲ್ಲಾ ಆಟ ಆಡುವುದಕ್ಕೆಲ್ಲ ಮಕ್ಕಳನ್ನು ಅವರ ಹತ್ತಿರ ಬಿಡುವುದಿಲ್ಲ. ಹಿಂದೆ ಮನೆಗೊಂದು ಟಿವಿ ಇರುತ್ತಿತ್ತು. ಟಿವಿಯಲ್ಲಿ ಬರುತ್ತಿದ್ದ ದೃಶ್ಯಗಳನ್ನು ನೋಡಿ ಮನೆಯವರೆಲ್ಲಾ ಸೇರಿಕೊಂಡು ಹಾಸ್ಯ ಮಾಡುತ್ತಾ ನಗೆಗಡಲಿನಲ್ಲಿ ತೇಲುತ್ತಿದ್ದರು. ಈಗ ಕಾಲ ಬದಲಾಗಿದೆ ಮನೆಯಲ್ಲಿ ಎಷ್ಟು ರೂಮ್ ಗಳು ಇರುತ್ತವೆಯೊ ಅಷ್ಟೇ ಟಿವಿಗಳಿವೆ.

ಚಂದಮಾಮನ ತೋರಿಸಿ ಮಕ್ಕಳಿಗೆ ಊಟ ಮಾಡಿಸುತ್ತಿದ್ದ ಆ ಕಾಲ. ಈಗ ಮೊಬೈಲ್ ತೋರಿಸಿ ಊಟ ಮಾಡಿಸುವುದು ಈಗಿನ ಕಾಲ. ಅಜ್ಜಿ ಕಥೆ ಹೇಳುತ್ತಾ ಊಟ ಮಾಡಿಸುತ್ತಿದ್ದರೆ ಅಜ್ಜಿಯ ಕಾಲೆಳೆದು ತಾತ ನಗಿಸುತ್ತಿದ್ದಾಗ ಮಕ್ಕಳು ಖುಷಿಯಿಂದ ನಗುತ್ತಾ ಊಟ ಮಾಡುತ್ತಿದ್ದರು. ಈಗಂತೂ ಮಕ್ಕಳು ಮೊಬೈಲ್ ಇಲ್ಲದಿದ್ದರೆ ಊಟವನ್ನೇ ಮಾಡುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ತಂದೆತಾಯಿಯರು ಮಕ್ಕಳು ಚೆನ್ನಾಗಿ ಓದಿ ವಿಧ್ಯಾವಂತರನ್ನಾಗಿ ಮಾಡಲು ಸಣ್ಣ ವಯಸಿನಲ್ಲಿದ್ದಾಗಲೆ ಬೋರ್ಡಿಂಗ್ ಸ್ಕೂಲ್ ಗೆ ಸೇರಿಸುತ್ತಿದ್ದಾರೆ.ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಬೇಕು ನಿಜ ಆಗಂತ ಚಿಕ್ಕ ವಯಸ್ಸಿಗೆ ಬೋರ್ಡಿಂಗ್ ಸ್ಕೂಲ್ ಗೆ ಸೇರಿಸುವ ಬದಲು ಪ್ರೌಢಾವಸ್ಥೆಗೆ ಬಂದಾಗ ಸೇರಿಸಬಹುದಲ್ಲವೇ?

ಈಗೆಲ್ಲ ಒಂಟಿಯಾಗಿ ಬೆಳೆದ ಮಕ್ಕಳಿಗೆ ಸಂಬಂಧಗಳ ಮಹತ್ವ ಗೊತ್ತಿರುವುದಿಲ್ಲ.ಅವರುಗಳಿಗೆ ಒಬ್ಬರಿಗಿಂತ ಹೆಚ್ಚು ಜನಗಳ ಜೊತೆ ಬೆರೆಯಲು ಹಿಂಸೆಯಾಗುತ್ತದೆ. ಎಷ್ಟು ಎಂದರೆ ಕೊನೆಗೆ ತಂದೆತಾಯಿಯರ ಜೊತೆಗೆ ಇರುವುದು ಹಿಂಸೆಯಾಗುತ್ತದೆ.

ಮಕ್ಕಳು ಪ್ರಬುದ್ಧತೆ ಬಂದಾಗ ಅವರು ಕೂಡ ತಂದೆತಾಯಿಯರನ್ನು ದೂರ ಇಡುವರು. ಮಾಡಿದುಣ್ಣೋ ಮಾರಾಯ ಎನ್ನುವಂತಾಗುವುದು. ಇದನ್ನೆಲ್ಲ ಅನುಭವಿಸುವ ಬದಲು ಸ್ವಲ್ಪಕಾಲ ಮಕ್ಕಳನ್ನ ವಯಸ್ಸಾದ ನಮ್ಮ ಹಿರಿಯರ ಜೊತೆ ಬೆರೆಯಲು ಬಿಟ್ಟರೆ ಮೊಬೈಲ್ ಗೀಳಿನಿಂದ ಹೊರ ತರಬಹುದು.ಆ ಹಿರಿಜೀವಿಗಳಿಗೂ ಸಂತೋಷವಾಗುವುದಲ್ಲವೇ?ಪ್ರತಿಕ್ಷಣ ಖುಷಿಯಿಂದ ಕಾಲಕಳೆದರೆ ಅವರಿಗೆ ಊರು ಹೋಗು ಕಾಡು ಬಾ ಅಂತಿದೆ ಎಂದು ಅನಿಸುವುದಿಲ್ಲ ಅಲ್ಲವೇ?


  • ಯಶು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW