ವಿಜಯಲಕ್ಷ್ಮೀ ನಾಗೇಶ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ತಪ್ಪದೆ ಮುಂದೆ ಓದಿ…
ತೊರೆಯಬೇಕೆಂದಿದ್ದ ನಿನ್ನನ್ನು
ಮರಳಿ ಬಾ ಎಂದವರು ಯಾರು
ಉರುಳಿ ಹೋದವು ಸಂವತ್ಸರಗಳು
ಕಳೆದ ದಿನಗಳೆಲ್ಲವೂ ಕನಸುಗಳಾಗಿ
ಸಂಕಷ್ಟದ ಬೇಗೆಯಲ್ಲಿ ಸವಕಲಾಗಿ.!!
ನೆತ್ತರೊಳಗಿನ ಜೀವಕೋಶಗಳು ಸತ್ತು
ನರನಾಡಿಗಳ ಸತ್ವವೆಲ್ಲಾ ಸವೆಯುತಿದೆ
ಜೋತು ಬಿದ್ದ ನನಸಾಗದ ಕನಸುಗಳಿಗೆ
ಜೀವದ ಅಮೃತವ ಹಾಯಿಸಿ ಹಾಯಿಸಿ
ಹೃದಯವೂ ಸೋತು ಸೊರಗುತ್ತಿದೆ.!!
ಕರುಣೆಯಿರದ ನೋಟವ ನನ್ನೆಡೆಗೆ ಬೀರಿ
ಮತ್ತೆ ಮತ್ತೆ ಕ್ರೂರಿ ಎಂದೆನಿಸಿಕೊಳ್ಳದಿರು
ಮನದೊಳಗಿಳಿಯದೇ ಹಿಂದಕ್ಕೇ ತೆರಳಿಬಿಡು
ನೆಮ್ಮದಿಯ ನೆರಳನ್ನರಸಿ ಅಲೆಯುತಿಹ ನನ್ನ
ಬಂಧಿಸಿ ಬೀಗುವ ಮಹದಾಸೆಯೇಕೆ ನಿನಗೆ.?!
- ವಿಜಯಲಕ್ಷ್ಮೀ ನಾಗೇಶ್
