ಬಾಯಿಗೆ ಬೀಗ – ಚೇತನ ಭಾರ್ಗವ

ನಮ್ಮ ನುಡಿ ಸರಳವಾಗಿ ಸುಂದರವಾಗಿ ಇರಬೇಕೆ ಹೊರತು ಇನ್ನೊಬ್ಬರನ್ನು ಟೀಕಿಸುತ್ತ ಹಂಗಿಸುತ್ತ ಅವರಿವರಿಗೆ ಮನ ನೋಯಿಸುವಂತೆ ಇರಬಾರದು. ಚೇತನ ಭಾರ್ಗವ ಅವರು ಮಾತಿನ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ , ತಪ್ಪದೆ ಮುಂದೆ ಓದಿ…
ಮನಸ್ಸು ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಬೇರೆ ಬೇರೆ ವಿಚಾರಗಳ ಯೋಚನೆಯ ಲಹರಿಯಲ್ಲಿ ಸದಾ ತೊಡಗಿರುತ್ತದೆ. ಮನಸ್ಸು ಸ್ವಭಾವತಹ ಚಂಚಲ. ಬುದ್ಧಿಯ ಹಿಡಿತದಲ್ಲಿ ಮನಸ್ಸು ಇರುವುದಿಲ್ಲ. ಬುದ್ಧಿಗೆ ಒಳಿತು ಕೆಡುಕಿನ ಅರಿವಿದ್ದರೂ ಮನಸ್ಸಿನ ವಶವಾಗುತ್ತದೆ. ಮನಸ್ಸಿನ ಯೋಚನೆಗಳಂತೆ ನಮ್ಮ ನಾಲಿಗೆ ಆಡುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಮಿತಿಮೀರಿ ಮಾತನಾಡುವುದರಿಂದ ನಮ್ಮ ವ್ಯಕ್ತಿತ್ವಕ್ಕೆ ಚ್ಯುತಿ ಬರುತ್ತದೆ. ಸಂಬಂಧಗಳು ಹಾಳಾಗುತ್ತದೆ. ಅಂತಹ ಸಂದರ್ಭದಲ್ಲಿ ಬಾಯಿಗೆ ಬೀಗ ಹಾಕಿಕೊಂಡಿರುವುದೇ ಲೇಸು.

ಬುದ್ಧಿ ಮತ್ತು ಮನಸ್ಸಿನ ಗುದ್ದಾಟದಲ್ಲಿ ಬಾಯಿ ಸುಮ್ಮನಿರದೆ ಒಮ್ಮೊಮ್ಮೆ ಏನೇನೋ ಮಾತನಾಡಿ ಎದುರು ಇರುವವರಿಗೆ ನೋವುಂಟು ಮಾಡುತ್ತದೆ . ಮನುಷ್ಯ ಮನುಷ್ಯರ ಬಾಂಧವ್ಯಗಳ ನಡುವೆ ಬಿರುಕು ಮೂಡುತ್ತದೆ. ಹಾಗಾಗಿ ನಾವು ಮಾತನಾಡುವಾಗ ಯೋಚಿಸಿ ಮಾತನ್ನು ಆಡಬೇಕು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಿನಂತೆ ಒಮ್ಮೆ ನಾವು ಕಠೋರವಾದ ಮಾತನ್ನು ಆಡಿದರೆ ಅದನ್ನು ಹಿಂದೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮಾತು ಯಾವಾಗಲೂ ಮೃದುವಾಗಿರಬೇಕು ಇಲ್ಲವಾದರೆ ಮಾತನ್ನು ಆಡದೆ ಬಾಯಿಗೆ ಬೀಗ ಹಾಕಿಕೊಂಡಿರುವುದು ಉತ್ತಮ.
ಕಠೋರವಾದ ಮಾತು ಕತ್ತಿಗಿಂತಲೂ ಚೂಪಾಗಿ ಕ್ರೂರವಾಗಿರುತ್ತದೆ. ಕತ್ತಿಯಿಂದ ಕುಯ್ದ ಗಾಯವಾದರೆ ದಿನ ಕಳೆದಂತೆ ಮಾಯುತ್ತದೆ, ಆದರೆ ಮನಸ್ಸಿಗೆ ಆದ ಗಾಯವು ಎಂದು ವಾಸಿಯಾಗುವುದಿಲ್ಲ. ಅದಕ್ಕಾಗಿ ಆಡುವ ಮಾತಿನಲ್ಲಿ ಎಚ್ಚರವಿರಬೇಕು.

ಮನುಷ್ಯ ಮನುಷ್ಯನನ್ನು ಬೆಸೆಯುವ ಕೊಂಡಿಯೆ ಈ ಮಾತು. ಆಡುವ ಮಾತಿನಲ್ಲಿ ಸತ್ವವಿರಬೇಕು. ಸುಖ ಸುಮ್ಮನೆ ಏನೇನೋ ಮಾತನಾಡುವ ಬದಲು ಬಾಯಿಗೆ ಬೀಗ ಹಾಕಿಕೊಂಡು ಇರುವುದೇ ಲೇಸು. ಅಕ್ಕಮಹಾದೇವಿಯು ಹೇಳಿದಂತೆ

“ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು,”

ಈ ವಚನದ ಸಾರವು ಮಾತಿನ ಪ್ರಾಮುಖ್ಯತೆಯ ಸಂದೇಶ ಸಾರುತ್ತದೆ.

ನಮ್ಮ ನುಡಿ ಸರಳವಾಗಿ ಸುಂದರವಾಗಿ ಇರಬೇಕೆ ಹೊರತು ಇನ್ನೊಬ್ಬರನ್ನು ಟೀಕಿಸುತ್ತ ಹಂಗಿಸುತ್ತ ಅವರಿವರಿಗೆ ಮನ ನೋಯಿಸುವಂತೆ ಇರಬಾರದು. ಅನ್ಯಾಯವಾಗುತ್ತಿರುವ ಸಂದರ್ಭದಲ್ಲಿ ಯಾರಿಂದಲಾದರೂ ಮೋಸವಾಗುತ್ತಿರುವ ಸಮಯದಲ್ಲಿ ಬಾಯಿಗೆ ಬೀಗ ಹಾಕಿಕೊಂಡು ಇರಬಾರದು. ನ್ಯಾಯಕ್ಕಾಗಿ ಸತ್ಯದ ನಿಲುವಿಗಾಗಿ ನಾವು ಮಾತನಾಡಬೇಕು ನಮ್ಮ ಸ್ವಾಭಿಮಾನಕ್ಕೆ ಆತ್ಮಭಿಮಾನಕ್ಕೆ ಧಕ್ಕೆ ಬರುವ ಸಂದರ್ಭದಲ್ಲಿ ನಾವು ಪ್ರತಿವಾದಿಸಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು. ಯಾವಾಗ ಎಷ್ಟು ಎಲ್ಲಿ ಮಾತನಾಡಬೇಕು ಎಂಬ ವಿವೇಚನೆಯೇ ನಮ್ಮನ್ನು ಉತ್ತಮ ಮನುಷ್ಯರನ್ನಾಗಿ ಮಾಡುತ್ತದೆ ಆದ್ದರಿಂದ ನಮ್ಮ ಮಾತು ಬುದ್ಧಿಯ ಅಧೀನದಲ್ಲಿರಲಿ ಮನಸ್ಸಿನ ಚಂಚಲತೆಯ ಲಹರಿಯಲ್ಲಿ ಕಳೆದುಹೋಗದಿರಲಿ.

  • ಚೇತನ ಭಾರ್ಗವ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW