‘ಒಲವಿನ ಧ್ಯಾನ’ ಗಜಲ್ ಸಂಕಲನ ಪರಿಚಯ

ಕೋಲಾರದ ಗಜಲ್ ಕಾರ ನಾರಾಯಣಸ್ವಾಮಿ ವಿ ಅವರ ‘ಒಲವಿನ ಧ್ಯಾನ’ ಕೃತಿಯ ಕುರಿತು ಲೇಖಕಿ ವಿಜಯಲಕ್ಷ್ಮೀ ನಾಗೇಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಒಲವಿನ ಧ್ಯಾನ
ಲೇಖಕರು : ನಾರಾಯಣಸ್ವಾಮಿ ವಿ (ನಾನಿ)
ಪ್ರಕಾಶಕರು : ಆಶಾ ಪ್ರಕಾಶನ
ಬೆಲೆ : 150/- ರೂಪಾಯಿ.

ಕೋಲಾರದ ನೆಲವು ಹೋರಾಟಗಾರರ ಬೀಡು. ಬಹು ಜನರ, ಬಹು ಸಂಸ್ಕೃತಿಯ ತವರೂರು ಎಂಬ ಸುಂದರ, ಅರ್ಥಪೂರ್ಣ ಸಾಲುಗಳನ್ನೊಳಗೊಂಡ ಲೇಖಕರ ಪರಿಚಯದೊಂದಿಗೆ ಆರಂಭವಾಗುವ ನಾನಿ ಎಂಬ ಕಾವ್ಯನಾಮದಿಂದ ಪ್ರಸಿದ್ಧಿಯಾಗಿರುವ ನಾರಾಯಣಸ್ವಾಮಿ ಅವರ ಗಜಲ್ ಸಂಕಲನದ ಮೊದಲನೆಯ ಗಜಲ್ ನಲ್ಲೇ ಮಾತೃತ್ವದ ಹಿರಿಮೆಯನ್ನು ಮೆರೆವ ಸಾಲುಗಳು ವಿಜೃಂಬಿಸುತ್ತವೆ.

* ನೋವುಗಳೇ ದೇಹವನ್ನಾಳುವಾಗ ಮತ್ತ್ಯಾವ ಸುಖಕ್ಕಾಗಿ ಚಡಪಡಿಸಲಿ ಅಮ್ಮಾ *

ಎನ್ನುವ ಭಾವನಾತ್ಮಕ, ನಿವೇದನೆಯ ಸಾಲುಗಳು ಮನತುಂಬಿ ಬರುವಂತೆ ಮಾಡುತ್ತವೆ.

* ಮೋಹವನು ತೊರೆದ ಬುದ್ಧನಂತೆ ಶುದ್ಧನಾಗಿಲ್ಲ ನಾನಿ*

ಎಂಬ ಸಹಜವಾದ ಲೌಕಿಕತೆಯನ್ನು ಬಿಂಬಿಸುವಂತಹ,

* ಜಾತಿ ಧರ್ಮವಿಲ್ಲದ ಮತ್ತ್ಯಾವ ಮಾನವ ಧರ್ಮಕ್ಕಾಗಿ ಕಾಯತಿರಲಿ ಅಮ್ಮಾ *

ಎನ್ನುವ ವಾಸ್ತವ ಸತ್ಯದ ಚಿತ್ರಣವನ್ನು ತಮ್ಮ ಅಕ್ಷರದಲ್ಲಿ ಚಿತ್ರಿಸುವ ನಿಟ್ಟಿನಲ್ಲಿ ಲೇಖಕರು ಉತ್ತಮ ಪ್ರಯತ್ನವನ್ನು ಮಾಡಿದ್ದಾರೆ ಎನ್ನಬಹುದು. ಇನ್ನು ಮೂರನೇ ಗಜಲ್ ನಲ್ಲಿ ಪ್ರೇಯಸಿಯಲ್ಲಿ ಪ್ರೇಮ ನಿವೇದನೆಯು ಅನಾವರಣಗೊಂಡಿರುವ ಪರಿ ಬಲು ಸುಂದರ.

* ಮಳೆಯಾಗಿ ಸುರಿಯುವೆ ಎಂದು ಆಗಸವ ನೋಡುತಿರುವೆ *

ಇಲ್ಲಿ ಒಬ್ಬ ಕವಿಯ ಸೃಜನಾತ್ಮಕ ಭಾವವು ಎಷ್ಟು ಆಪ್ಯಾಯಮಾನ, ಅವರ್ಣನೀಯ ಎಂಬದನ್ನು ನಾವು ಕಾಣಬಹುದಾಗಿದೆ. ಪ್ರೇಮವನ್ನು ಪ್ರಕೃತಿಯೊಂದಿಗೆ ಮಿಳಿತಗೊಳಿಸುವ ಮೂಲಕ ಅದರ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ಅದ್ಭುತ ಪ್ರಯತ್ನವನ್ನು ನಾವಿಲ್ಲಿ ಗ್ರಹಿಸಬಹುದು.

ಅಂತೆಯೇ
* ವೇದ ಮಂತ್ರಘೋಷಗಳ ಜೊತೆ ರಾಜಿ ಮಾಡಿಕೊಳ್ಳದ ನಾನಿ, ಮೌಢ್ಯವ ತೊರೆದು ಮಂತ್ರ ಮಾಂಗಲ್ಯದ ಬಂಧನವ ಬೇಡುತಿರುವೆ *

ಎನ್ನುವ ಸಾಲು ಕುವೆಂಪುರವರ ಮಂತ್ರ ಮಾಂಗಲ್ಯವೆಂಬ ಅದ್ಭುತ ಪರಿಕಲ್ಪನೆಯ ಬಗ್ಗೆ ಸಾರಿ ಹೇಳಿದಂತಿದೆ.

* ಒಡಲ ಕುಡಿಯ ಒಂಟಿಯಾಗಿಸಿ ಬಾರದೂರಿಗೆ ಹೋದೆಯಾ ಅಮ್ಮ*  ಅಗಲಿಕೆಯಿಂದಾದ ವಿಷಾದ, ನೋವು ಭಾವನಾತ್ಮಕವಾಗಿ ಹೊರಹೊಮ್ಮಿದೆ.

* ಮನುಜ ಉಸಿರು ನೀಡಿದ ತಂದೆ ತಾಯಿಗಳ ಮರೆಯುತ್ತಾನೆ * ಎಂಬ ಸಾಲುಗಳಲ್ಲಿ ನಶಿಸಿ ಹೋಗುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಮನದಟ್ಟು ಮಾಡಿಕೊಡುವಂತ ಒಂದು ಉತ್ತಮ ಪ್ರಯತ್ನವೆನ್ನಬಹುದು.

ಅದಷ್ಟೇ ಅಲ್ಲದೆ
ಮನದೊಳಗಿನ ಒಲವು,
ಮಾತೃತ್ವದ ಚೆಲುವು,

ಅಂತರಂಗದ ಪ್ರೀತಿ, ಭಗ್ನ ಪ್ರೇಮದದಲ್ಲಿನ ನಿರಾಶೆಯ ಭಾವ, ಬಡತನದಲ್ಲೂ ನೆಮ್ಮದಿಯನ್ನು ಕಾಣಬಹುದಾದ, ಪಾಲಿಗೆ ದಕ್ಕಿದ್ದನ್ನೇ ಪಂಚಾಮೃತವೆಂದು ಅರಿಯುವ, ಸರಳತೆಯಲ್ಲೇ ಅಡಗಿರುವ ಶ್ರೀಮಂತ, ಸಂತೃಪ್ತಿಯ ಭಾವವನ್ನು ಲೇಖಕರು ಬರಹದಲ್ಲಿ ಅನಾವರಣಗೊಳಿಸಿರುವುದು ವಿಶೇಷವಾಗಿದೆ. ಹೀಗೆ ನಾನಾ ಬಗೆಯ ಬದುಕಿನ ಮಜಲುಗಳು ಗಜಲ್ ಗಳ ರೂಪವನ್ನು ಪಡೆದು ಓದುಗರ ಗಮನ ಸೆಳೆಯುವಂತಿವೆ.

* ಊರ ಹೊರಗಡೆ ನಮಗೊಂದು ಹಟ್ಟಿಯ ಕಟ್ಟಿ ಅಟ್ಟಿದಿರಿ, ನಿಮ್ಮ ಹೊಲಗದ್ದೆಗಳಲಿ ಜೀತದಾಳಾಗಿ ದುಡಿದವರು ನಾವು * ಇಪ್ಪತ್ತೊಂದನೆಯ ಗಜಲ್ ನಲ್ಲಿ ಬರುವ ಈ ಸಾಲುಗಳು
ಜೀತಪದ್ಧತಿಯೆಂಬ ಸಾಮಾಜಿಕ ಪಿಡುಗಿಗೆ ಒಳಗಾಗಿದ್ದವರ ಆಂತರ್ಯದ ಸಂಕಟ, ನೋವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಮಾರ್ಮಿಕವಾಗಿ ಮೂಡಿಬಂದಿರುವಂಥದ್ದು.

ಒಟ್ಟಾರೆ ತನ್ನ ಮನವನ್ನೇ ಒಲವನ್ನಾಗಿಸಿ, ಒಡನಾಡಿಯನ್ನಾಗಿಸಿ, ಅದರೊಂದಿಗಿನ ಮೌನ, ಭಾವನಾತ್ಮಕ ಸಂಭಾಷಣೆಯನ್ನು ಅಕ್ಷರದ ರೂಪದಲ್ಲಿ ಚಿತ್ರಸಿರುವ ಲೇಖಕರ ಸೃಜನಶೀಲತೆಗೆ ಶರಣೆನ್ನಲೇಬೇಕು.

ಒಲವಿನ ಧ್ಯಾನ ಎಂಬ ಸುಂದರ ಶೀರ್ಷಿಕೆಯನ್ನೊತ್ತ ಈ ಗಜಲ್ ಸಂಕಲನದಲ್ಲಿ ಹೆತ್ತವರನ್ನು ಪ್ರೀತಿಸುವ, ಪ್ರಕೃತಿಯನ್ನು ಆರಾಧಿಸುವ, ಸಮಾನತೆಯ ಸೊಗಸನ್ನು ಮೂಡಿಸುವ ಆಶಯವನ್ನೊಳಗೊಂಡ ಅರ್ಥಗರ್ಭಿತವಾದ ಸಾಲುಗಳು ರಾರಾಜಿಸಿವೆ.

ಒಂದೊಂದು ಗಜಲ್ ಗಳೂ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಓದುಗರ ಮನಸೆಳೆಯುವಂತಿದ್ದು.. ಇಂತಹ ನೀತಿಯುಕ್ತ, ಸಾಮಾಜಿಕ ಸಾಮರಸ್ಯದ ಆಶಯವನ್ನು, ಬದುಕಿನ ವಾಸ್ತವತೆಯನ್ನು ಬಿಂಬಿಸುವ ಮತ್ತಷ್ಟು ಕೃತಿಗಳು ಹೊರಬರಲಿ ಎಂಬ ಆಶಯದೊಂದಿಗೆ ನನ್ನ ಪುಸ್ತಕ ಪರಿಚಯದ ಲೇಖನವನ್ನು ಮುಕ್ತಾಯಗೊಳಿಸುವೆ.


  •  ವಿಜಯಲಕ್ಷ್ಮೀ ನಾಗೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading