ಹೊಸತಾದುದೇನು…? ಕವನ – ಶಿವದೇವಿ ಅವನೀಶಚಂದ್ರ

ಹೊಸ ಕ್ಯಾಲೆಂಡರ್ ವರ್ಷ ೨೦೨೫ ನೀನು ಬಾ… ಇಳೆಗೆ ಸುಖವ ತಾ….ಶಿಕ್ಷಕರಾದ ಶಿವದೇವಿ ಅವನೀಶಚಂದ್ರ ಅವರ ಈ ಕವನವನ್ನು ತಪ್ಪದೆ ಮುಂದೆ ಓದಿ…

ರಾತ್ರಿಯೆಲ್ಲಾ ಜನರ ಸಂಭ್ರಮ, ಕುಣಿತ, ಆಮೋದ, ಪ್ರಮೋದ ನೋಡಿ,
‘ಇಂದು ಬೇರೆ ಯಾವುದೋ
ಬೆರಗು ಈ ಜಗದ ಬೆಡಗನ್ನು
ಆವರಿಸಿಕೊಳ್ಳಬಹುದೇನೋ, ಎಂದುಕೊಂಡಿದ್ದೆ.

ಏನೂ ಹೊಸದೆನಿಸಲಿಲ್ಲ….
ಸೂರ್ಯನಿನ್ನೂ ಮೂಡಣದ ಬಾಗಿಲು ತೆರೆದಿರಲಿಲ್ಲ…

ಆದರೆ ಜಗ ಬೆಳಗುವುದ ಮರೆತಿರಲಿಲ್ಲ.
ರಾತ್ರಿಯೆಲ್ಲ ಭ್ರಮೆಯ ಜಗತ್ತನ್ನು ಮತ್ತೇರಿಸಿದ್ದ ಹೊಸವರುಷದ ಅಮಲು
ಕ್ಯಾಲೆಂಡರ್ ವರ್ಷದಲ್ಲಿ ಹೊಸ ದಿನ ಉದಯಿಸುವಾಗ….
ಮಧ್ಯರಾತ್ರಿಯ ಆ ಕೃತಕ ಬೆಳಕಿನ‌ ಭ್ರಮಾಧೀನ ಸುಖದ ಮಡಿಲಿಗೆ ತಾವು ದುಡಿದ ಹಣವನ್ನು ಸುರಿದು ಜನ (೨೦೨೪) ಇಪ್ಪತ್ತನಾಲ್ಕಕ್ಕೆ ವಿದಾಯ ಹೇಳಿದ್ದರು….
ಕನಿಷ್ಠ‌‌ ವಂದನೆಯನ್ನೂ ಪಡೆಯದ ಸೂರ್ಯ ಹಗಲಿನಲ್ಲೂ
ಜಾಗೃತರಾಗದ ಜನರನ್ನು ಕಂಡು ವ್ಯಂಗ್ಯ ನಗು ನಕ್ಕಿದ್ದ.

ರಾತ್ರಿಯ ಸುಖದ ಹುಸಿ ನೆರಳು ಹೊಸವರ್ಷದ ಹಗಲನ್ನು ತಾಮಸಾಧೀನಗೊಳಿಸಿತ್ತು.
ಖಾತೆಯಲ್ಲಿದ್ದ ನಿರ್ಜೀವ ಹಣ ಯಾರದೋ ವ್ಯಾಪಾರಿಯ ಖಾತೆಗೆ ವರ್ಗಾವಣೆಗೊಂಡಿತ್ತು.
ಪಾರ್ಕಿಗೆ ಹೋದೆ..ಅದೇ ತರಗೆಲೆಯ ರಾಶಿ ….ಪತನದ ವಿಷಾದಕ್ಕೆ ಷರಾ ಬರೆದು ಜನರ ಮೌಢ್ಯಕ್ಕೆ ನಿಟ್ಟುಸಿರಿಡುತ್ತಿತ್ತು.

ಮರದ ತೆಕ್ಕೆಯಲ್ಲಿ ಹೊಮ್ಮಬೇಕಾದ ಚಿಗುರಿನ ಜಾಗದಲ್ಲಿ
ಒಮ್ಮೆ ಹಸಿರು ನಗೆ ನಕ್ಕಿದ್ದ ಪತ್ರಗಳ‌ ಜಾಗದಲ್ಲಿ ಅಂದು ಸೊಂಪಾಗಿದ್ದ ಬದುಕಿನ ಗುರುತು ಮಾತ್ರ‌ ಉಳಿದಿತ್ತು.ಗಾಳಿ ಮೆಲ್ಲ ಪಿಸುಗುಡುತ್ತಿತ್ತು,’ಎಲವೋ ಮೂಢ …ತಳಿರ ಚಾಮರ ಬೀಸಿ ನಗೆಯ ಬಲೆ ಹಾಸಿ‌ ಮೊಗ್ಗುಗಳ ಚಿತ್ತಾರ ಬರೆಯಲು ಇನ್ನೂ ಬರಬೇಕು ಚೈತ್ರ..ಕೋಗಿಲೆ ಹಾಡದೆ…
ಮಂಗಳವೆಲ್ಲಿ ಇಳೆಗೆ…..ಕೇಕ್ ನ ಮೆರವಣಿಗೆಯಲ್ಲ..ಹೊಸ

ವರುಷ…
ಬೇವು ಬೆಲ್ಲದ ಸಮ್ಮಿಶ್ರಣ,ಚಿಗುರು ಮಾವು,ಮಲ್ಲಿಗೆಯ ತೋರಣ,
ಹೋಳಿಗೆಯ ಹೂರಣ….
ಕಾಯಬೇಕು..ವಜ್ರವಾಗಲು ಕಾಯ….ಆರೋಗ್ಯಕರ ಸ್ವಾಸ್ಥ್ಯಕೆ,ಸಹಜ‌ ಪ್ರಕೃತಿಯ ನೋಟಕೆ, ಬಾಳಿನಾಟಕೆ…’

ಹಳೆಯದನ್ನು ಬೀಳ್ಕೊಡುವುದು ಅಷ್ಟು ಸುಲಭವಲ್ಲ. ಏಕೆಂದರೆ ನಮ್ಮ‌ಆಯಸ್ಸಿನ ಅಮೂಲ್ಯ ಒಂದುಭಹ ವರುಷವನ್ನು ಅದರ ಜೊತೆಯಲ್ಲೇ ಜಾರಗೊಟ್ಟಿರುತ್ತೇವೆ.ನೆನಪಿನ ಬುತ್ತಿಯೊಳಗಿಟ್ಟು…ಬದುಕಿನ ವಿದ್ಯಮಾನಗಳ…ಜೀವನದ‌ ನಿಷ್ಠುರ ಸತ್ಯಗಳ ಕಾಣ್ಕೆ ಯೊಂದಿಗೆ….
*
ಹೊಸ ಕ್ಯಾಲೆಂಡರ್ ವರ್ಷ
೨೦೨೫
ನೀನು ಬಾ…
ಇಳೆಗೆ ಸುಖವ ತಾ….


  • ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕಿ, ಕೊಡಗು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading