ಮಹಾಭಾರತದ ಕಾಲದಿಂದ ಕಾಶ್ಮೀರವನ್ನು 132 ಹಿಂದೂ ರಾಜರು ಆಳಿದ್ದರಂತೆ. 13 ನೇ ಶತಮಾನದ ಲೋಹಾನರ ರಾಜವಂಶದ ರಾಜ ರಾಮಚಂದ್ರನೇ ಕೊನೆಯ ಹಿಂದೂ ರಾಜ. ಇದು ಯಾರ ಕಾಶ್ಮೀರ? ಇದು ಕಲ್ಹಣ, ಬಿಲ್ಹಣರ ಕಾಶ್ಮೀರ, ಇದು ರಿಷಿಗಳ, ಸಂತರ, ಕವಿಗಳ ಕಾಶ್ಮೀರ.. ವಿಂಗ್ ಕಮಾಂಡರ್ ಸುದರ್ಶನ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ನೀಲಮತ ಪುರಾಣದ ಪ್ರಕಾರ ಕಾಶ್ಮೀರಕ್ಕೆ ಸುಮಾರು 5100 ವರ್ಷದ ಇತಿಹಾಸವಿದೆ. 13 ನೇ ಶತಮಾನದವರೆಗೂ ಕಾಶ್ಮೀರದಲ್ಲಿ ಶತಪ್ರತಿಶತ ಹಿಂದು ಮತ್ತು ಬೌದ್ಧ ಧರ್ಮಿಗಳಿದ್ದರು. ಕೇವಲ ಏಳು ಶತಕಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿ 97 ಪ್ರತಿಶತ ಮುಸ್ಲೀಮರಾಗಿದ್ದಾರೆ ಏನೇನೆಲ್ಲಾ ಆಗಿರಬಹುದು ಈ ಏಳು ಶತಕಗಳಲ್ಲಿ. ಕಾಶ್ಮೀರದ ಪಂಡಿತರನ್ನು ‘ಭಟ್ಟರು’ ಎಂದು ಕರೆಯುತ್ತಾರೆ. ಇವರು ಶೈವ ಸಾರಸ್ವತ ಬ್ರಾಹ್ಮಣರು. ಸುಂದರ ಕಾಶ್ಮೀರದ ಶಾಂತಿ ಪ್ರಿಯ ಜನಾಂಗ. ವೇದ ಪಾರಾಯಣ, ಪೂಜೆ ಪುನಸ್ಕಾರಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸುಖೀಜೀವನ ನಡೆಸುತ್ತಿದ್ದ ಜನಾಂಗ. ಕಣಿವೆಯ ಜನರಲ್ಲಿ ಒಂದು ರೀತಿಯ ಭೌಗೋಳಿಕ ಏಕಾಂತತೆ ಇರುತ್ತದೆ. ಹೊರಗೆ ಏನಾಗುತ್ತಿದೆ ಎಂದು ತಿಳಿಯುವುದಿಲ್ಲ, ಹಾಗೇ ಹೊರಗಿನವರಿಗೆ ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ, ಹಾಗೂ ತಮ್ಮ ತಮ್ಮಲ್ಲೇ ಒಗ್ಗಟ್ಟೂ ಇರುವುದಿಲ್ಲ.
ಮಹಾಭಾರತದ ಕಾಲದಿಂದ ಕಾಶ್ಮೀರವನ್ನು 132 ಹಿಂದೂ ರಾಜರು ಆಳಿದ್ದರಂತೆ. 13 ನೇ ಶತಮಾನದ ಲೋಹಾನರ ರಾಜವಂಶದ ರಾಜ ರಾಮಚಂದ್ರನೇ ಕೊನೆಯ ಹಿಂದೂ ರಾಜ.
ಅಷ್ಟೊತ್ತಿಗಾಗಲೇ ತುರ್ಕಿಸ್ಥಾನದ ‘ದುಲ್ಚ ‘ಎನ್ನುವ ದುಷ್ಟ ಕಾಶ್ಮೀರದ ಮೇಲೆ ಆಕ್ರಮಣ ಮಾಡಿ, ಕೊಳ್ಳೆ ಹೊಡೆದು, ಸುಮಾರು ಐವತ್ತು ಸಾವಿರ ಕಾಶ್ಮೀರಿಗಳನ್ನು ಗುಲಾಮನರನ್ನಾಗಿ ಸೆರೆಹಿಡಿದು ಕೊಂಡು ಹೋದ. ಮುಂದೆ ‘ರಿನ್ಚೆನ್’ ಎನ್ನುವ ಬೌಧ್ಧ ಧರ್ಮದ ಸೇನಾನಿ ರಾಮಚಂದ್ರ ರಾಜನನ್ನು ಮೋಸದಿಂದ ಕೊಃದು ತಾನೇ ರಾಜನಾದ. ಇಲ್ಲೊಂದು ಕುತೂಹಲಕಾರಿ ವಿದ್ಯಾಮಾನ ನಡೆಯುತ್ತದೆ. ‘ರಿನ್ಚೆನ್’ ಕಾಶ್ಮೀರದ ಪ್ರಜೆಗಳನ್ನು ಓಲೈಸಲು “ಶೈವ” ಮತಕ್ಕೆ ಮತಾಂತರಗೊಳ್ಳಲು ನಿರ್ಧರಿಸುತ್ತಾನೆ. ಇದನ್ನು ರಾಜಗುರು ದೇವಸ್ವಾಮಿಯ ಹತ್ತಿರ ವಿಚಾರಣೆ ಮಾಡುತ್ತಾನೆ. ದೇವಸ್ವಾಮಿ ಈ ವಿಷಯವನ್ನು ಕಾಶ್ಮೀರಿ ಪಂಡಿತರ ಬಳಿ ನಿಷ್ಕರ್ಶಿಸಿ, ಇದಕ್ಕೆ ಶೈವ ಮತದಲ್ಲಿ ಅವಕಾಶವಿಲ್ಲವೆಂದು ಹೇಳಿಬಿಡುತ್ತಾರೆ! ಇದರಿಂದ ಅವಮಾನಿತನಾದ ರಿನ್ಛೆನ್ ಮುಸ್ಲೀಮ್ ಧರ್ಮಕ್ಕೆ ಮತಾಂತರಗೊಂಡು, ಜೊತೆಗೆ ಹತ್ತು ಸಾವಿರ ಪಂಡಿತರನ್ನೂ ಮುಸ್ಲೀಮರನ್ನಾಗಿ ಮತಾಂತರಗೊಳಿಸಿಬಿಡುತ್ತಾನೆ.
ಇಲ್ಲಿಂದ ಶುರುವಾಗುತ್ತದೆ ನೋಡಿ ಕಾಶ್ಮೀರಿ ಪಂಡಿತರ ಮತಾಂತರದ, ಮಾರಣಹೋಮದ ವೃತ್ತಾಂತ.
ಈ ರಕ್ತಸಿಕ್ತ ಇತಿಹಾಸದ ಅವಧಿಯಲ್ಲೂ ಕಾಶ್ಮೀರದಲ್ಲಿ ಹಲವು ಕ್ರಾಂತಿಕಾರಕ ಘಟನೆಗಳು ನಡೆಯುತ್ತವೆ, ಸೂಫಿ ಸಂತರ, ನಂದ ರಿಷಿಯಂತಹ ಮುಸ್ಲಿಂ ಸನ್ಯಾಸಿಯ ಮತ್ತು ಲಲ್ಲೇಶ್ವರಿಯಂತಹ ಸಂತ ಕವಿಗಳ ಉಧ್ಭವವಾಗುತ್ತದೆ. ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಅಕ್ಕಮಹಾದೇವಿಯ ವೃತ್ತಾಂತ ಹದಿನಾಲ್ಕನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಲಲ್ಲೇಶ್ವರಿಯ ಹೆಸರಿನಲ್ಲಿ ಪುನಾರಾವರ್ತನೆ ಆಗುತ್ತದೆಯೇನೋ ಎನ್ನುವಷ್ಟು ಹೊಂದಾಣಿಕೆ. ಇಬ್ಬರೂ ಶಿವಾರಾಧಕರು, ಇಬ್ಬರೂ ಅಪ್ರತಿಮ ಸುಂದರಿಯರು, ಇಬ್ಬರೂ ವಿವಾಹ ಬಂಧನದಿಂದ ಹೊರಬಂದು ಆಧ್ಯಾತ್ಮದ ಹಾದಿಯಲ್ಲಿ ನಡೆದವರು ಮತ್ತು ಇಬ್ಬರೂ ಅದ್ಭುತ ಕಾವ್ಯಗಳ, ಸಾಹಿತ್ಯದ ರಚನಾಕಾರರು. ಅಕ್ಕಮಹಾದೇವಿ ‘ವಚನ’ಗಳನ್ನು ರಚಿಸಿದರೆ ಲಲ್ಲೇಶ್ವರಿಯ ರಚನೆಗಳು ‘ವಾಕ್’ ಹೆಸರಿನಲ್ಲಿ ವಿಶ್ವವದೆಲ್ಲೆಡೆ ಹೆಸರುವಾಸಿಯಾಗಿವೆ. ಅಕ್ಕಮಹಾದೇವಿಯನ್ನು ‘ಅಕ್ಕ’ ಎಂದು ಸಂಭೋದಿಸಿದರೆ ಲಲ್ಲೇಶ್ವರಿಯನ್ನು ಅಮ್ಮ (ಲಲ್ ದೇಡ್) ಎಂದು ಸಂಭೋದಿಸಲಾಗುತ್ತದೆ. ಇಬ್ಬರೂ ಆಕಾಶವೇ ಹೊದಿಕೆ ಎಂದು ಕೇಶವಸ್ತ್ರಧಾರಿಗಳಾಗಿ ನಡೆದಾಡುತ್ತಿದ್ದರಂತೆ ಎನ್ನುವ ಪ್ರತೀತಿ. ಲಲ್ಲೇಶ್ವರಿಯ ವೈಶಿಷ್ಟ್ಯವೆಂದರೆ ಅವರ ಶಿಷ್ಯವರ್ಗದಲ್ಲಿ ಮುಸ್ಲೀಮರೇ ಹೆಚ್ಚು! ‘ಹಿಂದೂ ಮುಸ್ಲೀಮರೆನ್ನುವ ಭೇದ ಭಾವ ಬೇಡ ಶಿವ ಸೂತ್ರವೇ ಎಲ್ಲದರ ಮೂಲ’ ಎಂದು ಭೋಧಿಸಿ ಶಿವಾರಾಧಕರ,ಸೂಫಿ ಸಂತರ ಮಾತೆಯಾಗಿ ಮೆರೆದಳು ಕಾಶ್ಮೀರದ ಲಲ್ಲೇಶ್ವರಿ.
ಇದು ಯಾರ ಕಾಶ್ಮೀರ?
ಇದು ಕಲ್ಹಣ, ಬಿಲ್ಹಣರ ಕಾಶ್ಮೀರ.

ಫೋಟೋ ಕೃಪೆ :google
ಅನಾದಿಕಾಲದಿಂದಲೂ ಕಾಶ್ಮೀರವೆಂಬ ಈ ದೇವನಾಡಿನಲ್ಲಿ ಪ್ರಚಲಿತವಾದ ದೇವಭಾಷೆ ಸಂಸ್ಕೃತ. ಹನ್ನೊಂದನೇ ಶತಮಾನದಲ್ಲಿ ‘ಕಲ್ಹಣ’ ಎಂಬ ಮಹಾನ್ ಕವಿ ಕಾಶ್ಮೀರದ ಇತಿಹಾಸದ ಬಗ್ಗೆ, ಇಲ್ಲಿಯ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಒಂದು ಬೃಹತ್ ಗ್ರಂಥವನ್ನು ಬರೆಯುತ್ತಾರೆ. ಅದೇ “ರಾಜತರಂಗಿಣಿ”.
ಇದೇ ಸಮಯದಲ್ಲಿ “ಬಿಲ್ಹಣ” ಎನ್ನುವ ಬಹುಮುಖ ಪ್ರತಿಭೆಯ ಕಾಶ್ಮೀರದ ಕವಿಯೊಬ್ಬರ ರಚನೆಗಳು ಬೆಳಕಿಗೆ ಬರುತ್ತವೆ. ಆದರೆ ಅವರು ಪ್ರಖ್ಯಾತಿ ಪಡೆದಿದ್ದು ಮತ್ತು ಅವರ ರಚನೆಗಳು ಬೆಳಕು ಕಂಡಿದ್ದು ಇಂದಿನ ಕಲ್ಯಾಣ ಕರ್ನಾಟಕದಲ್ಲಿ!
ಬಿಲ್ಹಣ ಕಾಶ್ಮೀರದಿಂದ ಹೊರಬಂದು ವಿಧರ್ಭ, ವಂಗ, ಮಾಳವ ದೇಶಗಳನ್ನೆಲ್ಲಾ ಸುತ್ತಾಡಿ ಕಲ್ಯಾಣ ಕರ್ನಾಟಕಕ್ಕೆ ಬಂದು ಸೇರುತ್ತಾರೆ. ಅದು ಚಾಳುಕ್ಯ ವಂಶದ ರಾಜರಾದ ಆರನೇ ವಿಕ್ರಮಾದಿತ್ಯರ ರಾಜಧಾನಿ. ವಿಕ್ರಮಾದಿತ್ಯರು ಇವರ ಸಂಸ್ಕೃತದ ಪಾರಂಗತ್ಯವನ್ನು ಮೆಚ್ಚಿ ಅವರಿಗೆ ಆಸ್ಥಾನ ಕವಿಯ ಸ್ಥಾನವನ್ನು ಕೊಟ್ಟು ಗೌರವಿಸುತ್ತಾರೆ. ಇಲ್ಲಿ ಅವರು “ವಿಕ್ರಮಾಂಕ ದೇವಚರಿತ” ವನ್ನು ಬರೆಯುತ್ತಾರೆ. ಆದರೆ ಬಿಲ್ಹಣರ ರಸಿಕತೆಯ ಪರಿಚಯವಾಗುವುದು ಅವರ ಇನ್ನೊಂದು ಕೃತಿ..”ಚೌರ ಪಂಚಶಿಖಾ” ಎನ್ನುವ ಐವತ್ತು ಪ್ರೇಮಗೀತೆಗಳ ಕೃತಿಯಿಂದ. ಇದರ ಹಿನ್ನಲೆಯಲ್ಲಿ ಒಂದು ಸ್ವಾರಸ್ಯಕರ ಘಟನೆ ಇದೆ.
ವಿಕ್ರಮಾದಿತ್ಯರ ರಾಜ್ಯಕ್ಕೂ ಬರುವ ಮೊದಲು, ಬಿಲ್ಹಣ ಅಂದಿನ ಗುಜರಾತಿನ ವೀರಸೇನರ ಆಸ್ಥಾನದ ವಿದ್ವಾಂಸರಾಗಿರುತ್ತಾರೆ. ಈ ಯುವ ಕವಿಗೆ ರಾಜಕುಮಾರಿ ಚಂಪಾವತಿಯ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿದ್ದರು. ಆದರೆ ಇದಕ್ಕೆ ಕೆಲವು ನಿರ್ಭಂದನೆಗಳನ್ನು ವಹಿಸಿದ್ದರು. ಅಪ್ರತಿಮ ಸುಂದರಿಯಾದ ರಾಜಕುಮಾರಿ ಈ ಸುಂದರ, ಪ್ರತಿಭಾನ್ವಿತ ಕವಿಯಿಂದ ಸಾಹಿತ್ಯದ, ಸಂಸ್ಕೃತದ ಶಿಕ್ಷಣದ ಸಮಯದಲ್ಲಿ ವಯೋಸಹಜವಾದ ವಾಂಛನೆಗಳು ಬರಬಾರದು ಎಂದು ರಾಜ ವೀರಸೇನ ಬಿಲ್ಹಣನ ಕಣ್ಣು ಕಟ್ಟಿ..ಇವರು ಕುರುಡರು ಎಂದು , ರಾಜಕುಮಾರಿ ಒಬ್ಬ ಕುಷ್ಟರೋಗಿ ಎಂದು ಒಬ್ಬರಿಗೊಬ್ಬರನ್ನು ಪರಿಚಯಿಸಿ ನಡುವೆ ಒಂದು ದಪ್ಪನೆಯ ಪರದೆಯನ್ನು ಹಾಕುತ್ತಾರೆ. ಇದೇ ನಿಜವೆಂದು ನಂಬಿ ರಾಜಕುಮಾರಿಯ ವ್ಯಾಸಂಗ ಪರದೆಯ ಆಚೆ ನಡೆಯುತ್ತಿರುತ್ತದೆ.
ಒಮ್ಮೆ ಬೆಳದಿಂಗಳ ಚಂದ್ರನನ್ನು ವರ್ಣಿಸುತ್ತಾ ಒಂದು ಪ್ರೇಮಕವಿತೆಯನ್ನು ಹೇಳಿಕೊಡುತ್ತಾರೆ. ಆಗ ಬರುತ್ತದೆ ನೋಡಿ ರಾಜಕುಮಾರಿಗೆ ಬಿಲ್ಹಣನ ಬಗ್ಗೆ ಅನುಮಾನ…ಒಬ್ಬ ಕುರುಡನು, ಎಂದೂ ಚಂದ್ರನನ್ನು ನೋಡದವನು ಇಷ್ಟು ಸುಂದರವಾದ ವಿವರಣೆ ಕೊಡುವುದು ಹೇಗೆ ಸಾಧ್ಯ? ಕುತೂಹಲ ತಾಳಲಾರದೆ ರಾಜಕುಮಾರಿ ಪರದೆಯಿಂದ ಹೊರಗೆ ಬಂದು ಬಿಲ್ಹಣನ ಕಣ್ಣಿನ ಬಟ್ಟೆಯನ್ನು ಬಿಚ್ಚುತ್ತಾಳೆ. ಬಿಲ್ಹಣನೂ ರಾಜಕುಮಾರಿಯ ಸೌಂದರ್ಯಕ್ಕೆ ಮಾರು ಹೋಗುತ್ತಾನೆ. ಇಬ್ಬರೂ ರೋಮಾಂಚಿತರಾಗಿ ಕ್ಷಣಾರ್ಧದಲ್ಲಿ ಪ್ರೇಮಾಂಕುರವಾಗಿ ಬಿಡುತ್ತದೆ! ಕಾಲಾನಂತರ ವಿಷಯ ತಿಳಿದ ರಾಜ, ಕೋಪಗೊಂಡು ಬಿಲ್ಹಣನನ್ನು ಸೆರೆಮನೆಗೆ ತಳ್ಳಿಬಿಡುತ್ತಾನೆ. ಅಲ್ಲಿ ರಚಿತವಾಗುತ್ತದೆ “ಚೌರ ಪಂಚಶಿಖಾ” ಎನ್ನುವ ಐವತ್ತು ಪ್ರೇಮ ಮತ್ತು ವಿರಹಗೀತೆಗಳ ಸಂಗ್ರಹ. ಸೆರೆಮನೆಯಲ್ಲಿ ಇನ್ನೂ ಉತ್ಕಟಕ್ಕೇರಿದ ಪ್ರೇಮಾಯಣದ ಅರಿವಾದ ರಾಜ ವೀರಸೇನ ಬಿಲ್ಹಣನನ್ನು ಸೆರೆಯಿಂದ ಬಿಡುಗಡೆ ಮಾಡಿ ಅವರಿಬ್ಬರ ಮದುವೆಗೆ ಸಮ್ಮತಿಸುತ್ತಾನೆ ಎನ್ನುವ ಪ್ರತೀತಿ. ಅಂತೂ ಬಿಲ್ಹಣ ಮತ್ತು ಚಂಪಾವತಿಯರ ಪ್ರೇಮಗಾಥೆ ಸುಖಾಂತ್ಯವನ್ನು ಕಾಣುತ್ತದಂತೆ.
ಮುಂದೊಮ್ಮೆ ಈ ಪ್ರೇಮಗ್ರಂಥ ಹಲವಾರು ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟು ದೇಶವಿದೇಶಗಳಲ್ಲಿ ಪ್ರಸಿದ್ಧಿ ಪಡೆಯುತ್ತದೆ. 1948 ರಲ್ಲಿ ಮದ್ರಾಸಿನಲ್ಲಿ ಈ ಕಥೆಯಾಧಾರಿತ ಚಲನಚಿತ್ರವೊಂದೂ ಸಹ ಬಿಡುಗಡೆಯಾಗುತ್ತದೆ!
ಹತ್ತು- ಹನ್ನೊಂದನೇ ಶತಮಾನದಲ್ಲಿ ಭಾರತದ ಮೇಲೆ ಘಜ್ನಿ ಮೊಹಮ್ಮದನ ದಾಳಿಗಳು ನಡೆಯುತ್ತವೆ. ಸತತವಾಗಿ ಹದಿನೇಳು ಬಾರಿ ದಂಡೆತ್ತಿ ಬಂದು ಭಾರತದ ಸಂಪತ್ತನ್ನು, ವಿಷೇಶವಾಗಿ ದೇವಸ್ಥಾನಗಳಲ್ಲಿದ್ದ ಅಪಾರ ಧನಕನಕಗಳನ್ನು ಲೂಟಿ ಮಾಡಿಕೊಂಡು ಹೋಗುತ್ತಾನೆ. ವಿಚಿತ್ರವೆಂದರೆ ಈ ದುಷ್ಟನ ಜೊತೆ ಅಲ್ ಬಿರೂನಿ ಎನ್ನುವ ಒಬ್ಬ ಮಿತ್ರನೂ ಭಾರತಕ್ಕೆ ಬರುತ್ತಾನೆ. ಇವನೊಬ್ಬ ಮೇಧಾವಿ, ವಿಜ್ಞಾನಿ, ಖಗೋಳ ಶಾಸ್ತ್ರದ, ವೈದ್ಯಕೀಯ ಶಾಸ್ತ್ರದ ವಿಧ್ಯಾರ್ಥಿ. ಗಾಂಧಾರ ದೇಶದ ಸಾಹಿ ರಾಜನ ಆಸ್ಥಾನದಲ್ಲಿ ಇವನಿಗೆ ವಿಶೇಷ ಗೌರವ ಕೊಟ್ಟು ಸನ್ಮಾನಿಸುತ್ತಾರೆ. ಅಲ್ಲಿದ್ದ ಕೆಲವು ಗ್ರಂಥಗಳನ್ನು ಅಭ್ಯಾಸ ಮಾಡಿ ಭಾರತದ ಬಗ್ಗೆ, ಸನಾತನ ಧರ್ಮದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿರುತ್ತಾನೆ.
ಘಜ್ನಿ಼ಯ ಜೊತೆ ಕಾಶ್ಮೀರಕ್ಕೆ ಬಂದ ಅಲ್ ಬಿರೂನಿ ಮೊದಲು ಹೋಗುವುದೇ ಅಲ್ಲಿಯ ಗ್ರಂಥಾಲಯಗಳಿಗೆ. ಸಂಸ್ಕೃತ ಕಲಿಯದೇ ಈ ಗ್ರಂಥಗಳನ್ನು ಅರ್ಥ ಮಾಡಿಕೊಳ್ಳಲು ಅಸಾಧ್ಯ ಎಂದರಿತವನು ಕೂಡಲೇ ಕೆಲವು ಪಂಡಿತರ ಸಹಾಯದಿಂದ ವಿದ್ಯಾರಂಭ ಪ್ರಾರಂಭಿಸಿ ಬಿಡುತ್ತಾನೆ. ಘಜ್ನಿ ಮೊಹಮ್ಮದನಿಗೆ ಇಲ್ಲಿನ ಧರ್ಮ ಗ್ರಂಥಗಳನ್ನು ಮಾತ್ರ ಮುಟ್ಟಬೇಡ…ಎನ್ನುವ ಕೋರಿಕೆಗೆ ಮನಸ್ಸಿಲ್ಲದ ಸಮ್ಮತಿಯೂ ಸಿಗುತ್ತದೆ. ಸಾಯವಬಾಲ ಎನ್ನುವ ಕಾಶ್ಮೀರಿ ಬ್ರಾಹ್ಮಣ ಮಿತ್ರನ ಸಹಾಯದಿಂದ ಸಂಸ್ಕೃತದಲ್ಲಿ ಎಂತಹ ಪರಿಣಿತಿ ಪಡೆಯುತ್ತಾನೆಂದರೆ ಕೆಲವೇ ದಿನಗಳಲ್ಲಿ ಸಂಸ್ಕೃತದಲ್ಲಿ ಒಂದು ಪುಸ್ತಕವನ್ನೇ ಬರೆದು ಬಿಡುತ್ತಾನೆ.! ಈಗ ಪ್ರಚಲಿತವಾಗುತ್ತಿರುವ INDOLOGY ಯ ಪ್ರಥಮ ಪ್ರವರ್ತಕ ಅಲ್ ಬಿರೂನಿ ಎನ್ನಬಹುದು ಅಷ್ಟು ಸುಧೀರ್ಘವಾಗಿ ಭಾರತದ ಬಗ್ಗೆ, ಸನಾತನ ಧರ್ಮದ ಬಗ್ಗೆ, ಇಲ್ಲಿಯ ಸಾಂಸ್ಕೃತಿಕತೆಯ ಬಗ್ಗೆ ಹಲವಾರು ಪುಸ್ತಕಗಳನ್ನು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗೆ ಭಾಷಾಂತರಿಸುತ್ತಾನೆ. ಹಾಗೆ ಭಾಷಾಂತರಿಸಿದ ಅನೇಕ ಪುಸ್ತಕಗಳಲ್ಲಿ ಒಂದು “ಕಿತಾಬ್ ಎಲ್ ಬತಾಂಜಲ್”…ಇದು ಪತಂಜಲಿಯ ಯೋಗಸೂತ್ರದ ಅವತರಣ.

ಫೋಟೋ ಕೃಪೆ :google
ನೀಲಮತ ಪುರಾಣವನ್ನು ಪುರಾಣಗಳ ಸಾಲಿಗೆ ಸೇರಿಸದೇ ಮಹಾಭಾರತಕ್ಕೇ ಸೇರಿಸಿದರೆ ಮಹಾಭಾರತ ಇನ್ನೂ ಅಗಾಧ ಗಾತ್ರದ ಗ್ರಂಥವಾಗುತ್ತದೆ ಎಂಬ ವಿಚಾರದಿಂದ ಬಹುಶಃ ವ್ಯಾಸರು ಇದನ್ನು ಪ್ರತ್ಯೇಕಿಸಿಬಿಟ್ಟರೋ ಏನೋ..ಏಕೆಂದರೆ ಅಂದಿನ ಕಾಶ್ಮೀರ ಮತ್ತು ಅದರ ಇತಿಹಾಸವೇ ಅಷ್ಟು ಅಗಾಧವಾದದ್ದು. ನೀಲಮತ ಪುರಾಣ ಪ್ರಾರಂಭವಾಗುವುದೇ ವೈಶಂಪಾಯನ ಮತ್ತು ಜನಮೇಜಯರ ನಡುವಿನ ಸಂವಾದದೊಂದಿಗೆ, ವಿಷಯವೇನೆಂದರೆ ಕಾಶ್ಮೀರದ ರಾಜ ಗೋನಂದನ ಕುರುಕ್ಷೇತ್ರ ಯುದ್ಧದಲ್ಲಿ ಏಕೆ ಭಾಗವಹಿಸಲಿಲ್ಲ ಎನ್ನುವುದರೊಂದಿಗೆ, ಮುಂದಿನ ಅಧ್ಯಾಯಗಳಲ್ಲಿ ಈ ಅಗಾಧವಾದ ಗ್ರಂಥ ಕಾಶ್ಮೀರದ ಮಹಾಭಾರತ, ಮಹಾಕಾವ್ಯ ಎನ್ನುವಷ್ಟು ಸವಿಸ್ತಾರವಾಗಿ ಕಾಶ್ಮೀರದ ಕಥೆಯನ್ನು ಹೇಳುತ್ತಾ ಹೋಗುತ್ತದೆ. ಮುಂದೆ ಹನ್ನೆರಡನೇ ಶತಮಾನದಲ್ಲಿ ಕಾಶ್ಮೀರದ ಕಲ್ಹಣ ಎನ್ನುವ ಕವಿ, ವಿದ್ವಾಂಸರು ಇದನ್ನು 7862 ಶ್ಲೋಕಗಳಿಗೆ ಸರಳೀಕರಣಗೊಳಿಸಿ ಎಂಟು ಹೊತ್ತಿಗೆಯ ರಾಜ ತರಂಗಿಣಿ ಎನ್ನುವ ಗ್ರಂಥವನ್ನು ರಚಿಸುತ್ತಾರೆ. ಮುಂದೆ 1834 ರಲ್ಲಿ ಜಾರ್ಜ್ ಬುಲ್ಹರ್ ಎನ್ನುವ ಜರ್ಮನ್ ವಿದ್ವಾಂಸರ ಇಂಗ್ಲಿಷ್ ಅವತರಣಿಕೆಗೊಂಡ ರಾಜ ತರಂಗಿಣಿ ವಿಶ್ವದೆಲ್ಲೆಡೆ ಪ್ರಖ್ಯಾತವಾಗಿದೆ. ಅವರು ಕಾಶ್ಮೀರದಲ್ಲಿ ಸಿಕ್ಕ ಗ್ರಂಥ ರಾಶಿಗಳನ್ನು ಅಭ್ಯಸಿಸಿ ಸುಮಾರು 37 ಪುಸ್ತಕಗಳನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸುತ್ತಾರೆ. ಅವುಗಳಲ್ಲಿ ಮುಖ್ಯವಾದವು ಮನುಸೂತ್ರ, ಆರ್ಯಸೂತ್ರ, ಮತ್ತು ವಿಕ್ರಮಾಂಕದೇವ ಚರಿತ.
ನೀರ್ಪಾಜೆ ಭೀಮಭಟ್ಟರು ರಾಜತರಂಗಿಣಿಯನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ ಮಾಡಿರುತ್ತಾರೆ. ಕಾಶ್ಮೀರದ ಬಗ್ಗೆ ಇದೊಂದು ವಿಶ್ವಾಸನೀಯ, ಛಂದೋಭದ್ದ ಕಾಲಾನುಕ್ರಮ.
ಅಲ್ಲಿ ಕಾಣಸಿಗುವ ಕಾಶ್ಮೀರಕ್ಕೂ, ಇಂದಿನ, ಅದರಲ್ಲೂ ಮಾಧ್ಯಮಗಳು ಬಿಂಬಿಸುವ ಕಾಶ್ಮೀರಕ್ಕೂ ಹೋಲಿಸಿದರೆ ಇದು ಯಾವ ಕಾಶ್ಮೀರ…ಇದು ಯಾರ ಕಾಶ್ಮೀರ ಎನಿಸುತ್ತದೆ.
ಹೀಗೆ ಕಾಶ್ಮೀರದ ಸುದೀರ್ಘ ಇತಿಹಾಸ ವಿಶೇಷ, ವಿಭಿನ್ನ. ಕಾಶ್ಮೀರ.. ನಾವಿದರ ವಾರಸುದಾರ
ಎಚ್ಚರ, ನಮ್ಮದಿದು ಕಾಶ್ಮೀರ!
- ವಿಂಗ್ ಕಮಾಂಡರ್ ಸುದರ್ಶನ – (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).
