ಡಿ.ರಾಮಣ್ಣ ಅಲ್ಮರ್ಸಿಕೇರಿ ಅವರ ನುಡಿ ಶೂನ್ಯವಾದೊಡೆ ಕೃತಿಗೆ ಹಿರಿಯ ಕವಿ, ನಾಟಕಕಾರರು, ಅನುವಾದಕರು ಆದ ಶ್ರೀ ಈಶ್ವರ ಹತ್ತಿಯವರು ಬೆನ್ನುಡಿಯನ್ನು ಬರೆದು ಶುಭ ಹಾರೈಸಿದ್ದು, ಮುಖಪುಟ ಹಾಗೂ ಬೆನ್ನು ಪುಟವನ್ನು ಕವಿ ಮಿತ್ರರಾದ ಶ್ರೀ ಜಬಿವುಲ್ಲಾ ಅಸಾದ್ ರವರು ಮಾಡಿದ್ದಾರೆ. ಈ ಕೃತಿಯ ಬಿಡುಗಡೆಗೆ ಸಜ್ಜಾಗಿದ್ದು ಡಿ.ರಾಮಣ್ಣ ಅಲ್ಮರ್ಸಿಕೇರಿ ಅವರಿಗೆ ಆಕೃತಿಕನ್ನಡ ಶುಭಕೋರುತ್ತದೆ…
ಓದು, ಒಡನಾಟ ಮತ್ತು ಲೋಕ ನನಗೆ ಬಹಳಷ್ಟು ಕಲಿಸಿದೆ, ಕಲಿಸುತ್ತಲೇ ಇದೆ. ನಿತ್ಯವೂ ಕಲಿಯುವಂತೆ ಪ್ರೇರೇಪಿಸುತ್ತಲೇ ಇದೆ. ಅರಿವಿನ ವಿಸ್ತಾರಕ್ಕೆ ಅನುದಿನವೂ ಹಂಬಲಿಸುತ್ತಲೇ ಇದ್ದೇನೆ. ಒಬ್ಬೊಬ್ಬರು ಒಂದೊಂದು ರೀತಿಯ ಪಾಠ ಕಲಿಸಿದ್ದಾರೆ.
ಯಾರೂ ಕಲಿಸದ್ದನ್ನು, ಕಲಿಸಲಾಗದ್ದನ್ನು ಈ ಸಮಾಜ ಕಲಿಸುತ್ತದೆ. ಸಾಂದರ್ಭಿಕವಾಗಿ ಸಾಮಾಜಿಕ ವ್ಯವಸ್ಥೆ ಒಡ್ಡುವ ಸವಾಲುಗಳಿಗೆ ಪ್ರತಿರೋಧ ತೋರುವ ಸಾಮರ್ಥ್ಯ, ಸೂಕ್ಷ್ಮತೆ ಬೆಳೆಸಿಕೊಳ್ಳದಿದ್ದರೆ ಅದು ನಮ್ಮನ್ನು ಮಕಾಡೆ ಮಲಗಿಸಿ ಬಿಡುತ್ತದೆ.
ಸಮಾಜದಲ್ಲಿನ ಶ್ರೇಣಿಕೃತ ವ್ಯವಸ್ಥೆ ಮತ್ತು ತಾರತಮ್ಯ ಅಮಾನವೀಯ ನಡೆಗಳು ಕೆಲವೊಮ್ಮೆ ಎಂತವರನ್ನು ಎದೆಗುಂದಿಸುತ್ತವೆ. ಕಡು ದುಃಖಕ್ಕೆ ಕಾರಣವಾಗುತ್ತವೆ. ಸಂಕಟದಲ್ಲೂ ಸರಿದಾರಿಯಲ್ಲಿ ನಡೆದು ಸಮಾಜಕ್ಕೆ ಸ್ಪೂರ್ತಿಯಾಗುವ ಧೈರ್ಯ ವಿಶ್ವಾಸ ಆತ್ಮ ಬಲವನ್ನು ನಾವು ರೂಢಿಸಿಕೊಳ್ಳದಿದ್ದರೆ ಕಳೆದು ಹೋಗಬಹುದು ಇಲ್ಲವೇ ಬದುಕಿನುದ್ದಕ್ಕೂ ಗುಲಾಮರಾಗಿಯೇ ಉಳಿಯಬಹುದು.

ಕಾಲದ ಅಗ್ನಿಕುಂಡದಲ್ಲಿ ಬೆಂದು ನೊಂದವರು , ಮನುಷ್ಯ ಘನತೆಗೆ ಸಮಾಜದ ಒಳಿತಿಗೆ ಈ ಜಗತ್ತಿನಲ್ಲಿ ಅನೇಕ ಮಹನೀಯರು ದುಡಿದಿದ್ದಾರೆ , ದುಡಿಯುತ್ತಲೇ ಇದ್ದಾರೆ . ಅಂಥವರ ನಡೆನುಡಿಗಳು ನನ್ನನ್ನು ತುಂಬಾ ಪ್ರಭಾವಿಸುವೆ. ಲೋಕಾಂತ ವನ್ನ ಪ್ರೀತಿಸಿ ಏಕಾಂತವಾಗಿ ಆ ಮಹನೀಯರೊಂದಿಗೆ ಸಂವಾದಿಸಿದ್ದೇನೆ. ಇಂಥ ಗಳಿಗೆಯಲ್ಲಿ ಹೊತ್ತಿದ ಹಣತೆಗಳೇ, ಈ ಹೊತ್ತಿಗೆಯೊಳಗಿನ ಚಿಂತನಾ ಲಹರಿಗಳು.
ಹಸಿವು ಬಡತನ ಅವಮಾನ ಅಪಮಾನ ತಿರಸ್ಕಾರಗಳಲ್ಲೂ ಪುರಸ್ಕಾರಗೊಳ್ಳುವಂತೆ ಬೆಳೆಯುವ ಸಂವೇದನೆಯನ್ನು ಮನುಷ್ಯ ರೂಢಿಸಿಕೊಳ್ಳುವ ಬಗೆಗಳನ್ನು ಈ ಕೃತಿಯೊಳಗಿನ ಸಾಲುಗಳು ತೋರಬಲ್ಲವು. ಪ್ರತಿಯೊಬ್ಬರು ಆತ್ಮಾಭಿಮಾನವನ್ನು ಜಾಗ್ರತಗೊಳಿಸುವಂತಹ ಆಶಯಗಳನ್ನು ಬುದ್ಧಿವಂತಿಕೆಯನ್ನು ಜಾಣ್ಮೆಯನ್ನು ಈ ಸಂಕಲನ ಹುಟ್ಟು ಹಾಕಬಲ್ಲದು.
ಕಾಲಕ್ಕೆ ಕನ್ನಡಿಯಾಗಬೇಕು ಎಂಬುದು ಅನುಭವಿಗಳ ಮಾತು .ಇದು ಬಹು ಕಾಲದಿಂದ ಬಂದ ಸಂಪ್ರದಾಯ. ಕನ್ನಡಿಯಾಗುವುದೆಂದರೆ ಪ್ರತಿಫಲಿಸುವುದಷ್ಟೇ ಅಲ್ಲ. ಮುಖಾಮುಖಿ ಆಗುವುದೆಂತಲೂ ಅರ್ಥ . ಕುವೆಂಪು ತೇಜಸ್ವಿ ಕಾರಂತರು ಜಿ.ಎಸ್. ಶಿವರುದ್ರಪ್ಪ ಲಂಕೇಶ ಅನಂತಮೂರ್ತಿ ಡಾ. ಸಿದ್ದಲಿಂಗಯ್ಯ ದೇವನೂರು ಮಹಾದೇವರಂತಹ
ಅನೇಕ ಮಹನೀಯರ ಚಿಂತನೆ ಹಾಗು ವಿಚಾರಗಳೊಂದಿಗೆ ಮುಖಾಮುಖಿಯಾಗುವುದು.
ಅವರು ತೋರಿದ ಬೆಳಕಲ್ಲಿ ಸಾಗುತ್ತಲೇ ಸನ್ಮಾರ್ಗಿಗಳಾಗುವುದು. ಲೋಕದ ಬಗ್ಗೆ ಅಚ್ಚರಿ ಬೆರಗು ಮೂಡಿಸಿ ನಮ್ಮ ಅರಿವು ತಿಳುವಳಿಯನ್ನು ವಿಸ್ತರಿ ಸಂವೇದಶೀಲರನ್ನಾಗಿಸಿ ದಿವ್ಯಪಥದಲ್ಲಿ ಮುನ್ನಡೆಸಿದ ಬುದ್ಧ ಬಸವ ಅಂಬೇಡ್ಕರ್ ಗಾಂಧಿ ವಿವೇಕಾನಂದ ಅರಿಸ್ಟಾಟಲ್ ಸಾಕ್ರೆಟಿಸ್ ಖಲೀಲ ಗೀಬ್ರಾನ್ ರಂತಹ ತತ್ವಜ್ಞಾನಿಗಳ ಚಿಂತನಾಕ್ರಮ , ಆಲೋಚನೆ ತಾತ್ವಿಕ ನಿಲುವುಗಳು ಸ್ಫೂರ್ತಿದಾಯಕ ಮಾತುಗಳು ನನ್ನನ್ನು ತುಂಬಾ ಕಾಡಿವೆ. ವೈಚಾರಿಕ ಸಂಘರ್ಷದಿಂದ ಹುಟ್ಟಿದ ಸಾಲುಗಳೇ ಚಿಂತನಾ ಲಹರಿಗಳು.
ಮನುಷ್ಯ ಸ್ವಭಾವ ಚಿಂತನೆ ನಡವಳಿಕೆ ಹಾಗೂ ದೇವರು ಧರ್ಮ ಮತ್ತು ಸಾಂಸ್ಕೃತಿಕ ಆಷಾಢಭೂತಿತನದ ಮೇಲೂ ಇವುಗಳು ಬೆಳಕು ಚೆಲ್ಲಿವೆ. ಆತನ ಮುಖವಾಡದ ಬದುಕನ್ನು ಬಯಲಿಗೆಳೆದಿವೆ.
ಸರಳ ಜೀವನ ನಮಗೊಲಿದರೆ , ನಾವು ಪ್ರಾಮಾಣಿಕ ಮತ್ತು ನೈತಿಕ ಬದುಕನ್ನು ಬದುಕಲು ಸಾಧ್ಯ. ಸಮಾಧಾನದ ಬದುಕೇ ಸಾತ್ವಿಕ ಬದುಕು. ಅದೇ ಸಾರ್ಥಕ ಬದುಕು . ಅಂತಹ ಬದುಕಿಗೆ ಓದುಗರನ್ನು ಈ ಕೃತಿ ಕೊಂಚವಾದರೂ ಪ್ರೇರೇಪಿಸಬಹುದೆಂಬ ನಂಬಿಕೆ ನನ್ನದು.
- ಡಿ.ರಾಮಣ್ಣ ಅಲ್ಮರ್ಸಿಕೇರಿ – ಕೊಪ್ಪಳ
