ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ನಡುವೆ ಏನಿದು.? ಕತ್ತಲೆ’ ಬದುಕಿನ ನಶ್ವರತೆಯ ಬಗ್ಗೆ ಕವಿತೆ ನಮ್ಮನ್ನು ಮತ್ತೆ ಮತ್ತೆ ಎಚ್ಚರಿಸುತ್ತದೆ. ಅಭಿಜ್ಞಾ ಪಿ.ಎಮ್.ಗೌಡ ಅವರ ಕವನ ಸಂಕಲನದ ಕುರಿತು ಡಿ.ರಾಮಣ್ಣಅಲ್ಮರ್ಸಿಕೇರಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಕಾನನದ ಅರಸಿ
ಲೇಖಕಿ : ಅಭಿಜ್ಞಾ ಪಿ.ಎಮ್.ಗೌಡ
ಪ್ರಕಾರ : ಕವನ ಸಂಕಲನ
ಛಂದೋಬದ್ಧವಾಗಿ ವ್ಯಾಕರಣದ ಭಾಷೆಯಲ್ಲಿ ಬರೆಯುವ ಹೊಸ ತಲೆಮಾರಿನ ಕೆಲವು ಮಂದಿ ಕವಯತ್ರಿಯರಲ್ಲಿ ಶ್ರೀಮತಿ ಅಭಿಜ್ಞಾ ಪಿ.ಎಮ್.ಗೌಡ ರವರು ಒಬ್ಬರು.ಕಥೆ, ಕವನ, ಲೇಖನ, ಪ್ರಬಂಧಗಳನ್ನು ಕೃಷಿ ಮಾಡುವ ಒಲವನ್ನು ಬೆಳೆಸಿಕೊಂಡಿದ್ದಾರೆ . ಓದು ಬರಹಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವುದರಿಂದ ಓದುಗ ವಲಯಕ್ಕೆ ಅವರು ಪರಿಚಿತರೇ ಆಗಿದ್ದಾರೆ.
ಕಾವ್ಯ ಮನುಷ್ಯ ಜೀವನದ ಪ್ರತಿಬಿಂಬ. ಕನ್ನಡಿಯೊಳಗೆ ನಮ್ಮ ದೈಹಿಕ ವಿಕಲತೆ ಕಂಡಂತೆ, ಕವಿತೆಯಲ್ಲಿ ಸಾಮಾಜಿಕ ವ್ಯವಸ್ಥೆಯೊಳಗಿನ ವೈಕಲ್ಯ ಸ್ಪಷ್ಟವಾಗಿ ಕಾಣುವಂತಿರಬೇಕು .ಸಮಾಜದ ವಿವಿಧ ಸ್ತರಗಳನ್ನು ಕುರಿತು ಮಾತನಾಡಬೇಕು.ವ್ಯವಸ್ಥೆಯೊಳಗಿನ ಹುನ್ನಾರಗಳನ್ನು, ಷಡ್ಯಂತ್ರಗಳನ್ನು ಅದು ಅನಾವರಣಗೊಳಿಸಬೇಕು.ಇಂತಹ ಆಶಯಗಳನ್ನು ಕವಯತ್ರಿ ದಾಖಲಿಸುತ್ತ ,ಸಮಕಾಲೀನ ಸಮಸ್ಯೆಗಳಿಗೂ ಕಿವಿಯಾಗುತ್ತ ಸಾಮಾಜಿಕ ಜವಾಬ್ದಾರಿಯನ್ನು ಮೆರಿದಿದ್ದಾರೆನ್ನುವುದು ಸಂತಸದ ಸಂಗತಿ. ಅರಿವು, ಆಚಾರ ,ಕಾಯಕ ಪ್ರಜ್ಞೆ ,ಜ್ಞಾನ
ಹಾಗೂ ಧ್ಯಾನದಿಂದ ಮನುಷ್ಯನ ಘನತೆ ಹೆಚ್ಚುತ್ತದೆನ್ನುವುದನ್ನು ಈ ಕೃತಿ ಓದಿದವರಿಗೆ ಅನಿಸದೇ ಇರದು.
ಮಾನವ ಬದುಕಿನ ಸಮಷ್ಟಿ ಪ್ರಜ್ಞೆಯ ಭಾವಗಳು ಕವಿತೆಯಲಿ ಅರಳುಗಟ್ಟಿವೆ. ಚೈತನ್ಯಶೀಲತೆ, ಸಂವೇದನಶೀಲತೆಯ ಸ್ಥಾಯಿಭಾವಗಳನ್ನು ಮೇಳೈಸುವ ಕಾವ್ಯದ ಸೊಗಡು ಈ ಸಂಕಲನದಲ್ಲಿ ಕಾವ್ಯರೂಪದಲ್ಲಿ ಎದ್ದು ಕಾಣುತ್ತದೆ. ಓದುಗ ವಲಯ ಆಸ್ಪಾದಿಸಿ ಸಂಭ್ರಮಿಸಬಹುದಾದ ರಚನೆಯ ಪರಿಕಲ್ಪನೆಗಳನ್ನು ಕಾವ್ಯವಾಗಿಸುವ ಕೌಶಲ್ಯವನ್ನು ಕವಯತ್ರಿ ರೂಢಿಸಿಕೊಂಡಿರುವುದು ಅವರ ಹಾಗು ಕೃತಿಯ ಹೆಚ್ಚುಗಾರಿಕೆಯೂ ಹೌದು.

“ಜೀವನದಲ್ಲಿ ಯಾವ ಸ್ಥಿತಿಯೂ ಶಾಶ್ವತವಲ್ಲ” ಎಂದು ಹೇಳುತ್ತಾನೆ ಭಗವಾನ್ ಮಹಾವೀರ. ಬದುಕಿನ ಏರಿಳಿತಗಳಿಗೆ ಮನುಷ್ಯ ವಿಚಲಿತನಾಗಬಾರದು,ಧೈರ್ಯಗೆಡಬಾರದು, ಬದುಕಿಗೆ ಬೆನ್ನು ತೋರಿಸಬಾರದು,ಸುಖ-ದುಃಖ, ಸಾವು -ನೋವು, ಬೆಳಕು-ಬೆಳದಿಂಗಳು ಇವು , ಮಾನವ ಬದುಕಿನಲ್ಲಿ ತೀರ ಸಹಜವಾದವುಗಳೇ.
ಎದೆಯುದ್ದ ಬೆಳೆದ ಮಗ ಒಳ, ಹೊರಗು ಓಡಾಡಿಕೊಂಡು, ಮನ ಮನೆಯ ಪ್ರೀತಿಗೆ ಸಂಭ್ರಮಕ್ಕೆ ಕಾರಣವಾಗಿದ್ದ ಅವರ ಕರಳು ಕುಡಿ ಇದ್ದಕ್ಕಿದ್ದಂತೆ ಅಕಾಲಿಕ ಮರಣ ಹೊಂದಿದ್ದನ್ನು ಕಣ್ಣೆದುರು ಕಂಡಾಗ ಅವರು ತುಂಬಾ ಆತಂಕ ಹಾಗೂ ತೀವ್ರ ಆಘಾತಕ್ಕೊಳಗಾಗುತ್ತಾರೆ. ದುಃಖದ ಕಡಲಲಿ ಮುಳುಗೇಳುತ್ತಾರೆ. ನಿಷ್ಕರುಣೆಯ ಸಾವು ಅವರ ಬದುಕಿನ ಆಧಾರಸ್ತಂಭವನ್ನೆ ಕಿತ್ತುಕೊಂಡಾಗಲೂ ಧೈರ್ಯ, ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಸಮಚಿತ್ತದಿಂದ ಬದುಕನ್ನು ನೋಡುವ ದೃಷ್ಟಿಕೋನವನ್ನು ಕವಯತ್ರಿ ಬೆಳೆಸಿಕೊಂಡಿದ್ದಾಳೆ..
“ಬೆಂದರೆ ಬೇಂದ್ರೆಯಾಗುತ್ತಾರೆ” ಎಂದು ಹೇಳುತ್ತಾರೆ ಕನ್ನಡದ ಮಹತ್ವದ ಕವಿ ದ.ರಾ ಬೇಂದ್ರೆ.ಅಂತೆಯೇ ಕರುಳ ಕುಡಿಯನ್ನು ಕಳೆದುಕೊಂಡು ಸಾಕಷ್ಟು ನೊಂದು ಬೆಂದರೂ ದೃತಿಗೆಡದೆ ಬದುಕನ್ನು ಎದುರಿಸಿ ನಿಂತದ್ದು ಅಚ್ಚರಿಯ ಸಂಗತಿಯು ಹೌದು . ಅವರ ಎದೆಯಾಳದಲ್ಲಿ ಹೆಪ್ಪುಗಟ್ಟಿದ ನೋವು ಹಾಗೂ ಆತಂಕವೇ ಅವರನ್ನ ಕವಿಯಾಗಿಸಿದ್ದು.ಇಂಥಹ ಅಸಲಿ ಅನುಭವ ಜನ್ಯ ಕವಿತೆಗಳು ಓದುಗರೆದೆಯನ್ನು ತಾಕುತ್ತವೆ.ಬರಹಕ್ಕೆ ಸ್ಫೂರ್ತಿಯಾಗುವಂತಹ ಇಂಥ ಅನುಭವಗಳು ಸಮಾಜಕ್ಕೆ ಮಾದರಿಯೂ ಆಗುತ್ತವೆ. ನೋವಿನ ಹಾಗು ದುಃಖದ ಬೆಂಕಿಯಲ್ಲಿ ಬೆಂದರು “ಅರಳುವ” ಕಲೆ ಬದುಕಿನ ಸಾರ್ಥಕತೆಯ ರೂಪಕವು ಹೌದು..
ಮನುಷ್ಯನಿಗೆ ಭಗವಂತ ನೀಡಿದ ಬದುಕು ಒಂದು ಸುಂದರ ಅವಕಾಶ. ಇಂಥ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜದ ಅಂತಃಸತ್ವವನ್ನು ಪೊರೆಯುವುದಿದೆಯಲ್ಲ ನಿಜಕ್ಕೂ ನಮಗೆಲ್ಲಾ ಬೆರಗು ಮೂಡಿಸುವಂತದ್ದು. ಇಂಥ ಬೆರಗು-ಬೆಳಕು, ಸೋಲು-ಗೆಲುವುಗಳೇ ಈ ಸಂಕಲನದ ಗೆಲುವಿಗೆ ಕಾರಣವಾಗಿವೆ.ಇಂಥ ಸಂವೇದನೆಗಳಿಂದಲೇ ಕವಯತ್ರಿ ಶ್ರೀಮತಿ ಅಭಿಜ್ಞಾ ಪಿ.ಎಮ್.ಗೌಡ ಅವರು ಜೀವಪರ ಎನಿಸಿಕೊಳ್ಳುತ್ತಾರೆ.
“ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬ ಶರಣರ ಚಿಂತನೆಗಳು ಇವರನ್ನು ಪ್ರಭಾವಿಸಿವೆ.”ಮಾತಿಗಿಂತ ಕೃತಿಮೇಲು” ಎಂಬ ನಂಬಿಕೆಯು ಇವರನ್ನು ಬರೆಹದ ಮೂಲಕ ಮುನ್ನಡೆಸಿದೆ.ಇಂಥ ಬರಹ ನಮ್ಮನ್ನು, ಸಮಾಜವನ್ನು ಸುಧಾರಿಸುವುದಾದರೆ ಮತ್ತು ಸ್ಫೂರ್ತಿಗೊಳಿಸುವುದಾದರೆ ಇದಕ್ಕಿಂತ ಭಾಗ್ಯ ಮತ್ತೊಂದಿಲ್ಲ…
” ಹಣಕ್ಕಿಂತ ಮಹತ್ವಪೂರ್ಣವಾದುದ್ದು ಪ್ರೀತಿಯಿಂದ ಹಾಗೂ ಪ್ರಸನ್ನತೆಯಿಂದ ಕೂಡಿದ ಜೀವನ ….ಎನ್ನುತ್ತಾನೆ. – ಜಾನ್ ರಸ್ಕಿನ್.
ಬರವಣಿಗೆ ಅವರ ಬದುಕನ್ನು ಸಂತುಷ್ಟಗೊಳಿಸುವುದಾದರೆ ಫಲಿತಾಂಶವೂ ಕೂಡ ಪರಿಣಾಮಕಾರಿಯೇ ಆಗಿರುತ್ತದೆ. ಅವರ ಕಾವ್ಯದ ಆಶಯಗಳು ನಮ್ಮನ್ನು ಸಭ್ಯತೆಯ ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವಂತಾದರೆ, ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದಂತೆ. ಬದಲಾಯಿಸುವ ಶಕ್ತಿ ಬರಹಕ್ಕೆ ಇರುವುದಾದರೆ ಇದಕ್ಕಿಂತ ದೊಡ್ಡ ಗೆಲುವು ಮತ್ತೊಂದಿಲ್ಲ. ಇಂಥ ಗೆಲುವನ್ನು ಕಾವ್ಯದ ಮೂಲಕ ಬೀರುವ ಸೃಜನಶೀಲತೆಯನ್ನು ಕವಯತ್ರಿ ಬೆಳೆಸಿಕೊಂಡಿದ್ದರೆನ್ನುವುದು ಅಭಿಮಾನದ ಸಂಗತಿ.
ಆಲೋಚನೆಗಳು ಶ್ರದ್ದೆಯಾಗಿ, ಶ್ರದ್ದೆ ,ಕ್ರಿಯೆಯಾಗಿ ಬದಲಾಗುವಲ್ಲಿಯೇ ಮನುಷ್ಯನ ಪುಟ್ಟ ಸಾಧನೆಯಿದೆ. ಈ ಪುಟ್ಟಸಾಧನೆಗೆ ಹಿಡಿದ ಕೈಗನ್ನಡಿ “ಕಾನನದ ಅರಸಿ” ಕವನ ಸಂಕಲನ.
ಸರಳತೆ, ಸೌಜನ್ಯತೆ, ನಡೆ, ಅಧ್ಯಯನಶೀಲತೆ, ಲೋಕಜ್ಞಾನ ಹಾಗು ಸಾಮಾನ್ಯ ತಿಳುವಳಿಕೆಯು ವ್ಯಕ್ತಿಯನ್ನು ಕ್ರಿಯಾಶೀಲನನ್ನಾಗಿ ರೂಪಿಸುತ್ತವೆ.ಇಂಥ ಕ್ರಿಯಾಶೀಲತೆಯು ವ್ಯಕ್ತಿಯೋರ್ವನನ್ನು ಚಲನಶೀಲತೆಗೆ ಒಡ್ಡುವುದು. ನಿರಂತರ ಕ್ರಿಯಾಶೀಲತೆಯ ಮನಸ್ಸು ಮಾತ್ರ , ಸೌಜನ್ಯಶೀಲ ಚಟುವಟಿಕೆಗಳನ್ನು ಮಾಡಲು ಪ್ರೇರೇಪಿಸುತ್ತದೆ.

ಕವಯತ್ರಿಯ ಇಂಥ ಆಲೋಚನೆಗಳ ಮುಂದುವರಿದ ಭಾಗವೇ ಕಾವ್ಯಕೃಷಿ .ಪ್ರಕೃತಿಯ ಸಮೃದ್ಧಿಯಯನ್ನೆ ಒಡಲಾಗಿಸಿಕೊಂಡಿರುವ ಮಂಡ್ಯಾದ ನೆಲ, ಆ ಭಾಗದ ಜೀವನಾಡಿಯಾದ ಕಾವೇರಿ, ಶ್ರೀ ಆದಿಚುಂಚನಗಿರಿಯ ಬೆಟ್ಟ,ಗುಡ್ಡ, ನಿಸರ್ಗದ ತಪ್ಪಲು, ಹಸಿರಿನಿಂದ ಕಂಗೊಳಿಸುವ ಸಸ್ಯ ಶ್ಯಾಮಲೆ ,ಅವರನ್ನು ಸಮಾಜಮುಖಿ ಜೀವಪರ ಕಾಳಜಿವುಳ್ಳ ಕವಯತ್ರಿಯನ್ನಾಗಿ ರೂಪಿಸುವೆ.ಇಂಥಹ ಜೀವನಾನುಭವ ಪರಿಸರ ಪ್ರಭಾವವೇ ಕಾವ್ಯ ಚಟುವಟಿಕೆಗೆ ಕಾರಣವಾಗಿದೆ.
ಕನ್ನಡ ನಾಡು, ನುಡಿ ,ಭಾಷೆ, ನೆಲ, ಜಲ ನಾಡಿನ ಹಿರಿಮೆಯನ್ನು ಎತ್ತಿ ಹಿಡಿದ ಮಹಾನೀಯರನ್ನು ಸ್ಮರಿಸುವ ಕವಿತೆಗಳು ಓದುಗರ ಪ್ರೀತಿ ಅಭಿಮಾನವನ್ನು ಸ್ಫುರಿಸುವಂತೆ ಮಾಡುತ್ತವೆ.
ಶಾಂತಿಗಾಗಿ ಬುದ್ಧ ಎಂಬ ಕವಿತೆಯಲ್ಲಿ ಜಗತ್ತಿಗೆ ಪ್ರೀತಿ ಕಾರುಣ್ಯವನ್ನು ಹಂಚಿದ ಮಹಾಸಂತನ ನಿಲುವುಗಳನ್ನು , ಲೌಕಿಕ ಬದುಕನ್ನು ಧಿಕ್ಕರಿಸಿ, ಅಲೌಕಿಕ ಬದುಕಿನ ಮಹತ್ವ ಸಾರಿ , ಮನುಕುಲದ ಉದ್ದಾರಕ್ಕಾಗಿ ಆತನು ಶ್ರಮಿಸಿದ ಹಾದಿಯನ್ನು, ತಾತ್ವಿಕ ಚಿಂತನೆಗಳನ್ನು ,ನಡೆಗಳನ್ನು ಓದುಗರಿಗೆ ಸ್ಫೂರ್ತಿಯಾಗುವಂತೆ ರಚಿಸಿದ್ದಾರೆ. ಆಸೆ ಬದುಕಿನ ಕೆಡಕುಗಳಿಗೆ ಹೇಗೆ ಕಾರಣವಾಗಬಲ್ಲದೆಂಬುವುದನ್ನು ಕವಿತೆ ಧ್ವನಿಸಿದೆ.
“ಗುಡಿಸಲೊಳಗಿನ ಶ್ರೀಮಂತಿಕೆ ” ಎಂಬ ಕವಿತೆಯಲ್ಲಿ ಮನುಷ್ಯನ ನೆಮ್ಮದಿ, ಸುಖ, ಸಂತೋಷ, ಸಂತೃಪ್ತ ಜೀವನ, ಮಾರ್ಗಕ್ಕೆ ಪೂರಕವಾದ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ .ಹಣ, ಆಸ್ತಿ ಹಾಗೂ ಅಂತಸ್ತು ಅಧಿಕಾರಗಳು ಮಾತ್ರ ಮಾನವನ ನೆಮ್ಮದಿ ಖುಷಿಗೆ ಕಾರಣವಾಗಲಾರವೆಂಬುದನ್ನು ಸೂಕ್ಷ್ಮವಾಗಿ ಕವಿತೆ ಅನಾವರಣಗೊಳಿಸಿದೆ. ಹಾಗೂ ಓದುಗನೊಂದಿಗೆ ಕವಿತೆ ಅನುಸಂಧಾನಕ್ಕಿಳಿಯುತ್ತದೆ.ಜೀವನ ಕನ್ನಡಿಯಿದ್ದಂತೆ ನೀನು ನಕ್ಕರೆ ನಗುತ್ತದೆ .ಅತ್ತರೆ ಅಳುತ್ತದೆ.
ಅಳುವುದು, ನಗುವುದು ನಮ್ಮ ಮನಸ್ಥಿತಿಯನ್ನೇ ಅವಲಂಬಿಸಿದೆ. ಪ್ರೀತಿ ,ವಿಶ್ವಾಸ, ನಂಬಿಕೆ ಸಹಕಾರವೇ ಜೀವನದ ಶ್ರೀಮಂತಿಕೆ .ಬದುಕಿನ ಯಶಸ್ಸು ಕೂಡ ಇದರಲ್ಲಿಯೇ ಅಡಗಿದೆ. ಇಂತಹ ಆಶಯಗಳು ಕವಿತೆಯಲ್ಲಿ ಧ್ವನಿಸಿವೆ.
ಸ್ವಾರ್ಥ, ದುರಾಸೆ, ಲಾಲಸೆಗಳಿಂದ ಮನುಷ್ಯ ದೂರವಾದರೆ , ತುಂಬಾ ಮಾನವೀಯವಾಗುತ್ತಾನೆ. ಮತ್ತು ಮನುಷ್ಯತ್ವದೆಡೆಗೆ ಹೆಜ್ಜೆ ಹಾಕುತ್ತಾನೆಂಬ ಆಲೋಚನಾ ಕ್ರಮ ಬದುಕಿನ ವಾಸ್ತವ ಸತ್ಯ. ಎಂಬ ಕವಿತೆಯಲ್ಲಿ ಅನಾವರಣಗೊಂಡಿದೆ.”
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ನಡುವೆ ಏನಿದು.? ಕತ್ತಲೆ’ ಬದುಕಿನ ನಶ್ವರತೆಯ ಬಗ್ಗೆ ಕವಿತೆ ನಮ್ಮನ್ನು ಮತ್ತೆ ಮತ್ತೆ ಎಚ್ಚರಿಸುತ್ತದೆ. ನಾನು ನನ್ನದು ಮನೆ ಮಕ್ಕಳು ಹೆಂಡತಿ ಹಾಗೂ ಅಧಿಕಾರ ಇವು ಯಾವುವು ಕೂಡ ನಮ್ಮ ಹಿಂದೆ ಬರುವುದಿಲ್ಲ.ಪ್ರಕೃತಿಯಂತೆ ಮಾನವನ ಬದುಕು ಪರೋಪಕಾರಿಯಾಗಿರಬೇಕೆನ್ನುವುದೆ ವಾಸ್ತವ ಸತ್ಯ. ಇರುವಾಗ ಎಲ್ಲರೊಂದಿಗೆ ಬೆರೆತು, ಪ್ರೀತಿ ವಿಶ್ವಾಸದಿಂದ ಸಾಮಾಜಿಕ ಜೀವನ ನಡೆಸಿದಾಗಲೇ ಬದುಕಿಗೊಂದು ಅರ್ಥ. ಇಂಥ ಅರ್ಥಪೂರ್ಣ ಬದುಕಿಗೆ ನಮ್ಮೆಲ್ಲರನ್ನು ತುಡಿಯುವಂತೆ ಪ್ರೇರೇಪಿಸುವುದೆ ಬದುಕಿನ ವಾಸ್ತವ ಸತ್ಯ ಕವಿತೆ…
ಕರ್ನಾಟಕ ಬರೀ ನೆಲವಲ್ಲ…ಈ ಕವಿತೆ ಅಖಂಡ ಕರ್ನಾಟಕ ದಿಗ್ದರ್ಶನವನ್ನು ಮಾಡುತ್ತದೆ . ಇಲ್ಲಿನ ಶಿಲ್ಪಕಲೆ, ವಾಸ್ತುಶಿಲ್ಪ, ಕಲೆ, ಸಂಗೀತ, ಸಾಹಿತ್ಯ, ನದಿ, ಸಂಪನ್ಮೂಲಗಳು, ಗಿರಿಶಿಖರಗಳು, ರಸ ಋಷಿಗಳು, ಕವಿಪುಂಗವರ ದಿವ್ಯದರ್ಶನವನ್ನು ಮಾಡಿಸುತ್ತದೆ. ಈ ನಾಡಿನ ಸಂಸ್ಕೃತಿ ಪರಂಪರೆ ಬಹುತ್ವದ ನೆಲೆಗಳನ್ನು ಪರಿಚಯಿಸುವ ಮೂಲಕ ಕವಿತೆ , ಪ್ರತಿಯೊಬ್ಬ ಕನ್ನಡಿಗರಿಗೂ ಈ ನೆಲದ ಬಗ್ಗೆ ಗೌರವ ಪ್ರೀತಿ ಅಭಿಮಾನ ಮೂಡುವಂತೆ ಮಾಡುತ್ತದೆ.
“ಮನದೊಡಲ ಜ್ವಾಲಾಮುಖಿಯ”.. ಎಂಬ ಕವಿತೆ ಮನದಾಳದ ನೋವು, ನಿರಾಸೆಗಳ ಹೊತ್ತು ಸಾಗುವ, ಮನುಷ್ಯನ ತಲ್ಲಣ ಹಾಗು ಸಂಕಟಗಳನ್ನು ಗಟ್ಟಿಯಾಗಿ ಧ್ವನಿಸಿದೆ.ದುಃಖದ ಸಾಗರದಲ್ಲಿಯೇ ಮುಳುಗಿದಾಗ, ಮನುಷ್ಯನ ತಳಮಳ, ಕನಲುವಿಕೆ ಕಷ್ಟ ಸಾಧ್ಯತೆಗಳನ್ನು “ಚಿಂತೆಯೆಂಬ ಚಿತೆ”ಯಲ್ಲಿ ಸುಡುವ ಪರಿಯನ್ನು ಮಾನವ ಹೇಗೆ ಸಹಿಸಿಕೊಂಡು
ಮುನ್ನಡೆಯುತ್ತಾನೆಂಬುದನ್ನು, ಮನುಷ್ಯ ಪರಿಸ್ಥಿತಿಯ ಕೈಗೊಂಬೆಯಾದಾಗ , ಅವಮಾನ, ಅಪಮಾನಕ್ಕೊಳಗಾದಾಗ ಒಳಗಿನ ಪ್ರತಿರೋಧ ಜ್ವಾಲಾಮುಖಿಯಂತೆ ಹೇಗೆ ಪುಟಿದೇಳುತ್ತಿರುತ್ತದೆನ್ನುವುದನ್ನು ದುಃಖದ ದನಿಯಲ್ಲಿ ಇಡೀ ಕವಿತೆ ನಮ್ಮನ್ನು ಆವರಿಸುತ್ತದೆ.”ಧೈರ್ಯಂ ಸರ್ವತ್ರ ಸಾಧನಂ” ಎಂಬ ಮಂತ್ರ ಬಂಧ ಮುಕ್ತಗೊಳಿಸಬಲ್ಲದೆಂಬುವುದನ್ನು ಕವಯತ್ರಿ ಬಹಳ ಸೂಕ್ಷ್ಮವಾಗಿ ಈ ಕವಿತೆಯಲ್ಲಿ ಹೇಳಿದ್ದಾರೆ.
“ಬರಡಾಗುತ್ತಿದೆ ಮನವೇತಕೋ”.. ಎಂಬ ಕವಿತೆಯಲ್ಲಿ ಏಕಾಂತದಲ್ಲೊಂದು ಸಂವಹನ ಸ್ಥಿತಿಯಲ್ಲಿ ಗೆಳೆಯನಿಗಾಗಿ ಹಂಬಲಿಸುವ ಅನನ್ಯ ಭಾವವಗಳೇ ಇಲ್ಲಿ ಪ್ರಧಾನವಾಗಿವೆ.ಆತನ ಭಾವ ಭಂಗಿಗಳಿಗೆ ಮನಸೋತು ಗಿಡ, ಮರ ,ಹೂ ,ಬಳ್ಳಿ, ನದಿ, ಸಮುದ್ರಗಳಲ್ಲಿ ಆತನ ಇರುವಿಕೆಯನ್ನು ಆರಾಧಿಸುತ್ತ ತನ್ನ ಹೃದಯದಲ್ಲಿ ನೆಲೆಗೊಳಿಸಬೇಕೆನ್ನುವ ಪರಿ ನಿಜಕ್ಕೂ ಸೋಜಿಗವೇ ಸರಿ.ಗೆಳೆಯನನ್ನು ಹುಡುಕುವ ಧಾವಂತದಲ್ಲಿ ಎಲ್ಲೂ ಚೌಕಟ್ಟನ್ನು ಮೀರುವುದಿಲ್ಲ.ಇದು ಕವಯತ್ರಿಯ ಗುಣವೂ ಹೌದೂ. ಪ್ರೀತಿ, ಪ್ರೇಮ, ಪ್ರಣಯದ ಹಾಗೂ ಸುತ್ತಲಿರುವ ಸಮಾಜವನ್ನು ಸೂಕ್ಷ್ಮ ನೋಟಗಳಿಂದ ನೋಡುವ ದೃಷ್ಟಿಕೋನವನ್ನು ಕವಯತ್ರಿ ಬೆಳೆಸಿಕೊಂಡಿದ್ದಾರೆ.ಸಮಾಜದಲ್ಲಿನ ಕೆಡಕುಗಳ ಬಗ್ಗೆ ಕವಯತ್ರಿ ತುಂಬಾ ಕಳವಳ ಪಡುತ್ತಾಳೆ,ಕನಲುತ್ತಾಳೆ. ಅನ್ಯರ ದುಃಖ ,ಸಂಕಟಗಳಿಗೆ ತಾರತಮ್ಯದ ನಡೆಗೆ, ಭ್ರಷ್ಟಗೊಂಡಿರುವ ವ್ಯವಸ್ಥೆಯ ಬಗ್ಗೆ ಸಾತ್ವಿಕ ಸಿಟ್ಟನ್ನು ಕವಿತೆಯ ಮೂಲಕ ಅಭಿವ್ಯಕ್ತಿಗೊಳಿಸುವ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಓದುಗರನ್ನು ಜಾಗೃತಿಗೊಳಿಸುವ ಮಹತ್ವದ ಕೆಲಸವನ್ನು ನಿರ್ವಹಿಸುತ್ತಾರೆ.
ರೈತನ ಸ್ಥಿತಿಗತಿಗಳನ್ನು ಆಧರಿಸಿದ ಕವಿತೆಗಳಲ್ಲಿ ರೈತ ಸಮುದಾಯ ಎದುರಿಸುವ ಬಹುತೇಕ ಸಮಸ್ಯೆಗಳನ್ನು ದಾಖಲಿಸುತ್ತ ,ಆತನ ಹಿತಕ್ಕಾಗಿ, ಉಳುವಿಗಾಗಿ ,ಆಳುವವರ ಹಾಗೂ ವ್ಯವಸ್ಥೆಯ ಗಮನ ಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಮಣ್ಣಿನ ಮಕ್ಕಳ ಅಳಲನ್ನು ಕವಿತೆಯಾಗಿಸಿ ಓದುಗರಿಗೆ ರೈತ ಸಮುದಾಯದ ನೋವುಗಳನ್ನು ಅರ್ಥೈಸುವ ಕೆಲಸವನ್ನು ಮಾಡಿದ್ದಾರೆ. ಇಂಥ ಸಂವೇದನೆಗಳಿಂದಲೇ ಅವರು ಜೀವಪರ ಎನಿಸಿಕೊಳ್ಳುತಾರೆ. ಅವ್ವ ,ಅಪ್ಪ ನಾಡಿನ ಹೆಮ್ಮೆಯ ಕವಿಗಳ, ಸಾಧಕರ ಕುರಿತಾದ ಕವಿತೆಗಳು ಓದುಗರ ಗಮನ ಸೆಳೆಯುತ್ತಿವೆ.ಗಿಡ, ಮರ, ಪರಿಸರ ಕುರಿತಾದ ಕವಿತೆಗಳು ಅವರ ಮೇಲಿನ ಗೌರವವನ್ನು ಹೆಚ್ಚಿಸುವಂತೆ ಮೂಡಿಬಂದಿವೆ.
ಜೀವನ ತುಂಬಾ ಕಡಿಮೆ ಅವಧಿಯದು.ಅದನ್ನ ಮತ್ತೊಬ್ಬರ ಆಶಯದಂತೆ ಬದುಕಿ , ವ್ಯರ್ಥಮಾಡಿಕೊಳ್ಳಬೇಡಿ.ನಮ್ಮ ಭಾವಕ್ಕನುಗುಣವಾಗಿ ಬದುಕಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂಬ ಅವರ ನಿಲುವು ನಡೆಗಳು , ಸಾತ್ವಿಕ ಚಿಂತನೆಗಳು ಕವಯತ್ರಿ ಅಭಿಜ್ಞಾ ಪಿ.ಎಮ್. ಗೌಡರವರ ಆಶಯದ ಬರಹಗಳಾದ್ದರಿಂದ “ಕವಿತೆಗಳು ಬೆಳಕಿನ ಕೋಲಾಗಬಲ್ಲವು”.
ಅವರ ಲೇಖನಿಯಿಂದ ಮೂಡಿದ ಕಾವ್ಯಪ್ರಭೆ ಓದುಗರ ಮುಖದಲ್ಲಿ ಮಂದಹಾಸ ಮೂಡಿಸಲಿ.ಭರವಸೆ ಮೂಡಿಸುವ ಕಾವ್ಯಕೃಷಿ ಮುಂದುವರಿಯಲಿ. ಅವರ ಕೃತಿಗಳು ಓದುಗರ ಮೆಚ್ಚುಗೆಗಳಿಸಲೆಂದು ತುಂಬು ಹೃದಯದಿಂದ ಹಾರೈಸಿ ಅಭಿವಂದಿಸುವೆ.
- ಡಿ.ರಾಮಣ್ಣಅಲ್ಮರ್ಸಿಕೇರಿ – ಕೊಪ್ಪಳ
