ಸರ್ವೋತ್ತಮದಾಸರು ಶ್ರೀಪುರಂದರರು – ಸೌಮ್ಯ ಸನತ್ 

ಇಂದು ಪುಷ್ಯ ಬಹುಳ ಅಮಾವಾಸ್ಯೆಯ ದಿನ, ಸರ್ವೋತ್ತಮದಾಸ ಶ್ರೀಪುರಂದರರು ದಾಸನಾಗಿ ವಿಶೇಷನಾಗಿ ಹರಿದಾಸನಾಗಿ ವಿಠ್ಠಲನ ಹೃದಯಾಸನದಲ್ಲಿ ಐಕ್ಯವಾದ ಪರಮ ಪವಿತ್ರದಿನ. ಸೌಮ್ಯ ಸನತ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…

ಮನ್ಮನೋಭೀಷ್ಟವರದಂ ಸರ್ವಾಭೀಷ್ಟಫಲಪ್ರದo
ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿo

ವಿಷ್ಣು ದೇವರೇ ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ “ಪುರಂದರದಾಸ” ಎಂಬ ಹೆಸರನ್ನು ಪಡೆದರು.

ಫೋಟೋ ಕೃಪೆ :google

ಪುರಂದರ ದಾಸರು ಕರ್ನಾಟಕ ಶಾಸ್ತ್ರೀಯ ಸಂಗೀತ ಮುಖ್ಯ ಸ್ಥಾಪಕ-ಪ್ರತಿಪಾದಕರಲ್ಲಿ ಒಬ್ಬರು ಮತ್ತು ಕರ್ನಾಟಕ ಸಂಗೀತದ ಪಿತಾಮಹ. ಅವರು ಸ್ವರಾವಳಿಗಳು ಮತ್ತು ಅಲಂಕಾರಗಳು ಎಂದು ಕರೆಯಲ್ಪಡುವ ಶ್ರೇಣೀಕೃತ ವ್ಯಾಯಾಮಗಳನ್ನು ರಚಿಸುವ ಮೂಲಕ ಕರ್ನಾಟಕ ಸಂಗೀತವನ್ನು ಕಲಿಸುವ ಮೂಲಭೂತ ಪಾಠಗಳನ್ನು ರೂಪಿಸಿದರು ಮತ್ತು ಅದೇ ಸಮಯದಲ್ಲಿ ಅವರು “ಮಾಯಾಮಾಳವಗೌಳ “ಎಂಬ ರಾಗವನ್ನು ಪರಿಚಯಿಸಿದರು.

ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ ‘ಪಿಳ್ಳಾರಿ ಗೀತೆಗಳು’ (ಉದಾ: ಲಂಬೋದರ ಲಕುಮಿಕರ…., ಕೆರೆಯ ನೀರನು ಕೆರೆಗೆ ಚೆಲ್ಲಿ….. ಇತ್ಯಾದಿ) ಸಂಗೀತದ ಸ್ವರ-ಸಾಹಿತ್ಯ-ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ “ಪ್ರಹ್ಲಾದ ಭಕ್ತಿ ವಿಜಯಮo” ಎಂಬ ಲೇಖನದಲ್ಲಿ ಶ್ರೀ ಪುರಂದರದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದ ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ ‘ದಾಸರೆಂದರೆ ಪುರಂದರದಾಸರಯ್ಯಾ..!’ ಎಂದು ಕೊಂಡಾಡಿದ್ದಾರೆ.

ಪುರಂದರ ದಾಸರ ರಚನೆಗಳು :

ದಂತಕಥೆಯ ಪ್ರಕಾರ, ಪುರಂದರ ದಾಸರು ಸುಮಾರು 4,75,000 ಕನ್ನಡ ಮತ್ತು ಸಂಸ್ಕೃತ ಹಾಡುಗಳನ್ನು ಬರೆದಿದ್ದಾರೆ. ಪ್ರಸ್ತುತ 1000 ಮಾತ್ರ ಲಭ್ಯವಿದೆ. ಪುರಂದರ ದಾಸರ ಹಾಡುಗಳು ಭಗವಾನ್ ನಾರಾಯಣ, ವಿಶೇಷವಾಗಿ ಶ್ರೀಕೃಷ್ಣನಲ್ಲಿ ಅವರ ಭಕ್ತಿಯನ್ನು ಬಹಿರಂಗಪಡಿಸುತ್ತವೆ. ಅವರು ಶ್ರೀಕೃಷ್ಣನ ಜೀವನದಲ್ಲಿ ಹಲವಾರು ಅನುಭವಗಳನ್ನು ಹಾಡುತ್ತಾರೆ. ಈ ಹಲವಾರು ಹಾಡುಗಳಲ್ಲಿ ಸಮಾಜದಲ್ಲಿ ಪ್ರಚಲಿತದಲ್ಲಿರುವ ಎಲ್ಲಾ ಹಲವಾರು ಆಡಂಬರಗಳು ಮತ್ತು ದುರ್ಗುಣಗಳನ್ನು ಅವರು ವಿಡಂಬಿಸಿದ್ದಾರೆ. ಭಕ್ತಿಯ ಎಲ್ಲಾ ಬಾಹ್ಯ ಗುಣಲಕ್ಷಣಗಳನ್ನು ಪ್ರದರ್ಶಿಸುವ ಆದರೆ ನಿಜವಾದ ದಯೆ ಅಥವಾ ಸಮರ್ಪಣೆಯ ಕೊರತೆಯಿರುವ ನಕಲಿ ಭಕ್ತರನ್ನು ಅವರು ಅಪಹಾಸ್ಯ ಮಾಡುತ್ತಾರೆ. ಕರ್ನಾಟಕದ ಅನೇಕ ಸಂಗೀತಗಾರರು ಮತ್ತು ಕವಿಗಳು ಅವರ ಮನಮೋಹಕವಾದ ಬಹುಕಾಂತೀಯ ರಾಗಗಳಿಂದ ಸ್ಫೂರ್ತಿ ಪಡೆದಿದ್ದಾರೆ.

ಪುರಾಣದ ಪ್ರಕಾರ ಪುರಂದರ ದಾಸರು 80 ವರ್ಷ ಬದುಕಿದ ದಾಸರು ಸಂಗೀತದ ಸರ್ವವ್ಯಾಪಿ ಮಾಂತ್ರಿಕತೆ ಮತ್ತು ಆಡುಮಾತಿನ ಮಾಧ್ಯಮವನ್ನು ಬಳಸಿಕೊಂಡು ಭಕ್ತಿಯಿಂದ ಜನರ ಹೃದಯದಲ್ಲಿ ಅಚಲರಾಗಿ ಆರಾಧನೆಗೊಳ್ಳುತ್ತಿದ್ದಾರೆ.

ಫೋಟೋ ಕೃಪೆ :google

  • ಪುರಂದರ ದಾಸರ ಆರಾಧನೆ

ಇಂದು ಪುಷ್ಯ ಬಹುಳ ಅಮಾವಾಸ್ಯೆಯ ದಿನ, ಸರ್ವೋತ್ತಮದಾಸ ಶ್ರೀಪುರಂದರರು ದಾಸನಾಗಿ ವಿಶೇಷನಾಗಿ ಹರಿದಾಸನಾಗಿ ವಿಠ್ಠಲನ ಹೃದಯಾಸನದಲ್ಲಿ ಐಕ್ಯವಾದ ಪರಮ ಪವಿತ್ರದಿನ.

ಪ್ರತಿ ವರ್ಷ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ, ಪುರಂದರ ದಾಸರ ಆರಾಧನಾ (ಸ್ಮರಣಾರ್ಥ) ಆಚರಣೆಗಳನ್ನು ಭಾರತೀಯ ಚಂದ್ರಮಾನ ಕ್ಯಾಲೆಂಡರ್‌ನ (ಚಂದ್ರನ ಕ್ಯಾಲೆಂಡರ್) ಪುಷ್ಯ ಬಹುಳ ಅಮವಾಸ್ಯೆಯಂದು ನಡೆಸಲಾಗುತ್ತದೆ. ಆಳವಾದ ಧಾರ್ಮಿಕ ಮತ್ತು ಸಂಗೀತದ ಉತ್ಸಾಹದಿಂದ ಆಚರಿಸಲಾಗುವ ಈ ಆಚರಣೆಗಳು ಕರ್ನಾಟಕ, ದಕ್ಷಿಣ ಭಾರತ ಮತ್ತು ಪ್ರಪಂಚದಾದ್ಯಂತದ ವಿವಿಧ ಕೇಂದ್ರಗಳಿಂದ ಸಂಗೀತಗಾರರು, ಕಲಾ ಅಭಿಮಾನಿಗಳು ಮತ್ತು ಭಕ್ತರನ್ನು ಒಟ್ಟುಗೂಡಿಸುತ್ತದೆ.


  • ಸೌಮ್ಯ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW