ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೩)

“ದಾದಾಗುರು” ಮಧ್ಯಪ್ರದೇಶದ ಸಂತ. ಅನ್ನಾಹಾರವಿಲ್ಲದೇ ದಿನಕ್ಕೆ 25 – 30 ಕಿ. ಮೀ ನಡೆಯುವರು. ಮೈ ಬೆವರುವುದಿಲ್ಲ, ಸುಸ್ತು ಇಲ್ಲವೇ ಇಲ್ಲ. ಸದಾ ಹಸನ್ಮುಖಿ. ಇವರ ಅಖಂಡ ನಿರಾಹಾರ ಮಹಾವ್ರತ “ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ಲ್ಲಿ ದಾಖಲಾಗಿದೆ. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ಇವತ್ತು ಪ್ರಯಾಣ ಮುಂದುವರಿಸಲಿಲ್ಲ. “ಢಹಿ”ಯ “ಶ್ರೀ ಶ್ರೀ 1008 ಶ್ರೀ ಕಮಲದಾಸಜೀ ಮಹಾಜ್ ಆಶ್ರಮ”ದಲ್ಲಿ ಉಳಿದುಕೊಂಡೆ. ನಾನು ಎರಡು ದಿನದ ಹಿಂದೆ ಭೇಟಿಯಾದ ಸಂತನ ಬಗ್ಗೆ ಹೇಳುವೆ.

ಈ ಹಿಂದೆ ಉಲ್ಲೇಖಿಸಿದಂತೆ ಇವರ ಹೆಸರು “ದಾದಾಗುರು” ಮಧ್ಯಪ್ರದೇಶದ ಸಂತ. “Narmada mission” ಹೆಸರಿನೊಂದಿಗೆ, ನರ್ಮದಾ ನದಿಯ ಸ್ವಚ್ಛತೆ ಕುರಿತು ಅಭಿಯಾನ ಮಾಡುತ್ತಾ, “ನರ್ಮದಾ ಪ್ರದಕ್ಷಿಣೆ’ ಕೈಗೊಂಡಿದ್ದಾರೆ. ಇವರ ಭಕ್ತಗಣ ದೊಡ್ಡದು. 1100 ದಿನದಿಂದ ಅನ್ನ ಸೇವಿಸದೆ ಕೇವಲ “ಜಲಪಾನ” ಮಾಡುತ್ತಾ ಬದುಕಿ “ವೈದ್ಯ ವಿಜ್ಞಾನಕ್ಕೆ ಸವಾಲಾಗಿದ್ದಾರೆ.

ಈ ಸಾರೆಯದು ಅವರ 7 ನೇಯ ಪರಿಕ್ರಮ, ಸಾವಿರಕ್ಕಿಂತ ಹೆಚ್ಚು ಜನ ಅವರೊಂದಿಗೆ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಅನ್ನಾಹಾರವಿಲ್ಲದೇ ದಿನಕ್ಕೆ 25 – 30 ಕಿ. ಮೀ ನಡೆಯುವರು. ಮೈ ಬೆವರುವುದಿಲ್ಲ, ಸುಸ್ತು ಇಲ್ಲವೇ ಇಲ್ಲ. ಸದಾ ಹಸನ್ಮುಖಿ. ವೈದ್ಯರ ತಂಡವೊಂದು ಇವರ ಆರೋಗ್ಯ ಪರೀಕ್ಷಿಸಿದಾಗ ಸಹಜವಾಗಿರುವುದನ್ನು ದಾಖಲಿಸಿದ್ದಾರೆ. ಇವರ ಅಖಂಡ ನಿರಾಹಾರ ಮಹಾವ್ರತ “ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ಲ್ಲಿ ದಾಖಲಾಗಿದೆ.

‘ದಾದಾಗುರು’ವಿನ ಯಾವುದೇ ಆಶ್ರಮವಿಲ್ಲ. ಒಂದು ರೂಪಾಯಿ ದೇಣಿಗೆ ಪಡೆಯುವುದಿಲ್ಲ ಎಂಬುದು ಜನರ ಅಂಬೋಣ. ಇವರ ಮೂಲ ಉದ್ದೇಶ ಮಧ್ಯಪ್ರದೇಶದ “ಜೀವನದಿ”ಗಳ ಸಂರಕ್ಷಣೆ, ಸ್ವಚ್ಚತೆ. ವೃಕ್ಷಗಳನ್ನು ಬೆಳೆಸುವುದು, ಗೋವಿನ ಸಾಕಣೆ, ಸಾವಯವ ಕೃಷಿ, ವೃಕ್ಷಗಳ ಪೂಜೆ, ಮಳೆ ನೀರು ಸಂಗ್ರಹ, ನೀರಿನ ಮೂಲಗಳಲ್ಲಿ ಗಣೇಶ ವಿಸರ್ಜನೆ ನಿಷೇಧ, ಮುಂತಾದ ಪರಿಸರ ರಕ್ಷಣೆಯ ಆಂದೋಲನಗಳನ್ನು ಮಾಡುತ್ತಾ ಸುಮಾರು 18 ವರ್ಷಗಳಿಂದ ಜನರಿಗೆ ತಿಳುವಳಿಕೆ ನೀಡುತ್ತಾ ಬಂದಿದ್ದಾರೆ.

ಈ ಹಿಂದೆ “ಕರೋನಾ”ಮಹಾಮಾರಿ ವಕ್ಕರಿಸಿದ ಕರಾಳ ದಿನಗಳಲ್ಲಿ ದಿನದ 18 ಗಂಟೆ ಹೆದ್ದಾರಿ ಮತ್ತು ಊರುಗಳಲ್ಲಿ ಆಹಾರ, ಚಿಕಿತ್ಸೆ, ದಿನನಿತ್ಯದ ಪೂರೈಕೆ ದಾದಾಗುರುವಿನ ನೇತೃತ್ವದಲ್ಲಿ ನಡೆದಿದೆ. 3 ಸಾರೆ ರಕ್ತದಾನ ಮಾಡಿದ್ದಾರೆ. ಒಟ್ಟಾರೆ ಪರಿಸರ ಸಂರಕ್ಷಣೆ, ಜೀವಗಳ ರಕ್ಷಣೆ, ಮಾನವ ಕುಲದ ಉದ್ಧಾರಕ್ಕೆ ಟೊಂಕ ಕಟ್ಟಿ “ಭಕ್ತರ ದಂಡಿನೊಂದಿಗೆ” ದುಡಿಯುತ್ತಿದ್ದಾರೆ.

ನಮ್ಮ ರಾಜ್ಯದಲ್ಲಿ ಸಹ ಇಂತಹ ಸಂತರು ಬೆರಳೆಣಿಕೆಯಷ್ಟು ಇದ್ದಾರೆ ಉದಾಹರಣೆಗೆ “ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ” ಅವಧೂತ ಸಂತ “ದಾದಾಗುರು”ವಿನ ದರ್ಶನಕ್ಕೆ ನೂರಾರು ಕಿ.ಮೀ ದೂರದಿಂದ ಜನಸಾಗರ ಹರಿದು ಬರುತ್ತದೆ.‌ ನನಗೆ ಅಚಾನಕ್ಕಾಗಿ ಈ ಅವಧೂತರ ದರ್ಶನ ಮತ್ತು ಸತ್ಸಂಗದ ಭಾಗ್ಯ ದೊರೆಯಿತು.

ಚುಮು ಚುಮು ಬೆಳಕು ಹರಿಯುವ ಹೊತ್ತು ಸಮಯ 6 ಗಂಟೆಗೆ ಇಬ್ಬನಿ ದಟ್ಟವಾಗಿ ಹರಡಿತ್ತು. ಸ್ನಾನ ಮುಗಿಸಿ, ಚಹಾ ಹೀರಿದೆ.. ಮುಂದೆ ಪ್ರಯಾಣಿಸುವ ಸಮಯವಿದು..
ಲಗೇಜನ್ನೆಲ್ಲ ನಂದಿಯ ಹೆಗಲಿಗೇರಿಸಿ, ಪ್ರಯಾಣ ಮುಂದುವರಿಸಿದೆ. ಅರೇ…! ನಾನಿನ್ನೂ ಇರುವುದು ಈ ಬೆಟ್ಟಗಳ ತೊಪ್ಪಲಿನಲ್ಲಿಯೆ. ಇಲ್ಲಿಯೇ ಜನರು ಪುಣ್ಯವಂತರು, ಸುತ್ತಲೂ ಬೆಟ್ಟಗುಡ್ಡಗಳು, ಬೆಟ್ಟಕ್ಕೆ ಅಂಟಿಕೊಂಡ ಹೊಲ, ಗದ್ದೆಗಳು, ಬೆಟ್ಟದಾಚೆ ಹರಿಯುತ್ತಿರುವ ಮೋಕ್ಷದಾಯಿನಿ “ನರ್ಮದಾ”.

ನಮ್ಮಗಳ “ಕನಸಿನ ಮನೆ” ಗಳಲ್ಲಿ ಇವರು ವಾಸಿಸುತ್ತಿದ್ದಾರೆ. ಬೆಟ್ಟದ ಮೇಲೊಂದು ಮನೆ, ಸುತ್ತಲೂ ಹಸಿರು ಹೊದ್ದ ಕಾಡು. ರಸ್ತೆಯ‌ ಏರಿಳಿತಗಳು ಅಷ್ಟೇನೂ ಇಲ್ಲದ್ದರಿಂದ ಖುಷಿ ಖುಷಿಯಿಂದ ನಂದಿ ಓಟ ಕಿತ್ತಿದ್ದ..

ಸುಮಾರು 30 ಕಿ.ಮೀ ದೂರಕ್ಕೆ ಬಂದಾಗ ಜೇಬಲ್ಲಿ ಬೆಚ್ಚಗೆ ಮಲಗಿದ್ದ ಮೊಬೈಲ್ ರಿಂಗಣಿಸಿತೊಡಗಿತು, ಮೊದಲು ಅಲಕ್ಷಿಸಿ ರಸ್ತೆಯ ಕಡೆ ಗಮನ ಕೊಟ್ಟೆ. ಮೊಬೈಲ್ ಪದೇ ಪದೇ ರಿಂಗಣಿಸಿತೊಡಗಿತು.‌ ನಂದಿಯನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ, ಮೊಬೈಲ್ ಮುಖ ನೋಡಿದೆ.

ಓಹ್..!! ಈ ಹಿಂದೆ ನಾನು ವಿಮಲೇಶ್ವರದಲ್ಲಿ ಭೇಟಿಯಾದ ಹರಿಯಾಣದ ಸೈಕ್ಲಿಸ್ಟ್. ಅವರ ಜೊತೆ ಮಾತನಾಡಿದಾಗ ತಿಳಿದಿದ್ದು.

ನನಗಿಂತ 15-20 ಕಿ‌.ಮೀ ಅಂತರದಲ್ಲಿ ಅವರು ಬರುತ್ತಿದ್ದರು. ಹಿಂದಿನ ಊರಿನ ಬೆಟ್ಟ ಪಾರಾಗುವಾಗ ಸುಮಾರು 4 ಕಿ.ಮೀ ದೂರದವರೆಗೂ ಪ್ರಪಾತದಂತ ಇಳಿಜಾರು ಪ್ರದೇಶವನ್ನು ಈ ಹಿಂದೆ ನಾನು ಪಾರಾಗಿ ಬಂದಿದ್ದೆ..

ಅವರು ಅದೇ ಸ್ಥಳದಲ್ಲಿ ಸೈಕಲ್ ಇಳಿಸುವಾಗ ಆಯತಪ್ಪಿಯೋ..!! ಸೈಕಲ್ ಮುಂದಿನ ಬ್ರೇಕ್ ಹಾಕಿದ್ದರಿಂದಲೂ‌..!! ಸೈಕಲ್ ಭಯಂಕರವಾಗಿ ಉರುಳಿಬಿದ್ದು, ಹಣೆಯ ಮೇಲ್ಬಾಗ ಗಾಯವಾಗಿ ರಕ್ತ ಸುರಿಯತೊಡಗಿತು, ಕಣ್ಣು ಊದಿಕೊಂಡಿತು, ಎದೆಗೆ ಸೈಕಲ್ ಹ್ಯಾಂಡಲ್ ತಾಗಿದ್ದರಿಂದ.. ಮಾತನಾಡಲೂ ಆಗದೇ ಎದೆ ನೋವೆಂದು ಬಿದ್ದಾಗ.. ನನ್ನ ನೆನಪಾಗಿ “ಕಾಲ್” ಮಾಡಿದ್ದಾರೆ.

ಅವರಿಗೆ ಧೈರ್ಯ ಹೇಳಿ, ನಾನಿರುವ ಲೊಕೇಷನ್ ಹಾಕಿದೆ. “ಪರಿಕ್ರಮ”ದಲ್ಲಿ ಇರುವಾಗ ವಾಪಸ್ಸು ಹೋಗುವಂತಿಲ್ಲ ಆದ್ದರಿಂದ ನಾನಿರುವಲ್ಲಿಗೆ ಬರಲು ಹೇಳಿದೆ. ಅಂತೂ ಒಂದು ತಾಸಿನ ನಂತರ ನಾನಿರುವ ಸ್ಥಳಕ್ಕೆ ಬಂದರು…, ತುರಂತ್ ಹತ್ತಿರದ ವೈದ್ಯರಿಗೆ ತೋರಿಸಿ, ಡ್ರೆಸ್ಸಿಂಗ್ ಮಾಡಿದೆ. ನೋವಿಗೆ ತಾತ್ಕಾಲಿಕ ಚಿಕಿತ್ಸೆ ಕೊಡಿಸಿ ಎದೆಯ ಎಕ್ಸರೇ ಬೇಕಾಗಿದ್ದರಿಂದ “ಕುಕ್ಷಿ” ಎಂಬ ಊರಿಗೆ ಬಂದೆ.

“ಕುಕ್ಷಿ” ಊರಿನಲ್ಲಿ ಎದೆಯ ಎಕ್ಸರೇ ಮಾಡಿಸಿ ನೋಡಿದೆ, ಅದೃಷ್ಟವಶಾತ್ ಆತನಿಗೆ “ಫ್ರ್ಯಾಕ್ಚರ್”(Fracture) ಇರಲಿಲ್ಲ. ನೋವಿಗೆ, ಗಾಯಕ್ಕೆ ಚಿಕಿತ್ಸೆ ಶುರು ಮಾಡಿದೆ. ಇಂದು ಆತನ ಆರೋಗ್ಯದ ಕಾರಣದಿಂದ ಮುಂದೆ ನಡೆಯದೆ ಜೊತೆಗೆ ನಿಂತೆ, ಮಧ್ಯಾಹ್ನಕ್ಕೆ ಮುಂದಿನ ಪ್ರಯಾಣ ನಿಲ್ಲಿಸಿ, ಸ್ಥಳೀಯರ ಸಹಾಯದಿಂದ “ಹನುಮಾನ್ ಮಂದಿರದ” ಆಶ್ರಮದಲ್ಲಿ ಉಳಿದುಕೊಂಡೆ, ಇಲ್ಲಿನ ಸನ್ಯಾಸಿ ದಯಾಳುವಾಗಿದ್ದರಿಂದ ಊಟ ಮತ್ತು ವಸತಿ ವ್ಯವಸ್ಥೆ ಮಾಡಿದರು.

ಇವಾಗ ಊಟವಾಯಿತು. ಆ ಸೈಕ್ಲಿಸ್ಟ್ ತುಂಬಾ ಸುಧಾರಿಸಿಕೊಂಡಿದ್ದಾನೆ. ಮುಖದಲ್ಲಿ ನೋವಿಲ್ಲ. ಇಷ್ಟೇ ಅಲ್ಲವೇ ನಮ್ಮ ವೃತ್ತಿಯ ಧನ್ಯತೆ‌. ನಾವು ಎಲ್ಲೇ ಇದ್ದರೂ‌‌.. ವೃತ್ತಿ ಕೈ ಹಿಡಿದು ನಡೆಸುತ್ತದೆ, ಘನತೆ ತಂದುಕೊಡುತ್ತದೆ.

“ಏಳಿ..!!! ಪ್ರಭು… ಚಹಾ ಕುಡಿರೀ” ಇನ್ನೇನು ಎದ್ದೇಳುವ ಅಂತಾ ಹಾಸಿಗೆಯಲ್ಲಿ ಬಿದ್ದುಕೊಂಡವನಿಗೆ, ಆಶ್ರಮದ ಸಾಧು ಜೋರಾಗಿ ಕೂಗಿ ಹೇಳಿದರು.

ಹೊರಗೆ ಚಳಿ ಇದ್ದುದರಿಂದ ತಮ್ಮ ಕೊಠಡಿಯಲ್ಲಿ ನನಗೆ ಮಲಗಲು ಹಾಸಿ ಕೊಟ್ಟಿದ್ದರು ಆ ಸಾಧು. ಹಿಂದಿನ ರಾತ್ರಿಯ ಭೋಜನಕ್ಕೆ ಖುದ್ದು ತಾವೆ ಗೋದಿ ರೊಟ್ಟಿ ಮತ್ತು ತರಕಾರಿ ಸಾರು ಮಾಡಿದ್ದರು. ಎದ್ದಾಗ ಸಮಯ 5:30‌.. ನಾನು ಉಣ್ಣೆ ಅಂಗಿ ಹಾಕಿಕೊಂಡು ಕೂತಿದ್ಧೆ, ಸಾಧು ಲಂಗೋಟಿಯಲ್ಲಿ ಲವಲವಿಕೆಯಿಂದ ಓಡಾಡುತ್ತಿದ್ದರು‌.

ಒಂದು ಬಟ್ಟಲು ತುಂಬಾ ಚಹಾ ಹಾಕಿಕೊಟ್ಟರು ಸಾಧು, ಆ ಆಶ್ರಮ ತುಂಬಾ ಚಿಕ್ಕದು, ಒಂದು ಚಿಕ್ಕ ದೇವಸ್ಥಾನ, ಪಕ್ಕದಲ್ಲಿ ಟರ್ಪಾಲಿನ್ ಬಳಸಿ ಮರೆ ಮಾಡಿದ್ದೆ ಸಾಧುವಿನ ಕೊಠಡಿ.
ದೇವಸ್ಥಾನದ ಎದುರಿಗೆ “ನರ್ಮದಾ ಪರಿಕ್ರಮವಾಸಿಗಳಿಗೆ ಮಲಗಲು ಅವಕಾಶವಿತ್ತು.

ಆದರೆ ಇಲ್ಲಿಯ ಸಾಧು ಸುಲಲಿತವಾಗಿ ನನ್ನೊಂದಿಗೆ ಬೆರೆತು ಮಾತನಾಡುತ್ತಿದ್ದರು. ಅವರ “ನಿರಂಜನ್ ಅಖಾಡ”ದ ಬಗೆಗೆ, ಸಾಧನೆಗಳ ಬಗ್ಗೆ, ತಮ್ಮ ಸನ್ಯಾಸಿ ಜೀವನದ ಕೆಲ ಘಟನೆಗಳ ಬಗ್ಗೆ, ತಮ್ಮ ಗುರುವಿನ ಬಗೆಗೆ..ಹೀಗೆಯೆ ಸಾಗಿತ್ತು ಮಾತುಕತೆ‌.

ಹಲವು ಸಾಧುಗಳು ವಿವಿಧ ಅಖಾಡಾಗಳಿಂದ ಬಂದಿರುತ್ತಾರೆ, ಒಂದು ಅಖಾಡದ ಸನ್ಯಾಸಿ ಜೊತೆ ಇನ್ನೊಂದು ಅಖಾಡದ ಸನ್ಯಾಸಿ ಬೆರೆಯುವುದಿಲ್ಲ. ಇನ್ನು ಅಖಾಡಾ.. ಅಖಾಡಾಗಳ ನಡುವೆ ವಾದ ವಿವಾದ, ಬಡಿದಾಟ ಸಾಮಾನ್ಯ, ಕೆಲವೊಮ್ಮೆ “ಕೊಲೆ”ಗಳು ಸಂಭವಿಸುತ್ತವೆ.

ಅಖಾಡಾ ಎಂದರೆ.. University ತರಹ ಅಷ್ಟೆ. ಎಲ್ಲರೂ ಸಾಧುಗಳೆ, ಆದರೆ ಅಖಾಡಾ ಬೇರೆ ಬೇರೆ. ಒಂದೆ ಡಿಗ್ರಿಯನ್ನು ಹಲವು ವಿಶ್ವವಿದ್ಯಾಲಯಗಳು ನೀಡುವ ತರಹ.

(ಉದಾಹರಣೆಗೆ ಬಿ.ಎ ಡಿಗ್ರಿಯನ್ನು ಕುವೆಂಪು ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ ನೀಡುವಂತೆ‌..) ಅಖಾಡಾದಿಂದ ಅಖಾಡಕ್ಕೆ ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಎಲ್ಲರೂ ತಮ್ಮದೇ ಶ್ರೇಷ್ಠ ಎನ್ನುವರು. ಆಶ್ರಮದ ಸನ್ಯಾಸಿ ತಾವೇ ಚಹಾ ಮಾಡಿಕೊಟ್ಟಿದ್ದರು.

ಸ್ನಾನ ಮುಗಿಸಿ, ಸಾಧುವಿಗೆ ಧನ್ಯವಾದ ತಿಳಿಸಿ, ಮುಂದೆ ಹೊರಟೆ‌ ಸಮಯ 7:30 20 ಕಿ‌.ಮೀ ದೂರದ “ಶಿಂಗಾಣಾ” ಎಂಬ ಊರಿನ ತನಕ “ನಂದಿ” ಓಡಿದ್ದ. ಟಿಫಿನ್ ಮಾಡಲು ಯೋಚಿಸುತ್ತಿರುವಾಗಲೆ.. ಹೊಟೆಲ್ನವನೊಬ್ಬ “ಬನ್ನಿ ಮಹಾರಾಜ್..!!” ಎಂದು ಕರೆದು.

ಅವಲಕ್ಕಿ, ಶೇಂಗಾ ಕೊಟ್ಪ‌. ಎರಡೂ ನನಗಿಷ್ಟವೆ. ತಿಂದು, ಚಹಾ ಕುಡಿದು ದುಡ್ಡು ಕೊಡಲು ಹೋದಾಗ…ಕೈ ಮುಗಿದು.. “ನೀವು ಬೆಳಿಗ್ಗೆ ಬೆಳಿಗ್ಗೆ ನಮ್ಮ ಅಂಗಡಿಗೆ ಬಂದಿದ್ದು ನಮ್ಮ ಅದೃಷ್ಟ.. ನಿಮಗೆ ಮತ್ತೇನಾದರೂ ಸೇವೆ ಬೇಕಿದ್ದರೆ ತಿಳಿಸಿ’ ಎಂದ.

ನನಗೆ ಇಂತಹ ಘಟನೆ ಹೊಸದೇನು ಅಲ್ಲಾ.. ಆದರೂ ಅವರಿಗೆ ಕೈ ಮುಗಿದು. ಹೊರಟೆ. ಇಂತಹವೆ ಇನ್ನೆರಡು ಘಟನೆಗಳು ರಸ್ತೆಯಲ್ಲಿ ಘಟಿಸಿದವು, ಅಲ್ಲಿ ಕೇವಲ ಸ್ವಲ್ಪ ಚಹಾ ಕುಡಿದು.. ಮುಂದೆ ಹೊರಟೆ.

ಮಧ್ಯಪ್ರದೇಶ, ಗುಜರಾತಿನಲ್ಲಿ “ನರ್ಮದಾ ಪರಿಕ್ರಮ” ಮಾಡುವವರನ್ನ.. ದೇವಿ ನರ್ಮದೆಯ ಮಕ್ಕಳು ಎನ್ನುವ ಭಾವವಿರುವುದರಿಂದ, ಅವರು ನಮಗೇನೆ ಸೇವೆ ಮಾಡಿದರೂ.. ದೇವಿಗೆ ಅರ್ಪಿಸಿದಷ್ಟೆ ಧನ್ಯರಾಗುತ್ತಾರೆ. ಮಧ್ಯಾಹ್ನದ ಸಮಯಕ್ಕೆ ಧಾರ್ ಜಿಲ್ಲೆಯ “ಮನಾವಾರ” ಎಂಬ ಸಿಟಿಗೆ ಬಂದೆ‌‌. ಆ ಊರಿನ ಪ್ರಸಿದ್ಧ ಕ್ಷೇತ್ರ “ಬಂಕನೇರ್ ಮಹಾದೇವ ಮಂದಿರ”. ಅಲ್ಲಿಯೇ ಊಟ ಮತ್ತು ವಿಶ್ರಾಮವಾಯಿತು.

ನಮಗಿಂತ ಮೊದಲೇ ತಂಗಿದ್ದ”ಮಹಾರಾಷ್ಟ್ರದ” ಪರಿಕ್ರಮವಾಸಿಗಳು ಪಾಂಡುರಂಗನ ಆರಾಧನೆ, “ವಾರಿ” ಉತ್ಸವ, ದಿಂಡಿಯಲ್ಲಿನ ರೋಚಕ ಘಟನೆಗಳನ್ನು ಮೆಲುಕು ಹಾಕಿದರು. ಅಲ್ಲಿಯೇ ಬೋರಲಾಗಿ ಮಲಗಿದ್ದ ಸಾಧುವೊಬ್ಬರು ” ಮಹಾವತಾರ ಬಾಬಾ”ರ ಬಗೆಗೆ ಮಾತನಾಡತೊಡಗಿದರು. ಸಾಯಂಕಾಲ “ಮಾನಾವರ”ದಿಂದ ಹೊರಟು “ಭಾನಪುರ್” ಎಂಬ ಗ್ರಾಮಕ್ಕೆ ಬಂದೆ,ಇಲ್ಲಿ ಚಿಕ್ಕದೊಂದು ಅಂಗಡಿ ನಡೆಸಿಕೊಂಡು ಹೋಗುತ್ತಿರುವ ವ್ಯಕ್ತಿಯೊಬ್ಬ.. ಬಾಡಿಗೆ ಮನೆ ಹಿಡಿದು, ಕೆಲವರ ಸಹಯೋಗದೊಂದಿಗೆ ಆಶ್ರಮ ನಡೆಸುತ್ತಿದ್ದಾನೆ.
ನಾನು ರಾತ್ರಿಗೆ ಅಂತ ಇಲ್ಲಿ ಉಳಿದುಕೊಂಡಾಗ ದಾಲ್ ಕಿಚಡಿಯನ್ನ ತಮ್ಮ ಮನೆಯಿಂದ ಮಾಡಿಸಿಕೊಂಡು ಬಂದು ನನಗೆ ತಾನೆ ಬಡಿಸಿದ. ಇಲ್ಲಿನವರು ಸೇವೆ ಮಾಡಲು ಸದಾ ಮುಂದು. ಹೃದಯ ವೈಶಾಲ್ಯತೆ ಅಗಾಧವಾಗಿ ಹೊಂದಿದವರು. ನರ್ಮದಾ ಮಾತೆಯ ಪ್ರಾಮಾಣಿಕ ಭಕ್ತಗಣ ಇವರು.

ನಾಳೆ “ಮಾಂಡವಘಡ” ಹೋಗುವುದಿದೆ.

ಮುಂದಿನ ಪಯಣ ನಾಳೆಗೆ..
ನರ್ಮದೆ ಹರ್

ಹಿಂದಿನ ಸಂಚಿಕೆಗಳು :


  • ಡಾ. ಪ್ರಕಾಶ ಬಾರ್ಕಿ –  ವೈದ್ಯರು, ಲೇಖಕರು, ಕಾಗಿನೆಲೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW