ದಾಸರೆಂದರೆ ಪುರಂದರ ದಾಸರಯ್ಯ – ಚೇತನ ಭಾರ್ಗವ

ಶ್ರೀನಿವಾಸ ನಾಯಕನಿಂದ ಪುರಂದರ ದಾಸರಾದ ಕಥೆ ಮತ್ತು ಪುರಂದರದಾಸರು ಕರ್ನಾಟಕ ಸಂಗೀತವನ್ನು ಕಲಿಸುವ ವ್ಯವಸ್ಥೆಯನ್ನು ರೂಪಿಸಿದರು. ಇವರು ಮೇಳ ಕರ್ತರಾಗಗಳನ್ನು ಒಳಗೊಂಡಂತೆ 84 ರಾಗಗಳನ್ನು ಗುರುತಿಸಿದ್ದಾರೆ. ಕರ್ನಾಟಕ ಸಂಗೀತದ ಮೇಲೆ ಇವರ ಪ್ರಭಾವ ಗಾಢವಾಗಿದೆ. ಚೇತನ ಭಾರ್ಗವ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…

ದಾಸ ಸಾಹಿತ್ಯದಲ್ಲೇ ಶ್ರೇಷ್ಠರಾದ ಪುರಂದರದಾಸರು 15ನೇ ಶತಮಾನದವರು. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸ ನಾಯಕ. ಇವರು ವರದಪ್ಪ ನಾಯಕ ಹಾಗೂ ರುಕ್ಮಿಣಿ ಅವರ ಸುಪುತ್ರ. ಈ ದಂಪತಿಗಳಿಗೆ ಹಲವು ವರ್ಷಗಳಿಂದ ಮಕ್ಕಳಿಲ್ಲದ ಕಾರಣ ತಿರುಪತಿಯ ಶ್ರೀನಿವಾಸನಿಗೆ ಪ್ರಾರ್ಥನೆ ಮಾಡಿಕೊಂಡ ಮೇಲೆ ಮಗುವಾಯಿತಂತೆ.ಆ ಮಗುವಿಗೆ ಶ್ರೀನಿವಾಸ ನಾಯಕ ಎಂದು ನಾಮಕರಣ ಮಾಡಿದರು.

ವರದಪ್ಪ ನಾಯಕರು ಚಿನ್ನ ವಜ್ರದ ವ್ಯಾಪಾರಿಗಳಾಗಿದ್ದರು. ಇವರ ನಂತರ ಶ್ರೀನಿವಾಸ ನಾಯಕ ಕೂಡ ತಂದೆಯ ವೃತ್ತಿಯನ್ನು ಮುಂದುವರಿಸಿದ. ಈತನು ಬಹಳ ಜಿಪುಣ. ಯಾರಿಗೂ ಯಾವ ದಾನ ಧರ್ಮವನ್ನು ಮಾಡುತ್ತಿರಲಿಲ್ಲ. ಶ್ರೀನಿವಾಸ ನಾಯಕನು ಸರಸ್ವತಿ ಬಾಯಿಯನ್ನು ವಿವಾಹವಾದನು. ಆಕೆಯು ಮಹಾನ್ ದೈವಭಕ್ತೇ ಸಾಧ್ವಿ ಹಾಗೂ ಆದರ್ಶ ಪತಿವ್ರತೆಯಾಗಿದ್ದಳು. ಈಕೆಯಿಂದಲೇ ಇವನಿಗೆ ಸಾಕ್ಷಾತ್ಕಾರವಾಗಿದ್ದು.

ಶ್ರೀನಿವಾಸ ನಾಯಕನಿಂದ ಪುರಂದರ ದಾಸರಾದ ಕಥೆ :

ಶ್ರೀನಿವಾಸ ನಾಯಕ ಬಹಳ ಜಿಪುಣ. ತನ್ನ ಸ್ವಂತದವರಿಗೂ ಒಂದು ರೂಪಾಯಿ ಕೊಡಲು ಹಿಂದೆ ಮುಂದೆ ನೋಡುತ್ತಿದ್ದ. ಇವನು ರತ್ನ ವಜ್ರಗಳನ್ನು ವ್ಯಾಪಾರ ಮಾಡುವ ಆಗರ್ಭ ಶ್ರೀಮಂತನಾಗಿದ್ದನು. ಒಂದು ದಿನ ಶ್ರೀಹರಿಯು ಬಡ ಬ್ರಾಹ್ಮಣ ವೇಷದಲ್ಲಿ ಬಂದು ತನ್ನ ಮಗನಿಗೆ ಮುಂಜಿ ಇದೆ, ಅದಕ್ಕಾಗಿ ಹಣದ ಅವಶ್ಯಕತೆ ಇದೆ ಸಹಾಯ ಮಾಡಿ ಎಂದು ಬೇಡಿಕೊಂಡನು. ಜಿಪುಣಗ್ರೇಸರನಾದ ಶ್ರೀನಿವಾಸನು ನಾಳೆ ಬಾ ಎಂದು ಹೇಳುತ್ತಾ, ದಿನವನ್ನು ದೂಡುತ್ತಿದ್ದನು. ಆರು ತಿಂಗಳ ಕಾಲ ಬಡ ಬ್ರಾಹ್ಮಣನು ಪ್ರತಿನಿತ್ಯ ಬಂದು ಇವನಲ್ಲಿ ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿದ್ದನು. ಕೊನೆಗೆ ಇವನ ಕಾಟತಾಳಲಾರದೆ ಶ್ರೀನಿವಾಸ ನಾಯಕ ಒಂದು ಸವೆದ ನಾಣ್ಯವನ್ನು ಅವನಿಗೆ ಕೊಟ್ಟು ಕಳುಹಿಸಿದನು.

ಮಾರನೇ ದಿನ ಅದೇ ಬ್ರಾಹ್ಮಣನು ಶ್ರೀನಿವಾಸ ನಾಯಕನ ಮನೆಗೆ ಬಂದು, ಸರಸ್ವತಿ ಬಾಯಿಯ ಹತ್ತಿರ ತನ್ನ ಮಗನ ಮುಂಜಿಗಾಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡನು. ಸರಸ್ವತಿ ಬಾಯಿ ಅಸಾಹಾಯಕಳಾಗಿದ್ದಳು. ಅವಳಿಗೆ ಸಹಾಯ ಮಾಡುವ ಮನಸ್ಸಿದ್ದರೂ ಗಂಡನ ಅಪ್ಪಣೆ ಇಲ್ಲದೆ ಏನನ್ನು ಕೊಡಲಾಗದ ಪರಿಸ್ಥಿತಿ ಅವಳದಾಗಿತ್ತು. ತನ್ನ ಬಳಿ ನಿಮಗೆ ಕೊಡಲು ಏನೂ ಇಲ್ಲ ಎಂದು ಸರಸ್ವತಿ ಬಾಯಿ ಬ್ರಾಹ್ಮಣನಲ್ಲಿ ಬೇಸರ ವ್ಯಕ್ತಪಡಿಸಿದಳು. ಆಗ ಅವನು ನಿನ್ನ ತವರಿನಲ್ಲಿ ಕೊಟ್ಟ ಮೂಗುತಿ ಇದೆಯಲ್ಲ ಎಂದು ನೆನಪಿಸಿದನು. ಹಾಗೆ ಅದನ್ನೇ ಕೊಡುವಂತೆ ಸೂಚಿಸಿದನು. ಸರಸ್ವತಿ ಬಾಯಿ ಮೂಗುತಿಯನ್ನು ಬ್ರಾಹ್ಮಣನಿಗೆ ಕೊಟ್ಟು ಕಳುಹಿಸಿದಳು.

ಆ ಬ್ರಾಹ್ಮಣನು ಶ್ರೀನಿವಾಸ ನಾಯಕನ ಬಳಿ ಮೂಗುತಿಯನ್ನು ಅಡವಿಟ್ಟು ಹಣವನ್ನು ಕೊಡುವಂತೆ ಕೇಳಿದನು. ಶ್ರೀನಿವಾಸ ನಾಯಕನಿಗೆ ಅದು ತನ್ನ ಹೆಂಡತಿಯ ಮೂಗುತಿ ಇರಬಹುದೇ ಎಂಬ ಅನುಮಾನ ಬಂದಿತು. ಹಾಗಾಗಿ ನಾಳೆ ಬಾ ಹಣ ಕೊಡುವೆ ಎಂದು ಹೇಳಿ ಬ್ರಾಹ್ಮಣನನ್ನು ಕಳುಹಿಸಿದನು. ಮೂಗುತಿಯನ್ನು ಭದ್ರವಾಗಿ ಪೆಟ್ಟಿಗೆಯಲ್ಲಿ ಇಟ್ಟು ಬೀಗ ಹಾಕಿ ಮನೆಗೆ ಹೋದನು.

ಫೋಟೋ ಕೃಪೆ : google

ಮನೆಗೆ ಬಂದ ತಕ್ಷಣವೇ ಸರಸ್ವತಿ ಬಾಯಿಯ ಬಳಿ ನಿನ್ನ ಮೂಗುತಿ ಎಲ್ಲಿ ಎಂದು ಪ್ರಶ್ನಿಸಿದನು. ನಿಜವನ್ನು ಹೇಳಲಾರದೆ ಹೆದರಿ ಆಕೆಯು ಸ್ನಾನ ಮಾಡುವಾಗ ತೆಗೆದಿಟ್ಟಿದ್ದೇನೆ ಎಂದು ಉತ್ತರಿಸಿದಳು. ಅದನ್ನು ತೆಗೆದುಕೊಂಡು ಬಾ ಎಂದು ಶ್ರೀನಿವಾಸ ನಾಯಕ ಹೇಳಿದಾಗ ಚಿಂತಾಕ್ರಾಂತಳಾದ ಸರಸ್ವತಿ ಬಾಯಿ ವಿಷವನ್ನು ಕುಡಿಯಲು ಮುಂದಾದಳು. ಆಗ ಆ ವಿಷದ ಬಟ್ಟಲೊಳಗೆ ಮೇಲಿನಿಂದ ಮೂಗುತಿ ಬಿದ್ದಿತ್ತು. ಅವಳಿಗೆ ಆಶ್ಚರ್ಯವಾಯಿತು. ಮೂಗುತಿಯನ್ನು ಸಂತೋಷದಿಂದ ತೆಗೆದುಕೊಂಡು ಹೋಗಿ ಪತಿ ದೇವರಿಗೆ ಕೊಟ್ಟಳು. ಶ್ರೀನಿವಾಸ ನಾಯಕ ಅಂಗಡಿಗೆ ಬಂದು ಪೆಟ್ಟಿಗೆಯನ್ನು ತೆಗೆದು ನೋಡಿದರೆ ಅವನು ಇಟ್ಟಿದ್ದ ಮೂಗುತಿ ಅಲ್ಲಿರಲಿಲ್ಲ. ಸರಸ್ವತಿ ಬಾಯಿಯು ಸತ್ಯ ಮುಂಚಿಡಲಾರದೆ ಬಡ ಬ್ರಾಹ್ಮಣ ಮನೆಗೆ ಬಂದ ವಿಷಯವನ್ನು ವಿವರವಾಗಿ ಶ್ರೀನಿವಾಸ ನಾಯಕನ ಬಳಿ ಹೇಳಿದಳು. ಆತನಿಗೆ ಆಗ ಜ್ಞಾನೋದಯವಾಗಿ, ಸಾಕ್ಷಾತ್ ನಾರಾಯಣನೇ ನನ್ನನ್ನು ಪರೀಕ್ಷಿಸಲು ಬ್ರಾಹ್ಮಣ ರೂಪದಲ್ಲಿ ಬಂದಿದ್ದನು ಎಂಬ ಅರಿವಾಯಿತು.

ನಂತರ ಶ್ರೀನಿವಾಸ ನಾಯಕ ಎಲ್ಲಾ ಶ್ರೀಮಂತಿಕೆಯನ್ನು ತೊರೆದು ವ್ಯಾಸರಾಯರ ಬಳಿ ದಾಸ ದೀಕ್ಷೆಯನ್ನು ಪಡೆದು ಪುರಂದರ ದಾಸರಾದರು. ಕೊರಳಲ್ಲಿ ತುಳಸಿ ಮಾಲೆ, ಹಣೆಗೆ ಗೋಪಿ ಚಂದನದ ನಾಮ ಇಡುತ್ತಾ, ತಾಳ, ತಂಬೂರಿ ಹಿಡಿದು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಹಾಡುತ್ತಾ ದಾಸರು ಭಕ್ತಿಯ ಬೀಜವನ್ನು ಜನಸಾಮಾನ್ಯರ ಮನದಲ್ಲಿ ಬಿತ್ತಿದರು. ಪುರಂದರದಾಸರು ಕರ್ನಾಟಕ ಸಂಗೀತ ಪದ್ಧತಿಗೆ ಭದ್ರವಾದ ಬುನಾದಿಯನ್ನು ಹಾಕಿ ಕೊಟ್ಟರು. ಶಾಸ್ತ್ರೀಯ ಸಂಗೀತವನ್ನು ಶ್ರೀಸಾಮಾನ್ಯರಿಗೆ ಪರಿಚಯಿಸಿ ಕೊಟ್ಟರು. ಭಕ್ತಿ ಮಾರ್ಗವನ್ನು ದೇವರ ನಾಮದ ಮೂಲಕ ಜನಸಾಮಾನ್ಯರಿಗೆ ಪರಿಚಯಿಸಿ ಕೊಡುವುದು ಅವರ ಉದ್ದೇಶವಾಗಿತ್ತು. ಪುರಂದರದಾಸರು ಮದ್ವಸಿದ್ಧಾಂತದ ಪ್ರತಿಪಾದಕರಾಗಿದ್ದರು.
ಪುರಂದರದಾಸರು ಸುಮಾರು 4,75,000 ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಲಾಗುತ್ತದೆ. ಇವರ ಕೃತಿಯಲ್ಲಿ ಸರಳವರಸೆ, ಜಂಟಿ ವರಸೆ, ಅಲಂಕಾರಗಳು, ಕೀರ್ತನೆ ಉಗಾಭೋಗ, ಮುಂಡಿಗೆ, ಗದ್ಯ ಮುಂತಾದ ಶೈಲಿಯಲ್ಲಿ ದೇವರಸ್ತುತಿ, ನಿಂದಾಸ್ತುತಿ, ನೀತಿಕವನ, ಒಗಟಿನ ಕವನ, ಸಂದೇಶಪೂರಿತ ಕೃತಿ, ಪ್ರಕೃತಿ ಪರಿಚಯ, ಪರಮಾತ್ಮನ, ಲಕ್ಷ್ಮಿ ಸರಸ್ವತಿ ಇತರ ದೇವ ದೇವಿಯರ ಸ್ತುತಿ ಮುಂತಾದವುಗಳನ್ನು ರಚಿಸಿದ್ದಾರೆ. ಇವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿದೆ.ಪುರಂದರ ವಿಠ್ಠಲ ಇವರ ಅಂಕಿತನಾಮ.

ಪುರಂದರದಾಸರು ಕರ್ನಾಟಕ ಸಂಗೀತವನ್ನು ಕಲಿಸುವ ವ್ಯವಸ್ಥೆಯನ್ನು ರೂಪಿಸಿದರು. ಇವರು ಮೇಳ ಕರ್ತರಾಗಗಳನ್ನು ಒಳಗೊಂಡಂತೆ 84 ರಾಗಗಳನ್ನು ಗುರುತಿಸಿದ್ದಾರೆ. ಕರ್ನಾಟಕ ಸಂಗೀತದ ಮೇಲೆ ಇವರ ಪ್ರಭಾವ ಗಾಡವಾಗಿದೆ. ಹಾಗಾಗಿ ಇವರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯಲಾಗುತ್ತದೆ. ಪುರಂದರ ದಾಸರ ಸಾಧನೆಯನ್ನು ಕಂಡ ಸರ್ವರೂ ದಾಸರೆಂದರೇ ಪುರಂದರ ದಾಸರಯ್ಯ ಎಂದು ಕೊಂಡಾಡಿದ್ದಾರೆ.

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ!
ಪುರಂದರ ಗುರು ವಂದೇ ದಾಸ ಶ್ರೇಷ್ಠo ದಯಾನಿಧಿಂ!!


  • ಚೇತನ ಭಾರ್ಗವ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW