‘ಅಪ್ಪ ಕಾಣೆಯಾಗಿದ್ದಾನೆ’ ಕೃತಿ ಪರಿಚಯ

ಡಾ. ಬೇಲೂರು ರಘುನಂದನ್ ಅವರ ಚೊಚ್ಚಲ ಕಥಾ ಸಂಕಲನ ‘ಅಪ್ಪ ಕಾಣೆಯಾಗಿದ್ದಾನೆ’. ಡಾ. ಬೇಲೂರ್ ರಘುನಂದನ್ ನಾಟಕಗಳ ರಚನೆಕಾರರು ಆಗಿರುವುದರಿಂದ ಅಲ್ಲಿ ಬಳಸುವ ರೂಪಕಗಳನ್ನು ಕಥೆಗಳಲ್ಲೂ ಯಶಸ್ಸಿಯಾಗಿ ಪ್ರಯೋಗಿಸಿದ್ದಾರೆ.ಕೃತಿಯ ಕುರಿತು ಶಿಕ್ಷಕಿ, ಲೇಖಕಿ ಅನುಸೂಯ ಯತೀಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ: ಅಪ್ಪ ಕಾಣೆಯಾಗಿದ್ದಾನೆ
ಲೇಖಕರು: ಡಾ.ಬೇಲೂರು ರಘುನಂದನ್
ಪ್ರಕಾರ : ಕಥಾ ಸಂಕಲನ
ಪ್ರಕಾಶನ: ಅಮೂಲ್ಯ

ಕನ್ನಡ ರಂಗಭೂಮಿ, ಕಾವ್ಯ, ಅಂಕಣ, ಪ್ರವಾಸ ಸಾಹಿತ್ಯ, ಮಕ್ಕಳ ಸಾಹಿತ್ಯ, ಕಟ್ಟು ಪದಗಳ ಮೂಲಕ ಜನಪ್ರಿಯರಾಗಿರುವ ಡಾ. ಬೇಲೂರು ರಘುನಂದನ್ ಅವರ ಚೊಚ್ಚಲ ಕಥಾ ಸಂಕಲನ ‘ಅಪ್ಪ ಕಾಣೆಯಾಗಿದ್ದಾನೆ’. ಇವರ ಒಟ್ಟು ಸಾಹಿತ್ಯವನ್ನು ನಾವು ವಿಶ್ಲೇಷಿಸಿದಾಗ ಬಹುತೇಕ ಬರಹಗಳು ಹೆಣ್ಣಿನ ಬದುಕಿನ ಸಂಕಟಗಳು, ಹೆಣ್ಣಿನ ಬಗೆಗಿನ ಸಮಾಜದ ನಿರ್ಲಕ್ಷ, ಶೋಷಣೆ, ದೌರ್ಜನ್ಯ, ಅಸಮಾನತೆ ಹಾಗೂ ಅಸಹಾಯಕತೆಯ ಕೆಂಡದುರಿಯನ್ನು ತೆರೆದಿಡುತ್ತವೆ. ಜೊತೆಗೆ ಸ್ತ್ರೀ ಶಕ್ತಿಯ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತವೆ. ಈ ಕಥಾ ಸಂಕಲನ ಕೂಡ ಇದರ ಹೊರತಾಗಿಲ್ಲ.

ಹೆಣ್ಣನ್ನ ಕೆಲವು ಪೂರ್ವ ನಿಗದಿತ ಗಡಿ ರೇಖೆಗಳಲ್ಲಿ ಬಂಧಿಸುತ್ತಾ, ಭಾವನಾತ್ಮಕವಾಗಿ ಅವಳನ್ನು ಹಿಡಿತದಲ್ಲಿ ಇಟ್ಟುಕೊಂಡು, ಜವಾಬ್ದಾರಿಗಳನ್ನು ಅವರ ಹೆಗಲಿಗೆ ಕಟ್ಟಿ ಅವಳನ್ನು ಸೂತ್ರದ ಗೊಂಬೆಯಂತೆ ಆಡಿಸುವ ಈ ಸಮಾಜದ ಮತ್ತೊಂದು ಕ್ರೌರ್ಯದ ಮುಖವಾಡಗಳನ್ನು ಬಯಲು ಮಾಡುವ ರೀತಿ ಮನವನ್ನು ಕಲಕುತ್ತದೆ. ಆದರೂ ಆ ನಂಜನೆಲ್ಲ ತನ್ನೊಳಗೆ ನುಂಗಿಕೊಂಡು ಅಂತರಾಳದಲ್ಲಿ ಮುಡುಗಟ್ಟಿದ ದುಃಖವನ್ನು, ಅಪಮಾನಗಳನ್ನು ತನ್ನ ಗುರಿ ಸಾಧನೆಗೆ ಅಸ್ತ್ರಗಳನ್ನಾಗಿಸಿಕೊಂಡ ಧೀರ ಹೆಣ್ಣು ಮಕ್ಕಳು ಈ ಕಥೆಗಳಲ್ಲಿ ಲೇಖಕರನ್ನು ಸಾಕಷ್ಟು ಕಾಡಿದ್ದಾರೆ. ಹೆಣ್ಣಿನೊಳಗೆ ಚಿಂತನೆಯ ಮಾರ್ಗವನ್ನು ಹುಟ್ಟುಹಾಕುವುದು. ಗಂಡು ಹಾಕಿದ ಅಸಂಬದ್ಧ ಮಿತಿಗಳನ್ನ ದಾಟಿ ತಾವು ಸಾಗಬೇಕಾದ ದಾರಿಗಳನ್ನ ಅವಳೇ ಸೃಷ್ಟಿಸಿಕೊಳ್ಳಲು ಲೇಖಕರು ಹಂಬಲಿಸುತ್ತಾರೆ. ಗಾಢವಾದ ಅನುಭವಗಳ ಪ್ರಖರತೆ ಮತ್ತು ಅನುಭವ ಸಂಪನ್ನತೆ ಸ್ತ್ರೀ ಲೋಕದ ಹೊಸ ಜಗತ್ತನ್ನ ಪರಿಚಯಿಸುತ್ತದೆ.

ಹೆಣ್ಣನ್ನ ಸಾಧಕಳಾಗಿ ಮಾತ್ರ ಬಿಂಬಿಸದೇ ಆ ದಾರಿಯಲ್ಲಿ ಸಾಗುವಾಗ ಅವಳು ಅನುಭವಿಸುವ ಸವಾಲುಗಳನ್ನು ಮಾನಸಿಕ ಮತ್ತು ಭಾವನಾತ್ಮಕ ಸಂಘರ್ಷಗಳನ್ನು ಪದರು ಪದರಾಗಿ ತೆರೆದಿಟ್ಟಿದ್ದಾರೆ. ಡಾ. ಬೇಲೂರ್ ರಘುನಂದನ್ ನಾಟಕಗಳ ರಚನೆಕಾರರು ಆಗಿರುವುದರಿಂದ ಅಲ್ಲಿ ಬಳಸುವ ರೂಪಕಗಳನ್ನು ಕಥೆಗಳಲ್ಲೂ ಯಶಸ್ಸಿಯಾಗಿ ಪ್ರಯೋಗಿಸಿದ್ದಾರೆ. ಸಮಾಜದ ಸೂಕ್ಷ್ಮಗಳನ್ನು ಸುಲಭವಾಗಿ ಗ್ರಹಿಸಿ ಅವುಗಳನ್ನು ಕಥೆಗಳಲ್ಲಿ ಪ್ರಯೋಗಿಸಿದ್ದಾರೆ.

‘ಅಪ್ಪ ಕಾಣೆಯಾಗಿದ್ದಾನೆ’ ಕಥೆಯು ಶೀರ್ಷಿಕೆ ಕಥೆಯಾಗಿದ್ದು ಇಡೀ ಕಥೆಯುದ್ದಕ್ಕೂ ಅಪ್ಪನ ಅನುಪಸ್ಥಿತಿಯನ್ನು ತೆರೆದಿಡುತ್ತದೆ. ಅವನ ಬೇಜವಾಬ್ದಾರಿ ಕುಟುಂಬದ ಮೇಲೆ ಬೀರುವ ಪರಿಣಾಮಗಳು ಮನ ಮಿಡಿಯುವಂತೆ ಚಿತ್ರಿತವಾಗಿವೆ.

‘ಸ್ಕೇರಿ ಹೌಸ್’ ಕಥೆಯು ಆಧುನಿಕ ಬದುಕಿನ ತಲ್ಲಣಗಳು ಹಾಗೂ ಕೌಟುಂಬಿಕ ವಿಘಟನೆಯು ಮಕ್ಕಳ ಬದುಕಿನ ಮೇಲೆ ನಕಾರಾತ್ಮಕವಾಗಿ ಬೀರುವ ಪರಿಣಾಮವನ್ನು ಪರಿಚಯಿಸಿದರೇ,
‘ಪಾಪಣ್ಣಿ ಕೆರೆ’ ಕಥೆಯು ಹಸಿವಿನ ನಿರ್ಮುಲನೆ ಮತ್ತು ಶಿಕ್ಷಣದ ಆಶಯಗಳನ್ನು ಬೆಂಬಲಿಸುತ್ತದೆ.

‘ಏಡಿ ಅಮ್ಮಯ್ಯ’ ಕಥೆಯಲ್ಲಿ ಮಲೆನಾಡಿನ ಪ್ರಕೃತಿ ವರ್ಣನೆಯು ಸೊಗಸಾಗಿದ್ದು ಮನಸಿಗೆ ಮುದ ನೀಡುತ್ತದೆ. ‘ಮುಲ್ಲಾ ಸಾಹೇಬ್ ಮತ್ತು ಪಾಂಡುರಂಗ’ ಕಥೆಯು ಧರ್ಮ ಧರ್ಮಗಳ ಸಂಘರ್ಷಗಳಾಚೆ ನಿಂತು ಮಾನವೀಯತೆಯನ್ನು ಪ್ರತಿಪಾದಿಸುತ್ತದೆ. ‘ಭೇಟಿ’ ಕಥೆಯು ವಿಶಿಷ್ಟವಾದ ಕಥಾ ಪರಿಕರ ಹೊಂದಿದ್ದು ಲೈಂಗಿಕ ಅಲ್ಪಸಂಖ್ಯಾತೆಯೊಬ್ಬಳ ಒಳಗೆ ಅಡಗಿರುವ ಮಾತೃ ಪ್ರೇಮವನ್ನು ಸೂಚಿಸುತ್ತದೆ. ಕೊರೋನಾ ಕಾಲದಲ್ಲಿ ಉಳಿವಿಗಾಗಿ ನಡೆದ ಹೋರಾಟದಲ್ಲಿನ ಮಾನಸಿಕ ತುಮುಲಗಳು ‘ಒಂದು ಮೂಟೆ ಅಕ್ಕಿ’ ಕಥೆಯಲ್ಲಡಗಿವೆ.


  • ಅನುಸೂಯ ಯತೀಶ್ – ಶಿಕ್ಷಕರು, ಲೇಖಕರು, ವಿಮರ್ಶಕಿ, ನೆಲಮಂಗಲ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading