ಕವಲು ದಾರಿಯಲ್ಲಿ ಕುಟುಂಬ ವ್ಯವಸ್ಥೆ. ವಯಸ್ಸಾದ ಮೇಲೆ ಕಷ್ಟ ಕಷ್ಟ ಅನ್ನುವ ಜನರಿಗೆ ಸ್ವರ್ಣಲತಾ ಎ. ಎಲ್ ಅವರ ಎಲ್ಲರ ಮನದ ಮಾತನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಅಪ್ಪ ಅಮ್ಮಂದಿರನ್ನು ನೋಡಿಕೊಳ್ಳುವ ವಿಷಯದಲ್ಲಿ ಇಂದು ನಮ್ಮ ಸಂಸಾರಗಳು, ಮನಸ್ಸುಗಳು ಕವಲುದಾರಿಯಲ್ಲಿವೆ. ಈ ವಿಷಯದಲ್ಲಿ ಗಂಡ, ಹೆಂಡತಿಯ ಮಧ್ಯೆ, ಮಕ್ಕಳ ಮಧ್ಯೆ ಏಕಾಭಿಪ್ರಾಯವಿಲ್ಲ. ಕುಟುಂಬದ ಯಜಮಾನ ಮನೆಯವರನ್ನು ಒಲಿಸಲಾಗದೇ , ತನ್ನನ್ನು ಸಾಕಿ ಸಲುಹಿದ ತಂದೆ ತಾಯಿಗಳನ್ನು ವಯಸ್ಸಾದ ಕಾಲದಲ್ಲಿ ನೋಡಿಕೊಳ್ಳಲಾಗದೇ ಅಸಹಾಯಕನಾಗಿದ್ದಾನೆ. ಇದು ಉತ್ಪ್ರೇಕ್ಷೆಯ ಮಾತಲ್ಲ. ಹಳ್ಳಿ, ನಗರಗಳೆಂಬ ವ್ಯತ್ಯಾಸವಿಲ್ಲದೇ ಬಹುಪಾಲು ಮನೆಗಳ ಕಥೆ ಇದೇ ಆಗಿದೆ.
ಇದಕ್ಕೆ ಕಾರಣಗಳು ಹಲವಾರು. ತಂದೆ, ತಾಯಿಗಳಿಗೆ ವಯಸ್ಸಾಗುವ ವೇಳೆಗಾಗಲೇ ಮೊಮ್ಮಕ್ಕಳು ವಯಸ್ಸಿಗೆ ಬಂದಿರುತ್ತಾರೆ, ನಮ್ಮ ಭಾರತದಲ್ಲಿ ಗಂಡು ಮಕ್ಕಳೆಲ್ಲಾ ಸಾಮಾನ್ಯವಾಗಿ ಅಮ್ಮನ ಮಕ್ಕಳಲ್ಲವೆ, ಅಜ್ಜಿ ತಾತಂದಿರನ್ನು ಮನೆಯಲ್ಲಿಟ್ಟುಕೊಂಡರೆ ಅಮ್ಮನಿಗೆ ತೊಂದರೆಯಾಗಿ ಬಿಡುತ್ತದೆ ಎಂದು ಭಾವಿಸುವುದು. ಕೆಲವು ಸಲ ಈ ಹಿರಿಯರೂ ತಪ್ಪು ಮಾಡಿರುತ್ತಾರೆ, ಇಬ್ಬರು ಗಂಡುಮಕ್ಕಳಿದ್ದರೆ, ಅವರ ಮಧ್ಯೆ ಬೇಧ ಮಾಡುವುದು, ಮೊಮ್ಮಕ್ಕಳಿಗೆ ಸರಿಯಾಗಿ ಪ್ರೀತಿ ತೋರದಿರುವುದು ಇಂಥ ಸಣ್ಣ ಬುದ್ದಿಯನ್ನು ವಯಸ್ಸಿದ್ದಾಗ ತೋರಿಸಿರುತ್ತಾರೆ. ಆಸರೆ ಬೇಕೆಂದಾಗ ಈ ತಪ್ಪುಗಳೆಲ್ಲಾ ಲೆಕ್ಕಕ್ಕೆ ಬರುತ್ತವೆ.

ಮದುವೆಯಾದ ಹೊಸತರಲ್ಲಿ ಹೊಂದಾಣಿಕೆ ಆಗದಿದ್ದರೆ, ಮಕ್ಕಳಿಂದ ದೂರವಾಗಿ ಪರಸ್ಪರ ಪ್ರೀತಿ, ಗೌರವದಿಂದ ಬದುಕುವುದು ಒಳ್ಳೆಯದೆ. (ಇತ್ತೀಚೆಗೆ ಎಫ್ಬಿಯಲ್ಲಿ ಬಹುಪಾಲು ಮಹಿಳೆಯರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.) ಕೈಯಲ್ಲಿ ಆಗದಿದ್ದರೆ, ಅನುಕೂಲವಿದ್ದವರು ಕೆಲಸದವರನ್ನು ಇಟ್ಟುಕೊಂಡು ಜೀವನ ಮಾಡಬಹುದು .ಆದರೆ ಹಾಸಿಗೆ ಹಿಡಿದಾಗ ಏನು ಮಾಡಬೇಕು?? ಈ ಆಧುನಿಕ ಯುಗದಲ್ಲಿ ಇದೊಂದು ಭೂತಾಕಾರದ ಸಮಸ್ಯೆಯಾಗಿ ಎದ್ದು ನಿಂತಿದೆ.
ಅವಿಭಕ್ತ ಕುಟುಂಬದಿಂದ ನ್ಯೂಕ್ಲಿಯಾರ್ ಕುಟುಂಬ ವ್ಯವಸ್ಥೆಗೆ ಕುಟುಂಬಗಳು ಪರಿವರ್ತನೆಯಾದ ಮೇಲೆ ಈ ಸಮಸ್ಯೆ ಹೆಚ್ಚಾಗತೊಡಗಿದೆ.ಕೂಡು ಕುಟುಂಬಗಳಿದ್ದಾಗ ಹಿರಿಯರನ್ನು ನೋಡಿಕೊಳ್ಳುವುದು, ಮಕ್ಕಳನ್ನು ಸಾಕುವುದು, ಇಂಥವುಗಳೆಲ್ಲಾ ಯಾವತ್ತೂ ಸಮಸ್ಯೆಗಳಾಗಿರಲೇ ಇಲ್ಲ. ಆಧುನಿಕತೆ, ನಾಗರಿಕತೆಗಳು ಸೌಲಭ್ಯಗಳನ್ನು ಒದಗಿಸಿದಂತೆ, ಸಮಸ್ಯೆಗಳನ್ನೂ ಸೃಷ್ಠಿಸುತ್ತವೆ.
ಹಿರಿಯರನ್ನು ನೋಡಿಕೊಳ್ಳಲು ಬೇಕಾದಷ್ಟು ವೃದ್ದಾಶ್ರಮಗಳಿಗೆ, ಹಣಕಾಸಿನ ಸೌಲಭ್ಯಕ್ಕೆ ತಕ್ಕಂತೆ ಅವು ಆಸರೆಯನ್ನು ಒದಗಿಸುತ್ತವೆ. ಅವು ಆಸರೆಯನ್ನು ಕೊಡಬಲ್ಲವೆ ಹೊರತು ಪ್ರೀತಿಯನ್ನು ಕೊಡಲಾರವು. ಹಣವಿರುವವರು ಆಶ್ರಮಕ್ಕೆ ಹೋಗಿ ಸೇವೆ ಮಾಡಿಸಿಕೊಳ್ಳಬಹುದು, ಮಕ್ಕಳಿಗಾಗಿ ಎಲ್ಲವನ್ನು ಧಾರೆ ಎರೆದ ಪೆದ್ದ ತಂದೆ ತಾಯಿಗಳು ಎಲ್ಲಿಗೆ ಹೋಗಬೇಕು. ಅಂಥವರಿಗೆ ಅನಾಥಾಶ್ರಮವೇ ಗತಿ.ಇನ್ನಾದರೂ ಹಿರಿಯರು ತಾವು ಇರುವತನಕ ಬೇಕಾದ ಖರ್ಚಿಗಾಗಿ ಹಣವುಳಿಸಿಕೊಳ್ಳುವುದನ್ನು ಕಲಿಯಬೇಕಾಗಿದೆ.
ನಮ್ಮನ್ನು ಸಾಕಿ ಸಲಹುವಾಗ ಸಾಗರದಷ್ಟು ಪ್ರೀತಿ ,ಮಮತೆ ತೋರಿದ ಅಪ್ಪ ಅಮ್ಮನಿಗೆ ಒಂದು ಬೊಗಸೆಯನ್ನಷ್ಟಾದರೂ ಪ್ರೀತಿ ತೋರಲು ನಮ್ಮ ಕೈಯಲ್ಲಿ ಆಗುತ್ತಿಲ್ಲ. ಮನೆಯಲ್ಲಿ ಇಟ್ಟುಕೊಳ್ಳಲು ಅವಕಾಶ ಇರುವವರಾದರೂ, ಸಹಾಯಕ್ಕೆ caregiver ಗಳನ್ನು ಇಟ್ಟುಕೊಂಡು ಈ ಕೆಲಸ ಮಾಡಬಹುದಲ್ಲವೆ??
- ಸ್ವರ್ಣಲತಾ ಎ. ಎಲ್
