‘ಕರಾಳ ಗರ್ಭ’ ಲೇಖಕರ ಮಾತು

ಸಿ ಎಸ್ ನಾಗೇಶ ಕುಮಾರ್ ಅವರು ಕನ್ನಡ ಲೇಖಕನಾಗಿ ಅವರು ಬರೆದ ಮೊದಲ ಕಾದಂಬರಿ. ೨೦೧೫ರಲ್ಲಿ ಚೆನ್ನೈನಲ್ಲಿದ್ದಾಗ ನಾನೇಕೆ ಪತ್ತೇದಾರಿ ಕಾದಂಬರಿ ಬರೆಯಬಾರದು, ನೂರಾರು ಆ ವರ್ಗದ ಇಂಗ್ಲೀಷ್ ಮತ್ತು ಕನ್ನಡದ ಕಾದಂಬರಿಗಳನ್ನು ಓದಿದ್ದೇನಲ್ಲ ಎಂಬ ಯೋಚನೆ ಸುಳಿದಾಗ ‘ಕರಾಳ ಗರ್ಭ’ ಆರಂಭವಾಯಿತು ಎಂದು ಕಾದಂಬರಿಕಾರ ಸಿ ಎಸ್ ನಾಗೇಶ್ ಕುಮಾರ್ ಅವರು ಕೃತಿಯ ಕುರಿತು ತಮ್ಮ ಮನದಾಳದ ಮಾತು ಹೇಳಿಕೊಂಡಿದ್ದಾರೆ. 

ಪುಸ್ತಕ : ಕರಾಳ ಗರ್ಭ
ಲೇಖಕರು : ಸಿ ಎಸ್ ನಾಗೇಶ್ ಕುಮಾರ್
ಪ್ರಕಾರ : ಪತ್ತೇದಾರಿ ಕಾದಂಬರಿ
ಪ್ರಕಾಶನ : ತೇಜು ಪ್ರಕಾಶನ 

ಇದಕ್ಕೆ ಮುಂಚೆ ಬರಹದ ನನ್ನ ಅನುಭವ ಏನಂತೀರಾ?

ಇಂಗ್ಲೀಷಿನಲ್ಲಿ ಎರಡು ವರ್ಡ್ ಪ್ರೆಸ್ಸ್ ಬ್ಲಾಗ್ ಬರೆಯುತ್ತಿದ್ದೆ, ಅದೂ ಕನ್ನಡದಲ್ಲಲ್ಲ. ಅದುವರೆಗೆ ವಜ್ರಬೇಟೆ ಎಂಬ ಒಂದೇ ಒಂದು ಕನ್ನಡ ಪತ್ತೇದಾರಿ ಕಥೆ, ತುಷಾರದಲ್ಲಿ ಪ್ರಕಟವಾಗಿತ್ತು, ಅಷ್ಟೆ.. (ಬರಹ ತಂತ್ರಾಂಶದಲ್ಲಿ ಆಗ ತಾನೇ ಕನ್ನಡ ಟೈಪಿಸಲು ಕಲಿತಿದ್ದೆ!.) ಅದರ ನಂತರ ಒಂದು ಜನ್ಮರಹಸ್ಯದ ಕಥಾವಸ್ತುವನ್ನಿಟ್ಟುಕೊಂಡು ಬರೆದರೆ ಚೆನ್ನಾಗಿರುತ್ತದೆ, ನಮ್ಮ ಭಾರತದಲ್ಲಿ ಸದಾ ನಾಯಕ ನಾಯಕಿಯ ಜನ್ಮರಹಸ್ಯದ ಚಲನಚಿತ್ರಗಳು ಜನಪ್ರಿಯವಾಗಿ ಬಂದು ಹೋಗಿವೆ ಎಂದು ನೆನೆಸಿಕೊಂಡು ಬರೆಯಲು ನಿಶ್ಚಯಿಸಿದೆ. ಆದರೆ ಇದಕ್ಕೆ ತಕ್ಕ ಕಥಾವಸ್ತು ಎಲ್ಲಿ ಗೊತ್ತಿತ್ತು ನನಗೆ?

ಜೊತೆಗೆ ಕಾದಂಬರಿ ಬರೆಯುವುದು ಹೇಗೆ? ಅದಕ್ಕೆ ಬೇಕಾದ ಪೂರ್ವಸಿದ್ಧತೆ ಏನು? ಎಷ್ಟು ಧೀರ್ಘವಾಗಿ ಬರೆಯಬೇಕು ಇತ್ಯಾದಿ ಯಾವುದೇ ಮುಖ್ಯ ಮಾಹಿತಿಯೂ ನನಗಿರಲಿಲ್ಲ.
ಚೆನ್ನೈ ನಲ್ಲಿ ಸಿವಿಲ್ ಇಂಜಿನಿಯರಿಂಗ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ನನಗೆ ಅಲ್ಲಿ ಆಗ ಇತರ ಕನ್ನಡಿಗರ ಪರಿಚಯವೇ ಹೆಚ್ಚಾಗಿರಲಿಲ್ಲ, ಕರ್ನಾಟಕದ ಕನ್ನಡ ಲೇಖಕರು, ಓದುಗರನ್ನು ಬಿಡಿ!

ದಿನಾ ಸಂಜೆ ಮನೆಗೆ ಬಂದ ಮೇಲೆ ದಣಿದಿದ್ದರೂ ಖಾಲಿ ವರ್ಡ್ ಡಾಕ್ಯುಮೆಂಟ್ ಡೆಸ್ಕ್ ಟಾಪ್ ಪಿ.ಸಿ. ಪರದೆಯ ಮೇಲೆ ತೆರೆದು ನೋಡುತ್ತಾ ಕುಳಿತುಕೊಳ್ಳುವುದು. ಮೊದಲು ಪಾತ್ರಗಳ ಹೆಸರು ಸೃಷ್ಟಿಸೋಣ, ಹಾಗೆ ಎಲ್ಲರೂ ಮಾಡುತ್ತಾರೆಂದು ಕಾಣುತ್ತದೆ ಎಂದುಕೊಂಡು ಊಹಿಸಿಕೊಂಡು ಪಾತ್ರವರ್ಗ ಎಂದು ಬರೆದೆ. ಎರಡು ದಿನ ಅಷ್ಟೇ ನೋಡಿ ತೃಪ್ತನಾದೆ.
ಮೊದಲ ಸಲ ಪತ್ತೇದಾರ ಜೋಡಿ ವಿಜಯ್ ವಿಕ್ರಮ್ ಹುಟ್ಟಿದ್ದು ಹೇಗೆ?

ನಾನು ನನ್ನ ಮಕ್ಕಳಿಗೆ ಇಬ್ಬರು ಬಾಲ ಪತ್ತೇದಾರರಾದ ವಿಜಯ್ ಮತ್ತು ವಿಕ್ರಮ್ ಎಂದು ಹೆಸರಿನಲ್ಲಿ ಸುಳ್ಳು ಸುಳ್ಳೇ ಸ್ಮಗಲರ್, ಪತ್ತೇದಾರಿ ಕಥೆಗಳನ್ನು ಹುಟ್ಟಿಸಿಕೊಂಡು ಹೇಳಿ ದಿನಾಲೂ ರಾತ್ರಿ ಮಲಗಿಸುತ್ತಿದ್ದೆ. ಅವರಿಗೆ ದಿನಾಲೂ ಅದನ್ನು ಕೇಳುವ, ನನಗೆ ಹೇಳುವ ಹುಚ್ಚು. ಅಷ್ಟಕ್ಕೇ ನಾನು ಕಥೆ ಬರೆಯಬಲ್ಲೆ ಅನಿಸಿತೋ? ಅವನ್ನೇ ಯುವಕರನ್ನಾಗಿ ಮಾಡಿ ಅದೇ ಈ ಜೋಡಿ ಪತ್ತೇದಾರರ ಹೆಸರಿಟ್ಟೆ- ವಿಜಯ್ ದೇಶಪಾಂಡೆ ಮತ್ತು ವಿಕ್ರಮ್ ಕಾರಂತ್.

ಸರಿ, ಮುಂದೇನು?

ಒಬ್ಬ ದತ್ತು ಪುತ್ರಿಯಾಗಿ ಬೆಳೆದ ಸಿನೆಮಾ/ಕಿರುತೆರೆ ನಟಿಗೆ ತನ್ನ ಜನ್ಮ ರಹಸ್ಯವನ್ನು ತಿಳಿಯಲು ಇಷ್ಟ. ಪೋಲೀಸಿಗೆ ಹೇಳದೇ ಪಬ್ಲಿಸಿಟಿ ಇಲ್ಲದೆ ಪತ್ತೇದಾರರಿಗೆ ಆ ಕೆಲಸ ನೀಡುತ್ತಾಳೆ. ಆಕೆಯ ಹೆಸರು ಮೃದುಲಾ ಎಂದಿರಲಿ,. ಮೃದು ಸ್ವಭಾವದವಳು, ಹೀಗೆ ನನ್ನ ತಲೆ ಓಡಿತ್ತು. ಆಕೆಯನ್ನು ತಮಿಳ್ನಾಡು ಭಾಗದ ಕರಾವಳಿಯಲ್ಲಿ ಈ ದತ್ತು ಪೋಷಕರು ಪಡೆದಿದ್ದರಂತೆ… ನಾನು ಚೆನ್ನೈ ನಲ್ಲಿದ್ದೆನಲ್ಲ, ಅದಕ್ಕೇ ಹತ್ತಿರದ ಪಾಂಡಿಚೆರ್ರಿ ತರಹ ಒಂದು ಊರು ಮಾಂಡಿಚೆರಿ ಎಂದು ಹೆಸರಿಟ್ಟೆ.

(ನನ್ನ ಫೇವರಿಟ್ ನಟ ರಾಜೇಶ್ ಖನ್ನಾ ಹೀಗೆ ದತ್ತು ಪುತ್ರನಾಗಿ ದೂರದ ಸಂಬಂಧಿಕರ ಮನೆಯಲ್ಲಿ ಮುಂಬೈಯಲ್ಲಿ ಬೆಳೆದನಂತೆ ಎಂದು ಓದಿದ್ದೆ…) ಆಕೆ ಹೇಳಿದ ಹಳೆಯ ಮಾಸಲು ನೆನೆಪುಗಳನ್ನು ಹಿಡಿದು ಪತ್ತೇದಾರರು ತನಿಖೆ ಮಾಡಿ ಆಕೆಯ ಜನ್ಮ ಇತ್ತ ತಂದೆ ತಾಯಿ ಯಾರೆಂದು ತನಿಖೆ ಮಾಡಲು ಹೊರಡಬೇಕು. ಇದರಲ್ಲಿ ನನಗೆ ಇಬ್ಬರು ಪತ್ತೇದಾರರ ಪಾತ್ರ ಯಾಕೋ ಹೊಳೆಯಲಿಲ್ಲ, ಇಲ್ಲ ಎನಿಸಿತು. ವಿಕ್ರಮನನ್ನು ಗೋವಾಗೆ ಮೊದಲ ದೃಶ್ಯದಲ್ಲೇ ಕಳಿಸಿದೆ. ಬರೇ ವಿಜಯ್ ಮಾತ್ರ ಉಳಿದ.

ತನಿಖೆ ಮಾಡಲು ಹೋದ ಕಡೆ ಈ ಸಿಂಗಲ್ ನಾಯಕನಿಗೆ ಒಬ್ಬ ನಾಯಕಿ/ ಪ್ರಿಯತಮೆ ಸಿಗದಿದ್ದರೆ ಹೇಗೆ? ಸ್ವಲ್ಪ ವಿಶೇಷವಾಗಿರಲಿ ಎಂದು ಲೂಸಿ ಎಂಬ ಆಂಗ್ಲೋ ಇಂಡಿಯನ್ ಯುವತಿ ಜೊತೆಗೆ ಅವಳೂ ಚಾಣಾಕ್ಷ ಲಾಯರ್ ಆಗಿರಲಿ, ಅವಳಿಂದ ಇವನಿಗೆ ಸಹಾಯ ಸಿಕ್ಕು ನಂತರ ಪ್ರೇಮಾಂಕುರ ಆಗಲಿ ಎಂದು ಬಯಸಿದೆ. ಕಥೆ ಮಂದವಾಗಿ ಹೊಳೆಯುತ್ತಾ ಹೋಯಿತು, ಮೂರು ನಾಲ್ಕು ದಿನ ಚೆನ್ನಾಗಿ ವಸ್ತುವನ್ನು ಫಿಲ್ಟರ್ ಮಾಡಿದ ಮೇಲೆ ಮನದಲ್ಲಿ ಒಂದು ರಫ್ ಚಿತ್ರಣ ಸಿಕ್ಕಿತು. ಹಲವು ಸಲ ಒಂದು ಪುಟದಲ್ಲಿ ಅದರ ಕಥಾವಸ್ತು ಬುಲೆಟ್ ಪಾಯಿಂಟ್ಸ್ ತರಹ ಬರೆದೆ, ಅಳಿಸಿದೆ, ತಿದ್ದಿದೆ, ಮತ್ತೆ ಬರೆದೆ. ಆಸಕ್ತಿ ನನಗೇ ಹೆಚ್ಚುತ್ತಾ ಹೋಯಿತು, ತಲೆಯಲ್ಲಿ ಲೇಖಕನ ಎಂಜಿನ್ ಶುರುವಾಗಿದ್ದು ಹೀಗೆ! ಈ ಸ್ಥಿತಿ ಒಂದು ತರಹದ ಮೇಕ್ – ಆರ್ – ಬ್ರೇಕ್ ಪಾಯಿಂಟ್ ಎನ್ನುತ್ತಾರೆ. ಆಗ ನನಗೆ ಕಥೆ ಬರೆಯುವುದೆ ಬೇಡ ಸಾಕು ಎನಿಸಿ ಸುಸ್ತಾಗಿ ನಿಲ್ಲಿಸಲೂಬಹುದು, ಅಥವಾ ಶರವೇಗದಲ್ಲಿ ಕಥೆ ಬೆಳೆಯುತ್ತಲೂ ಹೋಗಬಹುದು. ಬರೆಯುತ್ತಾ ಹೋದಂತೆ ಕಥೆ ಕೆಲವರಿಗೆ ತಾನಾಗಿಯೇ ಸಿದ್ಧಿಸುತ್ತದೆ ಎಂದು ಒಬ್ಬ ಆಂಗ್ಲ ಲೇಖಕರ ಸಂದರ್ಶನ ಓದಿದ್ದೆ.

ಸರಿ ಮೊದಲ ಅಧ್ಯಾಯ ಹೇಗೆ ಬರೆಯುವುದು?

ಸ್ವಲ್ಪ ಲಘುವಾಗಿ, ಒಣಹಾಸ್ಯದಿಂದ ಜೇಮ್ಸ್ ಹ್ಯಾಡ್ಲಿ ಚೇಸ್ ತನ್ನ ಡಿಟೆಕ್ಟಿವ್ ಬಗ್ಗೆ ಬರೆಯುತ್ತಾನಲ್ಲ, ಹಾಗೆ ನಾನು ಪ್ರಯತ್ನಿಸೋಣ, ತೀರ ಗಂಭೀರವಾಗಿ ಮೊದಲಲ್ಲೇ ಬೇಡ. ಹಾಸ್ಯಮಯವಾಗಿ ಲಘುವಾಗಿದ್ದು ನಂತರ ಘಟನೆಗಳ ಮೂಲಕ ಸೀರಿಯಸ್ ಆಗಲಿ ಎಂದುಕೊಂಡೆ. ಆಫೀಸಿನಲ್ಲಿ ಅಂದು ಯಾವುದೇ ಕೆಲಸ ಮಾಡಲು ಆಸಕ್ತಿಯಿಲ್ಲದೇ ಸೋಮಾರಿಯಾಗಿ ಕುಳಿತಿದ್ದ ಪತ್ತೇದಾರ ವಿಜಯ್ ಗೆ ಫೋನ್ ಕರೆಯ ಮೂಲಕ ಒಬ್ಬಾಕೆಯ ಮೂಲಕ ಒಂದು ಆಫರ್ ಬರುತ್ತದೆ. ಆಕೆಯೇ ನಟಿ ಮೃದುಲಾ ಸೆಕ್ರೆಟರಿ.. ಸರಿ ಇಲ್ಲಿಂದ ನನಗೇ ಧೈರ್ಯ ಹುಟ್ಟಿತು.

ಇದರ ನಂತರ ನಾಲ್ಕು ಅಧ್ಯಾಯಗಳು ನನಗೇ ತಿಳಿಯದಂತೆ ಬರೆಸಿಕೊಂಡವು, ಅಪ್ರಯತ್ನವಾಗಿ! ಕಾದಂಬರಿಯನ್ನು ಎರಡು ಮೂರು ಸಲ ತಾರ್ಕಿಕ ತಪ್ಪುಗಳು, ದೋಷಗಳು- ಲೂಪ್ ಹೋಲ್ಸ್ ಅಂದರೆ Goofs / blunders ಗಾಗಿ ಚೆಕ್ ಮಾಡಿ ತಿದ್ದಿದೆ. ಎಲ್ಲವೂ ತರ್ಕಬದ್ಧವಾಗಿ ಒಂದಕ್ಕೊಂದು ಹೊಂದಾಣಿಕೆಯಾಗುವಂತೆ ಬರೆಯುತ್ತಿದ್ದ ಹಲವು ಇಂಗ್ಲೀಷ್ ಥ್ರಿಲ್ಲರ್ ಲೇಖಕರ ಸ್ಟೈಲ್ ನನಗೆ ನೆನಪಿಗೆ ಬಂದಿತು. ಅದನ್ನು ನನ್ನ ಕಥೆಯ ಪಾತ್ರ ಮತ್ತು ಘಟನೆಗಳಿಗೆ ಹೊಂದಿಸಿದೆ. ಕೊನೆಗೆ ಕ್ಲೈಮ್ಯಾಕ್ಸ್ ಏನೆಂದು ಮೊದಲನೇ ಸೀನಿನಲ್ಲೇ ನನಗೆ ಗೊತ್ತಿತ್ತು, ಅದನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಂಡು ಕೇಸು ಸಾಗುತ್ತಾ ಸಾಗುತ್ತಾ ಅಲ್ಲಿಗೆ ಬಂದು ನಿಲ್ಲಬೇಕು ಹಾಗೆ ಬ್ಯಾಕ್ ವರ್ಕ್ ಮಾಡಿ ಬರೆದೆ. ಪ್ರಸಿದ್ಧ ಲೇಖಕ ಶ್ರೀ ಟಿ ಕೆ ರಾಮರಾವ್ ಹೀಗೆ ಮಾಡುತ್ತಾರೆಂದು ಅವರ ಬಗ್ಗೆ ಓದಿದ್ದೆ.

ನಾಯಕ ನಾಯಕಿಯರ ಪ್ರೇಮ ಪ್ರಸಂಗಗಳನ್ನು ತುಂಬಾ ಗಂಭೀರವಾಗಿ ಲಘು ಹಾಸ್ಯ ಬೆರೆಸಿ ಬರೆದೆ, ಮಹಿಳೆಯರೂ ಓದಿದಾಗ ಮುಜುಗರವಾಗದಿರಲಿ ಎಂದು. ಕಾದಂಬರಿ ಬರೆದ ಮೇಲೆ ಹೆಸರಿಟ್ಟಿರಲಿಲ್ಲ. ಕಪ್ಪು ನದಿ, ಕರಾಳ ರಾತ್ರಿ – ಎಲ್ಲ ಆಗಲೇ ಜನಪ್ರಿಯವಾಗಿವೆ ಎಂದುಕೊಳ್ಳುತ್ತಿದ್ದಾಗ ಅಯಾಚಿತವಾಗಿ ಚೆನ್ನೈನ ವಿ.ವಿ.ಯ ಕನ್ನಡ ವಿಭಾಗದ ಮುಖ್ಯಸ್ಥೆ, ಪ್ರಕಾಂಡ ಕನ್ನಡ ಪಂಡಿತೆ Tmselvee Tmselvee ಡಾ. ತಮಿಳ್ಸೆಲ್ವಿ ಸಿಕ್ಕರು. ಅವರಿಗೆ ಧೈರ್ಯ ಮಾಡಿ ಓದಿ ಹೇಳಿ ಎಂದು ಕೊಟ್ಟೇಬಿಟ್ಟೆ.

ಒಂದು ವಾರ ಕೈ ಕೈ ಹೊಸೆಯುತ್ತಾ ಇದ್ದೆ. ‘ಏನನ್ನುತ್ತಾರೋ, ನಕ್ಕು ಥೂ, ಇದೇನು ಕಥೆನಾ’ ಎಂದುಬಿಟ್ಟರೆ? ಆಮೇಲೆ ಇನ್ನು ಬರೆಯೋದೇ ಬೇಡಪ್ಪ ಎಂದೆಲ್ಲ ಆತಂಕದಲ್ಲಿದ್ದೆ!
ಅವರೇ ಫೋನ್ ಮಾಡಿ, ‘ಏನಪ್ಪ, ಇಷ್ಟು ಚೆನ್ನಾಗಿ ಕಥೆ ಬರೆದಿದ್ದೀರಾ! ಪ್ರೊಫೆಶನಲ್ ಟಚ್ ತರಹ ಇದೆ, ಅಭಿನಂದನೆ , ನಾಗೇಶ್’ ಎಂದರು. ಅವರೇ ಮುಂದೆ ಮಾತಾಡುತ್ತಾ, ಇದಕ್ಕೆ ಕರಾಳ ಗರ್ಭ ಎಂದು ಹೆಸರಿಡಿ ಎಂದರು! ಯೆಸ್, ಅದುವೆ ಸರಿಯಾದ ಶೀರ್ಷಿಕೆ, ಎಷ್ಟು ಸೂಕ್ತವಾಗಿದೆ ಅವರು ಹೇಳಿದ್ದು ಎನಿಸಿತು.

ಆಮೇಲೆಯೆ ನಾನು ನಮ್ಮ ಅಮ್ಮ ಮತ್ತು ಪತ್ನಿಗೆ ಓದಲು ಪ್ರಿಂಟ್ ಔಟ್ ಕೊಟ್ಟಿದ್ದು, ಅವರೂ ಸಕಾರಾತ್ಮಕವಾಗಿ ಚೆನ್ನಾಗಿದೆ ಎಂದರು. ಉತ್ಥಾನ ಪತ್ರಿಕೆಯ ಆಗಿನ ಸಂಪಾದಕರಾಗಿದ್ದ (ದಿವಂಗತ) ಕಾಕುಂಜೆ ಕೇಶವ ಭಟ್ ಅವರನ್ನು ತಂಪು ಹೊತ್ತಿನಲ್ಲಿ ನೆನೆಸಿಕೊಳ್ಳಬೇಕು, ಬೆಂಗಳೂರಿಗೆ ಬಂದಾಗ ಒಮ್ಮೆ ಭೇಟಿ ಮಾಡಿ ಅವರ ಜೊತೆ ಮಾತಾಡಿದಾಗ ಸಂಕೋಚದಿಂದಲೇ ಇದರ ಬಗ್ಗೆ ಹೇಳಿದೆ. ಅವರು ‘ಪತ್ತೇದಾರಿ ಪ್ರಕಟಿಸಿ ಬಹಳ ವರ್ಷ ಆಯಿತು, ಓದಿ ಚೆನ್ನಾಗಿದ್ದರೆ ಮಾಸಿಕದಲ್ಲಿ ಧಾರವಾಹಿಯಾಗಿ ಹಾಕ್ತೀನಿ, ಕೊಡಿ’ ಎಂದರು.
ಅವರು ಅದೃಷ್ಟವಶಾತ್ ಓದಿ ಇಷ್ಟಪಟ್ಟರು, ಪ್ರಕಟಿಸಲು ಆರಂಭಿಸಿದರು, ಎಲ್ಲರಿಗಿಂತ ಮೊದಲು ಬರೆದ ನಾನೇ ಸಂಚಿಕೆ ಚಂದಾದಲ್ಲಿ ಅಂಚೆ ಮೂಲಕ ಚೆನ್ನೈ ಮನೆಗೆ ಬಂದ ತಕ್ಷಣ ಓದಿ ಖುಶಿ ಪಡುತ್ತಿದ್ದೆ!

ವಿಶೇಷವೆಂದರೆ ಧಾರಾವಾಹಿಯಾಗಿ ಅದನ್ನು ಒಂದು ಸಂಚಿಕೆಯಲ್ಲಿ ನಿಲ್ಲಿಸುವುದು, ಮುಂದೆ ಆರಂಭಿಸುವ ವಿಭಜನೆಯನ್ನೂ ಓದಿ ಅವರೇ ಮಾಡಿಬಿಟ್ಟಿದ್ದರು. (ಆಮೇಲಾಮೇಲೆ ನಾನು ಅದನ್ನು ಕಲಿತೆ). ತಮಿಳ್ನಾಡಿನ ರಾಜಧಾನಿಯಲ್ಲಿದ್ದ ಚಿಕ್ಕ,ಯಾರೂ ಹೆಸರೇ ಕೇಳಿರದ ಒಬ್ಬ ಪತ್ತೇದಾರಿ ಕನ್ನಡ ಲೇಖಕ ನಾಗೇಶ್ ಕುಮಾರ್ ಸಿ.ಎಸ್ ಎಂಬವನ ಉದಯವಾಗಿದ್ದು ಹೀಗೆ!

ಮುಂದೆ ಹೀಗೆಯೇ- ನನ್ನ ಮಿಕ್ಕ ಕಾದಂಬರಿಗಳು ರೂಪುಗೊಂಡ ಕಥೆ, ಪ್ರಕಟವಾದ ಸಂಧರ್ಭಗಳ ಬಗ್ಗೆ ಬರೆಯುತ್ತಾ ಹೋಗುತ್ತೇನೆ. ಖಂಡಿತಾ ಮರೆಯದೇ ಓದುವಿರಿ ತಾನೆ, ನನ್ನ ಸಹೃದಯ ಮಿತ್ರರೆ?


  • ಸಿ ಎಸ್ ನಾಗೇಶ ಕುಮಾರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading