ಅಪ್ಪ ಅಮ್ಮನ ಎದುರು ಅಂದು ಕಿಚ್ಚನ ಮಗಳು ಸಾನ್ವಿ ಒಂದು ರೀತಿಯಲ್ಲಿ ವೃತ್ತಿಪರ ಗಾಯಕಿಯಂತೆ ಚೆನ್ನಾಗಿಯೇ ಹಾಡಿದಳು ಎನ್ನುವುದು ಅಲ್ಲಿ ಲೆಕ್ಕಕ್ಕೇ ಬರಲಿಲ್ಲ. ಆದರೆ ಆಕೆಯ ಮಾತುಗಳೆಲ್ಲವನ್ನೂ ನೋಡಿದಾಗ ಕೇಳಿದಾಗ,ಕಂಗ್ಲೀಷ್ ಕನ್ನಡವನ್ನೂ ಸಹಾ ಮಾತನಾಡದಿರುವುದು ಬಹುತೇಕ ವೀಕ್ಷಕರ ಹಾಗೂ ಟ್ರೋಲಿಗರ ಆಕ್ರೋಶದ ಬೆಂಕಿಗೆ ಪೆಟ್ರೋಲ್ ಸುರಿದಂತಾಗಿದೆ. – ಹಿರಿಯೂರು ಪ್ರಕಾಶ್, ತಪ್ಪದೆ ಮುಂದೆ ಓದಿ…
ಜ಼ೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಮೊನ್ನೆ, ನಟ ಕಿಚ್ಚ ಸುದೀಪ್ ರ ಮಗಳು ಸಾನ್ವಿ ಹಾಡಿದ ಹಾಡಿಗಿಂತ ಆ ಹುಡುಗಿಯಾಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ. ಅಂಥಾದ್ದೇನು ಮಾತನಾಡಿದಳು ಆ ಹುಡುಗಿ ಎಂದರೆ , ಅವರು ಏನು ಮಾತನಾಡಿದರು ಎನ್ನುವುದಕ್ಕಿಂತ ಮಾತನಾಡಿದ್ದೆಲ್ಲವೂ ಬರೀ ಇಂಗ್ಲಿಷ್ ನಲ್ಲೇ ಹೊರತು ಹುಡುಕಿದರೂ ಕನ್ನಡತಿ ಎಂಬ ಕಾರಣಕ್ಕಾದರೂ ಒಂದೂ ಕನ್ನಡ ಪದ ಸಿಗದಿರುವುದು ನೆಟ್ಟಿಗರ ಕೆಟ್ಟ ಕೋಪಕ್ಕೆ ಕಾರಣವಾಗಿದೆ. ಒಬ್ಬ ಕನ್ನಡದ ಹೀರೋ ಮಗಳಾಗಿ ಆಕೆಗೆ ಕನ್ನಡ ಬರೋಲ್ಲವೇ ಎಂಬ ಅಸಹನೆ ವೈರಲ್ ಆಗುತ್ತಿವೆ. ಕೆಲವೊಮ್ಮೆ ಹಾಗೇನೇ ! ಮೂಲ ಬಿಟ್ಟು ಬೇರೆ ಏನೆಲ್ಲಾ ಟ್ರೋಲ್ ಆಗಿಬಿಡುತ್ತೆ.
ಅಪ್ಪ ಅಮ್ಮನ ಎದುರು ಅಂದು ಕಿಚ್ಚನ ಮಗಳು ಸಾನ್ವಿ ಒಂದು ರೀತಿಯಲ್ಲಿ ವೃತ್ತಿಪರ ಗಾಯಕಿಯಂತೆ ಚೆನ್ನಾಗಿಯೇ ಹಾಡಿದಳು ಎನ್ನುವುದು ಅಲ್ಲಿ ಲೆಕ್ಕಕ್ಕೇ ಬರಲಿಲ್ಲ. ಆದರೆ ಆಕೆಯ ಮಾತುಗಳೆಲ್ಲವನ್ನೂ ನೋಡಿದಾಗ ಕೇಳಿದಾಗ, ಸಾನ್ವಿ ಕರ್ನಾಟಕದ ನೆಲದಲ್ಲಿ ಹುಟ್ಟಿ ಅದೂ ಕನ್ನಡದ ಒಬ್ಬ ಜನಪ್ರಿಯ “ನಾಯಕ” ನ ಮಗಳಾಗಿ, ಧಾರವಾಡದ ಅಚ್ಚ ಕನ್ನಡ ಬೇಡ, ಕೊನೇಪಕ್ಷ ಬೆಂಗಳೂರಿನ. ಕಂಗ್ಲೀಷ್ ಕನ್ನಡವನ್ನೂ ಸಹಾ ಮಾತನಾಡದಿರುವುದು ಬಹುತೇಕ ವೀಕ್ಷಕರ ಹಾಗೂ ಟ್ರೋಲಿಗರ ಆಕ್ರೋಶದ ಬೆಂಕಿಗೆ ಪೆಟ್ರೋಲ್ ಸುರಿದಂತಾಗಿದೆ.
ಸಹಜವಾಗಿ ಕಿಚ್ಚನನ್ನು ಕಂಡರೆ ಆಗದಿರುವವರು ಇದನ್ನೇ ಅಸ್ತ್ರವಾಗಿಸಿಕೊಂಡು ” ಎಲ್ಲರಿಗೂ ಬಿಗ್ ಬಾಸ್ ಥರಾ ಬುದ್ದಿ ಹೇಳುವ ಕಿಚ್ಚ , ತನ್ನ ಮಗಳಿಗೇ ನೆಟ್ಟಗೇ ಕನ್ನಡ ಕಲಿಸಿಲ್ಲ ” ಎಂದೆಲ್ಲಾ ಕಾಲೆಳೆದರೆ, ಕಿಚ್ಚನ ಅಭಿಮಾನಿಗಳು ” ಭಾಷೆಗಿಂತ ಕಲೆ ಮುಖ್ಯ, ಅಲ್ಲಿದ್ದದ್ದು ಅಪ್ಪ ಮಗಳ ಭಾವನಾತ್ಮಕ ಕ್ಷಣಗಳೇ ಹೊರತು ಭಾಷೆಯಲ್ಲ, ಅವಳಿನ್ನೂ ಚಿಕ್ಕವಳು…ಅಪ್ಪನಾದ ಸುದೀಪಣ್ಣನಿಗೆ ಮಗಳ ಹಾಡಿನ ಬಗ್ಗೆ ಇದ್ದ ಹೆಮ್ಮೆಯನ್ನು ಅಲ್ಲಿ ಗುರುತಿಸಬೇಕೇ ಹೊರತು ಎಲ್ಲದರಲ್ಲೂ ಕಡ್ಡಿ ಆಡಿಸಬಾರದು”..ಹಾಗೇ ಹೀಗೇ ಎಂದು ತಮ್ಮ ಅಭಿಮಾನದ ಅಭಿನಯ ಚಕ್ರವರ್ತಿಯನ್ನು ಬೆಂಬಲಿಸಿ ಮಾತನಾಡುತ್ತಿದ್ದಾರೆ. ಎರಡೂ ಕಡೆಯ ವಾದ ಅವರವರ ದೃಷ್ಟಿಯಿಂದ ಸರೀನೇ !

ಈ ಬಗ್ಗೆ ನಮ್ದೂ ಒಂದು ಇರಲಿ….
ನಿಜಕ್ಕೂ ಸುದೀಪ್ ರ ಮಗಳು ಅಂದು ಸರಿಗಮಪ ಷೋನಲ್ಲಿ ಸೊಗಸಾಗಿಯೇ ಹಾಡಿದ್ದಳು. ಯಾವುದೇ ತಂದೆತಾಯಿಗಳಿಗೆ ತಮ್ಮ ಮಗಳ ಪ್ರತಿಭೆ, ಸಾಧನೆ , ಕಾರ್ಯಕ್ರಮದಲ್ಲಿ ನಿರ್ವಹಣೆ ಇವುಗಳನ್ನು ನೋಡಿ ಖುಷಿ ಪಡುವುದಿದೆಯಲ್ಲಾ ಅದು ಅತ್ಯಂತ ಭಾವುಕ ಕ್ಷಣ. ಬಹುಶಃ ಸುದೀಪ ಮತ್ತು ಪ್ರಿಯಾ ದಂಪತಿಗಳು ಮಗಳ ಹೆಮ್ಮೆಯ ಕ್ಷಣಗಳಲ್ಲಿ ಕಳೆದುಹೋಗಿದ್ದರೇ ಹೊರತು, ಮಗಳು ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದಾರೆಂಬ ಬಗ್ಗೆ ಹೆಚ್ಚು ಗಮನ ಹರಿಸಲು ಹೋಗಿಲ್ಲ. ಬಹುಶಃ ಅಲ್ಲೇ ಎಡವಟ್ಟಾಗಿದ್ದು.! ಮಗಳು ಹಾಡುವಾಗ ಕಣ್ಣಲ್ಲೇ ಪ್ರೋತ್ಸಾಹಿಸುತ್ತಿದ್ದ ಕಿಚ್ಚ ಆಕೆ ಮಾತನಾಡುವಾಗ ಭಾಷೆಯ ಬಗ್ಗೆ ಸ್ವಲ್ಪ ಎಚ್ಚರವಹಿಸಬೇಕಿತ್ತು ಅನಿಸುತ್ತದೆ.
ಸಾನ್ವಿ ಕೂಡಾ ಇತರೆ ಎಲ್ಲಾ ಕನ್ನಡ ಸೆಲೆಬ್ರಿಟಿ ಮಕ್ಕಳಂತೆಯೇ ಪಟಪಟನೇ ಇಂಗ್ಲೀಷ್ ನಲ್ಲೇ ಮಾತನಾಡಿದಳೇ ಹೊರತು ಇದು ಜ಼ೀ” ಕನ್ನಡ” ಸರಿಗಮಪ ಕಾರ್ಯಕ್ರಮ, ತಾನು ಹಾಡುತ್ತಿರುವುದು ಕನ್ನಡ ಹಾಡು, ತನ್ನ ಅಪ್ಪ ಕನ್ನಡದವನು, ಕನ್ನಡದ ಹೀರೋ, ತನ್ನನ್ನು ಹೆಚ್ಚು ವೀಕ್ಷಿಸುತ್ತಿರುವುದು , ತನ್ನ ಹಾಡು, ಮಾತು ತಲುಪುತ್ತಿರುವುದು ಕರ್ನಾಟಕದ ಮನೆ ಮನಗಳನ್ನು, ಸೋಷಿಯಲ್ ಮೀಡಿಯಾಗಳ ಟ್ರೋಲ್ ಗಳು ತಮ್ಮ ಮೇಲೆ ಕಣ್ಗಾವಲಿವೆ….. ಹೀಗಾಗಿ ತಾನು ಕನ್ನಡದಲ್ಲಿ ಮಾತನಾಡಬೇಕೆಂಬ ಕನಿಷ್ಠ ಅರಿವಿಲ್ಲದೇ ಹೋಗಿದ್ದಳು. ಅದು ಸಹಜವೇ. ಮಕ್ಕಳಿಗೆ ಈ ಬಗ್ಗೆ ತಿಳಿವಳಿಕೆ ಕಡಿಮೆ. ಹೀಗಾಗಿಯೇ ಇಲ್ಲಿ ಬಿಗ್ ಬಾಸ್ ಕಿಚ್ಚ ಎಚ್ಚೆತ್ತು ಕೊಳ್ಳಬೇಕಿತ್ತು.
ಕೆಲ ವರ್ಷಗಳ ಹಿಂದೆ ಇದೇ ಕಿಚ್ಚ ಸುದೀಪ್ ಕರ್ನಾಟಕದ ಕೆಲವು ಸರ್ಕಾರಿ ಕನ್ನಡ ಶಾಲೆಗಳನ್ನು ದತ್ತು ತೆಗೆದುಕೊಂಡಾಗ ಅವರ ಕನ್ನಡ ಸೇವೆಯನ್ನು, ಸಿನಿಮಾಗಳಲ್ಲಿ ಕನ್ನಡದ ಬಗೆಗೆ ಉದ್ದುದ್ದ ಡೈಲಾಗ್ ಹೊಡೆದಾಗ ಅವರ ಕನ್ನಡಾಭಿಮಾನವನ್ನು , ಅನ್ಯ ರಾಜ್ಯಗಳ ಕಾರ್ಯಕ್ರಮಗಳಲ್ಲಿ ಸುದೀಪ್ ಕನ್ನಡದಲ್ಲಿ ಮಾತನಾಡಿದಾಗ ಅವರ ಕನ್ನಡ ಪ್ರೀತಿಯನ್ನು ಮುಕ್ತವಾಗಿ ಮೆಚ್ಚಿಕೊಳ್ಳುತ್ತೇವೆ. ನೆಚ್ಚಿಕೊಳ್ಳುತ್ತೇವೆ ಅಭಿಮಾನಿಸುತ್ತೇವೆ. ಅಭಿಮಾನಿಗಳಂತೂ ಕಿಚ್ಚನ ಕನ್ನಡ ಪ್ರೇಮಕ್ಕೆ ಪೂರ್ತಿ ಫ಼ಿದಾ ಆಗಿಬಿಡುತ್ತಾರೆ. ಆದರೆ ಇಷ್ಟೆಲ್ಲಾ ಕನ್ನಡದ ಪ್ರೀತಿಯನ್ನು ತೋರುವ ಸುದೀಪ್ ಗೆ ಲಕ್ಷಾಂತರ ಜನ ವೀಕ್ಷಿಸುವ ಒಂದು ಜನಪ್ರಿಯ ಷೋ ನ ವೇದಿಕೆಯಲ್ಲಿ ತಮ್ಮ ಮಗಳಿಗೆ ಸ್ವಚ್ಛ ಕನ್ನಡದಲ್ಲಿ ಅಲ್ಲದಿದ್ದರೂ ಕೊಂಚ ಕನ್ನಡದಲ್ಲಾದರೂ ಮಾತನಾಡಬೇಕೆಂಬ ಬಗ್ಗೆ ಮಾತ್ರ ಜಾಗ್ರತೆ ವಹಿಸದೇ ಇರುವುದು ಸಿನಿಮಾ ನಟರ ರೀಲ್ ಮತ್ತು ರಿಯಲ್ ವ್ಯಕ್ತಿತ್ವಕ್ಕೂ ಇರುವ ವ್ಯತ್ಯಾಸವನ್ನು ಪದೇ ಪದೇ ಗುರುತು ಮಾಡುತ್ತಲೇ ಬಂದಿದೆ.
ಅಲ್ಲಿಗೆ ತನ್ನ ಮನೆಯಲ್ಲೇ ಕನ್ನಡದ ವಾತಾವರಣ ನಿರ್ಮಾಣ ಮಾಡದವರು ಕನ್ನಡಕ್ಕಾಗಿ ಪ್ರಾಮಾಣಿಕವಾಗಿ ಇನ್ನೇನು ಮಾಡಲು ಆದೀತು ಎಂಬ ಬಹುಜನರ ಭಾವನೆ ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ.
ಸಾಮಾನ್ಯವಾಗಿ ಕನ್ನಡ ನಾಡಿನ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾನಟರು, ಕ್ರೀಡಾ ತಾರೆಗಳು ಹಾಗೂ ಒಟ್ಟಾರೆ ಸೆಲೆಬ್ರಿಟಿಗಳು ತಾವೆಷ್ಟೇ ಕನ್ನಡ ಕನ್ನಡ ಎಂದು ಜನಪ್ರಿಯತೆ ಗಿಟ್ಟಿಸಿಕೊಂಡರೂ ಅವರೆಲ್ಲಾ ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಕಳಿಸುವುದು ಆಂಗ್ಲಭಾಷೆಯ ಕ್ವಾನ್ವೆಂಟುಗಳಿಗೆ, ಬೆಳೆಸುವುದು ಇಂಗ್ಲೀಷ್ ನ ವಾತಾವರಣದಲ್ಲೇ ! ಯಾವೊಬ್ಬ ಸೆಲೆಬ್ರಿಟಿಯ ಮಕ್ಕಳನ್ನಾಗಲೀ ಅಪ್ಪಟ ಕನ್ನಡದ ವಾತಾವರಣದಲ್ಲಿ ಅಥವಾ ಸಿಂಪಲ್ ಜೀವನಶೈಲಿಯಲ್ಲಿ ನೋಡಿದ್ದೇ ಕಡಿಮೆ.
ಸೆಲೆಬ್ರಿಟಿಗಳ ಮಾತೇಕೇ…ಇಂದು ಸಾಮಾನ್ಯ ವರ್ಗದ ಜನ ಕೂಡಾ ತಮ್ಮ ಮಕ್ಕಳು ಆಂಗ್ಲ ಶಾಲೆಯಲ್ಲೇ ಕಲಿಯಬೇಕೆಂದು ಬಯಸುವುದಲ್ಲದೇ ತಮ್ಮ ಪುಟಾಣಿ ಮಕ್ಕಳು, ಇಂಗ್ಲಿಷ್ ನಲ್ಲಿ ಮಾತನಾಡಿದರೇ ಅದನ್ನು ಹೆಮ್ಮೆಯಿಂದ ಸಂಭ್ರಮಿಸುವ ಅಪ್ಪ ಅಮ್ಮಂದಿರೇ ಹೆಚ್ಚು. ಇನ್ನು ನಾವು ಮಧ್ಯಮ ವರ್ಗದವರನ್ನಂತೂ ಕೇಳೋದೇ ಬೇಡ. ಬೇರೆಯವರನ್ನು ಕನ್ನಡದ ವಿಚಾರದಲ್ಲಿ ಟೀಕಿಸುವ ನಾವೇ ನಮ್ಮ ಮನೆಯ ಮಕ್ಕಳಿಗೆ ಎಷ್ಟರಮಟ್ಟಿಗೆ ಕನಾಡಾಭಿಮಾನವನ್ನು ತುಂಬಿದ್ದೇವೆ ಎಂದು ನಮ್ಮ ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಂಡರೆ ಸಾಕು , ಇಂತಹ ಟ್ರೋಲ್ ಗಳು ನಮ್ಮನ್ನೇ ಅಟ್ಟಾಡಿಸಿಕೊಂಡು ಬರುತ್ತವೆ.!
ಕನ್ನಡದ ವಿಷಯ ಅಂತ ಬಂದಾಗ ಕನ್ನಡ ಮಾತ್ರವೇ ಮುಖ್ಯವಾಗುತ್ತದೆಯೇ ಹೊರತು ಯಾವನೇ ಜನಪ್ರಿಯ ಸಿನಿಮಾ ನಾಯಕ, ದೊಡ್ಡ ಸಾಹಿತಿ, ಪ್ತಭಾವೀ ರಾಜಕಾರಣಿ ಹಾಗೂ ಇತರೆ ಸೆಲೆಬ್ರಿಟಿಗಳ ವೈಯಕ್ತಿಕ ಸ್ಟೇಟಸ್ ಅಲ್ಲ. ಯಾಕೆಂದರೆ ಇವರರಿಗೆಲ್ಲಾ ಒಂದು ಸ್ಟೇಟಸ್ ಅಂತ ಸಿಕ್ಕಿರೋದು ಕನ್ನಡದಿಂದಲೇ ಹೊರತು ಇವರಿಂದ ಕನ್ನಡ ಬೆಳೆದಿಲ್ಲ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
ಒಟ್ಟಾರೆಯಾಗಿ ಇಂದಿನ ಸಾಮಾಜಿಕ ಜಾಲತಾಣಗಳ ದಿನಗಳಲ್ಲಿ ಜನ ಎಲ್ಲವನ್ನೂ ಅತ್ಯಂತ ಸೂಕ್ಷ್ಮ ವಾಗಿ ಜಾಗರೂಕರಾಗಿ ಗಮನಿಸುತ್ತಾರೆಂಬುದಕ್ಕೆ ಸುದೀಪ್ ರ ಮಗಳು ಇಂಗ್ಲಿಷ್ ನಲ್ಲೇ ಮಾತನಾಡಿ ಟ್ರೋಲ್ ಆದ ಈ ಸಣ್ಣ ಘಟನೆಯೂ ಸಾಕ್ಷಿ.
ಈ ಅಂಶ ವಿಶೇಷವಾಗಿ ಸೆಲೆಬ್ರಿಟಿ ಹ್ಯಾಂಗೋವರ್ ನಲ್ಲಿರುವ ಎಲ್ಲರಿಗೂ ಗೊತ್ತಿದ್ದರೆ ಒಳ್ಳೆಯದು.

* ಮರೆಯುವ ಮುನ್ನ *
ಪಕ್ಕದ ಕೇರಳ , ತಮಿಳುನಾಡು, ತೆಲಂಗಾಣ, ಆಂಧ್ರಗಳಲ್ಲಿ ವ್ಯಕ್ತಿಯೊಬ್ಬ ಎಂತಹ ದೊಡ್ಡ ಹುದ್ದೆಯಲ್ಲೇ ಇದ್ದರೂ, ಎಂತಹ ಜನಪ್ರಿಯ ಸೆಲೆಬ್ರಿಟಿಗಳೇ ಆದರೂ ಯಾವ ಕಾರಣಕ್ಕೂ ಅವರ ಮನೆಯ ಮಕ್ಕಳನ್ನು ತಮ್ಮ ಮಾತೃಭಾಷೆಯ ವಾತಾವರಣದಿಂದ ದೂರ ಇಡೋಲ್ಲ. ಏಕೆಂದರೆ ಆ ನೆಲದವರರು ತಮ್ಮ ಮಾತೃಭಾಷೆಯನ್ನು ಹೆತ್ತ ತಾಯಿಯಂತೆಯೇ ಪ್ರೀತಿಸುತ್ತಾರೆ.
ನಮ್ಮ ಕನ್ನಡಿಗರೇನು ಕಡಿಮೆಯೇ..? ಅವರೂ ಅಷ್ಟೇ ! ಅನ್ಯಭಾಷಿಕರ ಮಾತೃಭಾಷೆಯನ್ನು ಅವರಿಗಿಂತಲೂ ಹೆಚ್ಚು ಪ್ರೀತಿಸುತ್ತಾರೆ, ಇಷ್ಟಪಡುತ್ತಾರೆ.!
ಲಾಸ್ಟ್ ಪಂಚ್
ಒಂದು ವೇಳೆ ಸುದೀಪ್ ಮಗಳು ಸಾನ್ವಿ ತನ್ನ ಮನೆ ಸೇರಿದಂತೆ ಬೇರೆ ಎಲ್ಲಾ ಕಡೆಯಲ್ಲೂ ಆತ್ಮಪೂರ್ವಕವಾಗಿ ಇಂಗ್ಲಿಷ್ ನಲ್ಲೇ ಉಸಿರಾಡಿ, ಅಂದು ವೇದಿಕೆಯಲ್ಲಿ ಮಾತ್ರ ಅಚ್ಚ ಕನ್ನಡವನ್ನು ಉರು ಹೊಡೆದು ಕೃತಕವಾಗಿ ಡೈಲಾಗ್ ಹೊಡೆದಿದ್ದಲ್ಲಿ ನಮ್ಮ ಜನ ಅವರ ಕನ್ನಡ ಪ್ರೇಮವನ್ನು ಸಿಕ್ಕಾಪಟ್ಟೆ ಹೊಗಳಿ , ಫ಼ಿದಾ ಆಗಿ ವೈರಲ್ ಮಾಡುತ್ತಿದ್ದರಲ್ಲವೇ..? .
ಎಷ್ಟೇ ಆಗಲೀ, ಎಲ್ಲಾ ಕ್ಷೇತ್ರದಲ್ಲಿ ನಾವು ಗುಂಡಿಗೆ ಬೀಳುವುದು ಫ಼ೇಕು ಗಳಿಗೇ ಅಲ್ಲವೇ..?
ಪ್ರೀತಿಯಿಂದ….
- ಹಿರಿಯೂರು ಪ್ರಕಾಶ್
