‘ಇನ್ನೊಂದು ಸಂಪುಟ’ ಕೃತಿ ಪರಿಚಯ

ಶಾಂತಾದೇವಿ ಕಣವಿ ಅವರ ೧೯೫೮ ರಿಂದ ೧೯೯೭ ರವರೆಗೆ ಅವರು ಬರೆದ ಏಳು ಕಥಾ ಸಂಕಲನಗಳ ಬಹುಪಾಲು ‘ಇನ್ನೊಂದು ಸಂಪುಟ’ ಕಥಾಸಂಗ್ರಹವಿಲ್ಲಿದೆ. ಸಣ್ಣಕಥೆಗಳನ್ನೇ ತಮ್ಮ ಅಭಿವ್ಯಕ್ತಿಯ ಮುಖ್ಯ ಸಾಧನವನ್ನಾಗಿ ಆಯ್ದುಕೊಂಡ ಅವರು ಒಟ್ಟೂ ೧೧೦ ಸಣ್ಣ ಕಥೆಗಳನ್ನು ಬರೆದಿದ್ದಾರೆ. ಅದರಲ್ಲಿನ ೩೯ ಆಯ್ದ ಕಥೆಗಳ ಸಂಗ್ರಹವಿದು. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ….

ಕೃತಿ ಹೆಸರು: ಇನ್ನೊಂದು ಸಂಪುಟ.
ಲೇಖಕರು: ಶಾಂತಾದೇವಿ ಕಣವಿ.
ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೦೫.
ಪುಟ:೩೨೪.
ಬೆಲೆ: ರೂ. ೨೦೦.

ಹಿರಿಯ ಲೇಖಕಿ ಶಾಂತಾದೇವಿ ಕಣವಿಯವರ ಸಣ್ಣ ಕಥೆಗಳ ಸಂಕಲನವಿದು. ಮಹಿಳಾ ಬರಹಗಾರ್ತಿಯರ ಸಂಖ್ಯೆ ವಿರಳವಾಗಿದ್ದ ಅಂದಿನ ಕಾಲದಲ್ಲಿಯೇ ಶಾಂತಾದೇವಿಯವರು ಸಣ್ಣ ಕಥೆಗಳನ್ನು ಬರೆದವರು.

೧೯೫೮ ರಿಂದ ೧೯೯೭ ರವರೆಗೆ ಅವರು ಬರೆದ ಏಳು ಕಥಾ ಸಂಕಲನಗಳ ಬಹುಪಾಲು ಈ ಕಥಾಸಂಗ್ರಹವಿಲ್ಲಿದೆ. ಸಣ್ಣಕಥೆಗಳನ್ನೇ ತಮ್ಮ ಅಭಿವ್ಯಕ್ತಿಯ ಮುಖ್ಯ ಸಾಧನವನ್ನಾಗಿ ಆಯ್ದುಕೊಂಡ ಅವರು ಒಟ್ಟೂ ೧೧೦ ಸಣ್ಣ ಕಥೆಗಳನ್ನು ಬರೆದಿದ್ದಾರೆ. ಅದರಲ್ಲಿನ ೩೯ ಆಯ್ದ ಕಥೆಗಳ ಸಂಗ್ರಹವಿದು.

‘ಸ್ವರೂಪ ದರ್ಶನ’ ಎನ್ನುವ ಕಥೆಯ ನಾಯಕ ಚಂದ್ರಕಾಂತ ರೂಪವತಿಯಾದ ಹೆಂಡತಿ ಬೇಕೆಂದು ಸಾಕಷ್ಟು ವಧು ಪರೀಕ್ಷೆ ಮಾಡುತ್ತಾನೆ. ಕಡೆಗೂ ಸುಂದರಿ ಶಶಿಯನ್ನು ಮದುವೆಯಾಗಿ ಹಿಗ್ಗುತ್ತಾನೆ. ಆದರೆ ಕೆಲವೇ ತಿಂಗಳಲ್ಲಿ ಚಕ್ಕುಲಿ ಬಾಂಡಲೆಯ ಮೇಲೆ ಬಿದ್ದು ಸುಟ್ಟ ಗಾಯಗಳಿಂದ ಶಶಿಯ ಮುಖ ವಿಕಾರವಾಗುತ್ತದೆ.

ಅವಳ ಕುರೂಪಿ ಮುಖವನ್ನು ನೋಡಲಾಗದೇ ಅಂತರ ಕಾಯ್ದು ಕೊಂಡವನು ಬದಲಾಗಿದ್ದು ಹೇಗೆ?…

ಅವರ ‘ಬಾರು ಕೋಲು’ ಕಥೆಯಲ್ಲಿ ಮಾದವ್ವ ತನ್ನ ಅತ್ತೆಯಿಂದ ಸಾಕಷ್ಟು ಹೊಡೆತ ತಿಂದವಳು. ಸಾಲದೆಂಬಂತೆ, ಮಕ್ಕಳನ್ನು ಹಡೆಯದ ಸೊಸೆಗೆ ಚುಟುಕಾ ಕಾಸಿ ಬರೆ ಇಡಲೂ ಹೇಸುವುದಿಲ್ಲ! ಆದರೆ ಮೊಂಡು ಸೊಸೆ ಮಾದವ್ವ ಕೂಳಿಗೆ ಗತಿಯಿಲ್ಲದ ತನ್ನ ತವರಿಗೆ ಹೋಗದೇ, ಉಣ್ಣಲು ಉಡಲು ಕೊರತೆಯಿಲ್ಲದ ಅತ್ತೆಯ ಮನೆಯಲ್ಲಿಯೇ ನೆಲ ಕಚ್ಚಿ ನಿಂತಳು!. ಅಂದಿನ ಗ್ರಾಮೀಣ ಕುಟುಂಬಗಳಲ್ಲಿ ಇವೆಲ್ಲಾ ಸರ್ವೇಸಾಮಾನ್ಯವಾಗಿತ್ತು.

‘ಅತ್ತೆಗೊಂದು ಕಾಲ ಸೊಸೆಗೊಂದು ಕಾಲ’ ಎಂದು ಹಿರಿಯರು ಗಾದೆ ಮಾಡಿದ್ದು ಸುಳ್ಳಲ್ಲ. ಒಂದು ದಿನ ಹೀಗೆ ಸೊಸೆಯನ್ನು ಬೆನ್ನಟ್ಟಿ ಹೊಡೆಯಲು ಹೋದ ಅತ್ತೆ ಜೋಲಿ ತಪ್ಪಿ ಪಡಸಾಲಿಯ ಕಟ್ಟೆಯ ಮೇಲಿಂದ ಬಿದ್ದು ನಡ ಮುರಿದು ಕೊಳ್ಳುತ್ತಾಳೆ. ಈಗ ಸೇಡು ತೀರಿಸಿ ಕೊಳ್ಳುವುದು ಮಾದವ್ವನ ಸರದಿ. ಅವಳು ಇಷ್ಟುದಿನ ತನ್ನನ್ನು ಕಾಡಿದ ಅತ್ತೆಗೆ ಯಾವ ಉಪಚಾರವನ್ನೂ ಮಾಡದೇ ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಾಳೆ.

ಮಕ್ಕಳಿಲ್ಲದ ಆಕೆ ತನ್ನ ತಂಗಿಯ ಮಗ ನಿಂಗಣ್ಣನನ್ನು ತಂದು ಮನೆಯಲ್ಲಿಟ್ಟು ಕೊಂಡು ಮದುವೆ ಮಾಡುತ್ತಾಳೆ. ಜೊತೆಗೆ ತಲೆಮಾರಿನಿಂದ ನಡೆದು ಬಂದಂತೆ ಮುಂದೆ ತನ್ನ ಸೊಸೆಯನ್ನೂ ಕಾಡಿಸುತ್ತಾಳೆ!! ಆಗ ಸುದ್ದಿ ಕೇಳಿದ ಸೊಸೆಯ ಅಪ್ಪ ಗುರಪ್ಪ ಮಾದವ್ವನ ಮನೆಗೆ ಬಂದು ಮೂಲೆಯಲ್ಲಿದ್ದ ಬಾರುಕೋಲಿನಿಂದ ಮನ ಬಂದಂತೆ ಅವಳನ್ನು ಬಾರಿಸಿದರೂ, ಯಾರೂ ಬಿಡಿಸಿಕೊಳ್ಳಲು ಬರುವುದಿಲ್ಲ. ಅಲ್ಲಿಗೆ ಆಕೆ ತಣ್ಣಗಾಗುತ್ತಾಳೆಯೇ? …

ಕತೆ ಇಲ್ಲಿಗೆ ಮುಗಿಯುವುದಿಲ್ಲ. ಸೊಸೆ ಈಗ ಆರು ಮಕ್ಕಳ ತಾಯಿ! . ಗುರಪ್ಪ ಆಗಾಗ ಮಗಳ ಮನೆಗೆ ಬಂದು ಮೊಮ್ಮಕ್ಕಳನ್ನು ಆಡಿಸಿ, ಮಾದವ್ವನೊಂದಿಗೆ ಹರಟೆ ಹೊಡೆದು ಹೋಗುತ್ತಾನೆ. ಹಕ್ಕೆಯಲ್ಲಿ ತೂಗು ಬಿದ್ದ ಬಾರುಕೋಲು ಸೊಸೆ ಚಿನ್ನವ್ವನಿಗೊಂದು ಪಾಠ ಹೇಳುತ್ತಿರುವಂತೆ ಕಾಣುತ್ತದೆ. ಹೀಗೆ ಕತೆಯ ಮುಕ್ತಾಯದಲ್ಲಿ ಬರೆದ ಲೇಖಕಿ ಮುಂದೆ ಸುಖಾಂತ್ಯವನ್ನೇ ಬಯಸಿದ್ದಾರೆ. ತವರು ಮನೆಯನ್ನು ಬಿಟ್ಟು ಬಂದು ಗಂಡನ ಮನೆಯಲ್ಲಿ ಹೊಸ ವಾತಾವರಣಕ್ಕೆ ಹೊಂದಿ ಕೊಳ್ಳಬೇಕಾದ ಕಷ್ಟವನ್ನು ಅವರು ‘ಕಿತ್ತು ಹಚ್ಚಿದ ಗಿಡ’ಕ್ಕೆ ಹೋಲಿಸಿದ್ದಾರೆ. ಮನೆ ಕೆಲಸಕ್ಕೆ ಬರುವ ಬಡಹೆಂಗಸರ ಬಗ್ಗೆ ಕೆಲವು ಕಥೆಗಳಲ್ಲಿ ಒಂದು ಪಾತ್ರವನ್ನು ಸೃಷ್ಟಿಸಿದ್ದಾರೆ. ಅವು ಓದಿಗೆ ಇನ್ನಷ್ಟು ಮನೋರಂಜನೆಯನ್ನು ತುಂಬಿದೆ.

‘ಬಯಲು ಆಲಯ’ ಕಥೆಯಲ್ಲಿ ಗಂಡನೊಡನೆ ನಡೆದ ಜಗಳವಾಡಿದ್ದ ಜಾನಕ್ಕನ ಆತಂಕವನ್ನು ಕಾಣಬಹುದು. ಇದೇ ರೀತಿ, ‘ಮರು ವಿಚಾರ’ ಕಥೆಯಲ್ಲಿ ಬರುವ ಸರೋಜಳಿಗೆ ಗಂಡ ತನ್ನಾಶೆ ಅಭಿರುಚಿಗೆ ಬೆಲೆ ಕೊಡದ ಬಗ್ಗೆ ಬೇಸರವಿತ್ತು. ಕೋಪಿಸಿ ಕೊಂಡು ತವರಿಗೆ ಬರುತ್ತಾಳೆ. ಕಲಿತ ತಾನು ನೌಕರಿ ಮಾಡಿ ಸ್ವತಂತ್ರ ಜೀವನ ನಡೆಸಬೇಕು. ಅಲ್ಲದೇ ತನ್ನ ತಾಯಿ ಗಂಗಮ್ಮ ಸೊಸೆಯ ಕಿರಿ ಕಿರಿಯಿಂದ ಬಿಡುಗಡೆ ಪಡೆಯಲು ತಾನು ಅವಳನ್ನು ಕರೆದು ಕೊಂಡು ಹೋಗಬೇಕು ಎನ್ನುವ ಯೋಚನೆಯಿತ್ತು. ಆದರೆ ‘ಸತ್ತರೂ ಗಂಡನ ಮನೆಯಲ್ಲಿಯೇ ಸಾಯಬೇಕು. ಮಂದಿಯೊಳಗೆ ನಮ್ಮ ಮಾನ ಕಳೆಯ ಬ್ಯಾಡ. ಗಂಡನ ಬಿಟ್ಟ ಗಯ್ಯಾಳಿ ಎನಿಸಿಕೋ ಬ್ಯಾಡ.’ ಎಂದು ತಾಯಿ ಉಪದೇಶಿಸುತ್ತಾಳೆ.

‘ಹುಚ್ಚು’ ಎನ್ನುವ ಶೀರ್ಷಿಕೆಯ ಕಥೆಯಲ್ಲಿ ‘ಹೆಚ್ಚು ಬೆಳಕಿಲ್ಲದ ಚಿಕ್ಕ ಕೋಣೆಯಲ್ಲಿ ಗೋಡೆಗೆ ಒರಗಿಸಿಟ್ಟ ಬಟ್ಟೆಯ ಗಂಟಿನಂತೆ ಆಕೆ ಕುಳಿತಿದ್ದಳು.ಯಾರೋ ಕೂಗಿದಾಗ ಗಂಟು ಚಲಿಸಿತು’… ಗಿರಿಜಮ್ಮನ ಪರಿಸ್ಥಿತಿಯನ್ನು ತಿಳಿಸಲು ಹೀಗೆ ಅವರು ಬರೆದ ಒಂದು ವಾಕ್ಯವೇ ಸಾಕು.

‘ಒಳ ಸುಳಿ’ ಕಥೆಯ ಸೂಕ್ಷ್ಮ ಮನಸ್ಸಿನ ಸುಮಾ, ‘ಹಿಂಬಡದ ಗಾಯ’ ಕಥೆಯ ದುಂಡವ್ವ, ‘ಚಿತ್ರ’ ಕಥೆಯಲ್ಲಿನ ಸೊರಗಿದ ಮೀನಾಕ್ಷಿ…ಈ ಎಲ್ಲಾ ಸ್ತ್ರೀ ಪಾತ್ರಗಳು ಬಹುಕಾಲ ಕಾಡುತ್ತದೆ. ಇಲ್ಲಿ ಏನೇ ಬಂದರೂ ನಾವು ಕುಟುಂಬ ವ್ಯವಸ್ಥೆಯಲ್ಲಿ ಹೊಂದಿಕೊಂಡು ಹೋಗಬೇಕು ಇದರಿಂದ ಎಲ್ಲರ ಹಿತವಿದೆ ಎಂಬ ಆಶಯವನ್ನೇ ಅವರು ಹೇಳುತ್ತಾರೆ. ಹೊಂದಾಣಿಕೆ ಗಂಡು – ಹೆಣ್ಣು ಇಬ್ಬರೂ ಪರಸ್ಪರ ಮಾಡಿ ಕೊಳ್ಳಬೇಕು. ಆದರೆ ಲೇಖಕಿ ಬರೆದಿರುವುದು ಹೆಚ್ಚಾಗಿ ಹೆಣ್ಣು ಮಕ್ಕಳ ಕುರಿತೇ ಆಗಿದೆ. ಇದಕ್ಕೆ ಅಂದಿನ ಪೂರಕ ಪರಿಸರವೂ ಕಾರಣ ಎನ್ನಬಹುದು. ಸುಶಿಕ್ಷಿತ ಮದ್ಯಮ ವರ್ಗದ ಕುಟುಂಬಗಳ ಹೆಣ್ಣಿನ ದೃಷ್ಟಿ ಕೋನವೇ ಇಲ್ಲಿಯ ಪುಟ್ಟ ಪುಟ್ಟ ಕಥೆಗಳ ಜೀವಾಳವಾಗಿದೆ.

ಮಾನವೀಯ ಅನುಕಂಪದಲ್ಲಿ ನಿರುದ್ವಿಗ್ನವಾಗಿ ಕಥೆಯನ್ನು ಹೇಳುವ ಅವರು ಬದುಕಿನಲ್ಲಿ ಏನೇ ಕಷ್ಟ- ನಷ್ಟವಿದ್ದರೂ ಹೊಂದಾಣಿಕೆ ಮತ್ತು ಪ್ರೀತಿಯಿಂದಲೇ ಸರಿ ಪಡಿಸಿಕೊಂಡು ಹೋಗಬೇಕೆನ್ನುತ್ತಾರೆ. ಶಾಂತಾದೇವಿಯವರ ಎಲ್ಲಾ ಕಥೆಗಳಲ್ಲಿ ಉತ್ತರ ಕರ್ನಾಟಕದ ಆಡುಭಾಷೆಗೆ ಹೊಸದೊಂದು ಆಯಾಮ ದೊರಕಿದೆ ಎನ್ನಬಹುದು.

ಸಂಭಾಷಣೆಗಳಲ್ಲಿ ಗ್ರಾಮೀಣ ಪರಿಸರದ ಸೊಗಡನ್ನು ಬಳಸಿ ಸ್ವಾರಸ್ಯವಾಗಿ ಮತ್ತು ಸರಳವಾಗಿ ಕಥೆಗಳನ್ನು ಸೃಷ್ಟಿಸಿದ್ದು ಅವರ ಕಲೆಗಾರಿಕೆಗೆ ಸಾಕ್ಷಿ. ಬಹಳಷ್ಟು ಚೆಂದದ ಕಥೆಗಳಿರುವ ಈ ಕೃತಿಯಲ್ಲಿನ ಕೆಲವಷ್ಟು ವಿಷಯವನ್ನು ಮಾತ್ರ ನಾನು ಚುಟುಕಾಗಿ ವಿವರಿಸಿದ್ದೇನೆ. ನನಗಂತೂ ಈ ಪುಸ್ತಕ ತುಂಬಾ ಇಷ್ಟವಾಯಿತು. ಬಹಳ ಸೊಗಸಾದ ಈ ಕೃತಿಯನ್ನು ನೀವೂ ಓದಿ…


  • ಮಾಲತಿ ರಾಮಕೃಷ್ಣ ಭಟ್

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading