ರೋಗಿಗಳಿಗೆ ವರದಾನ ರಾಜ ಮುಡಿ ಅಕ್ಕಿ

ರಾಜಮುಡಿ ಅಕ್ಕಿ ಮೆಗ್ನೀಸಿಯಮ್‌ನ ಸಮೃದ್ಧ ಮೂಲವಾಗಿದ್ದು ಈ ಅನ್ನವನ್ನು ನಿಯಮಿತವಾಗಿ ತಿನ್ನುವವರ ಮೂಳೆಗಳು ಬಲಗೊಳ್ಳುತ್ತವೆ. ರಾಜಮುಡಿ ಅಕ್ಕಿಯ ಮಹತ್ವವನ್ನು ಲೇಖಕಿ ಸೌಮ್ಯಾ ಸನತ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಅನ್ನದೇವರ ಮುಂದೆ ಇನ್ನು ದೇವರುಂಟೆ ?
ಅನ್ನವಿರುವ ತನಕ ಪ್ರಾಣವು ಜಗದೊಳ

ಅನ್ನವೇ ದೈವ ಸರ್ವಜ್ಞ : 

ಅನ್ನ ಹಸಿವು ನೀಗಿಸುವ ಅಥವಾ ನಾಲಿಗೆಯ ರುಚಿ ತೀರಿಸುವ ಸಾಧನವಲ್ಲ. ಅನ್ನ ಒಡಲಿಗೆ ಶಕ್ತಿ ಮತ್ತು ಮನಸ್ಸಿಗೆ ಚೈತನ್ಯ ತುಂಬುವ ಸಂಜೀವಿನಿ. ಅನ್ನಂ ಪರಬ್ರಹ್ಮಂ ಅಂತಾ ಅನ್ನಪೂರ‍್ಣೇಶ್ವರಿ ಹೆಸರಿನಲ್ಲಿ ಅನ್ನಕ್ಕೆ ದೈವದ ರೂಪವನ್ನು ನೀಡಿ ಅನೇಕ ದೇವಾಲಯಗಳಲ್ಲಿ ಭಕ್ತಿ ಗೌರವದಿಂದ ಪೂಜಿಸುವುದು ಪ್ರತೀತಿ. ನಮ್ಮ ಕರ್ನಾಟಕದಲ್ಲಿ ವಿಶೇಶ ಸ್ಥಾನ ಪಡೆದ ಅಕ್ಕಿಯ ತಳಿ “ರಾಜಮುಡಿ”. ಹೆಸರಿಗೆ ತಕ್ಕಂತೆ ರುಚಿ ಮತ್ತು ಫಲವತ್ತತೆಯಲ್ಲಿ ರಾಜವೈಭೋಗ ಕಾಣಬಲ್ಲ ಅಕ್ಕಿಯೆಂದರೆ ತಪ್ಪಿಲ್ಲ. ಅಡುಗೆ ಮನೆಯಲ್ಲಿ ಅನ್ನ ಬೇಯುತ್ತಿದ್ದರೆ ಅದರ ಪರಿಮಳಕ್ಕೆ ಹೊರಜಗಲಿಯಲ್ಲಿ ಕುಳಿತವರ ಮೂಗು ಅರಳುವುದರಲ್ಲಿ ಸಂಶಯವಿಲ್ಲ! ಇದು ರಾಜಮುಡಿಯ ಮಹಿಮೆ.

ಫೋಟೋ ಕೃಪೆ : google

ರಾಜಮುಡಿ ಹೆಸರು ಬರಲು ಕಾರಣ :

ಹಿಂದೆ ಮೈಸೂರು ಮಹಾರಾಜರಿಗೆ ಹಾಸನ ಜಿಲ್ಲೆಯ ಹೊಳೆನರಸಿಪುರದಿಂದ ‘ರಾಜಮುಡಿ ಅಕ್ಕಿ’ ಸರಬರಾಜಾಗುತ್ತಿತ್ತು. ರಾಜರಿಗೆ ಅದು ಮುಡಿಪಾದುದರಿಂದ ‘ರಾಜಮುಡಿ’ ಅಂತ ಹೆಸರು ಬಂದಿರಬಹುದು ಎಂಬುದು ಪ್ರತೀತಿ. ಮಹಾರಾಜರ ಆಸ್ತಾನದಲ್ಲಿ ದುಡಿಯಲು ಹಾಸನ ಜಿಲ್ಲೆಯ ಕಡೆಯಿಂದಲೇ ಬಹುಪಾಲು ಜನರು ಇದ್ದರಂತೆ ಹಾಗಾಗಿ ಇಲ್ಲಿನ ಅಕ್ಕಿ ಮೈಸೂರಿಗೆ ಹೋಗಿರಬಹುದು ಎನ್ನುವುದು ಹಲವರ ವಾದ. ಹಾಸನ ಜಿಲ್ಲೆಯ ರಾಮದೇವರಕಟ್ಟೆ ಪ್ರದೇಶದಲ್ಲಿ, ಇವತ್ತಿಗೆ ಸರಿಸುಮಾರು 500 ವರ್ಷಗಳ ಹಿಂದೆ ಈ ತಳಿಯನ್ನು ಅಭಿವೃದ್ಧಿ ಪಡಿಸಲಾಯಿತು ಎಂದೂ ಹೇಳುತ್ತಾರೆ . ಮೈಸೂರು ರಾಜರ ಆಳ್ವಿಕೆಯ ಕಾಲದಲ್ಲಿ, ಈ ಪ್ರಾಂತ್ಯದ ರೈತರು ರಾಜರಿಗೆ ತೆರಿಗೆಯನ್ನು ಕೊಡಲು ಆಗದಿದ್ದಾಗ, ರಾಜಮುಡಿ ಅಕ್ಕಿಯನ್ನೇ ರಾಜರಿಗೆ ತೆರಿಗೆಯಾಗಿ ಕೊಡುತ್ತಿದ್ದದ್ದು ಇತಿಹಾಸ. ನಂಜನಗೂಡಿನ ನಂಜುಂಡೇಶ್ವರನಿಗೆ ರಾಜಮುಡಿ, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿಗೆ ವೈರಮುಡಿ ಎಂಬ ಪ್ರತೀತಿ ಇದೆ. ಒಮ್ಮೆ ಈ ಇಬ್ಬರು ದೇವರಿಗೂ ವೈಮನಸ್ಸಾದಾಗ, ರಾಜಮುಡಿ ಮಾತಿನ ಯುದ್ದದಲ್ಲಿ ಜಯಿಸಿ ತ್ರಿಕಾಲದಲ್ಲಿಯೂ ಸಹ ಶ್ರೀಕಂಠೇಶ್ವರನಿಗೆ ರಾಜಮುಡಿ ಅಕ್ಕಿಯ ನೈವೇದ್ಯವನ್ನು ಮತ್ತು ಬೆಳಗಿನ ತೇರನ್ನು ಎಳೆಯುವುದು ಸಂಪ್ರದಾಯವಾಯಿತು. ಅಂತೆಯೇ ರಾತ್ರಿಯ ಹೊತ್ತಲ್ಲಿ ಚೆಲುವನಾರಾಯಣ ಸ್ವಾಮಿಯ ವೈರಮುಡಿ ತೇರನ್ನು ಎಳೆಯುವುದು ಸಂಪ್ರದಾಯವಾಯಿತು. ಮಾರುಕಟ್ಟೆಯಲ್ಲಿ ಲಭ್ಯವಿರುವ ಅಪರೂಪದ ಕೆಂಪಕ್ಕಿಗಳಲ್ಲಿ ಒಂದಾದ ರಾಜಮುಡಿ, ಸಾಂಪ್ರದಾಯಿಕವಾಗಿ ಮೈಸೂರಿನ ಒಡೆಯರ್‍‍‍ಗಳ ಯುಗದೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಾ ಬಂದಿದೆ.

ಫೋಟೋ ಕೃಪೆ : google

ಪೋಷಕಾಂಶಗಳಿಂದ ಸಮೃದ್ಧವಾದ ರಾಜಮುಡಿ ಅಕ್ಕಿಯ ಉಪಯೋಗಗಳು : 

1.ನಾವು ದಿನ ನಿತ್ಯ ಸೇವನೆ ಮಾಡುವ ಬಿಳಿ ಅನ್ನದಲ್ಲಿ ಅಷ್ಟೇನೂ ಹೇಳಿಕೊಳ್ಳುವಂತಹ ಪೌಷ್ಟಿಕ ಸತ್ವಗಳು ಕಂಡು ಬರುವುದಿಲ್ಲ. ಆದರೆ ಕೆಂಪಕ್ಕಿ ಅನ್ನದಲ್ಲಿ ಸೆಲೆನಿಯಂ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ ನಂತಹ ನಮ್ಮ ದೇಹಕ್ಕೆ ಅಗತ್ಯವಿರುವ ಅತ್ಯದ್ಭುತವಾದ ಪೌಷ್ಟಿಕ ಖನಿಜಾಂಶಗಳು ಕಂಡು ಬರುತ್ತವೆ. ಇದರ ಜೊತೆಗೆ ಕೆಂಪಕ್ಕಿಯಲ್ಲಿ ನಾರಿನ ಅಂಶ ಮತ್ತು ಫೋಲೇಟ್ ಅಂಶ ಹೆಚ್ಚಾಗಿರುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯ ಪ್ರಯೋಜನಗಳು ಉಂಟಾಗುತ್ತದೆ.

2. ರಾಜಮುಡಿ ಅಕ್ಕಿ ಮೆಗ್ನೀಸಿಯಮ್‌ನ ಸಮೃದ್ಧ ಮೂಲವಾಗಿದ್ದು ಈ ಅನ್ನವನ್ನು ನಿಯಮಿತವಾಗಿ ತಿನ್ನುವವರ ಮೂಳೆಗಳು ಬಲಗೊಳ್ಳುತ್ತವೆ. ಪದೇ ಪದೇ ಕಾಣಿಸಿಕೊಳ್ಳುವ ಗಂಟು, ಕಿಲು ನೋವಿನಿಂದ ಕೂಡಾ ಇದು ಮುಕ್ತಿ ನೀಡುತ್ತದೆ.

3. ಕೆಂಪಕ್ಕಿಯಲ್ಲಿರುವ ಮ್ಯಾಂಗನೀಸ್ ಅಂಶವು ದೇಹದಲ್ಲಿ ಕೊಬ್ಬು ಸಂಗ್ರಹಣೆಯಾಗದಂತೆ ಮಾಡುತ್ತದೆ. ಈ ಮ್ಯಾಂಗನೀಸ್ ಸಂತಾನೋತ್ಪತ್ತಿ ವ್ಯವಸ್ಥೆಗೆ ಪೂರಕವಾಗಿದೆ.

4. ಕೆಂಪಕ್ಕಿಯಲ್ಲಿ ನಾರಿನಾಂಶವಿದ್ದು, ಇದು ನಮ್ಮ ಜೀರ್ಣ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಜೀರ್ಣ ಉಂಟಾಗದಂತೆ ತಡೆಯುತ್ತದೆ.

5. ಕೆಂಪಕ್ಕಿಯಲ್ಲಿ ಹೇರಳವಾಗಿರುವ ನಾರಿನಾಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಸ್ತನ ಕ್ಯಾನ್ಸರ್‌ ನಂತಹ ಅಪಾಯಕಾರಿ ಕಾಯಿಲೆಗಳನ್ನು ಬುಡದಲ್ಲೇ ಚಿವುಟಿ ಹಾಕುತ್ತದೆ.

6. 6 ತಿಂಗಳ ಕಾಲ ನಿರಂತರವಾಗಿ ಕೆಂಪು ಅಕ್ಕಿಯನ್ನು ತಿಂದರೆ, ರಕ್ತನಾಳಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾದರೆ ಹೃದಯ ಕಾಯಿಲೆಗಳ ಅಪಾಯವಿರುವುದಿಲ್ಲ. ಅದಕ್ಕಾಗಿಯೇ ಇದನ್ನು ದೈನಂದಿನ ಆಹಾರದಲ್ಲಿ ಸೇರಿಸುವಂತೆ ಸಲಹೆ ನೀಡಲಾಗುತ್ತದೆ.

7. ಬಿಳಿ ಅಕ್ಕಿ ಮಧುಮೇಹ ರೋಗಿಗಳಿಗೆ ವಿಷಕ್ಕಿಂತ ಕಡಿಮೆಯಲ್ಲ ಎಂದು ಹೇಳಲಾಗುತ್ತಿದೆ. ಮೊದಲೇ ಹೇಳಿದ ಹಾಗೆ ಬಿಳಿ ಅಕ್ಕಿ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಅಂದರೆ ಈ ಅಕ್ಕಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಬಿಳಿ ಅನ್ನ ಸೇವಿಸದಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಅದರ ಬದಲು ಕೆಂಪು ಅಕ್ಕಿ ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದಿಲ್ಲ.

8. ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ಬಯಸುವವರು, ಬಿಳಿ ಅಕ್ಕಿಯ ಬದಲಿಗೆ ಕೆಂಪು ಅಕ್ಕಿಯನ್ನು ತಿನ್ನಲು ಪ್ರಾರಂಭಿಸುವುದು ಮುಖ್ಯ. ಏಕೆಂದರೆ ಕೆಂಪು ಅಕ್ಕಿ ಕೊಬ್ಬು ಮುಕ್ತವಾಗಿದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

9. ತಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ.ಪ್ರಸವಾನಂತರದ ಬಾಣಂತಿಯರ ಆರೋಗ್ಯ ಸುಧಾರಿಸಲು ಬ್ರೌನ್ ರೈಸ್ ಅದ್ಭುತವಾಗಿ ಕೆಲಸ ಮಾಡುತ್ತದೆ. ಈ ಅಕ್ಕಿಯ ಸೇವನೆಯು ಬಾಣಂತಿಯರಲ್ಲಿ ಖಿನ್ನತೆ ಮತ್ತು ಆಯಾಸದ ಹಂತಗಳನ್ನು ಸುಧಾರಿಸಲು ಸಹಾಯಕವಾಗಿದೆ.

10. ಒಂದು ಕಾಲದಲ್ಲಿ ಈ ಅಕ್ಕಿ ಕಂಡರೆ ಮೂಗು ಮುರಿಯುತ್ತಿದ್ದವರು ಇಂದು ಪ್ರೀತಿಯಿಂದ ಈ ಅಕ್ಕಿಯನ್ನು ಬಳಸುತ್ತಿದ್ದಾರೆ. ರೋಗಿಗಳಿಗೆ ವರದಾನವಾದ ಇದನ್ನು ಒಮ್ಮೆ ಬಳಸಿ ನೋಡಿ, ನಿಮಗೇ ತಿಳಿಯುತ್ತದೆ ರಾಜಮುಡಿಯ ಮಹತ್ವ.


  • ಸೌಮ್ಯಾ ಸನತ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading