ಸಂಕ್ರಾಂತಿ ಸೂರ್ಯಾರಾಧನೆ – ಸೌಮ್ಯಾ ಸನತ್

ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದ್ದು ಈ ಪವಿತ್ರದಿನದಂದು ರಾಷ್ಟ್ರದ ಹಲವು ದೇವಾಲಯಗಳಲ್ಲಿ ವಿಶೇಷ ಆರಾಧನೆಗಳು ನಡೆಯುತ್ತವೆ. ಸೂರ್ಯನ ದೇಗುಲಗಳಲ್ಲಂತೂ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಕೋನಾರ್ಕದ ಸೂರ್ಯ ದೇವಾಲಯದಲ್ಲಂತೂ ಒಂದು ತಿಂಗಳ ಉತ್ಸವವಿದೆ. ಸೌಮ್ಯಾ ಸನತ್ ಅವರು ಸಂಕ್ರಾಂತಿ ಹಬ್ಬದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ವರ್ಷದ ಮೈ ಕೊರೆವ ಚಳಿಗೆ ವಿದಾಯ ಹೇಳಿ, ಬೇಸಿಗೆಯ ಬರಮಾಡಿಕೊಳ್ಳುವ, ವರ್ಷಪೂರಾ ಕಾಳುಕೊಟ್ಟ ನಿಸರ್ಗಕ್ಕೆ ಕೃತಜ್ಞತೆ ಹೇಳುವ ಸಂಭ್ರಮದ ಸುಗ್ಗಿಯ ಹಬ್ಬವೇ ಸಂಕ್ರಾಂತಿ. ಸಂಕ್ರಾಂತಿ ಸಮೃದ್ಧಿಯ ಸಂಕೇತ. ಪ್ರತ್ಯಕ್ಷ ದೈವ ಸೂರ್ಯದೇವನ ಹಬ್ಬ. ಸೂರ್ಯನು ತನ್ನ ಪಥವನ್ನು ಬದಲಿಸುವ ಮಹೋನ್ನತ ಉತ್ತರಾಯಣ ಪುಣ್ಯಕಾಲ.

ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುವ ಹೊಲಗದ್ದೆಗಳು ಸಂಕ್ರಾಂತಿಯ ಹೊತ್ತಿಗೆ ಬಟಾ ಬಯಲಾಗಿರುತ್ತವೆ. ಕುಯಿಲಾದ ಬೆಳೆ ಮೆದೆಯ ರೂಪ ತಾಳಿ ಸುಗ್ಗಿಗೆ ಸಿದ್ಧವಾಗಿರುತ್ತದೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ರೈತರು ನಿರಾಳವಾಗಿ ಸಂತೋಷಿಸುವ ಕಾಲವಿದು. ಅದಕ್ಕೆ ಕಾರಣವಾದ ಬಸವಣ್ಣನಿಗೆ ಕೃತಜ್ಞತೆ ಅರ್ಪಿಸಲು ರೈತ ಸಮುದಾಯ ಕಾತರದಿಂದ ಸಂಕ್ರಾಂತಿಗಾಗಿ‌ ಕಾಯುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಸಂಕ್ರಾಂತಿಯ ಆಚರಣೆಯ ವಿಧಾನಗಳು ಬದಲಾಗುತ್ತಾ ಹೋದರೂ ಇದು ಅಪ್ಪಟ ಹಳ್ಳಿಗರ ಹಬ್ಬ. ಸಂಕ್ರಾಂತಿ ಸಂದರ್ಭದಲ್ಲಿ ಮನೆಯ ಮುಂದೆ ಬಣ್ಣ ತುಂಬಿದ ರಂಗೋಲಿ ರಂಗೋಲಿಯ ಮಧ್ಯದಲ್ಲಿ ಸಗಣಿಯ ಉಂಡೆ ಇಟ್ಟು ಹೂವಿನಿಂದ ಸಿಂಗರಿಸುತ್ತಾರೆ. ದನಕರುಗಳ ಮೈ ತೊಳೆದು, ಮೈ ಮೇಲೆ ಅರಿಷಿಣ, ಕುಂಕುಮದಿಂದ ಚಿತ್ರ ಬರೆದು, ಕೊಂಬಿಗೆ ಬಣ್ಣ ಹಚ್ಚಿ, ರಂಗು ರಂಗಿನ ಬಲೂನು, ನವಿಲುಗರಿ ಕಟ್ಟಿ ಶೃಂಗರಿಸುತ್ತಾರೆ. ದೇವಲೋಕದ ಕಾಮಧೇನುವೇ ಧರೆಗಿಳಿದಂತೆ ಭಾಸವಾಗುತ್ತದೆ. ಆಕಾಶದಲ್ಲಿ ಬಣ್ಣಬಣ್ಣದ ಗಾಳಿಪಟಗಳ ಹಾರಾಟ. ಭೂಲೋಕದಲ್ಲಿ ನಾವು ಆನಂದದಿಂದ ಇದ್ದೇವೆ ಎಂಬ ಸಂದೇಶವನ್ನು ದೇವತೆಗಳಿಗೆ ನೀಡಲಿಕ್ಕಾಗೇ ಆಕಾಶದಲ್ಲಿ ಗಾಳಿಪಟ ಹಾರಿಸುತ್ತಿದ್ದಾರೇನೋ ಅನ್ನುವಷ್ಟು ಸಂತಸ ಸಂಭ್ರಮ. ಇಳಿಸಂಜೆಗೆ ಊರ ಹೊರಗಿನ ರಸ್ತೆಯಲ್ಲಿ ಹುಲ್ಲು ಹರಡಿ, ಬೆಂಕಿ ಹಾಕಿ ದನಗಳನ್ನು ‘ಕಿಚ್ಚು’ ಹಾಯಿಸುತ್ತಾರೆ. ಬೆಂಕಿಯ ಕೆನ್ನಾಲಿಗೆಯ ನಡುವೆ ಜಿಗಿದು ಹೋಗುವ ಹೋರಿ ಮತ್ತು‌ ಅದರ ಮಾಲೀಕರಿಗೆ ಚಪ್ಪಾಳೆ, ಕೇಕೆಗಳ ಪುರಸ್ಕಾರಗಳನ್ನು ನೋಡುತ್ತಾ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳುವುದೇ ಚಂದ.

ಫೋಟೋ ಕೃಪೆ : GOOGLE

ಮಕರ ಸಂಕ್ರಮಣ

“ವಿಶ್ವ ಮಾರ್ಗದರ್ಶಿ”’ ಎಂದು ಉಲ್ಲೇಖಿಸಲ್ಪಟ್ಟ ಭಾರತೀಯ ಖಗೋಲ ಶಾಸ್ತ್ರವು ಪ್ರಪಂಚದಲ್ಲೇ ಅತೀ ಪುರಾತನ ಮತ್ತು ವೈಶಿಷ್ಟ್ಯ ಪೂರ್ಣವಾದದ್ದು. ಗೋಲ ಶಾಸ್ತ್ರದಲ್ಲಿ ವಿಶ್ವಚಕ್ಷುವಾದ ಸೂರ್ಯನ ಪಥವನ್ನು ಕ್ರಾಂತಿ ವೃತ್ತ ಎಂದು ಹೆಸರಿಸಿ ಈ ಕ್ರಾಂತಿ ವೃತ್ತವನ್ನು ಹನ್ನೆರಡು ಸಮಭಾಗಗಳಾಗಿ ವಿಭಜಿಸಿ ದ್ವಾದಶ ರಾಶಿಗಳು ಎಂದು ಕರೆದಿದ್ದಾರೆ. ಒಂದೊಂದು ರಾಶಿಗೂ 30 ಡಿಗ್ರಿಯ ಪ್ರಮಾಣ ವನ್ನೂ ನಿಗದಿಗೊಳಿಸಿ 12 ರಾಶಿಗಳಿಗೆ ಒಟ್ಟು 360 ಡಿಗ್ರಿ ಪ್ರಮಾಣವನ್ನು ನಿರೂಪಿಸಲಾಗಿದೆ. ಭೂಮಿಯು ತನ್ನ ಕಕ್ಷೆಯಲ್ಲಿ ಒಂದಾವರ್ತಿ ಸುತ್ತುವಾಗ ಈ ರಾಶಿಚಕ್ರಗಳನ್ನು ಹಾದು ಹೋಗುತ್ತದೆ. ಅದೇ ರೀತಿ ಸೂರ್ಯನು ದಿನಕ್ಕೆ ಒಂದು ಡಿಗ್ರಿಯಷ್ಟು ಚಲಿಸಿ ಕ್ರಾಂತಿವೃತ್ತವನ್ನು 365 ಕಾಲು ದಿನಗಳಲ್ಲಿ ಪೂರ್ತಿಗೊಳಿಸುವನು. ಅಂದರೆ ಒಂದು ರಾಶಿಯನ್ನು ಪೂರ್ತಿ ದಾಟಲು ತಗಲುವ ಸಮಯ 1 ತಿಂಗಳು. ಈ ರೀತಿ ಸೂರ್ಯನು ಒಂದರಿಂದ ಮತ್ತೊಂದಕ್ಕೆ ಪ್ರವೇಶಿಸುವ ಸಂದರ್ಭವನ್ನು “ಸಂಕ್ರಮಣ” ಅಥವಾ “ಸಂಕ್ರಾಂತಿ” ಎನ್ನುತ್ತಾರೆ. ಇದಕ್ಕನುಗುಣವಾಗಿ ವರ್ಷದಲ್ಲಿ 12 ಸಂಕ್ರಮಣಗಳು ರಾಶಿ ನಾಮದಿಂದ ಉಲ್ಲೇಖಿಸಲ್ಪಡುತ್ತವೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವು ಕ್ಯಾಲೆಂಡರ್‌ ಪ್ರಕಾರ ಜನವರಿ 14 ಅಥವಾ 15 ಎಂದು ನಿಗದಿಗೊಳ್ಳುತ್ತದೆ. ಆ ದಿನವೇ “ಮಕರ ಸಂಕ್ರಮಣ’. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ಬಳಿಕ 6 ತಿಂಗಳ ಕಾಲ ಅಂದರೆ ಜುಲೈ 15ರ ವರೆಗಿನ ಅವಧಿಯನ್ನು “ಉತ್ತರಾಯಣ ‘ವೆಂದೂ ತದನಂತರದ 6 ತಿಂಗಳನ್ನು ಅಂದರೆ ಪುನಃ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವವರೆಗಿನ ಅವಧಿಯನ್ನು “ದಕ್ಷಿಣಾಯಣ” ಎನ್ನಲಾಗುತ್ತದೆ. ಉತ್ತರಾಯಣ ಕಾಲವನ್ನು ಅತ್ಯಂತ ಶ್ರೇಷ್ಠ ಕಾಲವೆಂದು ಪರಿಗಣಿಸಿದ್ದಾರೆ. ಮಕರ ಸಂಕ್ರಮಣಕ್ಕೆ ವಿಶೇಷ ಮಹತ್ವ ಬರಲು ಉತ್ತರಾಯಣ ಪುಣ್ಯ ಕಾಲದ ಮೊದಲ ತೇದಿ ಎನ್ನುವುದೇ ಮೂಲ ಕಾರಣ.

ಉತ್ತರಾಯಣ ಮಹಾಪುಣ್ಯಕಾಲ

ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ಪುರಾಣಗಳು ಹೇಳುತ್ತವೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ನಮ್ಮಲ್ಲಿದೆ. ದಕ್ಷಿಣಾಯಣದಲ್ಲಿ ಮೃತರಾದ ಹಿರಿಯರ ಆತ್ಮಗಳಿಗೆ ಸದ್ಗತಿ ದೊರೆತು ಸ್ವರ್ಗ ಪ್ರಾಪ್ತಿಯಾಗಬೇಕೆಂದು ಪ್ರಾರ್ಥಿಸಿ ತಿಲತರ್ಪಣ ನೀಡುವ ಆಚರಣೆಯನ್ನು ಅಸಂಖ್ಯಾತ ಜನರು ಉತ್ತರಾಯಣ ಪುಣ್ಯಕಾಲದಲ್ಲಿ ಪಾಲಿಸುತ್ತಾರೆ.

ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇದೆ ಕಾಲದಲ್ಲಿ, ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಾಹ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಇದೇ ಉತ್ತರಾಯಣ ಪುಣ್ಯಕಾಲದಲ್ಲಿ . ಸಂಕ್ರಾಂತಿಯ ದಿನದಂದು ರಾಜ ಭಗೀರಥನು ಪವಿತ್ರ ಗಂಗಾ ನದಿಯನ್ನು ಭೂಮಿಗೆ ತಂದನಂತೆ ಅದಲ್ಲದೆ ಭೀಷ್ಮಪಿತಾಮಹರು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾರೆ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುವುದು ಹೆಚ್ಚು.

ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದ್ದು ಈ ಪವಿತ್ರದಿನದಂದು ರಾಷ್ಟ್ರದ ಹಲವು ದೇವಾಲಯಗಳಲ್ಲಿ ವಿಶೇಷ ಆರಾಧನೆಗಳು ನಡೆಯುತ್ತವೆ. ಸೂರ್ಯನ ದೇಗುಲಗಳಲ್ಲಂತೂ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಕೋನಾರ್ಕದ ಸೂರ್ಯ ದೇವಾಲಯದಲ್ಲಂತೂ ಒಂದು ತಿಂಗಳ ಉತ್ಸವವಿದೆ.

ಮಕರ ಸಂಕ್ರಮಣದಂದು ಕೇರಳ ರಾಜ್ಯದ ಪ್ರಸಿದ್ಧ ಶಬರಿ ಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪಂದಳ ಅರಮನೆಯಿಂದ ತಂದ ತಿರುವಾಭರಣಗಳನ್ನು ಸ್ವಾಮಿಗೆ ತೊಡಿಸಿ, ಆರತಿ ಬೆಳಗುವಾಗ ಪೊನ್ನಂಬಲ ಕಾಡಿನಲ್ಲಿ ಗೋಚರಿಸುವ “ಮಕರ ಜ್ಯೋತಿ’ಯನ್ನು ಕಂಡು ಭಕ್ತರು ಪುನೀತರಾಗುತ್ತಾರೆ.

ಫೋಟೋ ಕೃಪೆ : GOOGLE

ಮಕರ ಸ್ನಾನ

ನಮ್ಮ ಶಾಸ್ತ್ರಗಳಲ್ಲಿ ಮಕರ ಸಂಕ್ರಾಂತಿ ಸ್ನಾನಕ್ಕೆ ವಿಶೇಷ ಮಹತ್ವವಿದ್ದು. ಶುಕ್ಲ ಪಕ್ಷದ ಪುಷ್ಯಮಾಸದ ಮಕರ ಸಂಕ್ರಮಣದಂದು ಮಾಡುವ ಪುಣ್ಯ ಸ್ನಾನವನ್ನು ಮಹಾ-ಸ್ನಾನ-ಯೋಗ’ ಎಂದು ಕರೆಯುತ್ತಾರೆ. ಅಂದು ನದಿಸ್ನಾನ, ಸಮುದ್ರ ಸ್ನಾನ ಇಲ್ಲವೇ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡುವುದು ಪುಣ್ಯಪ್ರದವು. ಭಕ್ತರು ಪವಿತ್ರ ನದಿಗಳಾದ ಗಂಗಾ, ಯಮುನಾ, ಗೋದಾವರಿ, ಕೃಷ್ಣಾ, ಕಾವೇರಿ ತೀರ್ಥಸ್ನಾನ ಮಾಡಿ ಮಹಾಪುಣ್ಯ ಸಂಪಾದನೆ ಮಾಡುತ್ತಾರೆ. ಮಕರ ಸಂಕ್ರಾಂತಿಯಂದು ಪ್ರಯಾಗ್‌ರಾಜ್‌ನಲ್ಲಿ ಪವಿತ್ರವಾದ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ನಮ್ಮ ಎಲ್ಲಾ ಪಾಪಗಳನ್ನು ತೊಳೆದುಕೊಳ್ಳುತ್ತೇವೆ ಎಂಬ ನಂಬಿಕೆಯಿದೆ.

ಸಂಕ್ರಾಂತಿ ಸಂಭ್ರಮ

ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಆಚರಿಸುತ್ತಾರೆ. ಕರ್ನಾಟಕದಲ್ಲಿ ಸುಗ್ಗಿ, ಕೇರಳದಲ್ಲಿ ಮಕರವಿಳಕ್ಕು ಪಂಜಾಬ್‌ನಲ್ಲಿ ಮಾಘಿ ಅಸ್ಸಾಂನಲ್ಲಿ ಇದನ್ನು ಭೋಗಾಲಿ ಬಿಹು ಎಂದೂ, ಗೋವಾದಲ್ಲಿ ಮಹಿಳೆಯರು ಹಲ್ದಿ-ಕುಂಕುಮ್ ಎಂದೂ ಪತಂಗಿ ಎಂದು ಕರೆಯಲ್ಪಡುವ ಈ ಹಬ್ಬದಲ್ಲಿ ಗುಜರಾತಿ ಜನರು ಗಾಳಿಪಟಗಳನ್ನು ಹಾರಿಸುತ್ತಾರೆ. ಹಿಮಾಚಲ ಪ್ರದೇಶದಲ್ಲಿ ಇದನ್ನು ಮಾಘ ಸಾಜಿ ಭೋಗಲಿ ಬಿಹು, ಉತ್ತರಾಯಣ ಹಾಗೂ ಪೌಷ್‌ ಎಂಬ ಹೆಸರುಗಳಿಂದ ಕರೆಯುತ್ತಾರೆ ಹಾಗೂ ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲಿ ಭೋಗಿ ಹಬ್ಬವನ್ನಾಗಿ ನಾಲ್ಕು ದಿನಗಳು ಆಚರಿಸುತ್ತಾರೆ. ತಮಿಳುನಾಡಿನಲ್ಲಿ ಪೊಂಗಲ್ ಹೆಸರಿಂದ ಬೆಲ್ಲ, ಅಕ್ಕಿ, ತುಪ್ಪದಿಂದ ತಯಾರಿಸಿದ ಪೊಂಗಲನ್ನು ಸುತ್ತಲೂ ಕಬ್ಬನ್ನು ಕಟ್ಟಿ ಸಿಂಗರಿದ ಒಲೆಯಲ್ಲಿ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಎಳ್ಳಿನ ಹಬ್ಬವೆಂದು ಪ್ರಸಿದ್ಧವಾದ ಈ ದಿನದಂದು, ನಾನಾ ರೂಪಗಳಲ್ಲಿ ಎಳ್ಳನ್ನು ಬಳಸುವುದಲ್ಲದೆ, ಪೀಡಾ ಪರಿಹಾರಾರ್ಥವಾಗಿ ಎಳ್ಳನ್ನು ಹಾಗೂ ಎಳಚಿ ಹಣ್ಣನ್ನು ದಾನ ನೀಡುತ್ತಾರೆ. ಪುರಾಣಗಳ ಪ್ರಕಾರ ಈ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿಯಾಗುವುದರಿಂದ ಆನಂದಕ್ಕಾಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಹಿತ ನುಡಿಯುವ ಉದ್ದೇಶದಿಂದಾಗಿ ಎಳ್ಳು ಬೆಲ್ಲ ಹಂಚುತ್ತಾರೆ. ಶಾಸ್ತ್ರದೃಷ್ಟಿಯಿಂದ ಈ ಹಬ್ಬದಂದು ಕಪ್ಪು ಎಳ್ಳಿನಿಂದ ಸ್ನಾನ ಮಾಡಿ ಬ್ರಾಹ್ಮಣರಿಗೆ ಎಳ್ಳುದಾನವನ್ನು ಮಾಡುತ್ತಾರೆ. ಈ ದಿನ ಮಾಡಿದ ದಾನದಿಂದ ಸೂರ್ಯನು ಆಜನ್ಮ ಪರ್ಯಂತ ಅನುಗ್ರಹಿಸುತ್ತಾನೆಂಬ ನಂಬಿಕೆಯು ಇದೆ ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ ನೆಲಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ಹೆಣ್ಣು ಮಕ್ಕಳು ತಮ್ಮ ಆಪ್ತರು, ನೆರೆ ಹೊರೆಯವರಿಗೆ ವಿಶೇಷ ಸಿಹಿಯನ್ನು ಹಂಚಿ ಸಂಭ್ರಮಿಸುತ್ತಾರೆ.


  • ಸೌಮ್ಯಾ ಸನತ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW