12 ವರ್ಷಗಳಿಗೆ ಒಮ್ಮೆ ನಡೆಯಲಿರುವ ಮಹಾ ಕುಂಭಮೇಳವು ಕುಂಭಮೇಳದಲ್ಲಿ ರಾಜ ಸ್ನಾನಕ್ಕೆ ವಿಶೇಷ ಮಹತ್ವವಿದ್ದು, ಇದನ್ನು ಅಮೃತ ಸ್ನಾನ ಎಂದೂ ಕರೆಯುತ್ತಾರೆ. ಉತ್ತರ ಪ್ರದೇಶದ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ಪವಿತ್ರ ಸ್ಥಳವಾದ ಪ್ರಯಾಗ್ ರಾಜ್ ನಲ್ಲಿ ಜನವರಿ 13 ರಿಂದ 26 ಫೆಬ್ರವರಿವರೆಗೆ ಮಹಾ ಕುಂಭಮೇಳ ನಡೆಯಲಿದೆ. ಇದರ ಮಹತ್ವವನ್ನು ಡಾ.ಗುರುಪ್ರಸಾದ ರಾವ್ ಹವಲ್ದಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಸಾವಿರಾರು ವರ್ಷಗಳಿಂದ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ನೆಲೆವೀಡುವಾಗಿರುವ ಈ ಭರತಭೂಮಿಯು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ, ಅದು ಆಚರಣೆಯಾಗಿ , ಉತ್ಸವವಾಗಿಲಿ ಜಗತ್ತೇ ಕೌತುಕದಿಂದ ಬೆರಗಿನಿಂದ ನೋಡುತ್ತದೆ.
ಉತ್ತರ ಪ್ರದೇಶದ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ಪವಿತ್ರ ಸ್ಥಳವಾದ ಪ್ರಯಾಗ್ ರಾಜ್ ನಲ್ಲಿ ಜನವರಿ 13 ರಿಂದ 26 ಫೆಬ್ರವರಿವರೆಗೆ ಮಹಾ ಕುಂಭಮೇಳ ನಡೆಯಲಿದೆ, ಈ ಮಹಾಮೇಳದಲ್ಲಿ ಜಗತ್ತಿನಾದ್ಯಂತ, ದೇಶದ ವಿವಿಧ ರಾಜ್ಯಗಳಿಂದ ಸಾದು ಸಂತರು, ನಾಗಾಸಾಧುಗಳು ಆಘೋರಿಗಳು ಸನ್ಯಾಸಿಗಳು, ಉದ್ಯಮಿಗಳು,ಶ್ರೀಮಂತ ಬಡವ , ಹಿರಿಯರು ಕಿರಿಯ ಎನ್ನದೇ ಕೋಟ್ಯಾಂತರ ಜನರು ಈ ಧಾರ್ಮಿಕ ಉತ್ಸವ ವಾದ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುನೀತರಾಗಲಿದ್ದಾರೆ.
12 ವರ್ಷಗಳಿಗೆ ಒಮ್ಮೆ ನಡೆಯಲಿರುವೀ ಮಹಾ ಕುಂಭಮೇಳವು ಕುಂಭಮೇಳದಲ್ಲಿ ರಾಜ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಇದನ್ನು ಅಮೃತ ಸ್ನಾನ ಎಂದೂ ಕರೆಯುತ್ತಾರೆ. ಶಾಹಿ ಸ್ನಾನವು ಮಹಾಕುಂಭದೊಂದಿಗೆ ಸಂಬಂಧಿಸಿದ ಒಂದು ವಿಶೇಷ ಧಾರ್ಮಿಕ ಸಂಪ್ರದಾಯವಾಗಿದೆ. ಗಂಗಾ, ಯುಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಭಕ್ತರ ಪಾಪಗಳು ತೊಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಪ್ರತಿ 12 ವರ್ಷಗಳಿಗೆ ಒಮ್ಮೆ ಕುಂಭಮೇಳವು ಗುರುವು ಕುಂಭ ರಾಶಿಯಲ್ಲಿ, ಸೂರ್ಯನು ಮೇಷ ರಾಶಿಯಲ್ಲಿ ಇದ್ದಾಗ ನಡೆಯುತ್ತದೆ.
ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ.ಈ ಬಾರಿ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವುದು ಮಹಾ ಕುಂಭಮೇಳ. ಇದು 144 ವರ್ಷಗಳಿಗೊಮ್ಮೆ ಬರುವ ಅತಿ ಅಪರೂಪದ ಘಟನೆಯಾಗಿದೆ.144 ವರ್ಷಗಳಿಗೆ ಒಮ್ಮೆ ಬರುವ ಗ್ರಹಗಳ ಸಂಯೋಜನೆಯಂದೇ ಈ ಮಹಾ ಕುಂಭಮೇಳ ನಡೆಯಲಿದೆ. ಅಂದರೆ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಆಕಾಶದಲ್ಲಿ ಪರಸ್ಪರ ಹತ್ತಿರದಲ್ಲಿ ಕಾಣಿಸಿಕೊಂಡಾಗ ಗ್ರಹಗಳ ಸಂಯೋಗ ಸಂಭವಿಸುತ್ತದೆ.

ಫೋಟೋ ಕೃಪೆ :google
ಹಿನ್ನೆಲೆ
ಎಂಟನೇ ಶತಮಾನದ ಹಿಂದೂ ತತ್ವಜ್ಞಾನಿ ಆದಿಗುರು ಶ್ರೀ ಶಂಕರಾಚಾರ್ಯರು, ಆಧ್ಯಾತ್ಮಿಕ ನಾಯಕರು ಮತ್ತು ತಪಸ್ವಿಗಳ ನಿಯಮಿತ ಸಭೆಗಳನ್ನು ಉತ್ತೇಜಿಸಿದರು ಮತ್ತು ಮಠ ವ್ಯವಸ್ಥೆ ಮತ್ತು 13 ಅಖರಗಳನ್ನು (ಯೋಧ-ಸಂತ ಪಂಥಗಳು) ಸ್ಥಾಪಿಸಿದರು ಇದುವೇ ಕುಂಭಮೇಳ ನಡೆಸಲು ಪ್ರೇರಣೆ ನೀಡಿತು ಎನ್ನಲಾಗಿದೆ. ಕುಂಭಮೇಳವನ್ನು 12 ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ, ಅಂದರೆ ಪ್ರತಿ ಮೂರು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ ಮತ್ತು ಪ್ರಯಾಗ್ರಾಜ್, ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್ ಎಂಬ ನಾಲ್ಕು ಸ್ಥಳಗಳಲ್ಲಿ ಸರದಿಯಂತೆ ಕುಂಭಮೇಳವನ್ನು ಆಚರಿಸಲಾಗುತ್ತದೆ. ಅರ್ಧ ಕುಂಭವನ್ನು ಹರಿದ್ವಾರ ಮತ್ತು ಪ್ರಯಾಗ್ರಾಜ್ನಲ್ಲಿ ಆರು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.
ಸಮುದ್ರ ಮಂಥನದ ಸಮಯದಲ್ಲಿ ಭಗವಾನ್ ವಿಷ್ಣು ಮೋಹಿನಿಯ ವೇಷದಲ್ಲಿ ಅಮೃತದ ಪಾತ್ರೆಯನ್ನು ಹೊತ್ತೊಯ್ದಾಗ, ದೇವತೆಗಳು ಮತ್ತು ದಾನವರ (ರಾಕ್ಷಸರ) ನಡುವಿನ ಹೋರಾಟದಲ್ಲಿ ಅಮೃತದ ನಾಲ್ಕು ಹನಿಯು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿತು ಹೀಗೆ ಈ ನಾಲ್ಕು ಸ್ಥಳಗಳು ಪವಿತ್ರ ತೀರ್ಥಸ್ಥಳ ಗಳಾಯಿತು.
ಸಮುದ್ರ ಮಂಥನವು ಹಿಂದು ಪುರಾಣದ ಅತಿ ಮುಖ್ಯ ಘಟನೆಯಾಗಿದೆ. ದೇವತೆಗಳು ಮತ್ತು ರಾಕ್ಷಸರ ನಡುವೆ ಅಮರತ್ವದ ಅಮೃತಕ್ಕಾಗಿ ಯುದ್ಧ ನಡೆಯಿತು ಎಂದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ದೇವಲೋಕದ ರಾಜ ಇಂದ್ರನ ಮಗನಾದ ಜಯಂತ, ಅಮೃತ ತುಂಬಿದ ಪಾತ್ರೆಯನ್ನು ತೆಗೆದುಕೊಂಡು ಹೋದಾಗ, ಅಮೃತವನ್ನು ರಕ್ಷಿಸಲು ಮತ್ತು ಜಯಂತನಿಗೆ ಬೆಂಬಲವಾಗಿ ನಿಲ್ಲಲು ನಾಲ್ಕು ದೇವರುಗಳಿಗೆ ವಿಭಿನ್ನ ಕರ್ತವ್ಯಗಳನ್ನು ವಹಿಸಲಾಯಿತು. ಸೂರ್ಯನಿಗೆ ಪಾತ್ರೆಯನ್ನು ಹಿಡಿದಿಡಲು ಕೇಳಲಾಯಿತು, ಚಂದ್ರನಿಗೆ ಅಮೃತವು ಹೊರಗೆ ಹೋಗದಂತೆ ನೋಡಿಕೊಳ್ಳುವ ಕೆಲಸವನ್ನು ವಹಿಸಲಾಯಿತು, ಗುರುವಿಗೆ (ಬೃಹಸ್ಪತಿ) ಜಯಂತನನ್ನು ಅಸುರರಿಂದ ರಕ್ಷಿಸುವ ಜವಾಬ್ದಾರಿಯನ್ನು ವಹಿಸಲಾಯಿತು ಮತ್ತು ಅಂತಿಮವಾಗಿ ಈ ಸಂಘರ್ಷದಲ್ಲಿ ಅಂದರೆ ಯುದ್ಧದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಶನಿಗೆ ಹೇಳಲಾಯಿತು.
ದೇವತೆಗಳು ಮೊದಲು ಅಮೃತದ ಮಡಕೆಯನ್ನು ಹರಿದ್ವಾರಕ್ಕೆ ತಂದರು ಎಂದು ಪುರಾಣ ಹೇಳುತ್ತದೆ. ಹರಿದ್ವಾರದ ಬಳಿಕ ಪ್ರಯಾಗರಾಜ್ಗೆ ತರಲಾಯಿತು. ಆ ಸಮಯದಲ್ಲಿ ದೇವತೆಗಳಿಗೆ ಪ್ರಯಾಗದಲ್ಲಿ ಪರಿಸ್ಥಿತಿ ಎಷ್ಟು ಪ್ರತಿಕೂಲವಾಗಿತ್ತೆಂದರೆ, ಅಸುರರು ಅಮೃತ ಕಲಶವನ್ನು ವಶಪಡಿಸಿಕೊಳ್ಳುವುದು ಖಚಿತವಾಗಿತ್ತು. ಹೀಗಾಗಿ, ಸೂರ್ಯ, ಚಂದ್ರ, ಶನಿ ಮತ್ತು ಗುರುಗಳು ಮಡಕೆಯನ್ನು ರಕ್ಷಿಸಲು ಒಟ್ಟಿಗೆ ಧಾವಿಸಿದರು. ಆ ಕ್ಷಣದಲ್ಲಿ ನಕ್ಷತ್ರದ ಅಪರೂಪದ ಆಕಾಶ ಸ್ಥಾನೀಕರಣವೂ ಸಂಭವಿಸಿತು. ಅದೇ ಸಮಯದಲ್ಲಿ ಸನಕ, ಸನಂದನ, ಸನಾತನ ಮತ್ತು ಸನತ್ಕಮಾರ ಸೇರಿದಂತೆ ನಾಲ್ವರು ಋಷಿಗಳು ಪ್ರಯಾಗದಲ್ಲಿ ಬಿಡಾರ ಹೂಡಲು ನಿರ್ಧರಿಸಿದರು. ಇಂದು ನಾವು ಕುಂಭ ಎಂದು ಕರೆಯುವ ಇದೇ ಪರಿಕಲ್ಪನೆಯ ಆರಂಭವು ಪ್ರಾರಂಭವಾಯಿತು.ಮುಂದೆ ರಾಜರುಗಳು ಪೋಷಕರಾಗಿ ಕುಂಭಮೇಳ ನಡೆಯತೊಡಗಿತು.
ಗುಪ್ತರ ಆಡಳಿತ ದಲ್ಲಿ ರಾಜರು ಮತ್ತು ಆಡಳಿತಗಾರರು ಈ ಮೇಳವನ್ನು ಬೆಂಬಲಿಸಿ, ಪವಿತ್ರ ನದಿಗಳ ಉದ್ದಕ್ಕೂ ದೇವಾಲಯಗಳು ಮತ್ತು ಸ್ನಾನ ಘಟ್ಟಗಳನ್ನು ನಿರ್ಮಿಸಿದಾಗ ಕುಂಭಮೇಳವು ಹೆಚ್ಚಿನ ಜನಸಮೂಹವನ್ನು ಭಾಗವಹಿಸುವಂತೆ ಮಾಡಿತು. ಮುಂದೆ 12 ನೇ ಶತಮಾನದಿಂದ ಕುಂಭಮೇಳವು ರಾಜಮನೆತನದ ಪ್ರೋತ್ಸಾಹದೊಂದಿಗೆ ಒಂದು ಕಾರ್ಯಕ್ರಮವಾಯಿತು. ಭಾರತದ ವಿವಿಧ ಭಾಗಗಳ ರಾಜರು ಮತ್ತು ಆಡಳಿತಗಾರರು ಉತ್ಸವದಲ್ಲಿ ಭಾಗವಹಿಸಿ, ಸಂಪತ್ತನ್ನು ಅರ್ಪಿಸಿದರು ಮತ್ತು ಆಚರಣೆಗಳನ್ನು ಮಾಡಿದರು,
ಮೊಘಲ್ ಚಕ್ರವರ್ತಿ ಅಕ್ಬರ್ ಆಳ್ವಿಕೆಯಲ್ಲಿ, ಕುಂಭಮೇಳಕ್ಕೆ ಗೌರವವನ್ನು ತೋರಿಸಿದರು, ಉತ್ಸವಕ್ಕಾಗಿ ಭೂಮಿ ಮತ್ತು ಸಂಪನ್ಮೂಲಗಳನ್ನು ನೀಡಿದನು.

ಫೋಟೋ ಕೃಪೆ :google
ಸ್ವಾತಂತ್ರ್ಯಾನಂತರದ ಕುಂಭಮೇಳದ ಆಚರಣೆ
ಮೊದಲ ಕುಂಭಮೇಳವನ್ನು ಭಾರತೀಯ ಅಧಿಕಾರಿಗಳು ಜನವರಿ 1954 ರಲ್ಲಿ ಆಯೋಜಿಸಿದ್ದರು. 1966 ರಲ್ಲಿ, ಐದನೇ ಪ್ರಮುಖ ಸ್ನಾನ ದಿನವಾದ ಮಾಘ ಪೂರ್ಣಿಮೆಯಂದು 7 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದರು ಎಂದು ದಿ ಹಿಂದು ಪತ್ರಿಕೆ ವರದಿ ಮಾಡಿದೆ.
1975 ರಿಂದ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಲಾಗಿದ್ದರೂ, 1977 ರಲ್ಲಿ 12 ಕುಂಭಮೇಳಗಳು ಪೂರ್ಣಗೊಂಡವು ಮತ್ತು ಎರಡು ಹೊಳೆಗಳಲ್ಲಿ ಗಂಗಾ ಹರಿವು ಎರಡು ‘ಸಂಗಮ’ಗಳನ್ನು (ಸಂಗಮ) ಸೃಷ್ಟಿಸಿತು. 2013 ರಲ್ಲಿ, ಅತಿದೊಡ್ಡ ಸ್ನಾನದ ದಿನವಾದ ಮೌನಿ ಅಮಾವಾಸ್ಯೆಯಂದು 3 ಕೋಟಿ ಯಾತ್ರಿಕರು ಸಂಗಮ ತಲುಪಿ ದಾಖಲೆ ಸೃಷ್ಟಿಸಿದರು.
2019 ರಲ್ಲಿ, ಪ್ರಯಾಗ್ರಾಜ್ನಲ್ಲಿ ನಡೆದ ಅರ್ಧ ಕುಂಭದಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಯಿತು, ಅದರಲ್ಲಿ ಶಾಹಿ ಸ್ನಾನದಲ್ಲಿ ಕಿನ್ನಾರ್ ಅಖಾಡವನ್ನು ಸೇರಿಸಲಾಯಿತು.
ಇದಲ್ಲದೆ, ಕುಂಭ ಆವರಣವನ್ನು ಸ್ವಚ್ಛವಾಗಿಟ್ಟ 10,000 ನೈರ್ಮಲ್ಯ ಕಾರ್ಮಿಕರನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿದರು. ಇದೀಗ 144 ವರ್ಷಗಳ ನಂತರ ಎಲ್ಲ ನಾಲ್ಕು ಗ್ರಹಗಳ ಸ್ಥಾನೀಕರಣವು ಒಂದೇ ಸಾಲಿನಲ್ಲಿ ಬರುತ್ತದೆ. ಜನವರಿ 29ರ ಅಮಾವಾಸ್ಯೆಗೂ ಮೂರು ಗಂಟೆಗಳ ಮೊದಲು, ಮುಖ್ಯವಾಗಿ ಪುಷ್ಯ ನಕ್ಷತ್ರವು ನಾಲ್ಕು ಗ್ರಹಗಳೊಂದಿಗೆ ಒಂದೇ ಸಾಲಿನಲ್ಲಿ ಬರುತ್ತದೆ. ಗುರುವು ಸೂರ್ಯನ ಸುತ್ತ ಒಂದು ಸುತ್ತು ಬರಲು ಸುಮಾರು 12 ವರ್ಷಗಳನ್ನು ತೆಗೆದುಕೊಳ್ಳುವುದರಿಂದ, ಕುಂಭಮೇಳವನ್ನು 12 ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ಆಚರಿಸಲಾಗುತ್ತದೆ.
ಹೀಗಾಗಿ, ಈ ಹಿಂದೆ ನಡೆದ ಎಲ್ಲ ಮಹಾ ಕುಂಭಗಳಲ್ಲಿ 2025ರಲ್ಲಿ ನಡೆಯುವ ಮಹಾ ಕುಂಭಮೇಳವು ಅತ್ಯಂತ ಮಂಗಳಕರವಾದದ್ದು.

ಫೋಟೋ ಕೃಪೆ :google
ಕುಂಭಮೇಳದಲ್ಲಿ ನಾಲ್ಕು ವಿಧ:
ಕುಂಭಮೇಳ (4 ವರ್ಷಗಳಿಗೊಮ್ಮೆ)
ಅರ್ಧ ಕುಂಭಮೇಳ (6 ವರ್ಷಗಳಿಗೊಮ್ಮೆ)
ಪೂರ್ಣ ಕುಂಭಮೇಳ (12 ವರ್ಷಗಳಿಗೊಮ್ಮೆ)
ಮಹಾ ಕುಂಭಮೇಳ (144 ವರ್ಷಗಳಿಗೊಮ್ಮೆ)
ಭಾರತದ ನಾಲ್ಕು ಸ್ಥಳಗಳಲ್ಲಿನ ನದಿಗಳು ಮತ್ತು ಕುಂಭಮೇಳ ಪವಿತ್ರ ನದಿಗಳು ಸಂಗಮವಾಗುವ ಪ್ರದೇಶದಲ್ಲಿ ಕುಂಭಮೇಳ ನಡೆಯುತ್ತವೆ. ಹರಿದ್ವಾರ, ಉತ್ತರಾಖಂಡ, ಗಂಗಾನದಿಯ ದಡದಲ್ಲಿ ಉಜ್ಜಯಿನಿ, ಮಧ್ಯಪ್ರದೇಶ, ಶಿಪ್ರಾದ ದಡದಲ್ಲಿ ಮಹಾರಾಷ್ಟ್ರ, ನಾಸಿಕ್, ಗೋದಾವರಿ ದಡದಲ್ಲಿ ಉತ್ತರಪ್ರದೇಶ, ಪ್ರಯಾಗ್ರಾಜ್ನಲ್ಲಿ, ಗಂಗಾ, ಯಮುನಾ ಮತ್ತು ಅದೃಶ್ಯ ಸರಸ್ವತಿಯ ಸಂಗಮದಲ್ಲಿ ಕುಂಭಮೇಳಗಳು ನಡೆಯುವುದು ವಾಡಿಕೆ ಕುಂಭಮೇಳಗಳ ನಡುವಿನ ವ್ಯತ್ಯಾಸ…
ಕುಂಭಮೇಳ
ಇದು ಪ್ರತಿ 4 ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಇದು ನಾಲ್ಕು ಸ್ಥಳಗಳಾದ ಹರಿದ್ವಾರ, ಪ್ರಯಾಗರಾಜ್, ಉಜ್ಜಯಿನಿ ಮತ್ತು ನಾಸಿಕ್ ಗಳ ಪೈಕಿ ಒಂದು ನಗರದಲ್ಲಿ ನಡೆಯುತ್ತದೆ. ಮೇಳದ ಸಮಯದಲ್ಲಿ, ಲಕ್ಷಾಂತರ ಭಕ್ತರು ಮತ್ತು ಸಂತರು ಪಾಪಗಳಿಂದ ಮುಕ್ತಿ ಪಡೆಯಲು ಪವಿತ್ರ ನದಿಗಳ ಸಂಗಮದಲ್ಲಿ ಸ್ನಾನ ಮಾಡುತ್ತಾರೆ.
ಅರ್ಧ ಕುಂಭಮೇಳ
ಅರ್ಧ ಕುಂಭಮೇಳವು ಪ್ರತಿ 6 ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ಪ್ರಯಾಗ್ರಾಜ್ ಮತ್ತು ಹರಿದ್ವಾರದಲ್ಲಿ ಮಾತ್ರ ನಡೆಯುತ್ತದೆ.
ಪೂರ್ಣ ಕುಂಭ
12 ವರ್ಷಗಳಿಗೊಮ್ಮೆ ಪೂರ್ಣ ಕುಂಭಮೇಳ ನಡೆಯುತ್ತದೆ. ಇದು ಪ್ರಯಾಗ್ರಾಜ್ನ ಸಂಗಮದ ದಡದಲ್ಲಿ ನಡೆಯುತ್ತದೆ. ಪ್ರಯಾಗ್ರಾಜ್ನಲ್ಲಿ ನಡೆಯುವ ಕುಂಭವು ವಿಶೇಷ ಮಹತ್ವವನ್ನು ಹೊಂದಿದೆ, ಏಕೆಂದರೆ ಗ್ರಹಗಳ ಶುಭ ಜೋಡಣೆಯ ಆಧಾರದ ಮೇಲೆ ಕುಂಭಮೇಳದ ದಿನಾಂಕವನ್ನು ನಿರ್ಧರಿಸಲಾಗುತ್ತದೆ, ಈ ಅವಧಿಯಲ್ಲಿ ಲಕ್ಷಾಂತರ ಹಿಂದೂಗಳು ಶಾಹಿ ಸ್ನಾನ (ಪವಿತ್ರ ಸ್ನಾನ) ಮಾಡಲಿದ್ದಾರೆ.
ಮಹಾ ಕುಂಭ
12 ಪೂರ್ಣ ಕುಂಭ ಮೇಳಗಳ ನಂತರ 144 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯುತ್ತದೆ. ಈ ಅಪರೂಪದ ಘಟನೆಗೆ ಹೆಚ್ಚು ಮಹತ್ವವಿದ್ದು ಜನರು ಮಹಾ ಕುಂಭದ ಸಮಯದಲ್ಲಿ ಸ್ನಾನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಕುಂಭಮೇಳದ ಸಮಯದಲ್ಲಿ, ಆನೆಗಳು, ಕುದುರೆಗಳು ಮತ್ತು ರಥಗಳನ್ನು ಒಳಗೊಂಡ ‘ಪೇಶ್ವಾಯಿ’ ಎಂದು ಕರೆಯಲ್ಪಡುವ ಅಖಾಡಗಳ ಸಾಂಪ್ರದಾಯಿಕ ಮೆರವಣಿಗೆ ನಡೆಯುತ್ತದೆ.
‘ಶಾಹಿ ಸ್ನಾನ’ ಸಮಯದಲ್ಲಿ ನಾಗಾ ಸಾಧುಗಳ ಹೊಳೆಯುವ ಕತ್ತಿಗಳು ಮತ್ತು ಆಚರಣೆಗಳು ಮತ್ತು ಕುಂಭಮೇಳಕ್ಕೆ ಹಾಜರಾಗಲು ಲಕ್ಷಾಂತರ ಯಾತ್ರಿಕರನ್ನು ಆಕರ್ಷಿಸುವ ಅನೇಕ ಇತರ ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಹಲವಾರು ಸಮಾರಂಭಗಳು ನಡೆಯುತ್ತವೆ.

ಫೋಟೋ ಕೃಪೆ :google
ಸಂಗಮದಲ್ಲಿ ಶಾಹಿಸ್ನಾನ
ಜನವರಿ 13-ಪೌಷ ಪೂರ್ಣಿಮಾ ಸ್ನಾನ (ಉದ್ಘಾಟನಾ ದಿನ)
ಜನವರಿ 15 – ಮಕರ ಸಂಕ್ರಾಂತಿ ಸ್ನಾನ
ಜನವರಿ 29 – ಮೌನಿ ಅಮಾವಾಸ್ಯೆ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
ಫೆಬ್ರವರಿ 3 – ವಸಂತ ಪಂಚಮಿ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
ಫೆಬ್ರವರಿ 12 – ಮಾಘಿ ಪೂರ್ಣಿಮಾ ಸ್ನಾನ
ಫೆಬ್ರವರಿ 26 – ಮಹಾ ಶಿವರಾತ್ರಿ ಸ್ನಾನ (ಸಮಾಪ್ತಿಯ ದಿನ)
ಕಳೆದಬಾರಿ 2021 ರಲ್ಲಿ ಹರಿದ್ವಾರದಲ್ಲಿ ನಡೆದಿದ್ದ ಕೊನೆಯ ಕುಂಭಮೇಳವನ್ನು 2021 ರಲ್ಲಿ ಧಾರ್ಮಿಕ ನಗರಿ ಹರಿದ್ವಾರದಲ್ಲಿ ಆಯೋಜಿಸಲಾಗಿತ್ತು. 4 ತಿಂಗಳ ಕಾಲ ಕುಂಭಮೇಳ ನಡೆಸಲು ಯೋಜಿಸಲಾಗಿತ್ತು. ಆದರೆ ಕೊರೊನಾ ಸಮಸ್ಯೆ ಇದ್ದಿದ್ದರಿಂದ ಕುಂಭಮೇಳವನ್ನು ಕೇವಲ 17 ದಿನಗಳ ಕಾಲ ಮಾತ್ರ ಆಯೋಜಿಸಲಾಗಿತ್ತು.
ಮುಂದಿನ ಕುಂಭಮೇಳವು ಹರಿದ್ವಾರದಲ್ಲಿ 2033ರಲ್ಲಿ ನಡೆಯಲಿದೆ. 2033 ಮಾರ್ಚ್ ತಿಂಗಳ 17,18ರ ನಡುವೆ ಗುರುವು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಹರಿದ್ವಾರದಲ್ಲಿ ನಡೆಯಲಿರುವ ಮುಂದಿನ ಕುಂಭಮೇಳದಲ್ಲಿ ಮೊದಲ ರಾಜಸ್ನಾನವು 28 ಫೆಬ್ರವರಿ 2033 ರಂದು ನಡೆಯುತ್ತದೆ. 30 ಮಾರ್ಚ್ 2033 ರಂದು ಚೈತ್ರ ಅಮವಾಸ್ಯೆಯಂದು ಎರಡನೇ ಶಾಹಿ ಸ್ನಾನ, 14 ಏಪ್ರಿಲ್ 2033 ರಂದು ಸಂಕ್ರಾಂತಿ ಮತ್ತು ಪೂರ್ಣಿಮಾ ಸ್ನಾನ. ಅಕ್ಷಯ ತೃತೀಯದ ರಾಜ ಸ್ನಾನವು 1 ಮೇ 2033 ರಂದು ನಡೆಯಲಿದೆ.

ಫೋಟೋ ಕೃಪೆ :google
ಪ್ರಪಂಚದಾದ್ಯಂತದ 40 ಕೋಟಿ ಭಕ್ತರನ್ನು ಸ್ವಾಗತಿಸಲು ನಗರವು ಸಜ್ಜಾಗಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ದೊಡ್ಡ ಮಟ್ಟದಲ್ಲಿ ಸಿದ್ಧತೆ ಆರಂಭಿಸಿದೆ. ಸಾವಿರಾರು ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಅಲ್ಲದೇ ಇದಕ್ಕಾಗಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ 1.5 ಲಕ್ಷಕ್ಕೂ ಹೆಚ್ಚು ಸ್ವಚ್ಛ ಮತ್ತು ಪರಿಸರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಲ್ಲದೆ, ಗಂಗಾ ಮತ್ತು ಯಮುನಾ ನದಿಗೆ ಯಾವುದೇ ರೀತಿಯ ಕೊಳಕು ನೀರು ಸೇರದಂತೆ ವ್ಯವಸ್ಥೆ ಮಾಡಲಾಗಿದೆ. ಈ ಕುಂಭ ಮೇಳದಿಂದ ಗಳಿಸುವ ಆದಾಯ 2 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಬೆಳವಣಿಗೆಯನ್ನು ತರುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.ರಾಜ್ಯಕ್ಕೆ ಭಕ್ತರು ಬಂದಾಗ ಸಾರಿಗೆ, ವಸತಿ, ಊಟ ಸೇರಿದಂತೆ ಇನ್ನಿತರ ಕೆಲಸಗಳಿಗೆ ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಇದು ಸ್ಥಳೀಯ ವ್ಯಾಪಾರ ಮತ್ತು ಉದ್ಯೋಗವನ್ನು ಉತ್ತೇಜಿಸುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಉತ್ತರ ಪ್ರದೇಶ ಪೊಲೀಸರು, ಎನ್‌ಎಸ್‌ಜಿ ಕಮಾಂಡೋಗಳು ಕಣ್ಗಾವಲು ಇಟ್ಟಿದ್ದಾರೆ.ಜನರ ದಟ್ಟಣೆ, ತುರ್ತು ಪರಿಸ್ಥಿತಿ, ಕಮಾಂಡ್ ಮಾಹಿತಿ ಮುಂತಾದ ಮಾಹಿತಿಗಳನ್ನು ಶೇರ್ ಮಾಡಲು ರಿಯಲ್ ಟೈಂ ಮಾಹಿತಿ ನೀಡುವ ಅಪ್ಲಿಕೇಶನ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ.
ಮಹಾ ಕುಂಭಗ್ರಾಮ: ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸ್ಥಳಾಂತರ ಮಾಡಬಹುದಾದ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಮಹಾ ಕುಂಭನಗರ ನಿರ್ಮಾಣ ಮಾಡಲಾಗಿದೆ. ಸಾವಿರಾರು ಟೆಂಟ್‌ಗಳು, ವಸತಿ ವ್ಯವಸ್ಥೆ ಈ ನಗರದಲ್ಲಿ ಲಭ್ಯವಿದೆ. ಮಹಾ ಕುಂಭಗ್ರಾಮ : ಐಷಾರಾಮಿ ಟೆಂಟ್, ವಿಲ್ಲಾಗಳನ್ನು ಒಳಗೊಂಡ ಆಧುನಿಕ ವಸತಿ ಸೌಕರ್ಯಗಳು ಇರುವಂತೆ ಗ್ರಾಮವನ್ನು ನಿರ್ಮಾಣ ಮಾಡಲಾಗಿದೆ.
ವಿದೇಶಿ ಯಾತ್ರಿಕರಿಗೆ ವಿಶೇಷ ವ್ಯವಸ್ಥೆ :
ಮಹಾ ಕುಂಭಮೇಳ-2025ಕ್ಕೆ ಆಗಮಿಸುವ ವಿದೇಶಿ ಯಾತ್ರಿಕರನ್ನು ಗಮನದಲ್ಲಿಟ್ಟುಕೊಂಡು ವಿವಿಧ ಭಾಷೆಯಲ್ಲಿ ಮಾಹಿತಿ ನೀಡುವ ಸೂಚನಾ ಫಲಕಗಳನ್ನು ನಿರ್ಮಾಣ ಮಾಡಲಾಗಿದೆ. ಇವು ಭಾರತದ ಭವ್ಯ ಸಂಸ್ಕೃತಿ, ವೈವಿಧ್ಯತೆಯ ಕುರಿತು ಪರಿಚಯವನ್ನು ಮಾಡಿಸುತ್ತವೆ. ಮಹಾಕುಂಭವು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ, ಇದು ಭಾರತ ಸೇರಿದಂತೆ ಇಡೀ ಜಗತ್ತಿಗೆ ತನ್ನ ಪ್ರಾಚೀನ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡಲು ಮತ್ತು ಅದರ ಸಾಂಸ್ಕೃತಿಕ ಬೇರುಗಳನ್ನು ಅರ್ಥಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.
- ಡಾ.ಗುರುಪ್ರಸಾದ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು.
