ನುಡಿಜಾಣನಿಗೆ ಸಂದ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ

ಕೆ.ರಾಜಕುಮಾರ್ ಅವರು ಕನ್ನಡಪರ ಹೋರಾಟವೆಂದರೆ ಕೇವಲ ಘೋಷಣೆ ಕೂಗಿ ನಿಲ್ಲಿಸುವುದು ಎಂದು ಭಾವಿಸಿದವರಲ್ಲ. ಕನ್ನಡ ನೀತಿ ನಿರೂಪಣೆ ಕುರಿತಾದ ಕಡತಗಳ ಬೆನ್ನುಹತ್ತಿದವರು. ವಿಧಾನಸೌಧದ ಮೆಟ್ಟಿಲುಗಳನ್ನು ಏರಿ ಇಳಿದವರು. ಅವರ ಸಾಧನೆಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸಂದಿದ್ದು, ಅವರ ಕನ್ನಡ ಸೇವೆಯ ಕುರಿತು ಲೇಖಕಿ ಸೌಮ್ಯ ಸನತ್ ಅವರು ಬರೆದ ಈ ಲೇಖನವನ್ನು ತಪ್ಪದೆ ಓದಿ…

ಕೆ. ರಾಜಕುಮಾರ್ ಅವರು ಕನ್ನಡಕ್ಕಾಗಿ 40 ವರ್ಷದಿಂದ ತದೇಕಚಿತ್ತರಾಗಿ ಧೇನಿಸುತ್ತ ಅದರ ಉತ್ಕರ್ಷಕ್ಕಾಗಿ ತುಡಿಯುತ್ತಿರುವವರು. ರಾಜಕುಮಾರ್ ಎಂದರೆ ಕನ್ನಡದ ಒಂದು ಸಮಗ್ರ ಪ್ಯಾಕೇಜು! ಅವರು ಲೇಖಕ, ಚಿಂತಕ, ಬೋಧಕ, ಪ್ರಶಿಕ್ಷಕ, ಅಪ್ರತಿಮ ಹೋರಾಟಗಾರ. ಹೋರಾಟವೆಂದರೆ ಸಂಘರ್ಷವೊಂದನ್ನೇ ಅಸ್ತ್ರವನ್ನಾಗಿಸಿಕೊಂಡು ಝಳಪಿಸಿದವರಲ್ಲ. ಅಗತ್ಯವಿದ್ದೆಡೆ ಅನುಸಂಧಾನದ ಮಾರ್ಗಗಳನ್ನೂ ಮುಕ್ತವಾಗಿ ತೆರೆದಿರಿಸಿದವರು. ಕನ್ನಡವನ್ನು ಬಲಿಷ್ಠವಾಗಿ ಕಟ್ಟಲು ಎಲ್ಲ ಬಗೆಯ ಕ್ರಮಗಳನ್ನೂ ಅನುಸರಿಸಿದ ಕಾರ್ಯಕ್ಷಮತೆ ಅವರದು.

ರಾಜಕುಮಾರ್ ಬಹುಭಾಷಾ ಕೋವಿದ. ಬಹುಶ್ರುತ ವಿದ್ವಾಂಸ. ಬಹುಮುಖ ಪ್ರತಿಭೆ. ಸಾಹಿತ್ಯ, ಸಂಗೀತದ ಭಿನ್ನ ಪ್ರಕಾರಗಳು, ಚಲನಚಿತ್ರ, ರಂಗಭೂಮಿ, ಪತ್ರಿಕೋದ್ಯಮ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹೀಗೆ ಹಲವು ವಿಷಯಗಳಲ್ಲಿ ಏಕಕಾಲದಲ್ಲಿ ಸಮ ಸಮನಾದ ಆಸಕ್ತಿ. ಅವುಗಳ ಬಗೆಗೆ ಅಧಿಕೃತವಾಗಿ ಮಾತು-ಬರಹ ಎರಡನ್ನೂ ಸಾಧಿಸಿದವರು. ಹಾಗಾಗಿ ಕಂಡವರ ಕಣ್ಣಿಗೆ ಇವರೊಂದು ಅಚ್ಚರಿ, ಅದ್ಭುತ, ವಿಸ್ಮಯ.

ರಾಜಕುಮಾರ್ ಅವರು ಕನ್ನಡ ಪರ ಹೋರಾಟವೆಂದರೆ ಕೇವಲ ಘೋಷಣೆ ಕೂಗಿ ನಿಲ್ಲಿಸುವುದು ಎಂದು ಭಾವಿಸಿದವರಲ್ಲ. ಕನ್ನಡ ನೀತಿ ನಿರೂಪಣೆ ಕುರಿತಾದ ಕಡತಗಳ ಬೆನ್ನುಹತ್ತಿದವರು. ವಿಧಾನಸೌಧದ ಮೆಟ್ಟಿಲುಗಳನ್ನು ಏರಿ ಇಳಿದವರು. ಕಚೇರಿಗಳನ್ನು ಎಡತಾಕಿದವರು. ಆ ಕಡತಗಳು ಮುಂದಕ್ಕೆ ಚಲಿಸುವಂತೆ ಮಾಡಿದವರು. ಕನ್ನಡ ಚಳವಳಿಯಲ್ಲಿ ಅನುಚರಣಕ್ರಿಯೆಯನ್ನು (follow-up action) ಪರಿಚಯಿಸಿ ಜಾರಿಗೊಳಿಸಿದ ಕೆಲವೇ ಪ್ರಮುಖರಲ್ಲಿ ಇವರೂ ಒಬ್ಬರು. ಕನ್ನಡಕ್ಕಾಗಿ ಬುದ್ಧಿ-ಬೆವರು ಹೀಗೆ ಎರಡನ್ನೂ ಬಸಿದವರು. ಗೋಕಾಕ್‌ಪೂರ್ವ ಚಳವಳಿ, ತದನಂತರದ ಗೋಕಾಕ್ ಚಳವಳಿ, ಕನ್ನಡಿಗರಿಗೆ ಉದ್ಯೋಗ ಚಳವಳಿ, ಸ್ವತಂತ್ರ ದೂರದರ್ಶನಕ್ಕಾಗಿ ನಡೆದ ಚಳವಳಿ, ಚರ್ಚುಗಳಲ್ಲಿ ಕನ್ನಡ, ಸಂಗೀತ ಕಛೇರಿಗಳಲ್ಲಿ ಕನ್ನಡ, ಕಚೇರಿಗಳ ಆಡಳಿತದಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ನಡೆದ ಚಳವಳಿ, ಕಾವೇರಿ ಚಳವಳಿ, ರೈಲ್ವೆ ವಲಯ ಸ್ಥಾಪನೆ ಚಳವಳಿ, ಸಮಾನ ಶಿಕ್ಷಣ ನೀತಿ ಜಾರಿ ಚಳವಳಿ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಚಳವಳಿ ಹೀಗೆ ಸಾಲು, ಸಾಲು ಆಂದೋಲನಗಳ ಮುಂಚೂಣಿಯಲ್ಲಿ ಭಾಗಿ. ಅವರು ಕನ್ನಡಕ್ಕಾಗಿ ನ್ಯಾಯಾಲಯಗಳನ್ನೂ ಎಡತಾಕಿದವರು. ಕನ್ನಡಪರ ಚಟುವಟಿಕೆಗಳಿಗಾಗಿ ಯಾರ ಬಳಿಯೂ ಕೈಚಾಚಿದವರಲ್ಲ. ಹಾದಿ-ಬೀದಿ, ಊರು-ಕೇರಿಯಲ್ಲಿ ಏಕಾಂಗಿಯಾಗಿ ಪುಸ್ತಕ ಮಾರಿ ಬಂದ ಹಣದಿಂದ ಸಾಹಿತಿಗಳ ಕಲಾವಿದರ ಬಳಗದ ಚಟುವಟಿಕೆಗಳಿಗೆ ಆಸರೆಯಾದವರು; ಸಂಚಾಲನೆ ನೀಡಿದವರು. ಉಳಿದ ಹಣದಲ್ಲಿ ಬೆಂಗಳೂರಿನಲ್ಲಿ ಕುವೆಂಪು ಮತ್ತು ಬಿಎಂಶ್ರೀ ಪ್ರತಿಮೆಗಳ ಸ್ಥಾಪನೆಗೆ ಕಾರಣರಾದವರು. ಕಾರ್ಯಕರ್ತರ ತಂಡ ಕಟ್ಟಿ, ಸ್ವಂತ ಉಮೇದಿನಿಂದ 1993-94ರಲ್ಲಿ ಸಾಹಿತ್ಯ ಪರಿಷತ್ತಿನ ಸಂಶೋಧನ ವಿಭಾಗದಲ್ಲಿ ಆಗ ಇದ್ದ 10000 ಮೌಲಿಕ ಪರಾಮರ್ಶನ ಗ್ರಂಥಗಳ ಮೈದಡವಿ ಒಂದೊಂದನ್ನೂ ಒರೆಸಿದವರು. ಅಲ್ಲಿನ ಬೂಜು ತೆಗೆದು, ಕಸ ಗುಡಿಸಿ, ನೆಲ ಸಾರಿಸಿದವರು! ತಮ್ಮ ಈ ಕೆಲಸಕ್ಕೆ ಪ್ರಚಾರ ಬಯಸಿದವರಲ್ಲ. ಯಾವುದೇ ಸ್ಥಾನಮಾನಕ್ಕಾಗಿ ಹಾತೊರೆದವರಲ್ಲ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕನ್ನಡ ಬಲ್ಲ ಸರ್ಕಾರಿ ಸಿಬ್ಬಂದಿ-ಅಧಿಕಾರಿ ವರ್ಗಕ್ಕೆ 120 ಆಡಳಿತ ಕನ್ನಡ ಕಾರ್ಯಶಿಬಿರಗಳ ನಿರ್ದೇಶಕರಾಗಿ ಕಾರ್ಯನಿರ್ವಹಣೆ. ನ್ಯಾಯಾಲಯದ ಸಿಬ್ಬಂದಿ, ನ್ಯಾಯಾಧೀಶರು ಹಾಗೂ ವಕೀಲರಿಗಾಗಿ ಕಾನೂನು ಕನ್ನಡ ಕಾರ್ಯಶಿಬಿರಗಳ ನಿರ್ದೇಶಕರಾಗಿ ಅವರು ತೋರಿರುವ ಕಾರ್ಯಕ್ಷಮತೆ ಅನುಪಮ. ಕಾಲು ಶತಮಾನದ ಕಾಲ ಕನ್ನಡ ಬಾರದವರಿಗೆ ಕನ್ನಡ ಬೋಧನೆ; ಬ್ಯಾಂಕು, ಸರ್ಕಾರ, ಸಂಘ-ಸಂಸ್ಥೆಗಳ ವತಿಯಿಂದ. ಕನ್ನಡಕ್ಕಾಗಿ ಹಲವು ಬಗೆಯ ಕಮ್ಮಟಗಳನ್ನು ಪರಿಕಲ್ಪಿಸಿ ನಡೆಸಿಕೊಟ್ಟವರು.

ಕನ್ನಡ ಶಿಕ್ಷಕರಿಗೆ ಕನ್ನಡ ಬೋಧನಾ ಕಮ್ಮಟ, ಕನ್ನಡ ಸ್ಪಷ್ಟ ಬರೆವಣಿಗೆ ಕಮ್ಮಟ, ಪುಸ್ತಕ ಪ್ರಕಾಶನ ಕಮ್ಮಟ, ಕನ್ನಡ ಜಾಗೃತಿ ಕಮ್ಮಟ, ಕನ್ನಡ ಷೇರು ಮಾಹಿತಿ ಕಮ್ಮಟ. ‘ಕನ್ನಡದ ಅರಿವು ಮತ್ತು ಅಭಿಮಾನ’ ಎಂಬ ವಿಷಯದ ಕುರಿತು ಸುದೀರ್ಘ ಉಪನ್ಯಾಸವನ್ನು 2004ರಿಂದ (ಒಟ್ಟು : 104) ರಾಜ್ಯದೆಲ್ಲೆಡೆ ನೀಡಿದ್ದಾರೆ. ಈ ಉಪನ್ಯಾಸ ಕೇಳುಗರ ಪಾಲಿಗೆ ಒಂದು ಅನಿರ್ವಚನೀಯ ಅನುಭವ.

ನಟಸಾರ್ವಭೌಮ ರಾಜಕುಮಾರ್ ಅವರೊಂದಿಗೆ ಎರಡು ದಿನಗಳ ಕಾಲವಿದ್ದು ಅವರಿಗೆ ಗೋಕಾಕ್ ವರದಿಯನ್ನು ಸರಳವಾಗಿ ಪರಿಚಯಿಸಿದ್ದು ಒಂದು ಅಗ್ಗಳಿಕೆ. ಅಂತೆಯೇ ಸ್ವತಃ ಗೋಕಾಕರಿಗೆ 1989ರಲ್ಲಿ ಗೋಕಾಕ್ ವರದಿಯನ್ನು ಎರಡು ದಿನಗಳ ಕಾಲ ಮತ್ತೆ ನೆನಪಿಗೆ ತಂದಿದ್ದು (ಪುನರ್ಮನನ) ಇದೇ ರಾಜಕುಮಾರ್!

ಹೈಕೋರ್ಟಿನಲ್ಲಿ ಗೋಕಾಕ್ ವರದಿ ಕುರಿತಾದ ಮೊಕದ್ದಮೆಯ ಅಂತಿಮ ವಾದ ಮಂಡಿಸುವ ಸಂದರ್ಭದಲ್ಲಿ ಆಗ ಮಹಾವಕೀಲ (ಅಡ್ವೊಕೇಟ್ ಜನರಲ್) ರಾಗಿದ್ದ ಸಂತೋಷ್ ಹೆಗಡೆ ಅವರಿಗೆ ಪೂರ್ಣಪೀಠ ಕೇಳುತ್ತಿದ್ದ ಪ್ರಶ್ನೆಗಳಿಗೆ ಅಲ್ಲಿಯೇ ಉತ್ತರಗಳನ್ನು ಬರೆದುಕೊಟ್ಟ ಕುಶಾಗ್ರ ಮತಿಯಿವರು. ರಾಜಕುಮಾರ್ ಕನ್ನಡದ ನುಡಿಜಾಣ. ಅಕ್ಷರಜಾಣ.

ಸ್ವಂತ ಊರು: ಕೋಲಾರ.
ಇದೀಗ: 45 ವರ್ಷದಿಂದ ಬೆಂಗಳೂರು ನಿವಾಸಿ.
ತಂದೆ: (ದಿ.) ಆರ್. ಕೃಷ್ಣಮೂರ್ತಿ
ತಾಯಿ: ಕೆ. ಪ್ರಮೀಳಮ್ಮ
ವಯಸ್ಸು: 64

ನಿರ್ವಹಿಸಿದ ಪ್ರಮುಖ ಪದವಿಗಳು:

1) ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ: 2020-2021
2) ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ: 2008.
3) ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನುಡಿ ಪತ್ರಿಕೆಯ ಸಂಪಾದಕ: 2004-2008.

ಪಡೆದ ಪುರಸ್ಕಾರಗಳು:

1) ಕನ್ನಡ ಪುಸ್ತಕ ಪ್ರಾಧಿಕಾರದಿಂದ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ: 2019.

2) ಬಿಬಿಎಂಪಿಯಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ: 2018.

3) ಕೋಲಾರ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: 2018

4) ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಪ್ರಕಾಶಕರ ಸಂಘದಿಂದ ಶ್ರೇಷ್ಠ ಪುಸ್ತಕ ಪರಿಚಾರಕ ಪುರಸ್ಕಾರ: 2019.

5) ಕನ್ನಡ ಸಾಹಿತ್ಯ ಪರಿಷತ್ತಿನಿಂದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ: 2015 (ಶ್ರವಣಬೆಳಗೊಳ)

6) ಕೋಲಾರ ಕಸಾಪ: ಕೋಲಾರ ತಾಲ್ಲೂಕು 3ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ: 2015

ವಿವಿಧ ಸಂಘ-ಸಂಸ್ಥೆಗಳು ನೀಡಿದ ಪ್ರಶಸ್ತಿಗಳು:

1) ಕನ್ನಡ ಸನ್ಮಿತ್ರ 2) ಕನ್ನಡ ಕಟ್ಟಾಳು 3) ಕನ್ನಡ ಸಿರಿ 4) ಕನ್ನಡ ವೈಜಯಂತಿ 5) ಜ್ಞಾನಸಂಪದ 6) ಕನ್ನಡ ನುಡಿಜಾಣ 7) ಉದಯಭಾನು ಸುವರ್ಣ ಸಾಹಿತ್ಯ ಪರಿಚಾರಕ ಪುರಸ್ಕಾರ 8) ಮೌಲಿಕ ಕನ್ನಡ ಪರಿಚಾರಕ: ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ 9) ಕಮಲಾ ಹಂಪನಾ ಸಾಹಿತ್ಯ ಪುರಸ್ಕಾರ: 2021 10) ವಾಸವಿ ಎಕ್ಸಲೆನ್ಸ್ ಅವಾರ್ಡ್ 2022: ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ


  • ಮಾಹಿತಿ ಸಂಗ್ರಹ : ಸೌಮ್ಯ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW