ಕಾದಂಬರಿಗಾರ್ತಿ ಗೀತಾ ಕುಂದಾಪುರ.ಅವರ ಚೊಚ್ಚಲು ಕಾದಂಬರಿ ‘ಪಾರ್ಲರ್ ಹುಡುಗಿಯೂ, ಮರಳು ಗಾಡಿನ ಮಹಲು’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಪಾರ್ಲರ್ ಹುಡುಗಿಯೂ, ಮರಳು ಗಾಡಿನ ಮಹಲು
ಲೇಖಕರು : ಗೀತಾ ಕುಂದಾಪುರ.
ತೇಜು ಪಬ್ಲಿಕೇಶನ್ ಬೆಂಗಳೂರು.
ಮುದ್ರಣದ ವರ್ಷ: ೨೦೨೪.
ಪುಟಗಳು:೧೨೮.
ಬೆಲೆ: ರೂ. ೧೫೦.
ಇದು ಲೇಖಕಿ ಗೀತಾ ಕುಂದಾಪುರ ಅವರ ಚೊಚ್ಚಲು ಕಾದಂಬರಿ. ಅವರು ಸ್ನೇಹ ಪೂರ್ವಕವಾಗಿ ಇದನ್ನು ನನಗೆ ಕಳಿಸಿ ಕೊಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ಧನ್ಯವಾದಗಳು. ಇಂದು ನನ್ನಿಂದ ಓದಿಸಿಕೊಂಡ ಈ ಕತೆಯ ಸಾರವಿದು. ಹೆಚ್ಚು ಓದಿಲ್ಲದ ನೋಡಲು ಅಷ್ಟೇನೂ ಚೆಲುವೆಯಲ್ಲದ ಲಾವಣ್ಯ ಎಂಬ ಮಧ್ಯಮ ವರ್ಗದ ಹೆಣ್ಣೊಬ್ಬಳ ಬದುಕಿನ ಏರಿಳಿತಗಳನ್ನು ಲೇಖಕಿ ಕಟ್ಟಿ ಕೊಟ್ಟ ಕಥನಗಾರಿಕೆ ಮೆಚ್ಚುವಂತದ್ದು.
ಲಾವಣ್ಯ ಎನ್ನುವ ಅವಳ ಹೆಸರು ಚೆಂದವಿದ್ದರೂ ಸಾಮಾನ್ಯರೂಪು ಹೊಂದಿದ ಅವಳು ಓದಿದ್ದು ಎಸ್. ಎಸ್ ಎಲ್. ಸಿ. ಮಾತ್ರವಾದರೂ ಮನೆ ಕೆಲಸ, ಹಾಡು- ಹಸೆ ಎಲ್ಲದರಲ್ಲೂ ಚುರುಕು. ಈಗ ಅವಳಿಗೆ ಮದುವೆ ಮಾಡ ಬೇಕೆನ್ನುವ ಸಮಯದಲ್ಲಿ ಇದೆಲ್ಲಾ ದೊಡ್ಡ ಕೊರತೆಯಾಗಿ ಕಾಣುತ್ತಾ ಅವಳು ಸಂತೆಯಲ್ಲಿ ಮಾರಾಟವಾಗದ ಸರಕಿನಂತಾದಳು.

ಹಿಂದೆ ಹೆಸರುವಾಸಿ ಜಮೀನುದಾರಿ ಕುಟುಂಬವಾಗಿದ್ದ ಅವರ ಮನೆಯಲ್ಲಿ ಇಬ್ಬರು ದೊಡ್ಡಪ್ಪಂದಿರು ಒಳ್ಳೇ ಹುದ್ದೆಯಲ್ಲಿ ಇದ್ದು ಅನುಕೂಲವಂತರಾಗಿದ್ದರು. ಹಿರಿಯರು ಬಾಳಿ ಬದುಕಿದ ಹಳೆಯದಾದ ಮನೆಯಲ್ಲಿ ಇವಳಪ್ಪ ಪ್ರಭಾಕರ್, ಅಮ್ಮ ಲೀಲಾ, ಇಂಜಿನಿಯರಿಂಗ್ ಓದುತ್ತಿರುವ ತಂಗಿ ಲೇಖಾ ಹಾಗೂ ಟ್ಯೂಷನ್ ಹೇಳುವ ಅವಳಿ ಸಹೋದರ ಲಕ್ಷ್ಮಣ್ ಇವರ ವಾಸ. ತಂದೆ ಕೃಷಿಯೊಡನೆ ಹತ್ತಿರದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಆರ್ಥಿಕವಾಗಿ ಅಷ್ಟೇನೂ ಅನುಕೂಲವಿಲ್ಲದ ಇವರನ್ನು ಕಂಡರೆ ದೊಡ್ಡಪ್ಪ- ದೊಡ್ಡಮ್ಮನವರಿಗೆ ಆದರವಿಲ್ಲದಿದ್ದರೂ ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಬಳಸಿ ಕೊಳ್ಳುತ್ತಿದ್ದರು. ೨೩ ರ ಹರಯದ ಲಾವಣ್ಯ ಹೊಲಿಗೆ ಮಾಡಿ ಅಲ್ಪ ಸಂಪಾದಿಸುತ್ತಿದ್ದಳು. ದೊಡ್ಡಮ್ಮ ಎರಡನೇ ಸಂಬಂಧದ ವರನನ್ನು ಪ್ರಸ್ತಾಪ ಮಾಡಿದಾಗ ಲಾವಣ್ಯ ನಿರಾಕರಿಸಿದ್ದಕ್ಕೆ ಅವರಿಗೆ ಇನ್ನಷ್ಟು ಸಿಟ್ಟು ಬಂದಿತ್ತು. ತಮ್ಮ ಮನೆಯ ಮಕ್ಕಳು ದಾರಿ ತಪ್ಪಿ ಹೋಗುತ್ತಿದ್ದರೂ ಇನ್ನೊಬ್ಬರ ಮನೆಯ ವಿಷಯಗಳಲ್ಲಿ ಮೂಗು ತೂರಿಸುವುದನ್ನು ಬಿಡದ ದೊಡ್ಡ ಜನರು ಅವರು!!.
ತಾನು ಯಾರಿಗೂ ಭಾರವಾಗಿರ ಬಾರದೆಂದು ಮಹಿಳೆಯರು ಸ್ವ ಉದ್ಯೋಗ ಮಾಡಲು ಸರ್ಕಾರದ ಯೋಜನೆಯ ಬ್ಯೂಟಿಶಿಯನ್ ಕೋರ್ಸ್ ಒಂದಕ್ಕೆ ಸೇರಿ ಕೊಂಡಿದ್ದಳು ಲಾವಣ್ಯ. ಗೆಳತಿಯರೊಡನೆ ದಿನವೂ ಬಸ್ಸಿನಲ್ಲಿ ಮಂಗಳೂರಿಗೆ ಹೋಗಿ ಬರಲು ಮನೆಯಲ್ಲಿ ವಿರೋಧಿಸಿದಾಗ ಸಹಾಯಕ್ಕೆ ಬಂದವನು ಸೋದರ ಲಕ್ಷ್ಮಣ್.
ತರಬೇತಿ ಕೇಂದ್ರದ ಮುಖ್ಯಸ್ಥ ರಾಬರ್ಟ್ ಸರ್ಕಾರದ ೨೦೦೦- ಶುಲ್ಕದ ಬದಲಾಗಿ ‘ಮಹಿಳಾ ಉನ್ನತಿ’ ಹೆಸರಲ್ಲಿ ೨೦ ರಿಂದ ೨೫೦೦೦- ರೂ ಹಣವನ್ನು ವಸೂಲಿ ಮಾಡುತ್ತಿದ್ದ. ತಾವು ಮೋಸ ಹೋಗುತ್ತಿರುವ ಅರಿವಾಗಿ ಇದನ್ನು ಪತ್ತೆ ಹಚ್ಚಿ ಲಾವಣ್ಯ ಹೇಗೆ ಸರ್ಟಿಫಿಕೇಟ್ ಪಡೆದು ಕೊಂಡಳು?… ಎನ್ನುವ ಪ್ರಸಂಗ ರೋಚಕವಾಗಿದೆ.
ಮನಸ್ಸು ಬೆಳೆದಂತೆಲ್ಲಾ ಮನಸ್ಸಿನ ಹಸಿವೂ ಹೆಚ್ಚುತ್ತದೆ.ದೊಡ್ಡಮ್ಮನ ಮಗಳು ಅವಿಕಾಳ ಮದುವೆಯಲ್ಲಿ ಇವಳ ಮನ ನೋಯಿಸಿದ ಘಟನೆ ಯೊಂದರಿಂದ ತಾನ್ಯಾರಿಗೂ ಭಾರವಾಗಿರಬಾರದೆನ್ನುವ ಭಾವನೆಯಿಂದ ಉದ್ಯೋಗವೆಂದು ಅವಳು ದೂರದ ಕತಾರಕ್ಕೆ ಹೋಗುವ ನಿರ್ಧಾರ ತಳೆದಳು. ಅವಳ ಜೀವನದ ದಿಕ್ಕೇ ಬದಲಾಗಿತ್ತು.!
ಲಾವಣ್ಯ ಚಿಕ್ಕವಳಿದ್ದಾಗ ಅಮ್ಮನೊಂದಿಗೆ ಬಸ್ ಆಟೋ ಹತ್ತಿದ್ದು, ನಂತರ ದೊಡ್ಡಮ್ಮನ ಕಾರು, ತನ್ನ ಸ್ಕೂಟಿಯ ಸಾಹಸದ ಪಯಣ ಈಗ ವಿಮಾನ ಹತ್ತಿದಾಗ ಮೂಡಿದ ಆತ್ಮ ವಿಶ್ವಾಸ ಹೀಗೆ ಅವಳ ಬೆಳವಣಿಗೆಯ ಹಂತವನ್ನು ನಿರ್ಧರಿಸುವಲ್ಲಿನ ಉಪಮೆ ಮೆಚ್ಚಿಕೆಯಾಗುವಂತಿದೆ.
ಆದರೆ ಲಾವಣ್ಯಳು ಕತಾರಲ್ಲಿ ಜಾಸ್ತಿ ಸಂಬಳವೆಂದು ಹೊರಟು ನಿಂತಾಗಲೇ ತಾಯಿಗೆ ‘ಬ್ರೆಸ್ಟ್ ಕ್ಯಾನ್ಸರ್’ ಎಂದು ತಿಳಿದಾಗ ಆಗುವ ದುಃಖ,ಅವಳ ಚಿಕಿತ್ಸೆ, ತನ್ನ ದುಡಿಮೆಯ ಪಾಲನ್ನು ತವರಿನ ಒಳಿತಿಗಾಗಿ ಮುಡಿಪಾಗಿಡುವುದು, ಗುರಿ ತಲುಪಲು ಕಠಿಣ ದಾರಿಯನ್ನು ತುಳಿದಿದ್ದು, ಉದ್ಯೋಗದ ಪರ್ವದಲ್ಲಿ ಅವಳ ನಾನಾ ಬಗೆಯ ಅನುಭವ, ಕೊನೆಗೂ ದಕ್ಕಿದ ಆತ್ಮವಿಶ್ವಾಸ, ವಿದೇಶೀ ನೆಲದಲ್ಲೂ ಕನ್ನಡದ ಕಂಪು ಬೀರುವಂತೆ ಮಾತಾಡಿದ ಕನ್ನಡದ ಜನರು, ಬ್ಯೂಟಿಶಿಯನ್ ವೃತ್ತಿಗೆ ಕೂದಲು ‘ಕತ್ತರಿಸುವ ಕೆಲಸ’ ಎನ್ನುವ ಅಜ್ಜಿಯ ಮಾತಿನ ಹಾಸ್ಯ. ಜೊತೆಗೆ ಮೊಮ್ಮಗಳು ಇನ್ನೂ ಮದುವೆಯಾಗದೇ ಉದ್ಯೋಗ ಮಾಡುವುದನ್ನು ಜರಿಯುವ ಅಜ್ಜಿಯ ಮರಣದ ಪ್ರಸಂಗ ಎಲ್ಲವನ್ನೂ ಇಲ್ಲಿ ಎಳೆ ಎಳೆಯಾಗಿ ಲೇಖಕಿ ವಿವರಿಸಿದ್ದಾರೆ.
ಕಣ್ಣೆದುರಿಗೇ ದುರಂತದ ನಾಯಕಿಯರಾಗುವ ತನ್ನ ಸ್ನೇಹಿತೆಯರ ಪಾಡನ್ನು ನೋಡಿಯೂ ಏನೂ ಮಾಡಲಾಗದ ಅವಳ ಅಸಹಾಯಕತೆ, ಕತಾರಲ್ಲಿನ ಕೆಲಸ, ವಸತಿ ನಿಲಯ ಊಟ -ತಿಂಡಿಗಳನ್ನು ಇಷ್ಟವಿಲ್ಲದಿದ್ದರೂ…ನುಂಗುವ ಬಾಯಿ ಒಗ್ಗಿ ಕೊಂಡ ರೀತಿ, ಊರಿಂದ ಬರುವ ಸಂದೇಶಗಳು, ಇದನ್ನೆಲ್ಲಾ ೧೯ ಅಧ್ಯಾಯಗಳ ರೂಪದಲ್ಲಿ ಇಲ್ಲಿ ಲೇಖಕಿ ಹೇಳುವ ಪರಿಯಲ್ಲಿ ಒಂದು ಹೊಸತನವಿದೆ.

ಮುಂದೆ ಲಾವಣ್ಯಳ ಮನೆಯ ಪರಿಸ್ಥಿತಿ ಸುಧಾರಿಸಿ ಅವಳ ಸೋದರ ಲಕ್ಷ್ಮಣ್ ಬ್ಯಾಂಕ್ ಕೆಲಸಕ್ಕೆ ಸೇರಿ ಪ್ರೇಮ ವಿವಾಹವಾಗಿದ್ದ.ತಂಗಿಗೂ ಕೆಲಸ ಸಿಕ್ಕಿ ಬೆಂಗಳೂರು ಸೇರಿದ್ದಳು. ಈ ಬಾರಿಯೂ ರಜೆಯಲ್ಲಿ ಊರಿಗೆ ಬಂದಾಗ ಲಾವಣ್ಯಳಿಗೆ ಮಾತ್ರ ಸರಿಯಾದ ವರ ಸಿಗದೇ ಅವಳ ಮದುವೆಯ ಕನಸು ದೂರವೇ ಉಳಿದು ಅವಳು ವಾಪಸ್ ಕತಾರಕ್ಕೆ ಹೋಗಲು ವಿಮಾನ ಹತ್ತಿದ್ದಳು.
ಆದರೆ ವಿಧಿ ಅವಳ ಬಾಳಲ್ಲಿ ಮತ್ತೊಂದು ತಿರುವು ನೀಡಿತ್ತು.!! ಹಾಗಾದರೆ ಅದೇನು? ….. ತಿಳಿಯಲು ನೀವು ಪುಸ್ತಕವನ್ನು ಓದಬೇಕು. ಎಲ್ಲ ಪಾತ್ರಗಳನ್ನೂ ಎಲ್ಲರೂ ನಿಭಾಯಿಸಲಾಗುವುದಿಲ್ಲ. ಆದರೂ ಲಾವಣ್ಯ ಸಿಕ್ಕ ಅವಕಾಶವನ್ನು ಬಳಸಿ ಕೊಂಡು ಎತ್ತರಕ್ಕೇರಿದಳು. ಕಥೆಯಲ್ಲಿ ಬರುವ ಸಣ್ಣ ಸಣ್ಣ ಸಂಗತಿಗಳು ಕೂಡಾ ಸಹಜವಾಗಿವೆ.
ಸಂಪಾದನೆಯ ಮಾರ್ಗದಲ್ಲಿ ನಿಷ್ಠೆಯಿಂದ ಮಾಡುವ ಯಾವ ಕೆಲಸವೂ ಸಣ್ಣದಲ್ಲ. ಎನ್ನುವುದನ್ನು ಸಾರುವ ಈ ಕಥೆಯನ್ನು ಲೇಖಕಿ ನಿರೂಪಿಸಿ ಬರೆದ ರೀತಿ ಬಹಳ ಇಷ್ಟವಾಯಿತು. ಮುಂಬರುವ ದಿನಗಳಲ್ಲಿ ಇವರಿಂದ ಇನ್ನಷ್ಟು ಕಾದಂಬರಿಗಳು ಮೂಡಿ ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧಿಗೊಳಿಸಲಿ ಎನ್ನುವ ಆಶಯಗಳು.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ನೂಪುರಗಾನ’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
