ಕೌನ್ಸಿಲಿಂಗ್ ಬೇಕಾಗಿರುವುದು ಮಕ್ಕಳಿಗೋ? ಪೋಷಕರಿಗೋ?

ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿಸಿದರೆ ಆ ಮಗು ಯಾವ ವಿಷಯದಲ್ಲಿ ಆಸಕ್ತಿ ಹೊಂದಿದೆ ಎನ್ನುವುದು ತಿಳಿಯುತ್ತದೆ. ಆದರೆ ಈ ಸಂದರ್ಭದಲ್ಲಿ ಈ ಸಮಯದಲ್ಲಿ ಕೌನ್ಸಿಲಿಂಗ್ ನಿಜವಾಗಲು ಬೇಕಾಗಿರುವುದು ಪೋಷಕರಿಗೆಯೇ.. ರಮ್ಯ ರಾಜ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಮಕ್ಕಳು ಶಾಲೆಗೆ ಸೇರಿದೊಡನೆ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ?? ಅದು ಶಿಕ್ಷಕರಾದರೂ ಸರಿ, ಗುರುತು ಪರಿಚಯವಿರುವ ಯಾರಾದರೂ ಸರಿ.. ದೊಡ್ಡವನಾದ ಮೇಲೆ ನೀನು ಏನಾಗ್ಬೇಕು ಅನ್ಕೊಂಡಿದ್ದೀಯಾ? ಅಂಥ. ಪ್ರಾಥಮಿಕ ಶಾಲೆಯ ಹಂತದಲ್ಲಿ ಮಕ್ಕಳು ತಮಗೆ ಆಕರ್ಷಣೆಯಾಗಿ ಕಂಡಂತಹ ವ್ಯಕ್ತಿತ್ವಗಳನ್ನು ತಲೆಯಲ್ಲಿಟ್ಟುಕೊಂಡು, ನಾನು ಟೀಚರ್ ಆಗ್ತೀನಿ, ವಿಜ್ಞಾನಿ ಆಗ್ತೀನಿ, ಡಾಕ್ಟರ್ ಆಗ್ತೀನಿ… ಹೀಗೆ ಒಬ್ಬೊಬ್ಬರದ್ದು ಒಂದೊಂದು ಕನಸು. ಆದರೆ, ಇದೇ ಅವರ ಕಡೆಯ ನಿರ್ಧಾರವೇ? ಆಗಿರಲಿಕ್ಕಿಲ್ಲ.

ಕೆಲವೊಂದಷ್ಟು ಮಕ್ಕಳು ಹೈಸ್ಕೂಲ್ ನ ಹಂತ ತಲುಪುತ್ತಿದ್ದಂತೆ, ತಮ್ಮ ಗುರಿಯನ್ನು ಸ್ಪಷ್ಟ ಪಡಿಸಿಕೊಂಡಿರುತ್ತಾರೆ. ಅದು ಅವರು ಶಾಲೆಯಲ್ಲಿ ಕಲಿಯುತ್ತಿರುವ ವಿಷಯಗಳು ಚೆನ್ನಾಗಿ ಅರ್ಥವಾಗಿ, ಆಸಕ್ತಿದಾಯಕವಾಗಿದ್ದಲ್ಲಿ.. ಜೊತೆಗೆ ಶಿಕ್ಷಕರು ಪರಿಣಾಮಕಾರಿಯಾಗಿ ಕಲಿಸುತ್ತಿದ್ದಲ್ಲಿ ಆ ಮಕ್ಕಳಿಗೆ ಆ ವಿಷಯಕ್ಕೆ ಸಂಬಂಧಪಟ್ಟ ಉದ್ಯೋಗಗಳು ಇಷ್ಟವಾಗ ತೊಡಗುತ್ತವೆ.
ಕೆಲವೊಮ್ಮೆ ಸುತ್ತಮುತ್ತಲಿನ ಪರಿಸರ ವಾತಾವರಣದಿಂದಾಗಿ, ಮನೆಯ ವಾತಾವರಣದಿಂದಾಗಿ ಹಾಗೂ ಹುಟ್ಟಿನಿಂದಲೇ ಬಂದಿರುವ ಬೌದ್ಧಿಕ ಮಟ್ಟದ ಅನುಗುಣವಾಗಿ ಮಕ್ಕಳು ಮುಂದೆ ನಾವು ಹೀಗೆ ಆಗುತ್ತೇವೆ, ಇದೇ ನಮ್ಮ ಗುರಿ ಎಂಬ ನಿರ್ಧಾರಕ್ಕೆ ಬಂದಿರುತ್ತವೆ.

ಫೋಟೋ ಕೃಪೆ : google

ಉದಾಹರಣೆಗೆ ಹೇಳಬೇಕೆಂದರೆ;

ಬಾಲ್ಯದಲ್ಲಿ ಸ್ನೇಹಿತರ ಜೊತೆ ಕೂಡಿ ಆಡುವಾಗ ಒಮ್ಮೊಮ್ಮೆ ಜಗಳಗಳು ಬರುವುದು ಸಹಜ. ಅಂತಹ ಸಂದರ್ಭದಲ್ಲಿ ಇತರೆ ಸ್ನೇಹಿತರು ಅವರಲ್ಲಿ ಒಬ್ಬನನ್ನು ನಮ್ಮಲ್ಲಿ ಯಾರದು ತಪ್ಪು, ಯಾರದು ಸರಿ ನೀನೇ ನಿರ್ಣಯಿಸಿ ಹೇಳು! ಎಂದು ಆ ಮಗುವನ್ನು ಕೇಳುವಾಗ. ಆ ಮಗು ಯೋಚಿಸಿ ಉತ್ತರಿಸುತ್ತದೆ. ಅದು ಎಲ್ಲರಿಗೂ ಒಪ್ಪಿಗೆಯೂ ಆಗುತ್ತದೆ. ಆಗ ಮಗುವಿಗೆ ತನ್ನ ಮೇಲೆ ತನಗೆ ನಂಬಿಕೆ ಉಂಟಾಗುತ್ತದೆ. ನಾನು ಸರಿಯಾಗಿ ನ್ಯಾಯ ಹೊದಗಿಸಬಲ್ಲೆ ಎಂಬ ನಂಬಿಕೆ.

ಹಾಗೆಯೇ, ಮನೆಯಲ್ಲಿ ಟಿವಿಯನ್ನು ನೋಡಬೇಕಾದರೆ ಆ ಮಗು ನೋಡುವಂತಹ ಕಾರ್ಯಕ್ರಮಗಳು ಕೂಡ ಮಗುವಿನ ಮೇಲೆ ಪರಿಣಾಮ ಬೀರುತ್ತವೆ. ಆ ಮಗು ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್ ಜೀವನಕ್ಕೆ ಸಂಬಂಧಪಟ್ಟಂತಹ ಧಾರಾವಾಹಿಗಳನ್ನು ನೋಡಿಕೊಂಡು ಬೆಳೆದಾಗ ಅದಕೂಡ ಅನ್ಯಾಯದ ವಿರುದ್ಧ ಹೋರಾಡಬೇಕು ಎಂಬ ಮನೋಭಾವವನ್ನು ಹುಟ್ಟುಹಾಕುತ್ತಾ ಬರುತ್ತದೆ.

ಇಂತಹ ಅನುಭವಗಳು ಆ ಮಗುವಿಗೆ ನಾನು ದೊಡ್ಡವನಾದ ಮೇಲೆ ನ್ಯಾಯಾಧೀಶನಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ಗುರಿಯನ್ನು ಇಟ್ಟುಕೊಳ್ಳುವಂತೆ ಮಾಡುತ್ತದೆ. ಇದೇ ರೀತಿ ಶಿಕ್ಷಕರ ಪ್ರೋತ್ಸಾಹ ಕೂಡ ಬಹಳ ಬಹಳ ಮುಖ್ಯವಾಗುತ್ತದೆ. ಮಕ್ಕಳು ಪಠ್ಯೇತರ ವಿಷಯಗಳಲ್ಲಿ ಚಾಕಚಕ್ಯತೆಯನ್ನು ಹೊಂದಿದ್ದರೆ, ಅದಕ್ಕೆ ಒಮ್ಮೆ ಬೆನ್ನು ತಟ್ಟಿ ತುಂಬಾ ಚೆನ್ನಾಗಿ ಮಾಡುತ್ತಿದ್ದೀಯಾ ಹೀಗೆ ಮುಂದುವರಿಸು ಎನ್ನುವ ಒಂದೇ ಒಂದು ಮಾತು ಸಾಕು ಆ ಮಗುವಿಗೆ ಆತ್ಮವಿಶ್ವಾಸ ಹೆಚ್ಚಿ ಆ ಮಾರ್ಗದಲ್ಲೇ ಮುಂದುವರೆಯಲು ಪ್ರಾರಂಭಿಸುತ್ತದೆ.

ಫೋಟೋ ಕೃಪೆ : google

ಆ ಮಗು ಕಲಿಕೆಯಲ್ಲಿ ಎಲ್ಲಾ ವಿಷಯಗಳಲ್ಲೂ ಮುಂದಿದ್ದರೂ, ಸಮಾಜ ವಿಜ್ಞಾನದ ವಿಷಯದ ಕಡೆಗೆ ಹೆಚ್ಚಿನ ಒಲವನ್ನು ತೋರಿಸುತ್ತಿರುತ್ತದೆ. ಜೊತೆಗೆ ಎಸ್ ಎಸ್ ಎಲ್ ಸಿ ಆದ ನಂತರ ಪಿಯುಸಿ ವ್ಯಾಸಂಗ ಮಾಡಲು ಕಲಾವಿಭಾಗವನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂಬ ಗಟ್ಟಿ ನಿರ್ಧಾರವನ್ನು ಪೋಷಕರ ಬಳಿ ಹೇಳಿಕೊಳ್ಳುತ್ತದೆ. ಆಗ ನಿಜವಾಗಲೂ ಪೋಷಕರಿಗೆ ಗೊಂದಲ ಉಂಟಾಗುತ್ತದೆ. ನಮ್ಮ ಮಗುವಿನ ಈ ನಿರ್ಧಾರ ಸರಿಯೇ? ಇಲ್ಲ ಯಾವುದೋ ಪ್ರಭಾವಕ್ಕೆ ಒಳಗಾಗಿ ಹೀಗೆ ಹೇಳುತ್ತಿದ್ದಾನೆಯೇ ? ಎಂಬ ನೂರೆಂಟು ಪ್ರಶ್ನೆಗಳು ಮೂಡ ತೊಡಗುತ್ತವೆ.

ಈ ಸಮಯದಲ್ಲಿ ಕೌನ್ಸಿಲಿಂಗ್ ನಿಜವಾಗಲು ಬೇಕಾಗಿರುವುದು ಪೋಷಕರಿಗೆಯೇ.. ಏಕೆಂದರೆ ಮಗುವಿನ ಗುರಿ ಸ್ಪಷ್ಟವಾಗಿದೆ. ಹೈಸ್ಕೂಲಿನ ದಿನಗಳಲ್ಲಿ ಯಾವುದೇ ಮಗು ನಿರ್ದಿಷ್ಟವಾದ ಗುರಿಯನ್ನು ಹೊಂದಿದ್ದರೆ.. ಆ ಮಗುವಿಗೆ ಕೌನ್ಸಿಲಿಂಗ್ ಅಗತ್ಯವಿರುವುದಿಲ್ಲ.

ನನಗೇನೂ ಗುರಿಯೇ ಇಲ್ಲ, ಏನೋ ಒಂದಾದರೆ ಸರಿ.. ನನ್ನ ಗೆಳೆಯ/ ಗೆಳತಿಯರೆಲ್ಲ ಈ ಕಾಲೇಜಿಗೆ ಸೇರುತ್ತಿದ್ದಾರೆ ಅದಕ್ಕಾಗೇ ನಾನು ಅದಕ್ಕೆ ಸೇರಿಕೊಳ್ಳುತ್ತೇನೆ. ಎನ್ನುವ ಮನೋಭಾವವನ್ನು ಆ ಮಗು ವ್ಯಕ್ತಪಡಿಸುತ್ತಿದ್ದರೆ. ನಿಜವಾಗಲೂ ಆ ಸಮಯದಲ್ಲಿ ಅಂತಹ ಮಕ್ಕಳಿಗೆ ಕೌನ್ಸಿಲಿಂಗ್ ಮಾಡಿಸಿದರೆ ಆ ಮಗು ಯಾವ ವಿಷಯದಲ್ಲಿ ಆಸಕ್ತಿ ಹೊಂದಿದೆ, ಯಾವ ಫೀಲ್ಡ್ ಗೆ ಹೋದರೆ ಅದು ಯಶಸ್ಸನ್ನು ಗಳಿಸಬಹುದು ಎಂಬುದಕ್ಕೆ ಉತ್ತರ ದೊರೆತು ಆ ದಾರಿಯಲ್ಲಿ ಮಗು ನಡೆದದ್ದೇ ಆದರೆ ಮುಂದೆ ತಾನು ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಖುಷಿಯಿಂದ ಬಾಳ್ವೆ ನಡೆಸುವುದರಲ್ಲಿ ಎರಡು ಮಾತಿಲ್ಲ.


  • ರಮ್ಯ ರಾಜ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW