ಶಿಕ್ಷಕರಾದ ತಮ್ಮಣ್ಣ ಬೀಗಾರ ಅವರಿಗೆ “ಬಾವಲಿ ಗುಹೆ” ಮಕ್ಕಳ ಕಾದಂಬರಿಗೆ 2022 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಬಂದಿದೆ. ಈಗ ಅವರ ‘ಗಿರಗಿಟ್ಟಿ’ಮಕ್ಕಳ ಕಥಾ ಸಂಕಲನ ಹೊರ ತಂದಿದ್ದಾರೆ, ಈ ಕೃತಿಯ ಕುರಿತು ಸವಿತಾ ಮುದ್ಗಲ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಕೃತಿ : ಗಿರಗಿಟ್ಟಿ
ಲೇಖಕರು : ತಮ್ಮಣ್ಣ ಬೀಗಾರ
ಬೆಲೆ : 90.00
ಮುದ್ರಣ: 2020
ಪ್ರಕಾಶನ : ಪ್ರೇಮ ಪ್ರಕಾಶನ – ಮೈಸೂರು
ಲೇಖಕರ ಕಿರು ಪರಿಚಯ :
‘ತಮ್ಮಣ್ಣ ಬೀಗಾರ’ ಎಂಬ ಕಾವ್ಯ ನಾಮದಿಂದ ಬರೆಯತ್ತಿರುವ ಇವರು ಶಿಕ್ಷಕರಾಗಿದ್ದವರು. ಈಗ ನಿವೃತ್ತರಾಗಿದ್ದಾರೆ. ಸಿದ್ದಾಪುರದಲ್ಲಿ ವಾಸಿಸಿರುವ ತಮ್ಮಣ್ಣ ಸಾಹಿತ್ಯ ರಚನೆ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆ ಮುಂತಾದವುಗಳಲ್ಲಿ ನಿರತರು. ಮಕ್ಕಳ ಸಾಹಿತ್ಯಕ್ಕೆ ಮಲೆನಾಡಿನ ಸೊಗಸನ್ನೂ ಅದರ ಹಚ್ಚ ಹಸಿರಿನ ಹೊದಿಕೆಯನ್ನೂ ಕಟ್ಟಿಕೊಟ್ಟವರು ತಮ್ಮಣ್ಣ ಬೀಗಾರ. ಪ್ರಕೃತಿಯ ಪ್ರಶಾಂತ ಪಾಠಗಳು ತುಂಬಾ ಕುತೂಹಲಕರವಾಗಿ ಅವರ ಕೃತಿಗಳಲ್ಲಿ ಅಡಕವಾಗಿವೆ. ಮಕ್ಕಳ ಲೋಕವನ್ನು ಸೊಗಸು ಕಣ್ಣುಗಳಿಂದ ನೋಡುವ, ಸ್ವಚ್ಛಂದದಿಂದ ಕಂಡಿರಿಸುವ ಮುಕ್ತತೆ ಇವರ ಬರಹಗಳಲ್ಲಿ ಹಾಸಿಕೊಂಡಿದೆ.

ಮಕ್ಕಳಿಗಾಗಿ ಕವನ, ಕಥೆ, ಕಾದಂಬರಿ, ಲಲಿತ ಬರಹ, ಬಾಲ್ಯದ ನೆನಪಿನ ಲಹರಿ, ಶಿಶು ಪ್ರಾಸ, ಚಿತ್ರ ಪುಸ್ತಕ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಇವರ ಸಂದರ್ಶನ ಪ್ರಸಾರ ಆಗಿದೆ. “ಬಾವಲಿ ಗುಹೆ” ಮಕ್ಕಳ ಕಾದಂಬರಿಗೆ 2022 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಬಂದಿದೆ.
ಇವರ ಹಸಿರೂರಿನ ಹುಡುಗ ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಹಾಗೂ ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ ಚಂದ್ರ ಪ್ರಶಸ್ತಿ, ಫ್ರಾಗಿ ಮತ್ತು ಗೆಳೆಯರು ಕೃತಿಗೆ ಪುಸ್ತಕ ಸೊಗಸು ಬಹುಮಾನ ಬಂದಿವೆ. ಇದಲ್ಲದೇ ಬಾಲವಿಕಾಸ ಅಕಾಡೆಮಿ ಗೌರವ ಪುರಸ್ಕಾರ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ, ಪ್ರಜಾವಾಣಿ ಶಿಶುಕಾವ್ಯ ಸ್ಪರ್ಧಾ ಬಹುಮಾನ ಮುಂತಾದವು ದೊರೆತಿವೆ.
ಗಿರಗಿಟ್ಟಿ ಮಕ್ಕಳ ಕಥಾ ಸಂಕಲನ ಓದಿದಾಗ ಕೆಲವು ಕ್ಷಣ ನಾವು ಮಕ್ಕಳ ಲೋಕದಲ್ಲೊ ಇದೀವಿ ಅನ್ನುವ ಭಾವ ಮೂಡುತ್ತದೆ.ಬಾಲ್ಯತನದ ಹುರುಪು, ಸುಖ, ಸಿಟ್ಟು ಸೆಡವು, ನಿರಾಸೆ, ನಿಟ್ಟುಸಿರು ಎಲ್ಲ ಭಾವನೆಗಳನ್ನು ಕಥೆಯಲ್ಲಿ ಸೊಗಸಾಗಿ ಕಲೆಗೂಡಿಸಿ ಬರೆಯಬಲ್ಲವರು. ಇದ್ರಲ್ಲಿ ಒಟ್ಟು 15ಕತೆಗಳಿವೆ. ಕತ್ತಲು, ಕಪ್ಪೆಯ ಕಣ್ಣು, ರೋಹನ, ಗಣಪ ಮತ್ತು ನಾನು ಹೀಗೆ ವಿಭಿನ್ನ ಕಥೆಗಳಿಂದ ಕೂಡಿದ ಮಕ್ಕಳ ಸಂಕಲನವಾಗಿದೆ.
ಸಂಕಲನದ ಒಂದು ಕಥೆಯ ಶೀರ್ಷಿಕೆ

ಕಪ್ಪೆಯ ಕಣ್ಣು
ಕಪ್ಪೆಗಳು ಎಂದರೆ ನನಗೆ ಇಷ್ಟ ಅಂದೆನಲ್ಲ. ನನ್ನ ಊರು ಮಲೆನಾಡು ಅಂತ ನಿಮಗೆ ಗೊತ್ತಿದೆ. ಮಲೆನಾಡು ಇದು ಮಳೆನಾಡು ಹೌದು. ಹಾಗಾಗಿ ಯಾವಾಗಲೂ ನೀರಿನ ತಂಪು, ಜರಿ, ಕೊಳ ಅರಲಿನ ಗದ್ದೆ, ನೀರು ಹರಿಯುವ ತೋಟ ಎಲ್ಲ ಇಲ್ಲಿ ಇವೆ. ಅಂದರೆ ಅಲ್ಲೆಲ್ಲ ಕಪ್ಪೆಗಳು ಇವೆ. ನಾನು ಚಿಕ್ಕವನಿರುವಾಗಲೇ ನಮ್ಮ ಮನೆಯ ಒಳಗೆ ನಾನು ಕಪ್ಪೆಯನ್ನು ಮೊದಲು ನೋಡಿದ್ದು. ಬಚ್ಚಲ ಮನೆಯಲ್ಲಿ ಕೈ ತೊಳೆಯುವ ನಲ್ಲಿಯ ಹತ್ತಿರ ಎಲ್ಲಾ ಕುಳಿತಿರುತ್ತವೆ. ಹಾವು ಎಂದರೆ ಹೊಡೆಯಲು ಮುಂದಾಗುವ ಜನ, ಕಪ್ಪೆಯನ್ನು ಕಂಡಾಗ ಕೋಪಗೊಳ್ಳುವುದಿಲ್ಲ, ಹಾವು ಕಚ್ಚುತ್ತದೆ ಎಂಬ ಭಯ ಇರಬೇಕು.
ಮೋಡ ರಾಶಿಯಾಗಿ ಏರು ಬರುತ್ತಿತ್ತು ಎಂದೇನಲ್ಲ, ಮೋಡ ಬಂದಿದ್ದು ನಿಜ ಆ ದಿನ ರಾತ್ರಿ ಇಡೀ ಜೋರಾಗಿ ಮಳೆ ಸುರಿದು ನಿಜ, ಬೆಳಿಗ್ಗೆ ಎದ್ದು ನೋಡಿದಾಗ ಮನೆಯಂಗಳದಲ್ಲಿ ತುಂಬಿ ನಿಂತಿರುವ ನೀರು, ಮನೆಯ ಮುಂದಿನ ದೊಡ್ಡ ಬಾಳೆಯ ಮರ ಬಗ್ಗಿ ನೆಲಕ್ಕೆ ಬಿದ್ದಿರುವುದು. ಆಗಲೇ ಎಂಟು,ಹತ್ತು ಕಪ್ಪೆಗಳು ಅಂಗಳಕ್ಕೆ ಬಂದು ಒಟಗುಟ್ಟುತ್ತಿರುವುದು ಎಲ್ಲವೂ ಖುಷಿಯನ್ನು ತಂದಿತ್ತು.ಹೀಗೆ ಒಂದು ಪ್ರಾರಂಭದಲ್ಲಿ ತಮ್ಮ ಸ್ವಅನುಭವಿಸಿದ ನೆನೆಪುಗಳೊಂದಿಗೆ ಕೆಲವು ಕಥೆಗಳು ರಚನೆಯಾಗಿವೆ, ಪೂರ್ತಿ ಕಥೆಯ ಸ್ವಲ್ಪ ತುಣುಕನ್ನು ಬರೆದಿರುವೆ.
ತಮ್ಮಣ್ಣ ಬೀಗಾರ ಸರ್ ಅವರಿಂದ, ಇನ್ನು ಮಕ್ಕಳ ಲೋಕಕ್ಕೆ ಮತ್ತಷ್ಟು ಕೃತಿಗಳು ಲಭಿಸಲಿ, ಮಕ್ಕಳ ಮುಂದಿನ ಪೀಳಿಗೆಗಾಗಿ ಕಥೆಗಳು ಮಕ್ಕಳು ಮನಸ್ಸು ರಂಜಿಸಲಿ ಎಂದು ಹಾರೈಸುವೆ.
- ಸವಿತಾ ಮುದ್ಗಲ್ – ಬಳ್ಳಾರಿ
