ಕಾಯುತ್ತಿರಬೇಕು! ಕವನ – ಎಂ.ಆರ್. ಕಮಲ

ಬಣ್ಣದ ಹಬ್ಬಕ್ಕೆ ಸುಂದರ ಕವನವನ್ನು ಖ್ಯಾತ ಕವಿಯತ್ರಿ ಎಂ.ಆರ್. ಕಮಲ ಅವರು ಕಟ್ಟಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…

ಎಲ್ಲಿಂದಲೋ ಹಾರಿ ಬಂದ ಬಣ್ಣದ ಚಿಟ್ಟೆ
ಅಂಗೈ ಮೇಲೆ ಬಂದು ಕುಳಿತಿತು
ಯಾಕೆ ಬಂತು, ಹೇಗೆ ಬಂತು ತಿಳಿಯಲಿಲ್ಲ
ಹೂವೆಂದು ತಿಳಿದುಕೊಂಡಿತೋ ಏನೋ!
ಸುಮ್ಮನೆ ನೋಡುತ್ತಲೇ ಇದ್ದೆ.
ಚಣ ಹೊತ್ತು ವಿರಮಿಸಿ ಎತ್ತಲೋ ಹಾರಿತು.
ಕೈ ತುಂಬ ರಂಗವಲ್ಲಿಯನ್ನಿಟ್ಟ ಬಣ್ಣದ ಹುಡಿ

ಹೀಗೆ ಬಣ್ಣ ಹೊತ್ತು ಓಡಾಡುವವರು
ಬಂದಾಗೆಲ್ಲ ಒಂದು ಚಂದದ ಚಿತ್ರ!
ಅವರೊಳಗೇನಿದೆಯೋ, ಯಾರಿಗೆ ಗೊತ್ತು?
ಕನಸುಗಳೇ ಕಪ್ಪು ಬಿಳುಪಾಗಿರಬಹುದು
ಒಳಗಿನ ಚಿತ್ರಗಳು ಕಲಸಿಹೋಗಿರಬಹುದು
ಮಾಸಿರಬಹುದು, ಮರೆಯಾಗಿರಬಹುದು
ಅವರು ಮಾತ್ರ ನಿಂತ, ಕೂತ ಜಾಗಕ್ಕೆಲ್ಲ
ಬಣ್ಣ ಬಳಿದೇ ಹಾರುತ್ತಿರುತ್ತಾರೆ

ಚಿಟ್ಟೆಯಂತೆ ಚಿತ್ತಾರ ಬಿಡಿಸುವವರಿಗೆ
ಅಂಗೈಯ ಹೂವಾಗಿಸಿ ಕಾಯುತ್ತಿರಬೇಕು


  • ಎಂ.ಆರ್. ಕಮಲ

Leave a Reply

Home
Search
Menu
Recent
About
×