ಇಂದಿನ ಸಂಬಂಧಗಳು ಸುತ್ತುತ್ತಿರುವುದು ಹಣದ ನೆಲೆಯಲ್ಲಿಯೇ. ಬೆಲ್ಲಕ್ಕೆ ಇರುವೆ ಮುಕುರುವಂತೆ ಹಣವಿದ್ದವರ ಸುತ್ತ ಹೆಚ್ಚಿನವರು ಇರುತ್ತಾರೆಂಬುದು ನಾವು ಇಂದು ನೋಡಿಯೇ ಇರುತ್ತೇವೆ. ಬಸವರಾಜ ಹೊನಗೌಡರ ಅವರು ಹಣ ಇರಲಿ, ಆದರೆ ಅದನ್ನು ತಲೆಗೇರಲು ಬಿಡಬೇಡಿ ಎನ್ನುತ್ತಾ ಇಂದಿನ ವಾಸ್ತವದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಇಂದಿನ ಸಮಾಜದಲ್ಲಿ ಹಣಕ್ಕಿರುವ ಬೆಲೆ ಮತ್ತೊಂದಕ್ಕಿಲ್ಲೆಂಬ ಮಾತು ಸತ್ಯವಾದರೂ ಸಹ ಹಣವೇ ಜೀವನವಲ್ಲ ಎಂಬ ಮಾತು ಸತ್ಯವಲ್ಲವೇ. “ಹಣ ಜೇಬಿನಲ್ಲಿಯೇ ಇರಬೇಕು ತಲೆಯಲ್ಲಿ ಇಳಿಯಬಾರದು” ಒಂದು ವೇಳೆ ಶ್ರೀಮಂತಿಕೆ ನೆತ್ತಿಗೇರಿದರೆ ಅದರಿಂದ ಅನಾಹುತಗಳು ಹೆಚ್ಚಾಗುತ್ತವೆ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಹೇಳಿದ ಮಾತು ಇಂದಿಗೂ ಪ್ರಸ್ತುತವಾಗಿದೆ.
“ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು
ಬಾರದು ನೋಡಯ್ಯಾ”
ಹಾವು ಕಡಿದವರನ್ನು ಮಾತನಾಡಿಸಬಹುದು. ದೆವ್ವ ಹಿಡಿದವರನ್ನು ನುಡಿಸಬಹುದು. ಆದರೆ ಹಣದ ದೆವ್ವ ಹಿಡಿದವರನ್ನು ನುಡಿಸಲಾಗದೆಂದು ಹೇಳಿದ್ದರು. ಅಂದು ಶರಣರು ಸಿರಿ ಬಂದಾಗ ಕರೆದು ದಾನವನ್ನು ಮಾಡೆಂದು ಹೇಳಿದರು. ದಾಸೋಹ ಪದ್ಧತಿಯನ್ನು ಪರಿಚಯಿಸಿದರು. ಇಂದು ನಾವು ಹಣವನ್ನು ಗಳಿಸುವುದರಲ್ಲಿ ಜಿದ್ದಿಗೆ ಬಿದ್ದಿದ್ದೇವೆ.
ಇಂದಿನ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಹಣದ ಪ್ರಾಮುಖ್ಯತೆ ಬಹಳಷ್ಟಿದೆ. ಈ ಮಾತನ್ನು ಒಪ್ಪಿಕೊಳ್ಳಲೇಬೇಕು. “ದುಡ್ಡು ದೊಡ್ಡಪ್ಪ ವಿದ್ಯೆ ಅದರಪ್ಪ” ಎಂದು ಹೇಳಿದರೂ ಸಹ ವಿದ್ಯೆ ಪಡೆಯಲು ದುಡ್ಡಿನ ಅವಶ್ಯಕತೆ ಬಹಳಷ್ಟಿದೆ. ಮನುಷ್ಯನ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಹಣ ಬೇಕೆಬೇಕು. ಇಂದು ವ್ಯಕ್ತಿಯ ಗೌರವಗಳನ್ನು ಆಸ್ತಿಯಿಂದ ಅಳೆಯುವ ಕಾಲದಲ್ಲಿ ಹಣವೇ ಬೇಡವೆಂದು ಉಪದೇಶ ಮಾಡಲು ಸಾಧ್ಯವಿಲ್ಲ. ಆದರೆ ಹಣ ಬಂದಾಗ ಮಾನವೀಯತೆ ಮರೆತು ಅನ್ಯಾಯಗಳನ್ನು ಮಾಡದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ.
ಹಣವೆಂದರೆ ಹೆಣ ಕೂಡ ಬಾಯಿ ಬಿಡುವ ಇಂದಿನ ಕಾಲದಲ್ಲಿ ಹಣ ಗಳಿಸಬಾರದೆಂದಲ್ಲ ಆದರೆ ಗಳಿಸುವ ಮಾರ್ಗ ಮುಖ್ಯ. ಹೇಗಾದರೂ ಮಾಡಿ ಹಣ ಗಳಿಸುವುದಕ್ಕಿಂತ ಸಾಧ್ಯವಾದಷ್ಟು ನ್ಯಾಯ ಮಾರ್ಗದಲ್ಲಿ ಹಣ ಗಳಿಸಬೇಕು. ಎಲ್ಲ ಕಡೆ ಹಣ ಬಿಚ್ಚಿದರೆ ಕೆಲಸವಾಗುವ ಕಾಲದಲ್ಲಿ ಒಂದಿಷ್ಟು ಹಣವನ್ನು ನ್ಯಾಯಮಾರ್ಗದಲ್ಲಿ ದುಡಿದರೆ ಒಳ್ಳೆಯದು. ಕೆಟ್ಟ ಚಟಗಳಾದ ಜೂಜಾಟ, ಬಾಜಿ ಕಟ್ಟುವುದರಿಂದ ದೂರವಿರುವುದು ಒಳ್ಳೆಯದು. ನಾವು ಹಣ ಗಳಿಸುವುದಕ್ಕಿಂತ ಉಳಿಸುವುದರ ಕಡೆಗೆ ಗಮನ ಹರಿಸಬೇಕು. ಉಳಿಸಿದ ಒಂದು ರೂಪಾಯಿ ಗಳಿಸಿದ ಒಂದುನೂರು ರುಪಾಯಿಗೆ ಸಮಾನ. ನಾವು ಹಣಗಳಿಸಲೆಂದೆ ದುಡಿಯುವುದಕ್ಕಿಂತ ನನ್ನ ಕೆಲಸವನ್ನು ಚೆನ್ನಾಗಿ ಮಾಡಿದರೆ ನೆಮ್ಮದಿ ಹಾಗೂ ಹಣ ಎರಡು ಬರಬಹುದು.
ಸಂಪತ್ತು ಮಾನವನ ಯೋಗಕ್ಷೇಮಕ್ಕೆ ಒಂದು ಉಪಕರಣವಷ್ಟೇ ಅದೇ ಎಲ್ಲವೂ ಅಲ್ಲ. ಪ್ರಾಚೀನ ಕಾಲದಲ್ಲಿ ಅಂದರೆ ಹಣ ಬರುವುದಕ್ಕಿಂತ ಮುಂಚೆ ಜನರು ವಸ್ತು ವಿನಿಮಯ ಮಾಡಿಕೊಂಡು ಒಳ್ಳೆಯ ಬದುಕನ್ನು ಬದುಕ್ಕಿದ್ದನ್ನು ಓದಿರುತ್ತೇವೆ. ಹಣ, ಸಂಪತ್ತುಗಳನ್ನು ಬಾಹ್ಯ ಪ್ರಪಂಚದಲ್ಲಿ ಅನುಕೂಲತೆಗಾಗಿ ಬಳಸುವಂತದ್ದು. ಹಸಿದವನಿಗೆ ಹಣ ಸಹಾಯ ಮಾಡಬಹುದೇ ವಿನಃ ಹಣವನ್ನೇ ತಿನ್ನಲು ಸಾಧ್ಯವಿಲ್ಲವೆಂಬ ನಮಗೆಲ್ಲರಿಗೂ ಗೊತ್ತಿದ್ದ ವಿಷಯವೇ. ಆದರೂ ಮನುಷ್ಯ ಹಣದ ಹಿಂದೆ ಓಡುತ್ತಿರುವುದೇಕೆ!!
ಇಂದಿನ ಸಂಬಂಧಗಳು ಸುತ್ತುತ್ತಿರುವುದು ಸಂಪತ್ತಿನ ನೆಲೆಯಲ್ಲಿಯೇ. ಬೆಲ್ಲಕ್ಕೆ ಇರುವೆ ಮುಕುರುವಂತೆ ಹಣವಿದ್ದವರ ಸುತ್ತ ಹೆಚ್ಚಿನವರು ಇರುತ್ತಾರೆಂಬುದು ನಾವು ಇಂದು ನೋಡಿಯೇ ಇರುತ್ತೇವೆ. ಕೆಲವೊಂದು ಜನರು ಅಡ್ಡ ಮಾರ್ಗದಲ್ಲಿ ಮಾಡಬಾರದ ಕೆಲಸವನ್ನು ಮಾಡಿ ಹಣ ಗಳಿಸಿದವರನ್ನು ನೋಡಿರುತ್ತೇವೆ. ಇವರ ವರ್ತನೆಯು “ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದಂತೆ” ಎಂಬಂತಿರುತ್ತದೆ. ಮಂಗನಿಗೆ ಮದ್ಯ ಕುಡಿಸಿದಂತೆ ತಾನು ಹಾಳಾಗುವುದರೊಂದಿಗೆ ತನ್ನ ಪರಿಸರವನ್ಮು ಕೆಡಿಸುತ್ತಾನೆ. ಇಂದಿನ ರಾಜಕಾರಣ ನೋಡಿದರೆ ನಮಗೆ ಅರ್ಥವಾಗುವುದೆಂದರೆ ಚುನಾವಣೆಯಲ್ಲಿ ಹಣ ಚೆಲ್ಲಿ ಆಯ್ಕೆಯಾಗಿ ಅದರ ಹತ್ತು ಪಟ್ಟು ಗಳಿಸುವುದಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯಿಂದ ಲೋಕಸಭಾ ಚುನಾವಣೆಯಲ್ಲಿ ಹಣದ ಪ್ರಭಾವವೇ ಮುಖ್ಯವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇದರಿಂದ ಸಮಾಜಿಕ ಸಂಬಂಧಗಳು ಅನಾರೋಗ್ಯಗೊಳ್ಳುತ್ತಿವೆ.
ಸುಧಾಮೂರ್ತಿ, ನಾರಾಯಣಮೂರ್ತಿ ಅಂತವರನ್ನು ನೋಡಿದರೆ ನಮಗೆ ಗೊತ್ತಾಗುತ್ತದೆ. ಎಷ್ಟೇ ಸಂಪತ್ತಿದ್ದರೂ ಸರಳತೆ ಅವರಲ್ಲಿ ಎದ್ದು ಕಾಣುತ್ತದೆ. ಹಣದಿಂದ ಎಲ್ಲವನ್ನೂ ಕೊಂಡಕೊಳ್ಳಬಹುದೆಂಬ ಸೊಕ್ಕನ್ನು ಬಿಡಬೇಕು. ಏಕೆಂದರೆ ಆಯುಷ್ಯ, ನೆಮ್ಮದಿಗಳನ್ನು ಹಣದಿಂದ ಕೊಂಡಕೊಳ್ಳಲು ಸಾಧ್ಯವಿಲ್ಲ. ಅವು ನಮ್ಮೊಳೊಗಿನಿಂದಲೇ ಬರಬೇಕು. ಒಟ್ಟಿನಲ್ಲಿ ಹಣ ಗಳಿಸಿ, ಅವು ಜೇಬಿನಲ್ಲಿರಲಿ, ತಲೆಗೇರಲು ಬಿಡಬೇಡಿ. ಹಣ ಬದುಕಿಗೆ ಒಂದು ಮಾಧ್ಯಮವೇ ಹೊರತು ಅದೇ ಅಂತಿಮವಲ್ಲ.
- ಬಸವರಾಜ ಹೊನಗೌಡರ
