ಪ್ರೀತಿಸಿದ ಹುಡುಗಿ ಸಿಗದಿದ್ದಾಗ, ಪ್ರಿಯಕರನ ಕೊನೆ ಪತ್ರ ಹೀಗಿತ್ತು. ಪ್ರೀತಿಸಿದವಳಿಗೆ ಕೇಡು ಬಯಸುವ ಹುಡುಗರ ಮಧ್ಯೆ ಈ ಪ್ರೇಮಿ ವಿಭಿನ್ನ … ತಪ್ಪದೆ ಓದಿ…
ಪ್ರಿಯವಾಗಿದ್ದ ಗೆಳತಿಗೆ,
ಒಂದು ಲೆಕ್ಕದಲ್ಲಿ ಅವತ್ತು ನೀನು ಬಿಟ್ಟು ಹೋಗಿದ್ದು ಒಳ್ಳೆಯದೇ ಅನಿಸುತ್ತೆ:ನೀನಿದ್ದಾಗ ನನಗೆ ಬೇರೆ ಪ್ರಪಂಚವೆ ಇರಲಿಲ್ಲ.ನಿನ್ನಿಂದಲೇ ಬೆಳಗಾಗಿ ನಿನ್ನಿಂದಲೇ ಇರುಳಾಗುತ್ತಿತ್ತು. ಪ್ರತಿಯೊಂದರಲ್ಲೂ ನೀನೇ ನೀನು ಕಾಡುತ್ತಿದ್ದೆ.
ಬಹುಶ: ಬದುಕಿನೆಲ್ಲ ಇನ್ನಿತರೇ ವಿಷಯಗಳನ್ನು ನಾನು ಮರೆತೇ ಬಿಟ್ಟಿದ್ದೇ ಅನಿಸುತ್ತೆ. ಆದರವತ್ತು ಕೊನೆಗೊಂದು ಬೈ ಅನ್ನು ಹೇಳದೇ ಹೋಗಿಬಿಟ್ಟೆಯಲ್ಲ?… ಬದುಕೇ ಬದಲಾಗಿಬಿಟ್ಟಿತ್ತು ಕಣೆ! ಬೆಳಗಿನ ಸೂರ್ಯನನ್ನು ರಾತ್ರಿಯ ಚಂದ್ರನನ್ನು ಬಿಟ್ಟ ಕಣ್ಣುಗಳಿಂದ ನೋಡಿದೆ.
ನನ್ನ ಸಾಯಂಕಾಲ ಮತ್ತೆ ನನಗೆ ಸಿಕ್ಕಿತು. ದೂರ ಮಾಡಿದ್ದ ಹಳೆಯ ಗೆಳೆಯರ ನೆನಪಿಸಿಕೊಂಡು ಹೋದೆ. ಆ ಸಂಜೆ ನೀನಿರದಿದ್ದರೂ ಸುಂದರವಾಗಿತ್ತು. ಬೇಗ ಮನೆಗೆ ಬಂದರೆ ತಂಗಿ ತಮ್ಮಂದಿರು ಆಶ್ಚರ್ಯದ ಕಣ್ಣುಗಳಿಂದ ನೋಡಿದಾಗ ಅವರನ್ನು ಎಷ್ಟು ಮಿಸ್ ಮಾಡಿಕೊಂಡಿದ್ದೆ ಅನಿಸಿತು. ಊಟದ ಸಮಯಕ್ಕೆ ಸರಿಯಾಗಿ ಮನೆಗೆ ಅಪರೂಪಕ್ಕೆ ಬಂದ ಮಗನನ್ನು ಕಂಡು ಅಪ್ಪನ ಕಣ್ಣಲ್ಲಿ ಕಾಣಿಸಿದ ಸಂತೋಷ ಎಂತಾ ಖುಶಿ ಕೊಟ್ಟಿತು ಗೊತ್ತಾ? ಯಾಕೋ ಈ ನಡುವೆ ತುಂಬಾ ಸೊರಗಿದ್ದೀಯಾ ಅನ್ನುತ್ತಾ ಅಮ್ಮ ತಲೆ ಸವರಿ ಮಜ್ಜಿಗೆ ಬಡಿಸುವಾಗ ನಾನ್ಯಾಕೆ ಇವನ್ನೆಲ್ಲ ಇಷ್ಟು ದಿನ ಕಳೆದುಕೊಂಡೆ ಅನಿಸಿತು. ರಾತ್ರಿ ಮಲಗುವ ರೂಮಿಗೆ ಬಂದ ಅಕ್ಕ ಯಾಕೋ ಅವಳು ಕೈ ಬಿಟ್ಟು ಹೋದಳೇನೋ ಅನ್ನುತ್ತಾ ಅಪ್ಪಿ ಹಣೆಗೊಂದು ಹೂಮುತ್ತನಿಟ್ಟು ಸಮಾಧಾನ ಹೇಳಿದಾಗ ಅತ್ತೇ ಬಿಟ್ಟೆ ಕಣೆ.
ಬೆಳಿಗ್ಗೆ ಬೇಗ ಎದ್ದರೆ ಪಕ್ಕದ ಮನೆಯ ಬಾಲ್ಯದ ಗೆಳತಿ ನನಗಿವತ್ತು ಕಾಲೇಜಿಲ್ಲ, ಸ್ವಲ್ಪ ನನ್ನ ಜೊತೆ ಹೊರಗೆ ಬರತೀಯೇನೋ ಶಾಪಿಂಗ್ ಇದೆ ಅಂದಾಗ ಚೇ! ಪಾಪ ಇಷ್ಟು ದಿನ ಅವಳನ್ನ ಮರೆತೇ ಬಿಟ್ಟಿದ್ದೆನಲ್ಲ ಅನಿಸಿ ಬೇಜಾರಾಯಿತು.
ಆಮೇಲಾಮೇಲೆ ನನ್ನ ದಿನಗಳು ಎಷ್ಟು ಬದಲಾವೆಂದರೆ ಬದುಕಿನಷ್ಟೂ ಖುಶಿಯ ಕ್ಷಣಗಳನ್ನು ಕೇವಲ ನಿನ್ನೊಬ್ಬಳಿಗಾಗಿ ಕಳೆದುಕೊಂಡೆನಲ್ಲ ಅಂತನ್ನಿಸಿ ವಿಷಾದವಾಯಿತು. ಸತ್ಯ ಹೇಳ್ತೀನಿ ಕಣೇ…ಈಗ ನನ್ನ ದಿನಗಳು ಸುಂದರವಾಗಿವೆ. ನನ್ನ ಸಂಜೆಗಳು ಸಾರ್ಥಕವಾಗಿವೆ. ನನ್ನನ್ನು ಪ್ರೀತಿಸುವವರು – ನಿನ್ನನ್ನು ಹೊರತು ಪಡಿಸಿಯೂ -ಬಹಳ ಮಂದಿ ಇದ್ದಾರೆ. ಈಗ ನಾನು ಮಾತ್ರವಾಗಿದ್ದೇನೆ. ಅಪ್ಪನ ಜಾಗವನ್ನು ತುಂಬಲು ಸಿದ್ದವಾಗಬೇಕಿದೆ.
ಯಾಕೆಂದರೆ ಇನ್ನಾರು ತಿಂಗಳಲ್ಲಿ ಅವರಿಗೆ ರಿಟೈರ್ ಆಗ್ತಿದೆ. ಅಕ್ಕನಿಗೂ ಗಂಡುಗಳು ಬರ್ತಿವೆ. ತಮ್ಮನ ಓದಿಗೆ ಹಣ ಹೊಂದಿಸಬೇಕಿದೆ. ಎಷ್ಟೊಂದು ಕೆಲಸಗಳಿವೆಯೆಂದರೆ ಇನ್ನು ಮುಂದೆ ನಿನಗೆ ಪತ್ರ ಸಹ ಬರೆಯಲಾರೆ ಅನಿಸುತ್ತೆ!
ಇರಲಿ ಬಿಡೆ…ನಿನಗೂ ನನ್ನ ಹಾಗೆ ಅನಿಸಿದ್ದರೆ ತಪ್ಪೇನಿಲ್ಲ. ನಾವು ಸೇರಿ ಪಡೆದುಕೊಳ್ಳುವುದಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡು ಪಡೆದುಕೊಂಡಿದ್ದೀವಿ ಅನಿಸಿದಾಗ ಅಷ್ಟೊಂದು ಬೇಜಾರಾಗುವುದಿಲ್ಲ. ಅಲ್ಲವೇನೆ? ಬಹುಶ: ನಿನಗೂ ಹೀಗೇ ಅನಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ ಬಿಡು. ಯಾವತ್ತಾದರು ಎದರು ಸಿಕ್ಕಾಗ ಒಂದು ಹಲೋ ಹೇಳಿ ಮುಗುಳ್ನಕ್ಕೂ ಮುಂದೆ ಸಾಗೋಣ. ಯಾವತ್ತಿಗೂ ನಿನಗೊಬ್ಬ ಗೆಳೆಯನಾಗಿ ಮಾತ್ರ ಉಳಿಯಬಯಸುವ. ಹುಡುಗಿ ಕೈ ಕೊಟ್ಟಳು ಅಂತ ನಿಶೆ/ಹೊಗೆಗೆಶರಣಾಗುವ/ಹುಡುಗಿಯನ್ನು ಕೊಲೆ ಮಾಡುವ ಹುಡುಗರ ನಡುವೆ ಈ ಹುಡುಗನ ವಿಶಿಷ್ಠ ವ್ಯಕ್ತಿತ್ವ ವನ್ನು ಮೆಚ್ಚಲೇ ಬೇಕಲ್ವಾ.
- ಕು.ಸ.ಮಧುಸೂದನ ರಂಗೇನಹಳ್ಳಿ
