ಪ್ರೀತಿ ತೀರಾ ಆತಂಕಕಾರಿ.ಪ್ರೀತಿ ಎಂದೂ ಮಾರಾಟದ ವಸ್ತು ಅಲ್ಲ. ಕೊಡು ಕೊಳ್ಳುವ ವ್ಯವಹಾರ ಅಲ್ಲ – ಜಿಡ್ಡು ಕೃಷ್ಣಮೂರ್ತಿ. ಲೇಖಕರಾದ ಎ. ಎಸ್. ಪ್ರಭಾಕರ ಅವರು Commentaries on Living ಪುಸ್ತಕದ ಪರಿಚಯ ಮಾಡುವುದರ ಮೂಲಕ ಪ್ರೀತಿಯ ಅರ್ಥವನ್ನು ಓದುಗರ ಮುಂದಿಟ್ಟಿದ್ದಾರೆ, ಮುಂದೆ ಓದಿ…
ಗೆಳೆಯರೆ,
‘ಜೆಕೆ’ ಎಂದೇ ಪ್ರಸಿದ್ಧರಾದ ಜಿಡ್ಡು ಕೃಷ್ಣಮೂರ್ತಿಯವರನ್ನು ಕಾಲೇಜು ದಿನಗಳಲ್ಲಿ ತೀವ್ರವಾಗಿ ಓದಿದ್ದೆ. ಅವರ ಪುಸ್ತಕಗಳು ಆಗ ಇಂಗ್ಲೀಷನಲ್ಲಿ ಮಾತ್ರ ಲಭ್ಯವಿದ್ದವು. Commentaries on Living ಎಂಬ ಅವರ ಒಂದು ಪುಸ್ತಕವನ್ನು ಖರೀದಿಸಿ ಓದಲು ಪ್ರಾರಂಭಿಸಿದೆ. ಆಮಟ್ಟದ ಫಿಲಾಸಫಿಯನ್ನು ಇಂಗ್ಲೀಷಿನಲ್ಲಿ ಓದಿ ಅರ್ಥೈಸಲು ಸಾಧ್ಯವಿಲ್ಲದ ದಿನಗಳವು. ಅದೇ ವರ್ಷವಿರಬೇಕು, ಒಮ್ಮೆ ಬೆಂಗಳೂರಿಗೆ ಹೋಗಿದ್ದೆ. ಆಗ ಉಪ್ಪಾರಪೇಟೆ ಪೋಲೀಸ್ ಠಾಣೆ ಬಳಿ ಆಗ ಹಳೆಯ ಪುಸ್ತಕಗಳ ಅಂಗಡಿಗಳ ಜಾತ್ರೆಯೇ ಇರುತ್ತಿತ್ತು. ಆ ಪುಸ್ತಕಗಳ ಘನಘೋರ ರಾಶಿಯಲ್ಲಿ `ಪ್ರೀತಿ ನದಿಯಂತೆ…….’ ಮತ್ತು ‘ನಮ್ಮೊಳಗಿನ ನಾವು’ ಎಂಬ ಜೆಕೆಯವರ ಅನುವಾದಿತ ಪುಟ್ಟ ಪುಸ್ತಕಗಳು ಸಿಕ್ಕವು. ಈ ಎರಡೂ ಪುಟ್ಟ ಪುಸ್ತಕಗಳನ್ನು Commentaries on Living ಎಂಬ ಉದ್ಗ್ರಂಥದ ಆಯ್ದ ಭಾಗಗಳಿಂದ ರೂಪಿಸಲಾಗಿತ್ತು. Pupul Jayakar ಎನ್ನುವವರು ಈ ಎರಡೂ ಪುಸ್ತಕಗಳನ್ನು ಸಂಕಲಿಸಿ ಪ್ರಕಟಿಸಿದ್ದಾರೆ. (ಇವುಗಳ ಕನ್ನಡ ಅನುವಾದ ಮಾಡಿದ ಲೇಖಕರ ಹೆಸರು ನನಗೆ ಮರೆತು ಹೋಗಿದೆ.) Pupul Jayakar ಅವರು ಜೆಕೆಯವರ ಆಪ್ತ ಗೆಳತಿಯಾಗಿದ್ದವರು. ಸ್ವತಃ ಲೇಖಕಿಯೂ ಆಗಿದ್ದ . Pupul Jayakar ಅವರು ಇಂದಿರಾಗಾಂಧಿಯವರಿಗೆ ಸಾಂಸ್ಕೃತಿಕ ಸಲಹೆಗಾರರಾಗಿಯೂ ಕೆಲಸ ಮಾಡಿದವರು. ಜಿಡ್ಡು ಕೃಷ್ಣಮೂರ್ತಿಯವರ ಕೃತಿಗಳ ಪ್ರಕಟಣೆಯಲ್ಲಿ ಇವರು ಪ್ರಧಾನ ಪಾತ್ರ ವಹಿಸಿದವರು. ಮೇಲ್ಕಾಣಿಸಿದ ಎರಡು ಪುಸ್ತಕಗಳನ್ನು ಜಿಡ್ಡು ಕೃಷ್ಣಮೂರ್ತಿಯವರನ್ನು ಓದಲು ಆರಂಭಿಸುವ ಎಳೆಯರಿಗಾಗಿಯೇ ರೂಪಿಸಿದಂತಿದೆ. ಆ ಎರಡು ಪುಸ್ತಕಗಳೂ ಈಗ ನನ್ನ ಬಳಿ ಇಲ್ಲ. ಗಾಢ ಪ್ರೀತಿಯಲ್ಲಿ ತೊಡಗಿದ್ದ ನನ್ನ ಒಬ್ಬ ಗೆಳೆಯ ಅಂದು ಎರಡೂ ಪುಸ್ತಕಗಳನ್ನು ಓದಲು ತೆಗೆದುಕೊಂಡು ಹೋದವನು ಹಿಂದಿರುಗಿಸಲಿಲ್ಲ.

ಫೋಟೋ ಕೃಪೆ : goodreaders
ಜೆಕೆ ಒಮ್ಮೆ ವ್ಯಕ್ತಿವಾದಿಯಂತೆ, ಇನ್ನೊಮ್ಮೆ ಸಾಮಾಜಿಕ ಚಿಂತಕನಂತೆ, ಮಗದೊಮ್ಮೆ ಕ್ರಾಂತಿಕಾರಿಯಂತೆ ಓದುಗನಿಗೆ ಕಾಣಿಸುತ್ತಾರೆ. ಜೆಕೆಯವರು (ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ)ನಮ್ಮ ಸಾಮಾಜಿಕ ಚಿಂತನೆಯ ಯಾವುದೋ ಒಂದು ವಲಯಕ್ಕೆ ಅಥವಾ ಒಂದು ಚೌಕಟ್ಟಿಗೆ ಸುಲಭವಾಗಿ ಒಗ್ಗುವುದಿಲ್ಲ. ಈ ಕಾರಣಕ್ಕಾಗಿಯೇ ಜೆಕೆಯವರು, ಅವರಿಗಿಂತ ವಯಸ್ಸಿನಲ್ಲಿ ಕಿರಿಯರಾದ ಓಶೋ (ರಜನೀಶ್) ಮತ್ತು ಯ. ಜಿ. ಕೃಷ್ಣಮೂರ್ತಿಯಂತವರಿಗೆ ಅರಾಜಕರಂತೆ ಮತ್ತು ಅಮೂರ್ತ ಚಿಂತಕರಂತೆ ಕಾಣುತ್ತಾರೆ. ಜೆಕೆಯವರನ್ನು ಪ್ರೀತಿಸುತ್ತಲೇ ಓಶೋ ಕಟುವಾಗಿ ಟೀಕಿಸುತ್ತಾರೆ. ಆದರೆ, ವ್ಯಕ್ತಿ ಮತ್ತು ಸಮಾಜದ ನಡುವೆ ಇರಬೇಕಾದ ಆರೋಗ್ಯಕರ ಸಂಬಂಧಗಳನ್ನು ಅಮೂಲಾಗ್ರವಾಗಿ ಈ ಮೂರೂ ಜನ ಚಿಂತಕರು ಶೋಧಿಸಿದ್ದಾರೆ. ಇಂದಿನ ವಿಷಮ ರಾಜಕೀಯ ಸಂದರ್ಭದಲ್ಲಿ ಈ ಮೂರೂ ಜನ ಆಧುನಿಕ ಚಿಂತಕರು ಹಲವು ಕಾರಣಗಳಿಗಾಗಿ ನಮಗೆ ಆಸರೆಯಾಗಿ ನಿಲ್ಲಬಲ್ಲರು.
ಅಂದು ನಾನು ಓದಿದ್ದ ‘ಪ್ರೀತಿ ನದಿಯಂತೆ…….’ ಮತ್ತು ‘ನಮ್ಮೊಳಗಿನ ನಾವು’ ಎಂಬ ಪುಟ್ಟ ಪುಸ್ತಕಗಳಿಂದ ನಾನು ಮಾಡಿಟ್ಟುಕೊಂಡಿದ್ದ ಕೆಲವು ನೋಟ್ಸ್ ಗಳು ಅಚಾನಕ್ಕಾಗಿ ನನಗೆ ಮೊನ್ನೆ ಸಿಕ್ಕವು. ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕಗಳಿಂದ ಆಯ್ದ ಈ ಟಿಪ್ಪಣಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ದ್ವೇಷವೇ ತಾಂಡವವಾಡುತ್ತಿರುವ ಇಂದಿನ ದಿನಮಾನಗಳಲ್ಲಿ ಪರಸ್ಪರ ಪ್ರೀತಿಸಬೇಕು ಎಂದು ಹೇಳಿಕೊಡುವ ಜೆಕೆಯಂತವರು ಇಂದಿಗೂ ಪ್ರಸ್ತುತ ಎಂಬುದು ನನ್ನ ಅಭಿಪ್ರಾಯ. ಈ `ಪ್ರೇಮಿಗಳ ದಿನಾಚರಣೆ’ಯ ನೆಪದಲ್ಲಿ ಜೆಕೆಯವರ ಈ ಮಾತುಗಳನ್ನು ನಾವು ಮತ್ತೆ ಮತ್ತೆ ಮೆಲುಕು ಹಾಕಬೇಕಿದೆ. ಈ ಕೆಳಗೆ ಜಿಡ್ಡು ಅವರ ಮಾತುಗಳಿವೆ, ಓದಿ
ಪ್ರೀತಿ ನದಿಯಂತೆ……
—————————-
ಪ್ರೀತಿ ನದಿಯಂತರ
ಹರಿವೆಡೆಯಲ್ಲ
ನದಿ ಜೀವ ತುಂಬುತ್ತದೆ
ಮಲಿನವಾದರೂ, ಮಾರು ಕ್ರಮಿಸುವಷ್ಟರಲ್ಲಿ
ತಿಳಿಗೊಂಡು ಸಾಗುತ್ತದೆ.
ಏನೂ
ಪ್ರೀತಿಯನ್ನು ಮಲಿನಗೊಳಿಸಲಾರದು
ಒಳಿತು, ಕೆಡುಕು, ಸೌಂದರ್ಯ, ಕುರೂಪ
ಎಲ್ಲ ಅದರಲ್ಲಿ ಕರಗುತ್ತದೆ.
ಪ್ರೀತಿ
ತನ್ನೊಳಗೆ ತಾನೇ ಪರಿಪೂರ್ಣ
ಅನಂತ
– ಜಿಡ್ಡು ಕೃಷ್ಙಮೂರ್ತಿ
(ಪ್ರೀತಿ ನದಿಯಂತೆ)
******
ಎಲ್ಲರಲ್ಲೂ ಇದೆ ಪ್ರೀತಿಯ ಮಹಾಪೂರ
ಎಲ್ಲರಲ್ಲೂ ಪ್ರೀತಿಯ ತುಡಿತವಿದೆ. ಆರದ ಪ್ರೀತಿಯ ಕುಡಿ ಇದೆ. ಎಲ್ಲರಲ್ಲೂ ಪ್ರೀತಿಯ ಮಹಾಪೂರವೇ ಇದೆ. ಮನುಷ್ಯಕೃತ ರಸ್ತೆ, ವಾಹನ ಗದ್ದಲಗಳ ಪರಿವೆಯೂ ಇಲ್ಲದಂತೆ ಅವುಗಳ ನಡುವೆಯೇ ಆಕಾಶಕ್ಕೆ ಕೊಂಬೆ ಚಾಚಿ ನಿಂತ ಮರ, ಅದರ ಬೇರು ಮಣ್ಣೊಳಗೆ, ಮಣ್ಣಿನ ಆಳದಾಳದಲ್ಲಿ, ರೆಂಬೆ ಕೊಂಬೆಗಳು ಮುಗಿಲತ್ತ.

Pupul Jayakar anad J krishnamurti (ಫೋಟೋ ಕೃಪೆ : alchetron)
ನಮ್ಮ ಒಣ ಸಂಬಂಧಗಳಲ್ಲಿ ಸೌಂದರ್ಯ, ಸೌಗಂಧ ಹೇಗೆ ತಾನೆ ಬಂದೀತು?
ಪ್ರೀತಿ ಇರುವ ಸಂಬಂಧಗಳಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳಬೇಕು. ಈಗ, ಈ ಕ್ಷಣಕ್ಕೆ ಇದು ಆಗಲೇಬೇಕಾದ ಕೆಲಸ. ತಾಜಾ, ನಿತ್ಯ ನೂತನ ಎನಿಸದ ಬದುಕು ಏಕತಾನತೆಯಿಂದ ಜಡಗೊಳ್ಳುತ್ತದೆ. ಪ್ರೀತಿ ಒಂದು ಏಕತಾನದ ಹವ್ಯಾಸವಾಗಿಬಿಟ್ಟಿದೆ ನಮಗೆ. ಪ್ರೀತಿ; ಹವ್ಯಾಸವಾಗಲಿ, ಬೇಸರವಾಗಲಿ ಅಲ್ಲ, ಆಗುವುದಿಲ್ಲ. ನಾವು ಪ್ರೀತಿಸುವುದಿಲ್ಲ. ಮೇಲುಮೇಲಷ್ಟೇ ಅಂಟಿ ಉಳಿಯುತ್ತೇವೆ. ಸಣ್ಣ ಸಣ್ಣ ಸಂಗತಿಗಳಿಂದಲೇ ನಮಗೆ ತೃಪ್ತಿ, ಸುಖ, ಅಸುಖ ಎಲ್ಲ. ಘೋಷಣೆಗಳಲ್ಲಿ, ಖಾಲಿ ಬಡಬಡಿಕೆಗಳಲ್ಲಿ ನಮ್ಮ ಅಂತರಂಗ ವ್ಯಸ್ತವಾಗಿದೆ. ನಾಲಿಗೆಯ ಮೇಲಿನ ಮಾತುಗಳಿಗೂ ನಮ್ಮ ಹೃದಯಕ್ಕೂ ಸಂಬಂಧ ಕಡಿದುಹೋಗಿದೆ. ಬರೀ ಮಾತು. ಮಾತುಗಳೇ ಇಂದಿನ ನೈಜ ಸಮಸ್ಯೆ. ಅಂತರಂಗದ ಕಪಟವನ್ನು ಮಾತುಗಳು ಬಹಳ ದಿನ ಮುಚ್ಚಿಡಲಾರವು. ಮಾತೇ ಬಂಡವಾಳವಾಗಿಬಿಟ್ಟಿರುವ ನಾಜೂಕಿನ ಕ್ರೌರ್ಯದಲ್ಲಿ ನಾವು ಬೇಯುತ್ತಿದ್ದೇವೆ. ಇಂಥಹ ಕೀಳು ವರ್ತಮಾನಗಳಲ್ಲಿ ನಮ್ಮ ಬದುಕು ನವೆಯುತ್ತಿದೆ.
****
‘ಪ್ರೀತಿ’ ಎಂದರೆ ಅನಂತದ ಅರಿವು
ಸುಖ ನಿದ್ದೆಯಿಂದ ತಟ್ಟಿ ಎಬ್ಬಿಸಿದ ಮುಂಜಾವಿನ ಮೊದಲ ಕಿರಣ, ಮಲಗುವ ಮುನ್ನ ಶಾಂತ ಆಗಸದ ಚುಕ್ಕಿಗಳನ್ನು ಗಮನಿಸಿರಬಹುದು.
ಪ್ರೀತಿ ?
ಪ್ರೀತಿಯ ಅಪಾರ ಮಾರ್ದವತೆ ಮತ್ತು ಶಕ್ತಿಯ ಕುರಿತು ಏನೂ ಅರಿಯದವರು ನಾವು. ‘ಪ್ರೀತಿ’ ನಮಗೆ ಒಂದು ಪದ ಅಷ್ಟೇ, ಮನುಷ್ಯರನ್ನು ಕೊಂದು ಗರ್ವದಿಂದ ನಿಲ್ಲುವ ಸೈನ್ಯಾಧಿಕಾರಿ, ಪ್ರಾಣಿಗಳ ಜೀವ ಅಳಿಸಿ ಮಾರಿ ಬೀಗುವ ಕಟುಕ, ಧಿಮಾಕಿಂದ ಮೆರೆವ ಶ್ರೀಮಂತ, ಯೌವನಕ್ಕೆ ಆಗಷ್ಟೇ ಕಣ್ಣು ತೆರೆಯುತ್ತಿರುವ ಹುಡುಗ, ಹುಡುಗಿಯರು ಎಲ್ಲ ಬಳಸಿ ಸವೆದ ಪದ ಈ ‘ಪ್ರೀತಿ’. ಆದರೆ ಇದು ಪ್ರೀತಿಯೇ? ಪ್ರೀತಿಯ ಸವಿಯಲ್ಲಿ ಅಪಾರತೆ ಇದೆ, ಗಾಢತೆ ಇದೆ. ನಾವು ಇರದ ಸ್ಥಿತಿ ಇದೆ. ಇದ್ಯಾವುದೂ ಅರಿಯದ ನಮಗೆ ‘ಪ್ರೀತಿ’ ಒಂದು ಶಬ್ದ, ಒಂದು ಪದ ಮಾತ್ರ
ನಿಜ ‘ಪ್ರೀತಿ’ ಎಂದರೆ ಅನಂತದ ಅರಿವು.

ಜಿಡ್ಡು ಕೃಷ್ಣಮೂರ್ತಿ (ಫೋಟೋ ಕೃಪೆ : hindu-blog)
ಶ್ರೀಮಂತ ಬದುಕಿನ ಕಡೆಗೆ ಖಾಲಿ ಹೃದಯಗಳ ಯಾತ್ರೆ
ಬದುಕು ದ್ವಂದ್ವ, ನಮ್ಮ ಸಂಬಂಧಗಳ ಒರಟೊರಟು, ಹಸಿ ಹಸಿ. ಸಂಬಂಧವೆಂದರೆ ನಮ್ಮ ಅನುಕೂಲಕ್ಕಿರುವ ಸಲೀಸು ವ್ಯವಹಾರ, ಅಲ್ಲಿ ಪ್ರೀತಿ ಇಲ್ಲ. ಪ್ರೀತಿ ಒಂದು ಸ್ಥಿತಿ. ಮನುಷ್ಯನ ಎಲ್ಲ ಸಮಸ್ಯೆಗಳನ್ನೂ ನೀಗಿಸಿಬಿಡುವ ಸ್ಥಿತಿ.
ಬದುಕು ಎಷ್ಟೊಂದು ಶ್ರೀಮಂತ, ಅಪೂರ್ವಗಳ ನಿಧಿ. ನಾವು ಅದರತ್ತ ಬರಿದಾದ ಹೃದಯದೊಡನೆ ಹೋಗುತ್ತೇವೆ. ಬದುಕಿನ ಅಪಾರತೆಯನ್ನು ನಮ್ಮ ಖಾಲಿ ಹೃದಯಗಳಲ್ಲಿ ತುಂಬಿಸಿಕೊಳ್ಳುವ ಪರಿ ತಿಳಿಯದು. ನಮ್ಮದು ಅಂತರಂಗದ ಬಡತನ. ಸಿರಿವಂತಿಕೆ ನಮ್ಮ ಕಡೆ ಕೈ ಚಾಚಿದಾಗಲೂ ನಿರಾಕರಿಸಿಬಿಡುತ್ತೇವೆ. ಅಪಾರ ಜಲರಾಶಿಯತ್ತ ಪುಟ್ಟ ಪಾತ್ರೆ ಹಿಡಿದು ಹೋಗುವವರು ನಾವು. ಹೀಗಾಗಿಯೇ ಬದುಕು ನಮಗೆ ಒಂದು ಸಣ್ಣತನದ, ಮಿತಿಗೊಂಡ ವ್ಯವಹಾರ ಮಾತ್ರ.
ಈ ಭುವಿ ಎಷ್ಟು ಚಂದವಿರಬಹುದಿತ್ತು. ಇಲ್ಲಿ ಎಷ್ಟೊಂದು ಸೌಂದರ್ಯ ಇದೆ. ವೈಭವ ಇದೆ, ಇಲ್ಲಿ ಅದೆಷ್ಟು ಕೊನೆ ಇರದ ಮೋಹಕತೆ ಇದೆ. ನಾವೋ; ನಮ್ಮದೇ ನೋವುಗಳಲ್ಲಿ ಸಿಕ್ಕಿಕೊಂಡವರು. ಇನ್ಯಾರೋ ಹೊರಬರುವ ದಾರಿ ತೋರಿದಾಗಲೂ ಅತ್ತ ಉದಾಸೀನ, ಮತ್ತೆ ಅದೇ ನೋವು, ತೊಳಲಿಕೆಗಳಲ್ಲಿ.
***
ನಾವೂ ಪ್ರೀತಿಸುತ್ತೇವೆ.
ಪ್ರೀತಿಯ ಮುಖ್ಯ ಸತ್ವ ಭಯ, ಹಶಾಶೆ, ದುಃಖ ಅಥವಾ ಆಸೆ. ಅದನ್ನೇ
‘ಪ್ರೀತಿ’ ಅನ್ನುತ್ತೇವೆ.
ಅದು ಪ್ರೀತಿಯೇ ?
ಪ್ರೀತಿ ತೀರಾ ಆತಂಕಕಾರಿ. ಅದು ಮಾತ್ರ ಸಂಪೂರ್ಣ ಸುಖದ ಕಾಂತಿ ತರಬಲ್ಲದು. ಕೆಲವರು ಮಾತ್ರ ಪ್ರೀತಿಸಬಲ್ಲರು. ಕೆಲವರಿಗಷ್ಟೇ ಪ್ರೀತಿ ಬೇಕು. ನಮ್ಮ ಪ್ರೀತಿಗೆ ನಮ್ಮದೇ ಚೌಕಟ್ಟುಗಳು, ಪ್ರೀತಿ, ನಮಗೆ ಮಾರಾಟದ ವಸ್ತು. ನಮ್ಮದು ವ್ಯಾಪಾರಿ ಬುದ್ದಿ, ಆದರೆ: ಪ್ರೀತಿ ಎಂದೂ ಮಾರಾಟದ ವಸ್ತು ಅಲ್ಲ; ಕೊಡು ಕೊಳ್ಳುವ ವ್ಯವಹಾರ ಅಲ್ಲ.
ನಮಗಾದರೋ ಸಂಬಂಧಗಳಲ್ಲಿ ತೊಡಗಿಕೊಳ್ಳುವುದು ಒಂದು ಹವ್ಯಾಸ. ನಮಗೆ ಸಂಬಂಧವೆಂದರೆ ನಿಶ್ಚಿತ ಚೌಕಟ್ಟು, ಯಾವುದೋ ಒಂದನ್ನು ಒಪ್ಪಿ ನಡೆಯುತ್ತೇವೆ. ಅದಕ್ಕೊಂದಿಷ್ಟು ಕೊಂಕಾದರೂ ತಾಳ್ಮೆಗೆಡುತ್ತೇವೆ. ಆನಿಶ್ಚಯದ ಕ್ಷಣ ಕೂಡ ಸಹಿಸಲಾರೆವು. ಅಂಥದ್ದನ್ನು ಯೋಚಿಸಲೂ ಮನಸು ಹಿಂದೆಗೆಯುತ್ತದೆ. ಎಲ್ಲ ಎಷ್ಟೊಂದು ಚಾಚೂ ತಪ್ಪದೆ ನಡೆಯಬೇಕು. ಎಲ್ಲ ಸುರಕ್ಷಿತ, ಭದ್ರಗೊಳಿಸಿಕೊಂಡದ್ದು, ಯಾವ ಹೊಸತನಕ್ಕೂ ಅಲ್ಲಿ ಅವಕಾಶವಿಲ್ಲ. ಸಂಬಂಧಕ್ಕೆ ಪುನರ್ಜೀವ ತುಂಬಬಲ್ಲ ಹೊಸ ಉಸುರಿನ ಸೆಳಕು ಸೋಕಲೂ ಆಸ್ಪದವಿರದು.
ಬದುಕು ಮತ್ತು ಸಂಬಂಧ
ಜಡತೆ, ಬೇಸರದ ಗೊಡಗು ನಮ್ಮನ್ನೆಲ್ಲ ಆವರಿಸಿದೆ. ಇನ್ನೊಬ್ಬರ ಜೊತೆಗಿನ ಸಂಬಂಧವನ್ನು ನಾನು ಅನುಕೂಲಕ್ಕೆ ತಕ್ಕಂತೆ ಏರ್ಪಡಿಸಿಕೊಳ್ಳುತ್ತೇವೆ. ನಮ್ಮ ಮೂಗಿನ ನೇರಕ್ಕೆ, ನಮ್ಮ ಇಚ್ಛೆಗಳ ಪೂರೈಕೆಗೆ ನಮಗೆ ಸಂಬಂಧಗಳು ಬೇಕು. ಸಂಬಂಧಗಳ ನೈಜ ನಿಲುವುಗಳ ಅನುಸಾವಾಗಿ ಅವುಗಳನ್ನು ನಾವು ಹೊಂದುವುದಿಲ್ಲ. ನಾವೊಪ್ಪಿದ ಅಥವಾ ನಮ್ಮ ಅನುಕೂಲದ ಕ್ರಮಕ್ಕೆ ‘ಸಂಬಂಧ’ ಎಂದು ಕರೆದುಕೊಳ್ಳುತ್ತೇವೆ. ತೀರಾ ಎಚ್ಚರದಿಂದ ಗಮನಿಸಿದಾಗಷ್ಟೆ ಸಂಬಂಧದ ಒಳಗಿನ ನವಿರು, ಮಿಂಚಿನ ಗತಿ, ಭೂಮಿಯನ್ನೂ ಮೀರಿದ ವಿಶಾಲತೆ ತಿಳಿದೀತು. ಒ೦ದ೦ತೂ ನಿಜ, ಸಂಬಂಧವೇ ಬದುಕು.
ನಮ್ಮ ಮನಸು ಭದ್ರತೆಯ ಸಣ್ಣ ಸಣ್ಣ ಕೋಟೆಗಳನ್ನು ನಿರ್ಮಿಸುತ್ತಾ ಹೋಗುತ್ತದೆ. ನಮಗೆ ಎಲ್ಲವೂ ಸುರಕ್ಷಿತವಿರಬೇಕು. ನಮ್ಮ ಸಂಬಂಧಗಳು ಸುರಕ್ಷಿತವಿರಬೇಕು. ನಮ್ಮ ಗುರಿ, ಭರವಸೆ, ಅಷ್ಟೇಕೆ ನಮ್ಮ ಭವಿಷ್ಯ ಕೂಡ ಸುರಕ್ಷಿತವಿರಬೇಕೆಂದು ಬಯಸುವವರು ನಾವು. ಅದಕ್ಕಾಗಿ ನಮ್ಮೊಳಗೇ ಕೋಟೆಗಳನ್ನು ಕಟ್ಟುತ್ತಾ ಹೋಗುತ್ತೇವೆ. ಯಾರಿಂದಲಾದರೂ ನೆಮ್ಮದಿ ಭಂಗ ಆದರೆ ಸಿಟ್ಟು ಬರುತ್ತದೆ.
ಸಂಘರ್ಷವೇ ಇರದ ತೊಂದರೆ ಇರದ ವಲಯಗಳನ್ನು ಮನಸು ಸದಾ ಹುಡುಕುತ್ತಾ ಹೋಗುವುದೇ ವಿಚಿತ್ರ. ನಮ್ಮ ಬದುಕೆಂದರೆ ಬೇರೆ ಬೇರೆ ರಕ್ಷೆಯ ವಲಯಗಳಲ್ಲಿ ಕೋಟೆ ಕಟ್ಟುತ್ತಾ ಕೆಡವುತ್ತಾ ಮತ್ತೆ ಕಟ್ಟುತ್ತಾ ಹೋಗುವುದು. ಅದರಿಂದ ಮನಸು ದಣಿಯುತ್ತದೆ. ಅಲ್ಲಿನ ತಾಜಾ ಉಸಿರು, ಪ್ರಾಂಜಲತೆ ಕುಸಿದು ಬೀಳುತ್ತದೆ. ಉದ್ಭವಿಸಿದ ಸಂಘರ್ಷಗಳು ಅವುಳಗಷ್ಟಕ್ಕೆ ಮಾಯವಾಗುವುದಿಲ್ಲ. ಸಂಘರ್ಷಗಳೆಲ್ಲ ನಮ್ಮ ಸೃಷ್ಟಿ. ಸಂಘರ್ಷಗಳಿಂದ ಹೊಮ್ಮುವ ಹಿಂಸೆಗಳಿಗೆ ಪ್ರೀತಿ ಮಾತ್ರ ನೈಜ ಮುಲಾಮು. ಈ ಮುಲಾಮು ದೊಕುವುದು ನಮ್ಮ ಹೃದಯದ ಪಾಂಜಲತೆಯಲ್ಲಿ. ಈ ಪ್ರಾಂಜಲತೆಗೆ ತಾಯಿ ಎಂದರೆ ನಿಜದ ಮನುಷ್ಯತ್ವ.
ಮಾನವತೆಯೇ ಮನುಷ್ಯ ಬದುಕಿನ ಮೂಲ ಸಿದ್ಧಾಂತ.
- ಎ. ಎಸ್. ಪ್ರಭಾಕರ (ಲೇಖಕರು, ಸಾಹಿತಿಗಳು) ಹಂಪಿ
