ಜೀವನ್ಮರಣದ ನಡುವೆ ಸೆಣೆಸಾಡುತ್ತಿರುವ ವ್ಯಕ್ತಿಯೊಬ್ಬ ತನ್ನ ಒಡಹುಟ್ಟಿದ ತಮ್ಮನ ಬರುವಿಕೆಗಾಗಿ ಆಸ್ಪತ್ರೆಯಲ್ಲಿ ಕಾಯುತ್ತಿರುತ್ತಾನೆ. ಆದರೆ ತಮ್ಮ ಬರುವುದೇ ಇಲ್ಲ ಇದು ಸಂದೀಪ ನಾಯಕರ ‘ಕರೆ’ ಕತೆಯಲ್ಲಿ ಬರುವ ಒಂದು ಪಾತ್ರ. ಲೇಖಕ ಮೋಹನ್ ಕುಮಾರ್ ಡಿ ಎನ್ ಅವರು ಗೋಡೆಗೆ ಬರೆದ ನವಿಲುನಲ್ಲಿ ಬರುವ ಪ್ರತಿ ಕತೆಯನ್ನು ಓದುಗರ ಗಮನ ಸೆಳೆಯುವಂತೆ ಮಾಡಿದ್ದಾರೆ, ಮುಂದೆ ಓದಿ…
ಪುಸ್ತಕ : ಗೋಡೆಗೆ ಬರೆದ ನವಿಲು
ಲೇಖಕರು : ಸಂದೀಪ ನಾಯಕ
ಪ್ರಕಾಶಕರು : ಛಂದ ಪುಸ್ತಕ
ಪುಟಗಳು : 113
ಬೆಲೆ: 60/-
ಸಂದೀಪ ನಾಯಕರ ಕತೆಗಳು ಮೂಲದಲ್ಲಿ ಸರಳವಾಗಿ ನಿರೂಪಿತಗೊಂಡ ಕತೆಗಳು. ನೇರವಾಗಿ ಹೇಳಲ್ಪಟ್ಟಿರುವುದರಿಂದ ಓದುವಾಗ ಯಾವುದೇ ರೀತಿಯ ಗೊಂದಲಾಗಳುಂಟಾಗುವುದಿಲ್ಲ. ಒಂದೇ ಓಘಕ್ಕೆ ಓದಿಸಿಕೊಂಡು ಹೋಗುವ ಗುಣ ಕತೆಗಳಲ್ಲಿವೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೇ ಭಾಷಾ ಬಳಕೆ. ಎಲ್ಲಿಯೂ ಅರ್ಥವಾಗದ ಭಾಷಾ ಬಳಕೆ ಯಾವ ಕತೆಗಳಲ್ಲೂ ಕಾಣುವುದಿಲ್ಲ. ಹೀಗಾಗಿ ಸರಾಗವಾಗಿ ಓದಬಹುದು.
“ಆನೆ ಸಾಕಿದ ಮನೆಗೆ ಎರಡು ಹೂದಂಡೆ“ಯಲ್ಲಿ ಹೂವಾಡಗಿತ್ತಿಯೊಬ್ಬಳು ನಿಶ್ಚಯವಾದ ತನ್ನ ಮಗಳ ಮದುವೆಗೆ ಹಣವನ್ನು ಕೇಳಲು ಹಲವು ವರ್ಷಗಳಿಂದ ಆನೆ ಸಾಕಿದ್ದ ಮನೆಯೊಡತಿಯ ಬಳಿ ಹಣ ಕೇಳಲು ಪರಿತಪಿಸುವ ಕತೆಯಾಗಿದೆ.
“ಕರೆ“ಯಲ್ಲಿ ಆಸ್ಪತ್ರೆಯಲ್ಲಿ ಮಲಗಿ ಜೀವನ್ಮರಣದ ನಡುವೆ ಸೆಣೆಸಾಡುತ್ತಿರುವ ವ್ಯಕ್ತಿಯೊಬ್ಬ ಒಡಹುಟ್ಟಿದ ತಮ್ಮ ನನಗೆ ಹೀಗಾದರೂ ನೋಡಲು ಬರಲಿಲ್ಲವೆಂದು, ಅವನನ್ನು ನೋಡಲು ಬಂದವರ ಬಳಿ ತಮ್ಮನಿಗಾಗಿ ಪರಿತಪಿಸಿ ತಮ್ಮ ಬಂದು ನೋಡಿಕೊಂಡು ಹೋಗುವಂತೆ ಕರೆ ಕಳುಹಿಸುತ್ತಲೇ ಇರುತ್ತಾನೆ. ತಮ್ಮನಿಗೆ ಅಣ್ಣ ಆಸ್ಪತ್ರೆಯಲ್ಲಿರುವ ಸಂಗತಿ ತಿಳಿದೂ ಬಾರದೆ ಉಳಿದಿರುತ್ತಾನೆ; ಎಂದೋ ಮಗಳ ಮದುವೆಗೆ ಅಣ್ಣನ ಸಂಗಡ ತೆಗೆದುಕೊಂಡ ಸಾಲ ಆಸ್ಪತ್ರೆಗೆ ಹೋದರೆ ಮರಳಿಸುವಂತೆ ಕೇಳಿಬಿಡುವನೇನೋ ಎನ್ನುವ ಹೆದರಿಕೆಯಿಂದ. ಅಣ್ಣನ ಕರೆ ತಮ್ಮನನ್ನು ಕರೆ ತರುವಲ್ಲಿ ಕೊನೆಗೂ ಫಲ ನೀಡುವುದಿಲ್ಲ.

ಗೋಡೆಗೆ ಬರೆದ ನವಿಲು ಪುಸ್ತಕ ಮುಖಪುಟ
“ಮರೆತು ಹೋದ ಒಂದು ಸಂಬಂಧ” ಹೆಸರೇ ಹೇಳುವಂತೆ ಬಾಲ್ಯದಲ್ಲಿ ಎದುರಿನ ಮನೆಯಲ್ಲಿ ಕಂಡಿದ್ದ ಮನೆಯವರೊಟ್ಟಿಗಿನ ಬಾಂಧವ್ಯಕ್ಕೆ ಸಂಬಂಧಿಸಿದ ಕತೆಯಾಗಿದೆ. ಸಣ್ಣಂದಿನಲ್ಲಿ ಆ ಮನೆಯಲ್ಲಿನ ಹುಡುಗಿಯ ಜೊತೆ ಆಡಿದ್ದು ನಲಿದದ್ದು, ಅದನ್ನು ಕಂಡ ಅವಳ ಸಾಕು ಅಪ್ಪ ನೀವು ಹೀಗೆಯೇ ಆಡುತ್ತಿದ್ದರೆ ಇಬ್ಬರಿಗೂ ಮದುವೆ ಮಾಡಿಬಿಡುತ್ತೇನೆ ಎಂದದ್ದು ಕಥಾ ನಾಯಕನಿಗೆ ನೆನಪು ಬರುತ್ತದೆ; ತಾಲ್ಲೂಕ್ ಆಫೀಸಿನಲ್ಲಿ ಇಪ್ಪತ್ತು ವರ್ಷಗಳ ನಂತರ ಅದೇ ಎದುರು ಮನೆಯಲ್ಲಿ ವಾಸವಿದ್ದ ಅವನನ್ನು ಕಂಡಾಗ. ಅವಳ ಬಗ್ಗೆ ಕೇಳಿದರೂ ಸಮಂಜಸ ಉತ್ತರವೀಯದೆ ಮಾತು ತಪ್ಪಿಸುತ್ತಾನೆ ಮುದುಕ. ಅವನ ಸಾಕು ಮಗಳು ತಾನಿದ್ದ ಊರಿನಲ್ಲಿಯೇ ಶಿಕ್ಷಕಿಯಾಗಿದ್ದಾಳೆಂದು, ಅವಳ ಗಂಡ ತೀರಿ ಹೋದನೆಂದು ಆ ನಂತರ ಅವನಿಗೆ ತಿಳಿಯುತ್ತದೆ.
“ಇಲ್ಲಿ ಬಂದೆವು ಸುಮ್ಮನೆ” ಕತೆ ನಿಜ ಸಂಗತಿ ಗೊತ್ತಾಗಿ ಬೆಸ್ತು ಬೀಳುವುದರ ಕುರಿತಾಗಿದೆ. ಜಾಯಕ್ಕ ಮಗಳು ಅಳಿಯನನ್ನು ನೋಡಲು ಮುಂಬೈಗೆ ಹೋಗುವಳಿದ್ದಳು. ಮನೆಯನ್ನು ರಾತ್ರಿ ಹೊತ್ತು ಕಾಯಲು ತಿಮ್ಮಕ್ಕನ ಮಗ ಮೋಹನನನ್ನು ಕಳುಹಿಸುವಂತೆ ಕೇಳುತ್ತಾಳೆ. ಜಾಯಕ್ಕನ ಅಳಿಯನ ನೆರವಿನಿಂದ ಮಗನಿಗೊಂದು ನೆಲೆ ಕಲ್ಪಿಸುವ ಹುನ್ನಾರ ಅವಳದು. ಹತ್ತು ದಿನದ ಮಟ್ಟಿಗೆ ಹೋದ ಜಾಯಕ್ಕ ನಾಲ್ಕು ದಿನ ಮುಂಚಿತವಾಗಿ ಮಗಳು ಅಳಿಯನೊಟ್ಟಿಗೆ ವಾಪಸ್ ಆಗುತ್ತಾಳೆ. ನಿಜ ಸಂಗತಿ ಎಂದರೆ ಅವಳ ಅಳಿಯನಿಗೆ ಮುಂಬೈನಲ್ಲಿ ಕೆಲಸವೇ ಇಲ್ಲದೆ ಅತ್ತೆ ಕಳುಹಿಸುವ ದುಡ್ಡಿನಲ್ಲಿ ಜೀವನ ಸಾಗಿಸುತ್ತಿರುತ್ತಾನೆ. ಈ ಸಂಗತಿ ತಿಳಿದ ತಿಮ್ಮಕ್ಕ ಬೆಸ್ತು ಬೀಳುತ್ತಾಳೆ.
“ಉರುಳಿತೊಂದು ಮರ” ರಸ್ತೆ ನಿರ್ಮಾಣಕ್ಕೆ ಅಡ್ಡವಾಗಿ ನಿಂತಿದ್ದ ಪುರಾತನ ಮಾವಿನ ಮರವೊಂದನ್ನು ಕಡಿದು, ರಸ್ತೆ ಹಿರಿದಾಗಿಸಿ, ಆ ಮೂಲಕ ಬಸ್ಸು ಊರೊಳಗೆ ಬರುವಂತೆ ಮಾಡುವ ಪ್ರಯತ್ನ ಹಲವರದ್ದಾಗಿರುತ್ತದೆ. ಆ ಮರದ ಹಣ್ಣನ್ನು ಊರಿನವರೆಲ್ಲ ತಿಂದು ಬೆಳೆದು ದೊಡ್ಡವರಾದವರೇ. ಈಗ ಅವರೇ ಮರ ಕಡಿಯಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಮನೆಯೆದುರೇ ಇದ್ದ ಮರದೊಂದಿಗೆ ಅವಿನಾಭಾವ ಸಂಬಂಧವುಳ್ಳ ಜಯರಾಮ ಮರ ಕಡಿಯಲು ಒಪ್ಪುವುದಿಲ್ಲವಾದರೂ ಊರಿನವರ ದುಷ್ಮನಿ ಬೇಡವೆಂದು ಅನ್ಯಮನಸ್ಕನಾಗಿ ಒಪ್ಪಿರುತ್ತಾನೆ. ಮರ ಕಡಿದ ನಂತರ ಊರಿಗೆ ಬಸ್ಸು ಬರುವುದಿಲ್ಲ. ಅದು ಊರಿನಾಚೆಗೆ ಮೊದಲಿದ್ದ ಜಾಗಕ್ಕೇ ಬಂದು ಹೋಗುತ್ತಿರುತ್ತದೆ. ಕತೆಯಲ್ಲಿ ಮರವನ್ನು ಸಾಂಕೇತಿಕವಾಗಿರಿಸಿಕೊಂಡು ಎಲ್ಲೆಲ್ಲೂ ರಸ್ತೆಗಳ ನಿರ್ಮಾಣಕ್ಕಾಗಿ ನಡೆಯುವ ಮರಗಳ ಮಾರಣಹೋಮವನ್ನು ಚಿತ್ರಿಸಲಾಗಿದೆ. ಆಧುನಿಕತೆಯ ಸೋಗಿನಲ್ಲಿ ಪರಿಸರದ ಮೇಲಾಗುತ್ತಿರುವ ದಬ್ಬಾಳಿಕೆಯನ್ನೂ ಕತೆ ಬಿಂಬಿಸುತ್ತದೆ.
“ಒಂಭತ್ತು..ಎಂಟು..ಎಂಟು” ಬಡತನದಿಂದಾಗಿ ಮನೆಯ ಕೆಲಸಕ್ಕೆ ಸೇರಿದ ಹುಡುಗಿಯೊಬ್ಬಳ ಕತೆ. ಕೆಲಸಕ್ಕೆ ಸೇರಿ ದಿನಗಳೆದಂತೆ ಅವಳಿಗೆ ಮನೆಯ ಒಡೆಯ ಮೊಬೈಲ್ ಕೊಡಿಸುತ್ತಾನೆ; ಖಾಯಿಲೆ ಬಿದ್ದ ಅಮ್ಮನ ಬಗ್ಗೆ ವಿಚಾರಿಸಲು. ಮನೆಗೆಲಸ ತ್ವರಿತಗತಿಯಲ್ಲಿ ಮುಗಿಸಿದ ನಂತರ ಅವಳಿಗೆ ಬೇರೆ ಕೆಲಸವೇ ಇರುವುದಿಲ್ಲ. ಆಗೆಲ್ಲಾ ಅವಳಿಗೆ ಹಳ್ಳಿಯಲಿರುವ ತನ್ನ ಅಮ್ಮನದೇ ಚಿಂತೆ. ಬೆಟ್ಟದಲ್ಲಿ ಹುಲಿ ದಾಳಿಗೆ ಸಿಲುಕಿ ಸತ್ತ ಅಪ್ಪನದೇ ನೆನಪು. ಅಷ್ಟು ಸ್ಪುರದ್ರೂಪಿಯಾಗಿದ್ದ ಅಕ್ಕ ಹೇಳದೆ ಕೇಳದೆ ಯಾವನ ಹಿಂದೆ ಓಡಿ ಹೋದದ್ದರ ಬಗ್ಗೆ ಬೇಸರ. ಜೊತೆಗೆ ತಾನು ಅಕ್ಕನಂತಾಗಬಾರದೆನ್ನುವ ಎಚ್ಚರಿಕೆ. ಒಂದು ದಿನ ಅಕಸ್ಮಾತ್ತಾಗಿ ಅಕ್ಕ ಇದೇ ಊರಿನಲ್ಲಿರುವಳೆಂದು ತಿಳಿದು, ಗೆಳತಿಯೊಬ್ಬಳು ಕೊಟ್ಟ ಅಕ್ಕನ ನಂಬರಿಗೆ ಏನೆಲ್ಲಾ ಮಾತನಾಡಬೇಕೆಂದು ಯೋಚಿಸಿ ನಂಬರ್ ತಿರುಗಿಸಿದಾಗ ‘ನೀವು ಡಯಲ್ ಮಾಡಿದ ಸಂಖ್ಯೆ ಸರಿ ಇದೆಯೇ ಎಂದು ಪರೀಕ್ಷಿಸಿ’ ಎಂದು ಬರುತ್ತದೆ.

‘ಗೋಡೆಗೆ ಬರೆದ ನವಿಲು’ ಸಂದೀಪ ನಾಯಕ
“ಬೊಂಬೆಗೊಂದು ಸೀರೆ“ಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಶರಣ್ ತನ್ನ ಚುರುಕುತನಕ್ಕೆ, ಬುದ್ಧಿವಂತಿಕೆಗೆ ಮತ್ತು ಶೋಕೇಸಿನಲಿಯುವ ಬೊಂಬೆಗಳಿಗೆ ಸೀರೆ ಉಡಿಸುವುದಕ್ಕೆ ಸುತ್ತಲೂ ಹೆಸರುವಾಸಿಯಾಗಿರುತ್ತಾನೆ. ಅಂಗಡಿ ಎದುರಿನ ಜೆರಾಕ್ಸ್ ಅಂಗಡಿ ಹುಡುಗಿ ಮಾನಸಿಯನ್ನು ಕಂಡಾಗೆಲ್ಲ ಅರಿಯಲಾರದ ಮುದ ಮತ್ತು ಪುಲಕ ಅವನಿಗೆ. ಆರಂಭದಲ್ಲಿ ಅಷ್ಟಾಗಿರದ ಅವರಿಬ್ಬರ ಸ್ನೇಹ ಮುಂದೆ ಊರು ಸುತ್ತುವ ಮಟ್ಟಕ್ಕೆ ಬರುತ್ತದೆ. ಅವಳ ಬಗ್ಗೆ ಕೇಳಿದಾಗೆಲ್ಲ ಹಾರಿಕೆಯ ಉತ್ತರ ಕೊಡುತ್ತಾಳೆ. ಇವನಿಗೆ ಮನಸ್ಸಿನಲ್ಲಿರುವುದನ್ನೆಲ್ಲ ಕಕ್ಕುವ ಬಯಕೆ. ಒಂದು ಸಂಜೆ ತುರ್ತು ಮಾತನಾಡಬೇಕೆಂದು ಆಚೆ ಕರೆದುಕೊಂಡು ಹೋಗಿ ತನ್ನ ಹೊಟ್ಟೆಯ ಮೇಲೆ ಅವನ ಕೈ ಸೆಳೆದು ಇಟ್ಟು ತಾನು ಮೂರು ತಿಂಗಳ ಗರ್ಭಿಣಿಯಾಗುವ ಸಂಗತಿ ಹೇಳುತ್ತಾಳೆ. ಅಲ್ಲಿಗೆ ಅವನ ಆಶಾ ಗೋಪುರ ಕುಸಿದು ಬೀಳುತ್ತದೆ.
“ಸಹಿ” ಯಲ್ಲಿ ತನ್ನನ್ನು ದೂರ ಮಾಡಿ ಹೋಗಿ ಇನ್ನೊಂದು ಮದುವೆಯಾದ ಗಂಡ ಕೆಲವು ವರ್ಷಗಳ ಬಳಿಕ ನಿಧನನಗುತ್ತಾನೆ. ಇತ್ತ ಗಂಡ ಈಗ ಬರಬಹುದು ಅಗ ಬರಬಹುದು ಎಂದು ಕಾಯುತ್ತಿದ್ದವಳಿಗೆ ಅವನು ಸತ್ತ ವಾರ್ತೆ ಒಂದು ದಿನ ತಡವಾಗಿ ಬರುತ್ತದೆ. ವಿಧಿಯನ್ನು ಹಣಿಯುತ್ತ ಮನೆಗೆ ವಾಪಸ್ ಆಗುತ್ತಾಳೆ. ಎರಡನೆಯ ಹೆಂಡತಿಯ ಮಗನೊಬ್ಬ ತನ್ನನ್ನು ಕಾಣಲು ಬರುತ್ತಾನೆನ್ನುವ ಸುದ್ದಿ ತಿಳಿದಾಗ ಬಹುಶಃ ನನ್ನ ತರುವಾಯ ಆಸ್ತಿಯನ್ನು ನೋಡಿಕೊಳ್ಳಲಿಕ್ಕೆ ಬರುತ್ತಿರಬಹುದೇನೋ ಎನ್ನುವ ಅನುಮಾನ ಅವಳನ್ನು ಕಾಡುತ್ತದೆ. ಮನೆಗೆ ಬಂದ ಸವತಿಯ ಮಗ ಎರಡು ದಿನಗಳೆದು ಸಂಜೆ ಹೋಗಬೇಕೆನ್ನುವಾಗ ಅಪ್ಪನಿಗೆ ಬರಬೇಕಾದ ಪೆನ್ಶನ್ ವಿಮೆ ಹಣ ನೀನು ಪಾಲು ಬೇಡವೆಂದು ಸಹಿ ಹಾಕಿದರೆ ನನ್ನ ಅಮ್ಮನಿಗೇ ಬರುತ್ತದೆ. ಆ ಹಣದಿಂದ ತಂಗಿಯ ಮದುವೆ ಮಾಡಬಹುದು ಎಂದಾಗ, ಅವಳು ಯಾವುದೇ ಖೇಡವಿಲ್ಲದೆ ಅವನು ತಂದಿದ್ದ ಕಾಗದ ಪತ್ರಗಳಿಗೆ ಸಹಿ ಮಾಡಿ “ಇಷ್ಟಕ್ಕೇ ಮುಗಿಯಿತೆನ್ನಬೇಡ, ಆಗಾಗ್ಗೆ ಮನೆಗೆ ಬರುತ್ತಿರು” ಎಂದು ಭಾರ ತುಂಬಿದ ನುಡಿಗಳಿಂದ ಕಳುಹಿಸಿಕೊಡುತ್ತಾಳೆ.
“ಇನ್ನೊಂದೇ ಕಥೆ“ಯಲ್ಲಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ನಿತ್ಯವೂ ತನ್ನ ಮನೆಗೆ ಕರೆಯಿಸಿಕೊಂಡು ಕಥೆ ಹೇಳುತ್ತಿರುತ್ತಾಳೆ ಶಕುಂತಲಾ. ಬಾಬುವಿಗೆ ಅವಳು ಹೇಳುವ ಕಥೆ ಎಂದರೇ ಅಚ್ಚುಮೆಚ್ಚು. ಶಕುಂತಲಾ ಅಕ್ಕನ ಬಗ್ಗೆ ತಿಳಿದುಕೊಳ್ಳುವ ಉಮೇದು ಬಾಬುವಿಗೆ. ಯಾರನ್ನು ಕೇಳಿದರೂ ಅವಳ ಬಗ್ಗೆ ಹೆಚ್ಚು ಹೇಳುವುದಿಲ್ಲ. ವಿಧವೆಯಾದ ಅವಳು ತನ್ನ ತಂದೆಯ ಮನೆಯಲ್ಲಿ ವಾಸವಿರುತ್ತಾಳೆ. ಎರಡನೆಯ ಮದುವೆ ಮಾಡಲು ಯತ್ನಿಸಿದರೂ ಆಗಿರುವುದಿಲ್ಲ. ಶಾಲೆ ರಜೆಯನ್ನು ಕಳೆಯಲು ಅಜ್ಜಿಯ ಊರಿಗೆ ಹೋಗಿದ್ದ ಬಾಬು ಮರಳಿ ಬರುವಷ್ಟರಲ್ಲಿ ಶಕುಂತಲಾ ಎಲ್ಲಿ ನೋಡಿದರೂ ಕಾಣುವುದಿಲ್ಲ. ದೂರದ ಮುಂಬೈನ ಹುಡುಗನೊಟ್ಟಿಗೆ ಅವಳಿಗೆ ಮದುವೆ ಆಗಿರುತ್ತದೆ. ಅಲ್ಲಿಯ ತನಕ ಯಾರಿಗೂ ಹೇಳದ ಕತೆಯೊಂದನ್ನು ನಿನಗೆ ಹೇಳುವೆ ಎಂದಿದ್ದ ಶಕುಂತಲಾ ಅಕ್ಕನ ನುಡಿಗಳು ಅವನಲ್ಲಿ ಮಾರ್ದನಿಸಲು ಆರಂಭಿಸುತ್ತವೆ.
“ನಿನ್ನಲ್ಲೇ ಇರಲಿ” ಕತೆಯು ಒಬ್ಬ ಬೊಗಳೇದಾಸನ ಕುರಿತಾಗಿದ್ದಾಗಿದೆ. ಕಂಡ ಕಂಡಲ್ಲೆಲ್ಲ ಬಾಯಿಗೆ ಬಂದದ್ದನ್ನು ಹೇಳುತ್ತಾ ತಿರುಗಾಡುವ ಮುಕುಂದ ಒಬ್ಬ ನಿರುಪದ್ರವಿ. ಅವನು ಮಾಡದ ಮಾನುಷ ಅಮಾನುಷ ಅತಿಮಾನುಷ ಕೆಲಸಗಳೇ ಇಲ್ಲ. ಹಳ್ಳಿಯ ಮಕ್ಕಳಿಗೆ ಚಂದಮಾಮ ಬಾಲಮಿತ್ರ ಕತೆ ಓದಿ ಬೇಜಾರಾದರೆ ಕತೆ ಆಲಿಸಲು ಎಡತಾಕುತ್ತಿದ್ದುದು ಇವನನ್ನೇ. ಹಳ್ಳಿಯ ಸಮಸ್ತರೆಲ್ಲ ಇವನನ್ನು ಬಲ್ಲವರೇ. ಹೀಗಾಗಿ ಅವನು ಯಾವ ಕತೆಗಳನ್ನು ಬಣ್ಣಿಸಿ ಕಟ್ಟಿ ಹೇಳಿದರೂ, ಹೇಳಿದ್ದು ಮತ್ತೆ ಯಾರಿಗೂ ತಿಳಿಯದಿರಲಿ ಎನ್ನುವ ಕಾರಣಕ್ಕೆ ಹೇಳಿದ್ದನ್ನೆಲ್ಲ ಹೇಳಿ ಮುಗಿಸಿದ ನಂತರ ಹೇಳುತ್ತಿದ್ದ ಕಟ್ಟಕಡೆಯ ಮಾತು ‘ನಾನು ಹೇಳಿದ್ದು ನಿನ್ನಲ್ಲೇ ಇರಲಿ’. ಒಂದು ದಿನ ಹಳ್ಳಿಯಲ್ಲಿ ಸೋನೆಗಾರನ ಮಗಳು ಕಾಣೆಯಾಗುತ್ತಾಳೆ. ಎಷ್ಟು ಹುಡುಕಿದರೂ ಸಿಗುವುದಿಲ್ಲ. ನಂತರ ತಿಳಿದ ಸಂಗತಿ ಎಂದರೇ ಮುಕುಂದನೂ ಕಾಣೆಯಾಗುತ್ತಾನೆ. ಹಾಗೆ ತಾನು ಅವಳೊಟ್ಟಿಗೆ ಊರು ಬಿಟ್ಟು ಅವಳನ್ನು ಕರೆದುಕೊಂಡು ಹೋಗಿ ಮದುವೆ ಆಗುವೆನೆಂದು ಶಂಕರಣ್ಣನ ಬಳಿ ಹೇಳಿ ಹೋಗಿರುತ್ತಾನೆ. ಇವನದು ಬೊಗಳೇ ಇದ್ದದ್ದೇ ಎಂದು ಶಂಕರಣ್ಣ ಉದಾಸೀನ ಮಾಡಿರುತ್ತಾನೆ. ಹೀಗೆ ಇಬ್ಬರೂ ಕಾಣೆಯಾದದ್ದು ಸತ್ಯವೋ ಸುಳ್ಳೋ? ವಾಸ್ತವವೋ ಕಲ್ಪನೆಯೋ? ಎಂದು ತಿಳಿಯದೇ ಮಂದಿ ಪೇಚಿಗೆ ಸಿಲುಕುತ್ತಾರೆ.
“ಬಾಗಿಲ ಮುಂದೆ” ಕತೆ ಕೆಲಸದೊತ್ತಡ ಹೇಗೆ ತಿಳಿದು ತಿಳಿಯದೆಯೋ ನಮ್ಮನ್ನು ಹೈರಾಣು ಮಾಡುತ್ತದೆ ಎನ್ನುವುದನ್ನು ಹೇಳುವ ಕಥೆ. ಕೆಲಸ ಮುಗಿಸಿ ಪಾನಮತ್ತನಾಗಿ ಮನೆಗೆ ಬಂದು ಬಾಗಿಲು ಕರೆಗಂಟೆ ಒತ್ತಿದಾಗ ಬಾಗಿಲು ತೆರೆಯುವುದಿಲ್ಲ. ಹೆಂಡತಿ ಅಕ್ಕನ ಮನೆಗೆ ಹೋಗಿದ್ದು ನೆನಪಿಗೆ ಬರುತ್ತದೆ. ಬೀಗದ ಕೈ ಹುಡುಕುತ್ತಾನೆ. ಸಿಗುವುದಿಲ್ಲ. ಸರಿರಾತ್ರಿ ಹೆಂಡತಿಗೆ ಫೋನ್ ಮಾಡಿ ಕರೆಯಲೂ ಆಗುವುದಿಲ್ಲ. ನಡುಗುವ ಚಳಿಯಲ್ಲಿ ರಾತ್ರಿಯನ್ನು ಕಳೆದು ಬೆಳಗಾಗುವ ಹೊತ್ತಿಗೆ ಪಕ್ಕದ ಮನೆಯ ನಾಯರನ ಹೆಂಡತಿ ಅವನನ್ನು ಮಾತನಾಡಿಸುತ್ತಾಳೆ. ಎಂದಿನಿಂದಲೂ ಅವಳನ್ನು ಆಸೆಕಂಗಳಿಂದ ನೋಡುತ್ತಿದ್ದವನು ಹಾಗೆ ಅನಾಮತ್ತಾಗಿ ಅವಳು ಮಾತನಾಡಿಸಿದ್ದು ಕೇಳಿ ಏನು ಹೇಳಬೇಕೆಂದು ತಿಳಿಯದೆ ತಬ್ಬಿಬ್ಬಾಗಿ ಹೆಗಲ ಚೀಲಕ್ಕೆ ಕೈ ಹಾಕಿದಾಗ ತಟ್ಟನೆ ಬೀಗದ ಕೈ ಸಿಗುತ್ತದೆ!
- ಮೋಹನ್ ಕುಮಾರ್ ಡಿ ಎನ್
