ಕರ್ನಾಟಕಕ್ಕೆ ಮತ್ತೊಂದು ಧನ್ಯತೆಯ ಕ್ಷಣ

ಇದು ಮೂರು ವರ್ಷದ ಹಿಂದಿನ ಮುಚ್ಚಟೆ. ಬೇಲೂರು, ಹಳೆಬೀಡು ಮತ್ತು ಸೋಮನಾಥಪುರಗಳ ದೇಗುಲಗಳನ್ನು ಯುನೆಸ್ಕೋ ಸಂಸ್ಥೆ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿದಾಗ ಕನ್ನಡಿಗರ ಆನಂದಕ್ಕೆ ಪಾರವೇ ಇರಲಿಲ್ಲ. ಹಕ್ಕಿಯಂತೆ ರೆಕ್ಕೆ ಬೀಸಿ ಹಾರಿದವರೆಷ್ಟೋ ಮಂದಿ. ಅಂದಿನ ಈ ಮೊಗಬರೆಹ ಈಗ ಮತ್ತೊಮ್ಮೆ ನಿಮ್ಮ ಮುಂದೆ ಖ್ಯಾತ ಬರಹಗಾರಾದ  ಕೆ ರಾಜಕುಮಾರ್ ಅವರ ಸಂಪೂರ್ಣ ಲೇಖನವನ್ನೊಮ್ಮೆ ಓದಿ…

ಏನೀ ಮಹಾನಂದವೆ? ಓ ಭಾಮಿನಿ. ಏನೀ ಸಂಭ್ರಮದಂದವೆ? ಬಲು ಚೆಂದವೆ.

ಬೇಲೂರು ದೇಗುಲ ಕುರಿತು “ಶ್ರೀಚೆನ್ನಕೇಶವ ಶೃಂಗಾರ ಭಾವ” ಎಂದರು ನಮ್ಮ ಡಿವಿಜಿ. ಅವರೇ ಹಿಂದೋಳ ರಾಗದಲ್ಲಿ ಬರೆದ ಜನಪ್ರಿಯ ಗೀತೆ: “ಏನೀ ಮಹಾನಂದವೆ. ಓ ಭಾಮಿನಿ ಏನೀ ಸಂಭ್ರಮದಂದವೆ. ಬಲು ಚೆಂದವೆ.” ಇದು ಬೇಲೂರು ಶಿಲಾಬಾಲಿಕೆಯನ್ನು ಕುರಿತಾದದ್ದು.


ಹಳೆಬೀಡಿನ ಹೊಯ್ಸಳೇಶ್ವರ ಮಂದಿರವನ್ನು ಶಿವ ದೇಗುಲವೆಂದೂ ಕರೆಯಲಾಗುತ್ತದೆ. ಇದು ಅವಳಿ ಮಂದಿರ: ಹೊಯ್ಸಳೇಶ್ವರ ಮತ್ತು ಶಾಂತಳೇಶ್ವರ ಮಂದಿರಗಳನ್ನು ಹೊಂದಿದೆ. ಇದು ದೆಹಲಿ ಸುಲ್ತಾನರ ತೀವ್ರ ದಾಳಿ-ದಮನಕ್ಕೆ ತುತ್ತಾಯಿತು. ಇದ್ದದ್ದನ್ನೆಲ್ಲ ಆ ದುರುಳರು ದೋಚಿದರು, ಬಾಚಿದರು. ಅದರಿಂದಾಗಿ ಈ ಮಂದಿರ ರಾಜಗೋಪುರ, ಅಲಯಗೋಪುರ ಎರಡೂ ಇಲ್ಲದೆ ಚಪ್ಪಟೆಯಾಗಿದೆ. ಬಿಕೋ ಎನ್ನುತ್ತಿದೆ. ನುಣುಪುಗಲ್ಲಿನ ಮೇಲೆ ಇಡೀ ದೇಗುಲವನ್ನು ಕೆತ್ತಿರುವುದರಿಂದ ಇಲ್ಲಿನ ಶಿಲ್ಪಕಲೆ ದೀರ್ಘಕಾಲ ಬಾಳಿಕೆ ಬರುವಂತಹದ್ದು. ಹಾಗಾಗಿ ಅದರ ಸೊಗ ಮಾಸಿಲ್ಲ, ಚೆಲುವು ಅಡರಿಲ್ಲ. ಸೌಂದರ್ಯ ಕುಂದಿಲ್ಲ. ಆದರೂ ಅದರ ಮೇಲಿನ ದಾಳಿ ನೆನೆದು “ಜರ ಆಂಖ್ ಮೆ ಭರಲೋ ಪಾನಿ” ಎಂದು ಹೇಳಿಸಿಕೊಳ್ಳದೆಯೇ ಕಣ್ಣು ತೊಟ್ಟಿಕ್ಕುತ್ತದೆ; ಮನಸ್ಸು ಬಿಕ್ಕುತ್ತದೆ.

ಹೌದು: ಯುನೆಸ್ಕೋ ಸಂಸ್ಥೆ ಕರುನಾಡಿನ ಬೇಲೂರು, ಹಳೆಬೀಡು ದೇಗುಲಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿದೆ. ಇದರಿಂದಾಗಿ ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಗೆ, ಆ ಘನತೆವೆತ್ತ ಪರಂಪರೆಗೆ ವಿಶ್ವಮಾನ್ಯತೆ ದೊರೆತಂತಾಗಿದೆ.


ಬೇಲೂರಿನ ಚೆನ್ನಕೇಶವ ದೇಗುಲ ಸೃಷ್ಟಿಗೇ ಅಂದವನ್ನು ನೀಡಿರುವ ಕೆತ್ತನೆ. ಕೆ.ವಿ. ಅಯ್ಯರ್ ಮತ್ತು ಸಿ.ಕೆ. ನಾಗರಾಜರಾಯರು ನಾಟ್ಯರಾಣಿ ಶಾಂತಳೆಯನ್ನು ಕುರಿತು ಅತಿ ಚೆಂದದ ಕಾದಂಬರಿಗಳನ್ನು ಬರೆದಿದ್ದಾರೆ. ಯುನೆಸ್ಕೋ ಸಂಸ್ಥೆಯ ಈ ಮಾನ್ಯತೆ ಯಿಂದಾಗಿ ಅವರ ಆತ್ಮಗಳು ಸಂತೋಷದಿಂದ ಗರಿಬಿಚ್ಚಿ ಹಾರಾಡುತ್ತಿರಬಹುದು. ಕೆ.ವಿ. ಅಯ್ಯರ್ ಅವರ ಶಾಂತಳಾ ಕಾದಂಬರಿಯಲ್ಲಿ ರಸವತ್ತರವಾಗಿ ವರ್ಣಿತವಾಗಿರುವ ವಿಷ್ಣುವರ್ಧನನ ಬಂಟ ‘ಕುವರ ವಿಷ್ಣುವಿನ ಕನಸು’ ನೆನಪಿನಲ್ಲಿ ತೇಲುತ್ತಿದೆ. ಕನ್ನಡಿಗರಾದವರು ಈ ದಿವ್ಯ ದೇಗುಲಗಳನ್ನು ನೋಡಿ ತಮ್ಮ ಪರಂಪರೆಯ ಬಗೆಗೆ ಹೆಮ್ಮೆ ತಾಳಬಹುದು. ಕುವರ ವಿಷ್ಣುವಿನ ಕನಸು ಭಾಗವನ್ನು ಕನ್ನಡ ಬಲ್ಲವರು ಓದಲೇಬೇಕು. ಕನ್ನಡ ಬಾರದವರು ಚೆನ್ನಾಗಿ ಕನ್ನಡ ಕಲಿತು ಓದಿ ಸವಿಯಬೇಕು. ಚರಿತ್ರೆಯಲ್ಲಿ ಅನೇಕಾನೇಕ ಸ್ಥಿತ್ಯಂತರಗಳನ್ನು ಕಾಣುತ್ತಲೇ ಹೋದ ಮಹಾ ಸಾಮ್ರಾಜ್ಯವಿದು.

ಶ್ರೀರಾಮಾನುಜಾಚಾರ್ಯರಿಗೆ ಆಶ್ರಯಕೊಟ್ಟವನು ಹೊಯ್ಸಳ ದೊರೆ ಬಿಟ್ಟಿದೇವ. ತನ್ನ ಜೈನಧರ್ಮವನ್ನು ತೊರೆದು ವೈಷ್ಣವ ಧರ್ಮಕ್ಕೆ ಮತಾಂತರಗೊಂಡು, ತನ್ನ ಹೆಸರನ್ನೂ ಬದಲಿಸಿಕೊಂಡು ವಿಷ್ಣುವರ್ಧನನಾದ. ಆಗ ಎದ್ದ ಪ್ರಭಂಜನ ಸಾಮಾನ್ಯವಾದುದಲ್ಲ. ವಿಷ್ಣುವರ್ಧನ, ಶಾಂತಳೆಯರ ವೈಯಕ್ತಿಕ ಬದುಕಿನ ರಹ-ವಿರಹ, ತವಕ-ತಲ್ಲಣಗಳನ್ನು ಕಂಡ ದೇಗುಲವಿದು. ಅವರ ಗಾಢ ವಿಷಾದಕ್ಕೆ, ನಡುವಿನ ಸಂಕಟಕ್ಕೆ ಮೂಕ ಸಾಕ್ಷಿ ಇಲ್ಲಿನ ದೇಗುಲ. ಅಲ್ಲಿರುವ ಶಿಲ್ಪಗಳ ಚೆಲುವಿನ ಆಳದಲ್ಲಿ ಶಾಂತಲೆಯ ದುರಂತ ಕಥನವೂ ಹುದುಗಿದೆ ಎನ್ನಬಹುದು.

ಬೇಲೂರು, ಹಳೆಬೀಡಿನ ಜೊತೆಗೆ ಯುನೆಸ್ಕೋ ಸೋಮನಾಥಪುರ ದೇಗುಲವನ್ನೂ ಸೇರಿಸಿದೆ. ಮಹಾಕವಿ ಕುವೆಂಪು ಅವರು ಬರೆದು ಪಿ. ಕಾಳಿಂಗರಾವ್ ಅವರು ಹಾಡಿ ಜನಪ್ರಿಯಗೊಳಿಸಿದ ಗೀತೆ ಈ ದೇಗುಲವನ್ನು ಕುರಿತದ್ದು: ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು. ನಾವು ಭಾಗೇಶ್ರೀ ರಾಗದಲ್ಲಿ ಹಾಡಿಹಾಡಿ ತಣಿಯುತ್ತಿದ್ದ ಈ ಗೀತೆಗೆ ನಿಜಾರ್ಥದಲ್ಲಿ ಇದೀಗ ಜೀವ ಬಂದಿದೆ; ಸವಿಭಾವ ಬಂದಿದೆ.

ಶ್ರೀಸಾಮಾನ್ಯರ ದೃಷ್ಟಿಯಲ್ಲಿ ಬೇಲೂರು, ಹಳೇಬೀಡಿನ ದೇಗುಲಗಳೆಂದರೆ ಬೆರಗು ಮತ್ತು ಅಚ್ಚರಿ. ಅಲ್ಲಿನ ನಯ-ನಾಜೂಕಿನ ಶಿಲ್ಪಕಲೆಯು ಶತಶತಮಾನಗಳಿಂದ ಸದಾ ಅವರ ಹುಬ್ಬುಗಳ ಮೇಲೆ ವಿಸ್ಮಯದ ಮೊಹರನ್ನು ಒತ್ತುತ್ತಲೇ ಇದೆ. ಅಚ್ಚರಿಯ ಸಂಗತಿಯೊಂದಿದೆ. ಬೇಲೂರಿನ ಚೆನ್ನಕೇಶವ ದೇಗುಲ ನಿರ್ಮಾಣಗೊಂಡಿದ್ದು ಕ್ರಿ.ಶ. 1117ರಲ್ಲಿ. ಅಂದಿನಿಂದ ಇಂದಿನವರೆಗೂ, ಅನೂಚಾನವಾಗಿ ಅಂದರೆ 909 ವರ್ಷದಿಂದ ಚೆನ್ನಕೇಶವನು ನಿತ್ಯಪೂಜಿತ. ಯುನೆಸ್ಕೋ ಸಂಸ್ಥೆ ಬೇಲೂರು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದಂದು, ಭಾರತ ಸರ್ಕಾರದ ಪ್ರತಿನಿಧಿ ಈ ವಿಷಯವನ್ನು ಆ ಸಭೆಯಲ್ಲಿ ಅರುಹಿದರು.

ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ದೇಗುಲ ಪ್ರದೇಶ ವಿಶ್ವ ಪರಂಪರೆಯ ತಾಣವೆಂದು ಮಾನ್ಯತೆ ಪಡೆದರೂ ಕುಸುರಿ ಕೆತ್ತನೆಗೆ ಖ್ಯಾತವಾಗಿರುವ, ಬೇಲೂರು, ಹಳೇಬೀಡುಗಳಿಗೇಕೆ ಅಂತಹ ಭಾಗ್ಯ ಒದಗಿಲ್ಲ ಎಂಬುದು ಜನಸಾಮಾನ್ಯರಿಗೆ ದಶಲಕ್ಷ ಡಾಲರ್ ಪ್ರಶ್ನೆಯಾಗಿತ್ತು. ಕಾರಣ ಈ ದೇಗುಲಗಳು ಅವರ ಕಣ್ಣಲ್ಲಿ ಮೂಡಿಸಿದ್ದ ಚೆಲುವಿನ ಚಿತ್ತಾರ. ಬೇಲೂರು, ಹಳೆಬೀಡು ಕುರಿತ ಅತ್ಯದ್ಭುತ ನೃತ್ಯರೂಪಕ ‘Nector in the Stone’ ಬಹಳ ಹಿಂದೆ ದೂರದರ್ಶನದಲ್ಲಿ ಪ್ರಸಾರಗೊಂಡಿತ್ತು. ಅದನ್ನು ಕಂಡ ವೀಕ್ಷಕ ಗಣವೂ ಈ ತಾಣಗಳಿಗೆ ಜಾಗತಿಕ ಮಾನ್ಯತೆ ದೊರೆಯಬೇಕೆಂದು ಅಭೀಪ್ಸಿಸಿತ್ತು. ಆ ರೂಪಕ ಇಡೀ ದೇಶದ ಗಮನ ಸೆಳೆದಿತ್ತು. ಅದರಲ್ಲಿ ಈ ದೇಗುಲಗಳ ಶಿಲ್ಪವನ್ನು ‘ಶಿಲೆಯಲ್ಲಿ ಜೇನು’ ಎಂದು ವರ್ಣಿಸಲಾಗಿತ್ತು.
ಇಡೀ ವಿಶ್ವದಲ್ಲಿ ಇಷ್ಟು ಸೂಕ್ಷ್ಮ ಕುಸುರಿ ಕೆತ್ತನೆಯುಳ್ಳ ಬೇರೆ ತಾಣಗಳಿಲ್ಲ. ಬೇಲೂರು, ಹಳೆಬೀಡು ದೇಗುಲಸಿರಿಯು ವಿಶ್ವದ ಕಲಾಮಾತೆಯ ನೊಸಲಿಗೆ ಕರುನಾಡು ತೀಡಿದ ವರ್ಣತಿಲಕ! ಕರ್ನಾಟಕವು ವಾಸ್ತುಶಿಲ್ಪದ ತೂಗುತೊಟ್ಟಿಲು. ಅದರ ಉತ್ಕಟ ಕುಶಲತೆಗೆ ಬೆರಗಾಗಿ ವೀಕ್ಷಕ ಮೂಕನಾಗುತ್ತಾನೆ.

ವಿಶ್ವ ಪರಂಪರೆಯ ಪಟ್ಟಿಯಲ್ಲಿ ಈ ಮೊದಲು ಕರ್ನಾಟಕದ ಹಂಪಿ (1986), ಪಟ್ಟದಕಲ್ಲು(1987) ಸೇರಿದ್ದವು. ಅನಂತರ ಜೀವವೈವಿಧ್ಯ ತಾಣವಾದ ಪಶ್ಚಿಮಘಟ್ಟ (2012) ಸೇರಿತು. ಇದೀಗ ಹೊಯ್ಸಳ ಸಾಮ್ರಾಜ್ಯದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರುವ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರಗಳು (2023) ಒಂದಾಗಿ, ಒಟ್ಟಾಗಿ ಸೇರಿವೆ. ಇದು ಭಾರತದಲ್ಲಿನ 42ನೆಯ ವಿಶ್ವಪರಂಪರೆಯ ತಾಣ.

ಜಗತ್ತಿನಲ್ಲಿ ಇದುವರೆಗೆ 1199 ತಾಣಗಳಿಗೆ ಇಂತಹ ಮಾನ್ಯತೆ ನೀಡಲಾಗಿದೆ. ಜಗತ್ತಿನ 168 ದೇಶಗಳಲ್ಲಿ ಈ ತಾಣಗಳು ಹರಡಿಕೊಂಡಿವೆ. ಇಟಲಿಯಲ್ಲಿ ಅತಿಹೆಚ್ಚು ಎಂದರೆ 59 ತಾಣಗಳಿವೆ. ಚೀನಾದಲ್ಲಿ 57 ತಾಣಗಳು. ಭಾರತದಲ್ಲಿ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿರುವ ಒಟ್ಟು 42 ತಾಣಗಳಿವೆ. ಜಗತ್ತಿನಲ್ಲಿ ಈ ವಿಷಯದಲ್ಲಿ ಭಾರತ 6ನೆಯ ಸ್ಥಾನದಲ್ಲಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ 5 ವಿಶ್ವ ಪರಂಪರೆಯ ತಾಣಗಳಿವೆ. ಭಾರತದಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿ ನಿಲ್ಲುತ್ತದೆ. ಇವುಗಳಲ್ಲಿ 3 ತಾಣಗಳು ಸಂಪೂರ್ಣ ಕರ್ನಾಟಕದಲ್ಲೇ ನೆಲೆಗೊಂಡಿವೆ. ಇತರ ರಾಜ್ಯಗಳ ಜೊತೆ ಹಂಚಿಕೆಯಾದ ಒಂದು ತಾಣವಿದೆ. ಅದುವೇ ಪಶ್ಚಿಮಘಟ್ಟ. ಪಶ್ಚಿಮಘಟ್ಟವನ್ನು ಕರ್ನಾಟಕದಲ್ಲಿ ಸಹ್ಯಾದ್ರಿ ಬೆಟ್ಟವೆಂದೂ ಕರೆಯುತ್ತಾರೆ.

ಪಶ್ಚಿಮಘಟ್ಟವು ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಹೀಗೆ 6 ರಾಜ್ಯಗಳಲ್ಲಿ ಹರಡಿಕೊಂಡಿದೆ. ಇದರಲ್ಲಿ ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ; ಈ ನಾಲ್ಕು ರಾಜ್ಯಗಳಲ್ಲಿನ ಪಶ್ಚಿಮಘಟ್ಟ ಪ್ರದೇಶವನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ಪಶ್ಚಿಮಘಟ್ಟದ ಒಟ್ಟು 60% ಭೌಗೋಳಿಕ ಪ್ರದೇಶ ಕರ್ನಾಟಕದಲ್ಲಿದೆ.
ಗುಜರಾತಿನಲ್ಲೂ ಕರ್ನಾಟಕದಲ್ಲಿ ಇರುವಷ್ಟೇ ಪಾರಂಪರಿಕ ತಾಣಗಳಿವೆ. ಆಂಧ್ರಪ್ರದೇಶದಲ್ಲಿ ಈ ಪಟ್ಟಿಗೆ ಸೇರುವ ಒಂದು ತಾಣವೂ ಇಲ್ಲ.

ಬೇಲೂರು-ಹಳೆಬೀಡು-ಸೋಮನಾಥಪುರ ವಿಶ್ವ ಪರಂಪರೆಯ #ತಾತ್ಕಾಲಿಕ ಪಟ್ಟಿಗೆ ಸೇರಿದ್ದು 2014ರಲ್ಲಿ. 2023ರಲ್ಲಿ ಅದು #ಶಾಶ್ವತ ಪಟ್ಟಿಗೆ ಸೇರುವಂತಾಯಿತು. ಹೊಯ್ಸಳರು
ಕಟ್ಟಿಸಿದ ಇನ್ನೂ ಹಲವು ದೇಗುಲಗಳಿವೆ. ಅವುಗಳ ವೈಭವವೂ ಉತ್ಕೃಷ್ಟವೇ. ಆದರೆ ಅವುಗಳನ್ನು ಈ ಪಾರಂಪರಿಕ ತಾಣದೊಂದಿಗೆ ಸೇರಿಸಿಲ್ಲ ಎಂಬುದನ್ನು ಗಮನಿಸಬೇಕು.
ಇದು ನಮಗೆ ಧನ್ಯತೆಯ ಕ್ಷಣ. ನಮ್ಮ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಬಗೆಗೆ ಹೆಮ್ಮೆಯಿಂದ ಬೀಗಲು, ಅಭಿಮಾನ ತಾಳಲು ಇದೂ ಒಂದು ಕಾರಣವಾಗುತ್ತದೆ. ಯಾವುದೇ ತಾಣವು ಈ ಪಟ್ಟಿಗೆ ಸೇರಬೇಕೆಂದರೆ ಮೊದಲು ತಾತ್ಕಾಲಿಕ ಪಟ್ಟಿಗೆ ಸೇರಬೇಕು. ಆಮೂಲಾಗ್ರ ಪರಿಶೀಲನೆಯ ಅನಂತರ ಷರತ್ತುಬದ್ಧ ಶಾಶ್ವತ ಸ್ಥಾನಮಾನ.

ಒಮ್ಮೆ ಈ ಪಟ್ಟಿಗೆ ಸೇರಿಸಿದ ಮೇಲೆ ಯುನೆಸ್ಕೋ ಸಂಸ್ಥೆಯ ತಜ್ಞರು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಅಂತಹ ತಾಣವನ್ನು ಪಟ್ಟಿಯಿಂದ ಅಮಾನತು ಮಾಡುವ ಅಥವಾ ರದ್ದುಪಡಿಸುವ ಅಧಿಕಾರ ಅವರಿಗಿದೆ. ಯುನೆಸ್ಕೋ ಸಂಸ್ಥೆಯಿಂದ ಈ ತಾಣಗಳ ಸಂರಕ್ಷಣೆಗೆ ಆಗಾಗ ಸ್ವಲ್ಪ ಹಣಕಾಸಿನ ನೆರವೂ ಸಿಗುತ್ತದೆ. ತಜ್ಞರ ಮಾರ್ಗದರ್ಶನವೂ ಲಭ್ಯ.

ಇನ್ನು ಮುಂದೆ ಬೇಲೂರು, ಹಳೆಬೀಡು, ಸೋಮನಾಥಪುರಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಅಲ್ಲಿನ ಪ್ರವಾಸೋದ್ಯಮ ಬೆಳೆಯಲಿದೆ. ಸೂಕ್ತ, ಪರಿಣತ ಗೈಡುಗಳ ನೇಮಕವಾಗಬೇಕು. ಇತಿಹಾಸವನ್ನು ನೈಜ ನೆಲೆಯಲ್ಲಿ ಸಾದರಪಡಿಸುವವರಿಗೆ ಆದ್ಯತೆ ನೀಡಬೇಕು. ಅಲ್ಲಿನ ಮೂಲಭೂತ ಸೌಕರ್ಯಗಳು ಸುಧಾರಣೆ ಕಾಣಬೇಕು. ಪ್ರವಾಸ ಎಂಬುದು ಕೇವಲ ಉದ್ಯಮವಾಗದೆ, ಜೀವನ ಪ್ರೀತಿಯೂ ಆಗಬೇಕು. ಈ ತಾಣಗಳು ದುಬಾರಿಯಾಗದೆ ನಮ್ಮವರ ಕೈಗೂ ಎಟುಕವಂತಿರಬೇಕು.

ಕನ್ನಡಿಗರಾದ ನಾವು ಈ ತಾಣಗಳನ್ನು ಕಣ್ಣಾರೆ ನೋಡಿ ತಣಿಯೋಣ. “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ?” ಎಂಬುದು ಮೂಗೂರು ಮಲ್ಲಪ್ಪನವರ ಗೀತೆ. ಅದಕ್ಕೆ ಮಲ್ಲಪ್ಪನವರು ಸಾಯುವುದರ ಒಳಗೆ ಜೋಗದ ಗುಂಡಿಯನ್ನು ಒಮ್ಮೆಯಾದರೂ ನೋಡಬೇಕೆಂದು ಅಭಿಮಾನದಿಂದ ಹೇಳುತ್ತಾರೆ. ಈಗ ಅದಕ್ಕೆ ವಿಶ್ವ ಪರಂಪರೆಯ ತಾಣಗಳನ್ನೂ ಸೇರಿಸೋಣ. ಕೈಕಾಲು ಗಟ್ಟಿಯಿರುವಾಗಲೇ ಅವನ್ನೆಲ್ಲ ನೋಡಿ ನಲಿಯೋಣ.

ಮುಂದೆ ಬಾದಾಮಿಯ ಗುಹಾಂತರ ದೇವಾಲಯಗಳೂ, ಜಗತ್ತಿನ ಅತ್ಯಂತ ಎತ್ತರದ ಪ್ರಾಚೀನ ಏಕಶಿಲಾ ವಿಗ್ರಹವಾದ ಶ್ರವಣಬೆಳಗೊಳದ ಗೊಮ್ಮಟೇಶ್ವರನೂ ಈ ಪಟ್ಟಿಗೆ ಸೇರಲಿ ಎಂಬ ಆಶಯ ನಮ್ಮೆಲ್ಲರದೂ ಆಗಲಿ. ನಮ್ಮ ಕೊಪ್ಪಳ ಜಿಲ್ಲೆಯ ಹಿರೇಬೆಣಕಲ್ ಮತ್ತು ಗದಗ ಜಿಲ್ಲೆಯ ಲಕ್ಕುಂಡಿ ಈ ಪಟ್ಟಿಗೆ ಸೇರುವ ನಿರೀಕ್ಷೆಯಿದೆ. ಈ ಕುರಿತಾದ
ಪ್ರಕ್ರಿಯೆ ಆರಂಭವಾಗಿದೆ. ಶ್ರವಣಬೆಳಗೊಳದ ಗೊಮ್ಮಟಮೂರ್ತಿಯೂ ಸಹ ಈ ಪ್ರತಿಷ್ಠಿತ ಪಟ್ಟಿಗೆ ಸೇರಲು ಅಂಬೆಗಾಲಿಡುತ್ತಿದೆ.

ನಾವು ಕನ್ನಡಿಗರು. ಶ್ರೀಮಂತ ಪರಂಪರೆಯೊಂದರ ವಾರಸುದಾರರು ಎಂಬ ಹೆಮ್ಮೆ ನಮಗಿರಲಿ.

ಅನುಬಂಧ

ಬೇಲೂರಿನ ಚೆನ್ನಕೇಶವ ದೇಗುಲವೆಂದರೆ ಹಲವರು ಅದನ್ನು ಶಿವನ ದೇವಸ್ಥಾನ ಎಂದು ಭಾವಿಸಿದ್ದಾರೆ. ಆದರೆ ಅದು ಶಿವನ ದೇಗುಲವಲ್ಲ. ಅದು ವಿಷ್ಣು ಮಂದಿರ. ಚೆನ್ನಕೇಶವ ವಿಷ್ಣುವಿನ ಒಂದು ರೂಪ.
ಚೆನ್ನ = ಚೆಂದದ
ಕೇಶವ = ಉದ್ದ ಕೂದಲಿನ
ಚೆನ್ನಕೇಶವ = ಶ್ರೀಕೃಷ್ಣ


  •  ಕೆ ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading