ಆಗಸ್ಟ್ ೭ರಂದು ಯಾವುದೇ ದೊಡ್ಡ ಸ್ಟಾರ್, ದೊಡ್ಡ ಪ್ರಚಾರವಿಲ್ಲದೆ ತೆರೆಕಂಡ ಈ ಚಿಕ್ಕ ಸಿನಿಮಾ ಇಂದು ಭಾರತದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಪವಾಡವನ್ನೇ ಮಾಡಿದೆ. ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಸಿನಿಮಾವೇ “ಹನುಮಾನ್ ಅಂಶ”. ಈ ಸಿನಿಮಾದ ಕುರಿತು ಲೇಖಕರಾದ ಓಂಕಾರ ಪಾಟೀಲ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇದು ಸಿನಿಮಾ ವಿಮರ್ಶೆಯಲ್ಲ, ಒಂದು ಆತ್ಮಾವಲೋಕನ.
೨೦ನೇ ಶತಮಾನದ ಪ್ರಸಿದ್ಧ ಸಂತರಾದ ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ‘Divine Detour That Changed My Life’ ಕಾದಂಬರಿ ಆಧಾರಿತ ಭಕ್ತಿಪ್ರಧಾನ ಆಧ್ಯಾತ್ಮಿಕ ಹಿಂದಿ ಚಲನಚಿತ್ರವೇ “ಹನುಮಾನ್ ಅಂಶ”.

ಆಗಸ್ಟ್ ೭ರಂದು ಯಾವುದೇ ದೊಡ್ಡ ಸ್ಟಾರ್, ದೊಡ್ಡ ಪ್ರಚಾರವಿಲ್ಲದೆ ತೆರೆಕಂಡ ಈ ಚಿಕ್ಕ ಸಿನಿಮಾ ಇಂದು ಭಾರತದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಪವಾಡವನ್ನೇ ಮಾಡಿದೆ. ಕೇವಲ ೨ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಚಿತ್ರ ಇಂದು ೮೦ ಕೋಟಿಗಿಂತ ಹೆಚ್ಚು ಆದಾಯದ ಗಡಿ ದಾಟಿದೆ. ಇದು ಸಿನಿಮಾ ಅಲ್ಲ, ಇದು ಒಂದು ಶರಣರ ಅನುಭವ.

ಶರಣರ ದಾರಿಯಲ್ಲಿ ಬಾಬಾ:
“ಹನುಮಂತನ ಅಂಶ” ಎಂದು ಕರೆಯಲ್ಪಡುವ ನೀಮ್ ಕರೋಲಿ ಬಾಬಾ ಅವರ ಬಾಲ್ಯ ಮತ್ತು ಅವರ ಪವಾಡಗಳನ್ನು ತೋರಿಸಿದರೂ, ಅವರ ಬದುಕು ನಮ್ಮ ಶರಣರ ಬದುಕಿಗಿಂತ ಭಿನ್ನವಲ್ಲ ಎಂಬುದನ್ನು ಈ ಚಿತ್ರ ಸಾಬೀತುಪಡಿಸುತ್ತದೆ. ಚಿತ್ರ ನೋಡುತ್ತಿದ್ದರೆ ಪ್ರತಿ ದೃಶ್ಯದಲ್ಲೂ ಅಲ್ಲಮ ಮತ್ತು ಬಸವಣ್ಣನವರು ನೆನಪಾಗುತ್ತಾರೆ.
ತಾಯಿಯ ನಿಧನದ ಬಳಿಕ ದೇವರ ಹುಡುಕಾಟದಲ್ಲಿ ಮನೆ ತೊರೆಯುವ ಲಕ್ಷ್ಮೀನಾರಾಯಣನ ಆಧ್ಯಾತ್ಮಿಕ ಪಯಣವೇ ಈ ಚಿತ್ರದ ಮುಖ್ಯ ಕಥೆ. ಲೌಕಿಕ ಜೀವನ ತೊರೆದು ಆಧ್ಯಾತ್ಮಿಕ ಮಾರ್ಗ ಹಿಡಿಯುವ ಹುಡುಗ ನೀಮ್ ಕರೋಲಿ ಬಾಬಾ ಆಗಿ ಪರಿವರ್ತನೆಯಾಗುವ ಮೂಲಕ ಪ್ರೀತಿ, ಸೇವೆ, ಭಕ್ತಿ ಮತ್ತು ಸರಳತೆಯ ಸಂದೇಶ ಸಾರುತ್ತದೆ.
“ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ?
ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯಾ”
– ಈ ಶರಣರ ವಚನದಂತೆ ಬಾಬಾ ಕೂಡ ಮನುಷ್ಯರೇ ದೇವಾಲಯ ಎಂದು ನಂಬಿದ್ದರು. ಚಿತ್ರದಲ್ಲಿ ಅವರು ಗುಡಿಯ ಬದಲು, ಜನರಿಗೆ ಅನ್ನ ಹಾಕುವ ಊಟದ ತಟ್ಟೆಯನ್ನೇ ದೇವರೆಂದು ತೋರಿಸುತ್ತಾರೆ.
ಕಾಯಕವೇ ಕೈಲಾಸ:
ಚಿತ್ರದ ಅತ್ಯಂತ ಶಕ್ತಿಶಾಲಿ ಸಂದೇಶವೆಂದರೆ – ಜಪ ಮಾಡುವುದು ಮಾತ್ರ ಭಕ್ತಿಯಲ್ಲ, ಸೇವೆ ಮಾಡುವುದು ನಿಜವಾದ ಭಕ್ತಿ. ಬಾಬಾ ದಿನವಿಡೀ ಬಂದವರಿಗೆ ಊಟ ಬಡಿಸುವುದು, ಅವರ ಕಷ್ಟ ಕೇಳುವುದು, ಇದನ್ನೇ ಸಾಧನೆ ಎಂದು ಮಾಡಿದರು. ಇದನ್ನೇ ಬಸವಣ್ಣ “ಕಾಯಕವೇ ಕೈಲಾಸ” ಎಂದಿದ್ದಾರೆ.
ಕಾಯಕ ಎಂದರೆ ಕೇವಲ ದುಡಿಮೆಯಲ್ಲ, ನಿಸ್ವಾರ್ಥ ಸೇವೆ. ಬಾಬಾ ಆಶ್ರಮದಲ್ಲಿ ಯಾರೂ ಸುಮ್ಮನೆ ಕೂರುತ್ತಿರಲಿಲ್ಲ. ಚಿತ್ರದ ನಾಯಕ ಮೊದಲು “ನನಗೆ ದೇವರು ಬೇಕು” ಎನ್ನುತ್ತಾನೆ, ಕೊನೆಯಲ್ಲಿ “ನನಗೆ ಸೇವೆ ಮಾಡಲು ಅವಕಾಶ ಬೇಕು” ಎನ್ನುತ್ತಾನೆ. ಇದೇ ನಿಜವಾದ ಪರಿವರ್ತನೆ. “ತನ್ನನ್ನು ಅರಿದೊಡೆ ತಾನೇ ದೇವ” ಎನ್ನುವ ಶರಣರ ವಾಣಿಯಂತೆ ದೇವರನ್ನು ಹುಡುಕಲು ಹೊರಟ ಲಕ್ಷ್ಮೀನಾರಾಯಣ ತಾನೇ ದೇವರಾಗಿ ಪರಿವರ್ತನೆ ಹೊಂದುವುದು ವಿಶೇಷ.

ಎರಡು ಪವಾಡಗಳ ದೃಶ್ಯ:
ಬ್ರಿಟಿಷ್ ಆಳ್ವಿಕೆಯ ಕಾಲದ ಎರಡು ಪ್ರಸಿದ್ಧ ಪವಾಡಗಳನ್ನು ನಿರ್ದೇಶಕ ವಿಶಾಲ್ ಚತುರ್ವೇದಿ ಅವರು ಅತ್ಯಂತ ಸುಂದರವಾಗಿ ತೋರಿಸಿದ್ದಾರೆ.
- ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಬಾರನ್ನು ಬ್ರಿಟಿಷ್ ಅಧಿಕಾರಿಯ ಮಾತು ಕೇಳಿ ಟಿಕೆಟ್ ಇಲ್ಲವೆಂದು ಕೆಳಗಿಳಿಸಿದಾಗ, ರೈಲು ಮುಂದೆ ಹೋಗದೆ ನಿಂತ ಘಟನೆ. ಆ ಸ್ಥಳವೇ ಮುಂದೆ ನೀಮ್ ಕರೋಲಿ ಎಂದು ಪ್ರಸಿದ್ಧವಾಯಿತು.
-
ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿ ಬಾಬಾರನ್ನು ಕಳ್ಳನೆಂದು ಭಾವಿಸಿ ಠಾಣೆಯಲ್ಲಿ ಕೂಡಿ ಹಾಕಿ, ನಂತರ ನಿಜಸ್ಥಿತಿ ತಿಳಿದು ಕ್ಷಮೆ ಕೇಳುವ ಮತ್ತು ಕಾಡಿನಲ್ಲಿ ದಾರಿ ತಪ್ಪಿದವನಿಗೆ ದಾರಿ ತೋರಿಸುವ ದೃಶ್ಯ ಕಣ್ಣು ತುಂಬುವಂತಿದೆ.
ನಿರ್ದೇಶಕರು ಬಾಬಾರನ್ನು ದೇವರ ಅವತಾರ ಎಂದು ಬಿಂಬಿಸಿಲ್ಲ, ಬದಲಿಗೆ ದೇವರನ್ನು ನಿರಂತರವಾಗಿ ನೆನೆಯುವ ಒಬ್ಬ ಶುದ್ಧ ಭಕ್ತ ಎಂದು ತೋರಿಸಿರುವುದು ವಿಶೇಷ.
ಒಟ್ಟಾರೆಯಾಗಿ ತಾಂತ್ರಿಕ ಅದ್ದೂರಿಗಿಂತ ಕಥೆಯ ಆಳವೇ ಮುಖ್ಯ ಎಂದು ಸಾಬೀತುಪಡಿಸಿದ “ಹನುಮಾನ್ ಅಂಶ” ಇಡೀ ಕುಟುಂಬ ಸಮೇತ, ವಿಶೇಷವಾಗಿ ಮಕ್ಕಳಿಗೆ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಪರಿಚಯಿಸುವ ಅತ್ಯುತ್ತಮ ಚಲನಚಿತ್ರ. ನಾನು ನನ್ನ ಕುಟುಂಬದೊಂದಿಗೆ ನೋಡಿದ ಮೇಲೆ ನನಗನಿಸಿದ್ದು – “ಹನುಮಾನ್ ಅಂಶ” ಮೋಜಿಗಾಗಿ ನೋಡುವುದಲ್ಲ, ಮನಸಿನ ಶುದ್ಧಿಗಾಗಿ.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ್.
