ಬೆವರುತ್ತಲೇ ಅವಳ ಜೊತೆ ಕೂತು ಸಿನಿಮಾ ನೋಡಿದೆ, ಸಿನಿಮಾ ಬಿಟ್ಟ ತಕ್ಷಣ ಅವಳಿಗೆ ಹೇಳದೆ ಕೇಳದೆ ಬಸ್ ಸ್ಟಾಪ್ ಗೆ ಓಡಿ ಹೋಗಿ ಬಸ್ಸು ಹತ್ತಿದ್ದೆ. ಮುಂದೇನಾಯಿತು ತಪ್ಪದೆ ಓದಿ ಕೇಶವರೆಡ್ಡಿ ಹಂದ್ರಾಳ ಅವರ ನೆನಪಿನ ಪ್ರಬಂಧ….
‘ ದೇವ್ರು ಬಡ್ತನ ಕೊಡ್ತಾನೆ ಕೊಳ್ಕ್ತನ ಕೊಡ್ತಾನ…’ ಎಂಬ ಪ್ರಬಂಧವೂ ‘ ಎರಡು ಕನಸು ‘ ಎಂಬ ಸಿನಿಮವೂ..
ನಮ್ಮ ಪ್ರೈಮರಿ ಮತ್ತು ಮಿಡ್ಲಿಸ್ಕೂಲ್ ದಿನಗಳಲ್ಲಿ ” ಥೂ ಕತ್ತೆಗಳ ನಿಮ್ಮ ಮುಸುಡಿ ನೋಡ್ಕಳ್ರಿ ” ” ಥೂ ದನಗ್ಳ ನಿಮ್ಮ ಬಟ್ಟೆ ನೋಡ್ಕಳ್ರಿ ” ಥೂತ್ ನಿಮ್ಗಿಂತ್ಲೂ ಹಂದಿಗಳೇ ಎಷ್ಟೋ ಪಾಲು ವಾಸಿ ಕಣ್ರಲೇ. ದೇವ್ರು ಬಡ್ತನ ಕೊಡ್ತಾನೆ, ಕೊಳ್ಕ್ತನ ಕೊಡ್ತನೇನ್ರಲೇ ” ಎಂದು ಪ್ರತಿಯೊಂದು ಪಿರಿಯೇಡ್ಡಿನಲ್ಲೂ, ಪ್ರತಿಯೊಬ್ಬ ಮೇಷ್ಟ್ರೂ ಪಾಠಕ್ಕೆ ಇಳಿಯುವ ಮುನ್ನ ನಮ್ಮ ಅಂದ ಚಂದದ ಮುಸುಡಿಗಳನ್ನು ನೋಡಿ ಮೇಲಿನ ನುಡಿಗಳನ್ನು ಮಂತ್ರಗಳಂತೆ ಪಠಿಸಿಯೇ ಮುಂದುವರಿಯುತ್ತಿದ್ದದ್ದು. ನಾಯಿ, ದನ, ಕತ್ತೆ, ಹಂದಿಗಳೂ ತಮ್ಮ ತಮ್ಮ ಆಹಾರವನ್ನು ಹುಡುಕಿಕೊಂಡು ನಮ್ಮ ಸ್ಕೂಲಿನ ಸುತ್ತಲೂ ರಾಜಾರೋಷವಾಗಿ ಅಡ್ಡಾಡುತ್ತಿದ್ದವು. ಮಾಮೂಲಿಯಾಗಿ ಮೇಷ್ಟ್ರುಗಳ ಮಾತುಗಳನ್ನು ಒಂದು ಕಿವಿಯಲ್ಲಿ ಹಾಕಿಕೊಂಡು ಕ್ಷಣವೂ ಮೆದುಳಿನಲ್ಲಿ ಇರಿಸಿಕೊಳ್ಳದೆ ಇನ್ನೊಂದು ಕಿವಿಯಲ್ಲಿ ಸರ್ರನೆ ಬಿಟ್ಟು ಬಿಡುತ್ತಿದ್ದೆವು.
ಸ್ಕೂಲಿನ ಸುಮಾರು ತೊಂಬತ್ತರಷ್ಟು ಸ್ಟೂಡೆಂಟ್ಸ್ ಅವತಾರವೇ ಹಾಗಿರುತ್ತಿತ್ತು. ಬೆಳಿಗ್ಗೆ ಎದ್ದೇಳುತ್ತಲೇ ಯರಡಕ್ಕೆ ಹೋಗಿ ಬಂದು, ಕಾಫಿ ಕುಡಿದು, ದನಗಳ ಕಸ ಬಾಚಿ ತಿಪ್ಪೆಗಳಿಗೆ ಸುರಿದು, ಮಳೆಗಾಲವಾದರೆ ಹೊಲಕ್ಕೆ ಹೋಗಿ ಹಸಿಹುಲ್ಲು ತಂದಾಕಿ, ಮುಖ ತೊಳೆದ ಶಾಸ್ತ್ರ ಮಾಡಿ, ಏನಿರುತ್ತಿತ್ತೋ ಅದನ್ನು ಉಂಡು ಸ್ಕೂಲಿನ ಕಡೆ ಓಡುತ್ತಿದ್ದೆವು. ಸ್ನಾನ ಮಾಡುತ್ತಿದ್ದದ್ದು ವಾರಕ್ಕೊಮ್ಮೆ ಶನಿವಾರದಂದು. ಮೂಗಿನ ಎರಡು ಹೊಳ್ಳೆಗಳಲ್ಲೂ ಗಂಗಾ ಯಮುನೆಯರು
(ಗೊಣ್ಣೆ) ಸದಾ ಆರ್ಭಟಿಸುತ್ತಿದ್ದರು. ಅದನ್ನು ಒರೆಸಿಕೊಂಡು, ಒರೆಸಿಕೊಂಡು ನಮ್ಮ ಅಂಗಿಬಟ್ಟೆಗಳ ಮುಂದಿನ ಭಾಗ ಒಣರೊಟ್ಟಿಯಂತೆ ಗಟ್ಟಿಯಾಗಿರುತ್ತಿದ್ದವು. ಇನ್ನು ಎಂಥ ಗಟ್ಟಿ ಖಾಕಿ ನಿಕ್ಕರ್ರುಗಳಾದರೂ ತಿಕದಲ್ಲಿ ಹರಿದು, ಎರಡೂ ಪಿರ್ರೆಗಳು ಕರಿ ರಾಗಿ ಮುದ್ದೆಗಳಂತೆ ಕಂಗೊಳಿಸುತ್ತಿದ್ದವು. ಕ್ಲಾಸಿನಲ್ಲಿ ಮಗ್ಗಿ ಹೇಳಿಸಲು ನಿಲ್ಲಿಸಿದಾಗಲಂತೂ ಹೊಳ್ಳೆಗಳಲ್ಲಿ ಹರಿಯುತ್ತಿದ್ದ ಗಂಗಾ ಯುಮುನೆಯರು ಬಾಯಿಗೆ ನುಗ್ಗಿಬಿಡುತ್ತಿದ್ದರು. ಕೆಲವೊಮ್ಮೆ ಹಾಗೆಯೇ ಅವರನ್ನು ಕರುಳಿಗೆ ಆಪೋಶನ ಮಾಡಿಕೊಳ್ಳುತ್ತಿದ್ದೆವು.
ಫೋಟೋ ಕೃಪೆ : google
ನಾನು ಹೈಸ್ಕೂಲ್ ಓದಲು ಬೆಂಗಳೂರಿಗೆ ಬಂದ ಮೇಲೆ ಒಂದಿಷ್ಟು ಸುಧಾರಿಸಿದ್ದೆ. ಅತ್ತಿಗೆ ಹರಿದ ಟವಲ್ಲಿನ ಬಟ್ಟೆಯನ್ನು ಚೌಕಾಕಾರದಲ್ಲಿ ಕತ್ತರಿಸಿ ನನ್ನ ಜೇಬಿಗೆ ತುರುಕಿದ್ದಳು. ಆದರೂ ಬೆಂಗಳೂರಿನ ಸ್ಟೂಡೆಂಟ್ ಗಳ ಮಧ್ಯೆ ನನ್ನ ಇರುವಿಕೆ ಎದ್ದು ಕಾಣುತ್ತಿತ್ತು. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಈ ಬೆಂಗಳೂರಿನಲ್ಲೂ ‘ ದೇವ್ರು ಬಡತನ ಕೊಡ್ತಾನೆ ಕೊಳ್ಕ್ತನ ಕೊಡ್ತಾನ ‘ ಎಂಬ ವಿಷಯದ ಬಗ್ಗೆ ಪ್ರಬಂಧ ಬರೆಯಲು ಕೊಡುವುದೆ !? ನನಗೆ ರೇಗಿ ಹೋಗಿತ್ತು. ನಾನು ಬಡತನದಿಂದಾಗಿ ಹೇಗೆ ಕೊಳಕತನ ಇರುತ್ತದೆ ಎಂದು ವಿವರವಾಗಿ ಬರೆದಿದ್ದೆ. ಹಳ್ಳಿಯ ರೈತಾಪಿ ಮಕ್ಕಳು, ದಲಿತರ ಮಕ್ಕಳು, ಕೂಲಿ ಮಾಡುವವರ ಮಕ್ಕಳು ಕೆಲಸದ ಒತ್ತಡದಿಂದಾಗಿ, ಒಳ್ಳೆಯ ಬಟ್ಟೆ, ಸೋಪು, ಪ್ರತಿನಿತ್ಯ ಸ್ನಾನ ಮುಂತಾದುವುಗಳ ಕೊರತೆಯಿಂದಾಗಿ ಕೊಳಕುತನದಲ್ಲಿ ಇರುತ್ತಾರೆ. ಮತ್ತು ಶ್ರೀಮಂತರ ಮಕ್ಕಳಿಗೆ ಎಲ್ಲಾ ಅನುಕೂಲಗಳಿರುವುದರಿಂದ ಮತ್ತು ಕೃಷಿಯ ಕೆಲಸಗಳಿಲ್ಲದೆ ಇರುವುದರಿಂದ ಸ್ವಚ್ಛವಾಗಿರುತ್ತಾರೆಂದು ವಿವರವಾಗಿ ಬರೆದು ಬಡತನ ಖಂಡಿತವಾಗಿಯೂ ಕೊಳಕುತನಕ್ಕೆ ಕಾರಣವಾಗುತ್ತದೆಯೆಂದೂ,ದೇವರು ಬಡ್ತನದ ಜೊತೆಗೆ ಕೊಳಕ್ತನನೂ ಕೊಡ್ತಾನೆ ಎಂದು ಬರೆದಿದ್ದೆ.
ನಂಜೇಗೌಡ ಅಂತ ಕನ್ನಡದ ಮೇಷ್ಟ್ರು ಉತ್ತರ ಪತ್ರಿಕೆಗಳನ್ನು ಹಿಡಿದು ಕ್ಲಾಸಿಗೆ ಬಂದವರು ಅಟೆಂಡೆನ್ಸ್ ಕೂಗಿದ ಮೇಲೆ ” ಕೇಶವ ರೆಡ್ಡಿ ನಿಂತ್ಕೊಳೊ ” ಎಂದಿದ್ದರು. ಭಯದಿಂದಲೇ ಎದ್ದು ನಿಂತಿದ್ದೆ. ” ಎಂಥ ಹೈಕ್ಲಾಸ್ ಪ್ರಬಂಧ ಬರ್ದಿದ್ದೀಯೋ, ಭೇಷ್. ಸ್ಕೂಲಿನ ಸ್ಟೂಡೆಂಟ್ಸೆಲ್ಲ ಒಂದು ಕಡೆ ಆದ್ರೆ, ನೀನೊಬ್ಬನೇ ಒಂದು ಕಡೆ ” ಎಂದು ಕೂರಲು ಹೇಳಿದ್ದರು. ಓಹೋ, ನಾನು ಬರೆದಿದ್ದು ಯಡವಟ್ಟಾಗಿದೆ ಎಂದುಕೊಂಡೆ. ಏಕೆಂದರೆ, ಪ್ರಬಂಧದಲ್ಲಿ ಮೂಗಿನಲ್ಲಿನ ಗೊಣ್ಣೆ, ತಲೆ ಕೂದಲಿನಲ್ಲಿನ ಹೇನು, ಬಟ್ಟೆಗಳಲ್ಲಿ ಬೀಳುತ್ತಿದ್ದ ಕೂರೆ ಇತ್ಯಾದಿಗಳನ್ನು ಉದಾಹರಣೆ ಸಮೇತ ವಿವರಿಸಿ ಬರೆದಿದ್ದೆ. ಚಿಕ್ಕಪೇಟೆಯಲ್ಲಿದ್ದ ಭಾರತಿ ವಿಧ್ಯಾಶಾಲೆ ಎಂಬ ಹೆಸರಿನ ಆ ಸ್ಕೂಲಿನ ತುಂಬಾ ಮಾರ್ವಾಡಿ, ಶೆಟ್ಟರುಗಳೇ ಸ್ಟೂಡೆಂಟ್ಸು. ಹುಡುಗಿಯರಂತೂ ನನ್ನ ಕಡೆ ನೋಡುವುದು, ನಗುವುದು ಮಾಡುತ್ತಿದ್ದರು. ಕೆಲವರು ಹಳ್ಳಿ ಗುಗ್ಗು ಎಂದು ಮಾತನಾಡಿಕೊಳ್ಳುತ್ತಿದ್ದರು. ಪ್ರಬಂಧದಲ್ಲಿ ನನಗೆ ಹತ್ತಕ್ಕೆ ಒಂಬತ್ತು ಅಂಕಗಳು ಬಂದಿದ್ದರೆ, ಬೇರೆ ಯಾರಿಗೂ ಮೂರು ಅಂಕಗಳ ಮೇಲೆ ಬಂದಿರಲಿಲ್ಲ. ಪ್ರಬಂಧ ಅಂದರೆ ಹೀಗಿರಬೇಕಲೇ, ಎಷ್ಟ್ ಕರೆಕ್ಟಾಗಿ ಬರೆದಿದ್ದೀಯೋ ಎಂದು ನಂಜೇಗೌಡ ಮೆಷ್ಟ್ರು ಹೆಡ್ ಮಾಸ್ಟರ್ ವೆಂಕಟರವಣಪ್ಪನವರಿಗೂ ತೋರಿಸಿದ್ದರು. ಅವರು ನನ್ನನ್ನು ಒಂಥರಾ ನೋಡಿ ನಕ್ಕಿದ್ದರು.
ಫೋಟೋ ಕೃಪೆ : google
ಎಸ್ ಎಸ್ ಎಲ್ ಸಿ ಗೆ ಬರುವ ಹೊತ್ತಿಗೆ ಆಟ, ಪಾಠಗಳಲ್ಲಿ ಫೇಮಸ್ ಆಗಿದ್ದೆ. ಹಳ್ಳಿ ಗುಗ್ಗು ಎಂದು ರೇಗಿಸಿ ನಗುತ್ತಿದ್ದ ಶೆಟ್ಟರ ಹುಡುಗಿ ಎಸ್ಸೆಸ್ಸೆಲ್ಸಿ ಕೊನೆಯ ದಿನಗಳಲ್ಲಿ ಚಾಕಲೇಟ್, ಚೆಕ್ಕುಲಿ ಇತ್ಯಾದಿಗಳನ್ನು ನೋಟ್ಸ್ ಇಸಿದುಕೊಳ್ಳುವ, ಕೊಡುವ ನೆಪದಲ್ಲಿ ತಂದುಕೊಡುತ್ಥಿದ್ದಳು. ಯೂನಿಯನ್ ಡೇ ದಿನ ಬಲವಂತವಾಗಿ ನನ್ನನ್ನು ಸಂಜಯ್ ಟಾಕೀಸಿಗೆ ‘ ‘ ಸಿನಿಮಾಗೆ ಕರೆದುಕೊಂಡು ಹೋಗಿದ್ದಳು. ನಾನು ಏನೂ ಮಾತನಾಡದೆ ಬೆವರುತ್ತಲೇ ಸಿನಿಮಾ ನೋಡಿ, ಸಿನಿಮಾ ಬಿಟ್ಟ ತಕ್ಷಣ ಅವಳಿಗೆ ಹೇಳದೆ ಕೇಳದೆ ಬಸ್ ಸ್ಟಾಪ್ ಗೆ ಓಡಿ ಹೋಗಿ ಬಸ್ಸು ಹತ್ತಿದ್ದೆ. ಆ ಹುಡುಗಿಯ ಅಪ್ಪ ನಗರ್ತರ ಪೇಟೆಯಲ್ಲಿ ಜ್ಯೂವಲರಿ ಅಂಗಡಿ ಇಟ್ಟುಕೊಂಡಿದ್ದ. ಸಧ್ಯ ಅವಳದು B ಅಕ್ಷರ, ನನ್ನದು K ಅಕ್ಷರ ಆಗಿದ್ದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೇರೆ ಬೇರೆ ಕೊಠಡಿಗೆ ಬಿದ್ದಿದ್ದೆವು. ಅವಳು ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿದ್ದಳು. ನಿನ್ನೆ ಊರಿಗೆ ಹೋಗಿದ್ದಾಗ ನಮ್ಮ ಪ್ರೈಮರಿ ಸ್ಕೂಲನ್ನು ನೋಡಿ ಪ್ರಬಂಧ ನೆನಪಾಗಿತ್ತು. ಈಗ ಸ್ಕೂಲೂ ತುಂಬಾ ಬೆಳೆದಿದೆ ಮತ್ತು ಹಿಂದೆ ಇರುತ್ತಿದ್ದ ನಮ್ಮಂಥ ಸ್ಟೂಡೆಂಟ್ಗಳು ಇವೊತ್ತು ದುರ್ಬೀನು ಹಾಕಿ ಹುಡುಕಿದರೂ ಒಬ್ಬೇ ಒಬ್ಬರೂ ಸಿಗುವುದಿಲ್ಲ.
ಕಾಲ ಸರಿದಂತೆ ಬದುಕೂ ಸರಿಯುತ್ತದೆ
ವಯಸ್ಸಾದಂತೆ ಭಾವನೆಗಳೂ ಮಾಗುತ್ತವೆ
ಬಟ್ಟೆಗಳು, ಗೋಡೆಗಳು ಕಾಲ ಕ್ರಮೇಣ ಬಣ್ಣ ಸುಣ್ಣ ಕಳೆದುಕೊಂಡಂತೆ…
- ಕೇಶವರೆಡ್ಡಿ ಹಂದ್ರಾಳ