ನಿನ್ನ ರಮಿಸುವ ವಿದ್ಯೆಯೊಂದು ಕಲಿಯಲು ಹರಸಾಹಸ ಪಡುತ್ತಿರುವೆ…ದೀಪಿಕಾ ಬಾಬು ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನೀನು ವಿದಾಯ ಹೇಳಿರುವೆಯಂತೆ
ಹೌದೆ? ನಿಜವಾಗಿಯೂ ಸತ್ಯವೇ?
ನಾನೆಲ್ಲೋ ಇದೊಂದು ಜಾಣತನದ
ಹುಸಿಮುನಿಸಿನ ಕದನವೆಂದು
ನಿನ್ನ ರಮಿಸುವ ವಿದ್ಯೆಯೊಂದು
ಕಲಿಯಲು ಹರಸಾಹಸ ಪಡುತ್ತಿರುವೆ
ಹೌದು, ಅದೇಗೆ ಸಾಧ್ಯವಾಯಿತು
ಪ್ರೀತಿ ಹುಟ್ಟಿದ ಮರುಗಳಿಗೆಯೇ
ಮರಣವೊಂದಲು
ಸುಳ್ಳು ತಕರಾರು ನಿನ್ನವು ಸಲ್ಲವು
ನನ್ನೇದರು ನಿಂತು
ಕಣ್ಣೋಟ ಎದುರಿಸಿ ಉತ್ತರಿಸು
ಜಗತ್ತಿನ ತುಂಬಾ ಮೋಸಗಾರರಿಲ್ಲ
ಮುಗ್ಧತೆಯು ಬಲಿಯಾಗುವುದು ಸಂಚೇ
ನನ್ನ ಪ್ರೇಮ ಅಳಿವಿನಂಚಿನಲ್ಲಿರುವುದೆಂದು
ಯಾರ ದೂರಲೀಗ, ಬೇಡಲೀಗ?
ಅಥವಾ ಸತ್ತು ಸಮಾಧಿಯಾಗಿ
ಯಾವ ಕಾಲವಾಯಿತೊ
ವಿದಾಯದ ಮುನ್ಸೂಚನೆ ನೀಡದೆ
ಪ್ರೇಮದಲ್ಲಿಯೇ ಗೋರಿ ಕಟ್ಟಿದ್ದಿಯಾ!
ಬೀಳ್ಕೊಡುತ್ತಿರುವೆ ದಯಮಾಡಿ
ಹಿಂದಿರುಗಿ ನೋಡದಿರು ಮತ್ತೆ
ನಿನ್ನ ನೋಟಕ್ಕೆ ಸತ್ತವಳು ಬದುಕಿದರೆ
ಅಪರಾಧಿ ಮಾಡಬೇಡ ಕೊನೆಯ ವಿನಂತಿ//
- ದೀಪಿಕಾ ಬಾಬು