‘ಮಂದಾರ’ ಕಥಾಸಂಕಲನ ಪರಿಚಯ

‘ಮಂದಾರ’ ಕಥಾಸಂಕಲನದ ಕಥೆಗಾರ್ತಿ ಮಂಜುಳ ಪ್ರಸಾದ್ ಅವರ ಮೊದಲ ಸಂಕಲನವಾಗಿದ್ದು, ಈ ಕೃತಿಯ ಕುರಿತು ಲೇಖಕಿ ದೀಪಿಕಾ ಬಾಬು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಹೆಸರು : ಮಂದಾರ
ಲೇಖಕರು : ಮಂಜುಳ ಪ್ರಸಾದ್
ಪ್ರಕಾಶನ: ಅಕ್ಷರನಾದ
ಬೆಲೆ : ೧೫೦
ಪುಟಗಳು : ೧೩೧
ಮೊದಲ ಮುದ್ರಣ : ೨೦೨೪

ಸಾಹಿತಿಕವಾಗಿ ಕಥೆಗಳು ಹುಟ್ಟುವುದೇ ಕುಟುಂಬಗಳಲ್ಲಿ, ಆದರೆ ಕಥೆಯನ್ನು ಹೇಗೆ ಹೆಣೆಯುತ್ತೇವೆ ಎಂಬುದೇ ಮುಖ್ಯವಾಗುತ್ತದೆ. ಕಥೆ ಕಟ್ಟಲು, ಮೊದಲನೆಯದಾಗಿ ಬುನಾದಿಗೆ ಕಥಾ ವಸ್ತು ಪ್ರಮುಖವಾಗಿರುತ್ತದೆ. ನಂತರ ಪಾತ್ರಗಳು, ಸಾಂದರ್ಭಿಕ ತಿರುವುಗಳು ಮುಖ್ಯವಾಗಿರುತ್ತದೆ. ಪಾತ್ರಗಳ ನಿರ್ವಹಿಸುವಿಕೆಯ ಜಾಣ್ಮೆ, ತೀಕ್ಷ್ಣತೆ ಬುದ್ಧಿಮತ್ತೆ ಕಥೆಯನ್ನು ಒಂದು ರೋಚಕ ಘಟ್ಟಕ್ಕೆ ಕರೆದುಕೊಂಡೋಗುವ ಶಕ್ತಿ ಕಥೆಗಾರನಿಗಿರಬೇಕು ಮತ್ತು ಓದುಗರ ಭಾವ ಕೆಲವೊಮ್ಮೆ ತಲ್ಲಣಗೊಂಡು, ಮತ್ತೊಮ್ಮೆ ಅಚ್ಚರಿಯಿಂದಲೂ ಮಗದೊಮ್ಮೆ ಕನಿಕರದಿಂದಲೂ ಆ ಕಥೆಯಲ್ಲಿ ತಲ್ಲೀನಗೊಂಡು ಪಾತ್ರಗಳ ಹಿಡಿಯಾಗಿ ಜೀವಿಸಿಕೊಳ್ಳಬೇಕು. ಇಂತಹ ಕಥೆಗಳ‌ ಬರೆಯುವ ಕಥೆಗಾರ ಓದುಗನ ಮನಸಲ್ಲಿ ಶಾಶ್ವತವಾಗಿ ನೆಲೆಯೂರಿ ಬಿಡುತ್ತಾನೆ ಎಂಬುವ ಅನಿಸಿಕೆ ನನ್ನದು.

ಏನಿದು ಕಥೆಗಳ ಬಗ್ಗೆ ಪೀಠಿಕೆ ಹಾಕ್ತಿದೀನಿ ಅನ್ಕೊಂಡ್ರ? ಅದಕ್ಕೆ ಉತ್ತರವೇ ಈ “ಮಂದಾರ, ಕಿರುಕಥೆಗಳ ಸಂಕಲನ” ಲೇಖಕಿ ಮಂಜುಳ ಪ್ರಸಾದ್ ಬರೆದಿರುವ ಈ ಮಂದಾರ ಕಥಾಸಂಕಲನದಲ್ಲಿ ಒಟ್ಟು ೨೦ ಕಥೆಗಳಿದ್ದು ಎಲ್ಲಾ ಕಥೆಗಳು ಸಹ ಸಾಮಾಜಿಕ ಕಳಕಳಿಯಿಂದ ಕೂಡಿದ್ದು, ಎಲ್ಲಾ ಬಹುತೇಕ ಕಥೆಗಳು ಕುಟುಂಬದ ವಾಸ್ತವದ ನೆಲೆಗಟ್ಟಾಗಿದೆ.

“ಕಾಡ್ಗಿಚ್ಚಿನ ಅವತಾರದಲ್ಲಿ ಕಾಣುವಳು ಈ ಮಂದಾರ ಪುಷ್ಪವು, ಯಥಾವತ್ ಕುಟುಂಬದಲ್ಲಿ ಎಲ್ಲರ ಹಿತಾಸಕ್ತಿ ಬಯಸುವ ಹೆಣ್ಣು” ಈ ಕಥಾ ಸಂಕಲನದಲ್ಲಿ ಸಾಮಾ‌ನ್ಯವಾಗಿ ಬಳಸಲಾಗುವ ಸಾಹಿತಿಕ ಭಾಷೆಯ ಸೊಗಡಿದೆ, ಓದುಗರಿಗೆ ಸರಳವಾಗಿ ಓದಿಸಿಕೊಂಡೋಗುವ ಸೊಬಗಿದೆ.

ಎಲ್ಲಿಯೂ ಕ್ಲಿಷ್ಟಕರ ಎನಿಸುವಂತಹ ಪದಗಳಿರದ ಈ ಸಂಕಲನದಲ್ಲಿ ಮೂರ್ನಾಲ್ಕು ಶ್ಲೋಕಗಳು, ಹಳೆಯ ಚಿತ್ರಗೀತೆಯ ಸಾಲುಗಳು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತವೆ.
“ಮಂದಾರ” ಕಥೆಯಲ್ಲಿ ಬರುವ ಪಾತ್ರಗಳು, ಸುಳ್ಳಿನಲ್ಲಿರುವ ಸತ್ಯದ ಬಹಿರಂಗದ ಭಯ, ಮಗಳ ಪ್ರಶ್ನೆಗೆ ತತ್ತರಿಸುವ ಅಮ್ಮಳ ಮೌನ, ಸುಳ್ಳಿನ ಮೇಲೆ ಸುಳ್ಳಿನ ಮಾಲೆ ಎಣೆಯುವ ಕಷ್ಟ ಮತ್ತು ಅದರ ಭವಿಷ್ಯ. ಹೀಗೆ ಸ್ವಾರಸ್ಯಕರವಾಗಿರುವ ಕಥೆ ಇದಾಗಿದೆ.

“ನಮ್ಮ ಸಂಸಾರ ಆನಂದ ಸಾಗರ” ಸಾಮಾನ್ಯವಾಗಿ ಪ್ರತಿ ಹೆಣ್ಣು ಬರಹಗಾರ್ತಿಯೂ ಅನುಭವಿಸುವ ವೇದನೆಯೇ ಈ ಕಥೆಯಾಗಿದೆ. ಈ ಕಥೆಗೆ ಹೊರತಾಗಿ ನಾನು ಇಲ್ಲ ಮತ್ತು ಈ ಕಥಾಸಂಕಲನ ಬರೆದ ಮಂಜುಳ ಪ್ರಸಾದ್ ಇಲ್ಲ ಮತ್ತು ಪ್ರಕಟಿಸಿದ ಶೃತಿ ಮಧುಸೂದನ್ ಸಹ ಹೊರತಲ್ಲ ಎಂಬಂತೆ….ಹೊರಗಿನ ಪ್ರಪಂಚಕ್ಕೆ ಲೇಖಕಿಯಾಗಿ ಭರವಸೆ ನೀಡಿ,ಉತ್ಸಾಹದ ಮಾತಾಡುವ ಕಥೆಗಾರ್ತಿ ಮನೆಯಲ್ಲಿನ ಕೊಂಕು ಅಸಡ್ಡೆಗೆ ಒಳಗಾಗಿ ಇದೆಲ್ಲ ನಿಂಗ್ಯಾಕೆ ಎಂದು ಮನ ನೋಯಿಸುವ ಪ್ರಸಂಗದಾಗಿದೆ.

“ಕನಸಾದ ಕನ್ಯಾದಾನ” ಪ್ರತಿ ತಂದೆಯ ಹೆಮ್ಮೆ ಮತ್ತು ಗೌರವ ತನ್ನ ಮಗಳಾಗಿರುತ್ತಾಳೆ, ಅವಳ ಬಗ್ಗೆ ಸಾವಿರ ಕನಸು ಕಾಣುವ ತಂದೆಗೆ ಮೋಸ ಮಾಡುವ ಮಗಳ ಕಥೆ ಇದಾಗಿದ್ದು, ತಂದೆಯ ಅಳಲು ಇಲ್ಲಿ ವ್ಯಕ್ತಗೊಂಡಿದೆ.

“ಅಂತರಾಗ್ನಿ” ಇಲ್ಲಿ ಒಂದು ಹೆಣ್ಣು ಮದುವೆಯಾಗಿ ಬಂದಾಗಿನಿಂದಲೂ ಅನುಭವಿಸುವ ಕಷ್ಟದ ಬಗ್ಗೆ ಸುಧೀರ್ಘಾವಾಗಿ ಕಥೆ ಹೆಣೆದಿದ್ದಾರೆ ಲೇಖಕಿ, ಅವಳ ಭಾವನೆಗಳಿಗೆ ಬೆಲೆ ಇಲ್ಲವೇ ತನ್ನ ಇಷ್ಟ-ಕಷ್ಟಗಳ ಬಗ್ಗೆ ಕೇಳುವವರಿಲ್ಲದೆ ಅವಳ ಮನಸ್ಸಿನ ವೇದನೆಯೂ ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಹೇಳುತ್ತಾರೆ.ಮತ್ತು ತನ್ನ ಮಗಳಿಗೂ ಇಂತಹುದೇ ಪರಿಸ್ಥಿತಿ ಬರಬಾರದು ಎಂದು, ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ತುಂಬು ಕುಟುಂಬದ ತಾಯೊಬ್ಬಳ ಕಥೆ ಇದಾಗಿರುತ್ತದೆ.

ಯಕ್ಷಪ್ರಶ್ನೆ, ತ್ಯಾಗಮಹಿ, ಪುಸ್ತಕ ತಂದ ಅದೃಷ್ಟ, ಮೂಕ ಪ್ರೇಮಿ ಹೀಗೆ ಪ್ರತಿ ಕಥೆಯೂ ಒಂದೊಳ್ಳೆಯ ವಸ್ತು ವಿಷಯವನ್ನು ಹೊಂದಿದ್ದು ಕಥೆ ಕಟ್ಟಿರುವ ಬಗೆಯೂ ಮತ್ತು ಕುಟುಂಬದಲ್ಲಿ ಹೆಣ್ಣಿಗಿರುವ ಪ್ರಾಶಸ್ತ್ಯದ ಬಗೆಗಿರುವ ಕಥೆಗಳು ಚನ್ನಾಗಿವೆ ಮತ್ತು ಬಂಜೆ ತನದ ಬಗ್ಗೆ ವಾಸ್ತವದ ಪಕ್ವತೆಯಲ್ಲಿ ಬರೆದ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ಆದರೆ ಸಾಹಿತಿಕವಾಗಿ ಒಂದಷ್ಟು ಮಜಲುಗಳಿದ್ದರೆ ಕಥೆಯ ಸ್ವಾರಸ್ಯ ಇನ್ನೂ ಹೆಚ್ಚುತ್ತದೆ. ಒಂದು ಕಥೆ ಕಟ್ಟುವುದೆಂದರೆ ಓದುಗರ ಮನದಲ್ಲಿ ಆ ಘಟನೆಯನ್ನು ತಾನೇ ಅನುಭವಿಸುತಿದ್ದೇನೇನೋ ಎನ್ನುವಂತಹ ರೋಮಾಂಚನದ ರೀತಿಯಲ್ಲಿ ಹೆಣೆಯಬೇಕು ಮತ್ತು ಕಥೆ ಬರೆಯುವಾಗ ಅದನ್ನು‌ ಜೀವಿಸಿಕೊಂಡೆ ಬರೆಯಬೇಕಾಗುತ್ತದೆ. ಹೀಗೆಯೇ ಕಣ್ಣಿಗೆ ಕಟ್ಟುವಂತೆಯೆ ಕೆಲವು ಕಥೆಗಳಿವೆ ಇಲ್ಲಿ.

ಈ ಮಂದಾರ ಕಥಾಸಂಕಲನದ ಕಥೆಗಾರ್ತಿ ಮಂಜುಳ ಪ್ರಸಾದ್ ಅವರ ಮೊದಲ ಸಂಕಲನವಾದ ಕಾರಣ ಇದು ಒಂದಿಷ್ಟು ರಿಯಾಯಿತಿ ಇರುತ್ತದೆ. ಹಾಗೂ ಲೇಖಕಿ ಈ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ ಅವರಿಗೆ ಶುಭಾಶಯಗಳು.


  • ದೀಪಿಕಾ ಬಾಬು –  ‌‌‌‌‌‌ ಚಿತ್ರದುರ್ಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading