‘ಋತು ಮೊಸಗೈಯ್ಯದ ಮಾಸ’ ಕವನ

ಬೇಡದ ದೇವರಿಲ್ಲ, ಮಾಡದ ವ್ರತವಿಲ್ಲ, ಕಟ್ಟದ ಹರಕೆಯಿಲ್ಲ, ಇಷ್ಟಾದರೂ ಗರ್ಭ ಚಿಗುರುತಿಲ್ಲ…ಕವಿ ದೀಪಿಕಾ ಬಾಬು ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಅದೇ ತಾರೀಖನ್ನು ನೆನಪಿಟ್ಟುಕೊಂಡು
ಮರೆಯದೇ ಬರುತ್ತದೆ
ಮೂರೇ ಮೂರು ದಿನ
ದೇಹವನ್ನೆಲ್ಲ ಹಸಿಮಾಡಿ
ಗರ್ಭವ ಕಸಿಯಾಗಿಸಿ
ಮರೆಯಾಗುತ್ತದೆ

ಮತ್ತೊಂದು ಮಾಸ
ಅದೇ ತಾರೀಖು
ಮತ್ತದೇ ಹಸಿ-ಕಸಿಯ ಕಾಯ

ಋತು ಮೊಸಗೈಯ್ಯಲಿ ಈ ಮಾಸ
ಋತುಚಕ್ರಕ್ಕೆ ನವಮಾಸ
ವಿರಾಮ ನೀಡಲಿ
ಮುಟ್ಟು ನಿಂತ ಐದನೇ ದಿನಕ್ಕೆ
ತುಪ್ಪದ ದೀಪ ದೇವರ ಮುಂದೆ
ಗರ್ಭದಿ ಮೊಳೆಯಲ್ಲೊಂದು ಚಿಗುರು

ಬೇಡದ ದೇವರಿಲ್ಲ
ಮಾಡದ ವ್ರತವಿಲ್ಲ
ಕಟ್ಟದ ಹರಕೆಯಿಲ್ಲ
ಇಷ್ಟಾದರೂ ಗರ್ಭ ಚಿಗುರುತಿಲ್ಲ

ಮುತ್ತಜ್ಜನ ಆಸ್ತಿಗೊಬ್ಬ
ವಾರಸುದಾರನಿಲ್ಲವಂತೆ
ಮಗನಿಗಿನ್ನೊಂದು ಮದುವೆ ಸಂಚು
ಅತ್ತೆ ಮಾವ ಕನ್ನೆ ಹುಡುಕಾಟದಲಿ
ಕಟ್ಟಿಕೊಂಡವನಿಗಾದರೂ ಕರುಣೆಯಿಲ್ಲ

ತಂದವಳ ಮೇಲೆ ಸುರಿದ ಅಕ್ಕರೆ
ಮಾಸದಿಂದ ಮಾಸಕ್ಕೆ ಕರಗುತಿದೆ
ಅವಳಿಗೂ ನನ್ನದೇ ಪಟ್ಟ
ಅಲ್ಲಲ್ಲ
ನನ್ನ ಪಟ್ಟ ನನ್ನದು
ಅವಳ ಪಟ್ಟ ಅವಳದು
ಅಪವಾಧ ಮಾತ್ರ ಒಂದೇ
ಬಂಜೆ ಎಂಬ ಕಳಂಕ

ವಂಶದ ಕುಡಿ ಹೆರದ ಮೇಲೆ
ಹೆಂಗಸು ಅಲ್ಲವೆಂಬುವರು
ಅದ್ಯಾವ ಶಾಪವೋ ಹೆಣ್ಣಿಗೆ
ಪ್ರತಿ ಮಾಸದಿ
ಕಸಿಯಾಗುವ ಗರ್ಭಕ್ಕೆ
ಈ ತಾರತಮ್ಯವೆಕೋ
ಕೈ ರೇಖೆಯಲಿ ಕುರುಳ ಕುಡಿಯ
ರೇಖೆ ಅಳಿಸಿರಬಹುದ!

ಕುಂತಿಯಂತೆ ತಪ್ಪಸ್ಸು ಗೈದು
ಋಷಿಮುನಿಗಳಿಂದ
ಗರ್ಭಕಟ್ಟುವ ಮಂತ್ರದ ವರ ಪಡೆಯಲೇನು!
ಕಲ್ಪನೆಗೂ ಮಿತಿಗಳಿರಲಿ
ಇದು ಕಲಿಯುಗವಮ್ಮ!

ತ್ರೇತಾಯುಗ-ದ್ವಾಪರಯುಗ ದ
ಪೌರಣಿಕ ಕಥೆಗಳಿಗೆ ಸಾಕ್ಷ್ಯವುಂಟು
ಕರುಳಂಚಿ ಉಸಿರಂಚುಣ್ಣುವ
ಜೀವವನ್ನು ನೀಡಲಾಗದ ಮೇಲೆ
ಯಾವ ಕಥೆಯ ಸಾಕ್ಷ್ಯವಾದರೂ
ಏನು ಪರಿಹಾರ‌ ನೀಡಬಹುದು!

ಮಾಸದಿಂದ ಮಾಸ ಉರುಳುತ್ತಿವೆ
ಕ್ಯಾಲೆಂಡರಿನಲಿ ತಪ್ಪದ ತಾರೀಖಿಕೆ
ಶಾಪವನಿತ್ತು
ಮನೆ ಮುಂದಿನ ಕೋಣೆಯಲಿ ನರಳಾಟ
ಈಗ ಇಬ್ಬರಿಗೂ
ಎಲ್ಲವೂ ಪಾರಪಥ್ಯವೀಗ!


  • ದೀಪಿಕಾ ಬಾಬು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading