ಕವಿ ಮಹಾಮನೆ ಅವರಿಗೆ ಆಕೃತಿಕನ್ನಡದಿಂದ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತಾ ಅವರ ರಚನೆಯ ಒಂದು ಕವಿತೆ, ತಪ್ಪದೆ ಮುಂದೆ ಓದಿ…
ಅವಳು ಹೋಗಿ
ತುಂಬಾ ದಿನಗಳಾದವು
ನೆನಪುಗಳು ನನ್ನನ್ನು ಕೊಲ್ಲುತ್ತಿವೆ
ಏನನ್ನೂ ಹೇಳದೇ
ಸುಮ್ಮನೆ ಹೊರಟು ಬಿಟ್ಟಳು
ಏನನ್ನಾದರೂ ಹೇಳಿ ಹೋಗಬಹುದಿತ್ತಲ್ಲ..
ನಾನೇಕೆ ಸುಮ್ಮನೆ ನಿಂತೆ
ಏನೂ ಮಾತನಾಡದೆ..
ಏನೂ ಕೇಳದೇ
ಅವಳು ಹೊರಹೋಗುವುದನ್ನೇ ನಾನು ಬಯಸಿದ್ದೆನಾ
ಅದೇ ನನ್ನ ಉದ್ದೇಶವಾಗಿತ್ತ
ಅವಳು ಹೋಗುವುದನ್ನು
ನಾನೇಕೆ ತಡೆಯಲಿಲ್ಲ
ಅವಳು ಉಡುತ್ತಿದ್ದ ಆ ಬಟ್ಟೆಗಳು
ನನಗೇಕೆ ಒಮ್ಮೊಮ್ಮೆ ಹೂಗಳ ರಾಶಿಯಾಗಿಯೂ
ಮಗದೊಮ್ಮೆ ಬೆಂಕೆಯ ಅಲೆಗಳಾಗಿಯೂ ಕಾಣುತ್ತವೆ
ಅವುಗಳೇಕೆ ನನ್ನ ಕಾಡುತ್ತವೆ..
ಆ ಸೀರೆಗಳ ಸ್ಪರ್ಶ ಅಷ್ಟೇಕೆ ಮಧುರ..ಕೋಮಲ
ಅವಳ ಮಾತಿನ ದನಿ
ಆ ರಾಗ..ಮನೆಯ ತುಂಬಾ
ಆವರಿಸಿದೆಯಲ್ಲಾ
ಅವಳ ಮೈಗಂಧ
ನನ್ನೇಕೆ ಸುಡುತ್ತಿದೆ
ಸುಟ್ಟ ಬದುಕು
ಕೆಟ್ಟ ವಾಸನೆ ಕಣ್ರಿ
ಅವಳು ಬಿಟ್ಟು ಹೋದ ಚಪ್ಪಲಿಗೆ
ನಾನೇಕೆ ಮುತ್ತನಿಡುತ್ತೇನೆ..
ಅವಳು ಬಿಚ್ಚಿಟ್ಟಿದ್ದ
ಗಡಿಯಾರವ ಅಷ್ಟೇಕೆ ಜತನ ಮಾಡಿದ್ದೇನೆ..
ನಿಂತು ಹೋದ ಗಡಿಯಾರದ
ಗ್ಲಾಸಿನ ಮೇಲೆ ಕೈಯಾಡಿಸುತ್ತಾ
ಕೂರುತ್ತೇನಲ್ಲ ಆಗ
ನನ್ನೊಳಗೆ ಆಗುವ ಜೀವ
ಸಂಚಲನದ ಅರ್ಥವೇನು
ಅವಳು ಹೋದ ದಿಕ್ಕನ್ನೇ
ಅದೆಷ್ಟೊ ಬಾರಿ ನೋಡುತ್ತಾ
ನಿಲ್ಲುತ್ತೇನಲ್ಲಾ..ಅದೇಕೆ.
ಅವಳು ಮತ್ತೆ ಬಾರಳು
ಎಂಬುದು ನನಗೆ ಗೊತ್ತಿದೆ..
ಆದರೂ ನಿಲ್ಲತ್ತೇನಲ್ಲ
ಬಾನಲ್ಲಿ ಹಾರುತ್ತಾ
ಹೋಗುತ್ತಿರುವ ಆ
ಒಂಟಿ ಹಕ್ಕಿಯ ನೋವ
ಕೇಳುವವರೇ ಇಲ್ಲವೇ
ಒಂಟಿಯಾಗಿ ಹಕ್ಕಿಯಂತೆ
ಹಾರಾಡುತ್ತಾ ಇರಲು
ನನಗೇಕೆ ಆಗುತ್ತಿಲ್ಲ
ಹಕ್ಕಿಯಂತೆ ಹಾರಾಡಲು
ರೆಕ್ಕೆ ಬೇಕಲ್ಲವೇ
ನಾನೊಬ್ಬ ಪೆದ್ದ ನೋಡಿ
ನನಗೆ ರೆಕ್ಕೆಯೂ ಇಲ್ಲ
ಪುಕ್ಕ ಮೊದಲೇ ಇಲ್ಲ
ಇನ್ನು ಹಾರಾಡುವುದೆಂತು
ರೆಕ್ಕೆ ಪುಕ್ಕಗಳನ್ನೆಲ್ಲ ಕಟ್
ಮಾಡಿಸಿಕೊಂಡು ಬದುಕುವುದೆಂತೂ
ಅವಳದೇ ನೆನಪುಗಳಲ್ಲಿ ನನಗೆ
ಇತ್ತಿತ್ತಲಾಗೆ ಎಲ್ಲವೂ
ಮರೆತು ಹೋಗುತ್ತದೆ
ಮುಂದೆ ನಿಂತ ಗೆಳೆಯನ
ಹೆಸರನ್ನೇ ಮರೆತುಬಿಟ್ಟಿರುತ್ತೇನೆ
ಮನೆಯ ಕೀ ಬಂಚ್..ಪೆನ್ನು
ಪುಸ್ತಕಗಳು..
ಎಲ್ಲೊ ಇಟ್ಟು
ಮತ್ತೆಲ್ಲೋ ಹುಡುಕುತ್ತಿರುತ್ತೇನೆ
ಕನ್ನಡಕ ತಲೆಯ ಮೇಲೆಯೇ
ಇರುತ್ತದೆ.. ಊರೆಲ್ಲ
ಹುಡುಕುತ್ತಿರುತ್ತೇನೆ
ಕುಡಿಯಲು ಮುಂದಿಟ್ಟುಕೊಂಡ
ಕಾಫಿ ತಣ್ಣಗಾಗಿರುತ್ತದೆ
ಮೊನ್ನೆ ಏನಾಯಿತೆಂದರೆ
ತರಕಾರಿ ತರಲು
ಹೊರಗ್ಹೋದವ ನನ್ನ
ಮನೆ ಯಾವುದೆಂಬುದನ್ನೇ
ಮರೆತು
ತಬ್ಬಿಬ್ಬಾಗಿ ಯಾರದೋ
ಮನೆಯ ಮುಂದೆ
ನಿಂತುಬಿಟ್ಟಿದ್ದೆ
ಅವಳ ನೆನಪುಗಳಲ್ಲಿ
ಒಮ್ಮೊಮ್ಮೆ ನಾನು ನನ್ನನ್ನೇ
ಮರೆತು ಬಿಡುತ್ತೇನೆ
ನಾನೇ ಮರೆತು ಹೋಗುತ್ತೇನೆ
ನನ್ನ ಹೆಸರೂ ನೆನಪಾಗುವುದಿಲ್ಲ
ಆದರೆ..
ಅವಳ ನೆನಪುಗಳು ಮಾತ್ರ
ಸದಾ ನನ್ನಲಿ
ಹಸಿರಾಗೇ ಇರುತ್ತವೆ
- ಮಹಾಮನೆ
