ಆ ಕಾಲದಲ್ಲಿ ಒಂದು ಮಾತಿತ್ತು. ಕೊರಳಲ್ಲಿ ಕರಿಮಣಿ, ಕಾಲಲ್ಲಿ ಕಾಲುಂಗುರ ಕಂಡರೆ ಕೈಮುಗಿ ಎಂದು. ವಿವಾಹಿತೆಯಾದ ಹೆಣ್ಣು ಮಾತೃ ಸ್ವರೂಪಿಯೂ ಹೌದು, ಶಕ್ತಿ ಸ್ವರೂಪಿಯೂ ಹೌದುಅಂಕಣಕಾರ್ತಿ ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಕಾಲ್ಗೆಜ್ಜೆಯ ನಾದವಿಲ್ಲ’ ಕುರಿತು ಬರೆದಿದ್ದಾರೆ ತಪ್ಪದೆ ಮುಂದೆ ಓದಿ….
ಸ್ತ್ರೀ ಅನಾದಿಕಾಲದಿಂದಲೂ ಪೂಜ್ಯಳು. ಸಹನೆ ತಾಳ್ಮೆಯಲ್ಲಿ ಭೂಮಿ ತೂಕದವಳು. ಕ್ಷಮೆಯಾಧರಿತ್ರಿ ಎಂದೇ ಹೆಸರಾದವಳು. ಭಾರತದ ಭವ್ಯ ಇತಿಹಾಸದಲ್ಲಿ ತನ್ನದೇ ಅಸ್ಮಿತೆ ಉಳಿಸಿಕೊಂಡವಳು. ಹೆಣ್ಣು ತನ್ನ ಹಣೆಗೆ ಭೂಷಣವೆಂಬಂತೆ ಚಂದದ ಸಿಂಧೂರವನ್ನಿಟ್ಟು, ಅಂದದ ಕಂಗಳಿಗೆ ಕಾಡಿಗೆಯ ಲೇಪವಿಟ್ಟು, ಮುಡಿಯಲ್ಲಿ ಮಲ್ಲಿಗೆ ಹೂ ಮುಡಿದು, ಕೈಗಳಲ್ಲಿ ಬಳೆಗಳನ್ನು ತೊಟ್ಟು, ಕೊರಳಲ್ಲಿ ವಿವಾಹ ಬಂಧನದ ಪವಿತ್ರ ಕುರುಹಾದ ಮಾಂಗಲ್ಯ ಧರಿಸಿ ಕಾಲ್ಬೆರಳಿಗೆ ಬೆಳ್ಳಿ ಕಾಲುಂಗುರ ಇಟ್ಟು, ಇದಕ್ಕೆ ಪೂರಕವೆಂಬಂತೆ ನಾಜೂಕಾದ ಕಾಲುಗಳಿಗೆ ಸೊಗಸಾದ ಕಾಲ್ಗೆಜ್ಜೆ ಬಂದಿಸಿ ವೈಯಾರದಿಂದ ನಡೆದು ಬರುತ್ತಿದ್ದರೆ ಆ ಕೈ ಬಳೆಯ ಸದ್ದಿಗೆ, ಕಾಲ್ಗೆಜ್ಜೆಯ ನಾದಕ್ಕೆ ಮನ ಸೋಲದವರಿಲ್ಲ. ಆ ಕಾಲದಲ್ಲಿ ಒಂದು ಮಾತಿತ್ತು. ಕೊರಳಲ್ಲಿ ಕರಿಮಣಿ, ಕಾಲಲ್ಲಿ ಕಾಲುಂಗುರ ಕಂಡರೆ ಕೈಮುಗಿ ಎಂದು. ವಿವಾಹಿತೆಯಾದ ಹೆಣ್ಣು ಮಾತೃ ಸ್ವರೂಪಿಯೂ ಹೌದು, ಶಕ್ತಿ ಸ್ವರೂಪಿಯೂ ಹೌದು. ಅಂತಹ ಶಕ್ತಿ ಸ್ವರೂಪಿಯನ್ನು ಕಂಡವರ ಮನದಲ್ಲಿ ಭಯ ಮಿಶ್ರಿತ ಗೌರವ ಭಾವ ಮೂಡಿ ಬರುತ್ತಿತ್ತು.

ಫೋಟೋ ಕೃಪೆ : google
ತ್ಯಾಗಮಯಿಯಾದ ಹೆಣ್ಣು ಹುಟ್ಟುವಾಗಲೇ ಹಲವಾರು ಜವಾಬ್ದಾರಿಗಳನ್ನು ಹೊತ್ತು ಬಂದಿರುತ್ತಾಳೆ. ಮಗಳಾಗಿ, ಹೆಂಡತಿಯಾಗಿ, ಅಕ್ಕನಾಗಿ, ತಂಗಿಯಾಗಿ, ತಾಯಿಯಾಗಿ ವಿವಿಧ ಸಂದರ್ಭಗಳಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾಳೆ. ವಿವಾಹಿತ ಸ್ತ್ರೀಯರನ್ನು ಮುತ್ತೈದೆಯರು ಎಂದು ಕರೆಯುತ್ತಾರೆ. ಕೊರಳಲ್ಲಿ ತಾಳಿ, ಮುಡಿಯಲ್ಲಿ ಹೂ, ಹಣೆಯಲ್ಲಿ ಸಿಂಧೂರ, ಕೈಗಳಲ್ಲಿ ಬಳೆ, ಕಾಲ್ಗಳಲ್ಲಿ ಕಾಲುಂಗುರ ಇಟ್ಟ ಹೆಣ್ಣನ್ನು ಮುತ್ತೈದೆ ಎನ್ನುವರು.ಇವಿಷ್ಟೇ ಅಲ್ಲದೆ ಹೆಣ್ಣಾದವಳಿಗೆ ನಯ, ವಿನಯ,ಅನುಕಂಪ, ತಾಳ್ಮೆ, ತ್ಯಾಗ ಮುಂತಾದ ಮುತ್ತಿನಂತಹ ಗುಣಗಳು ಭೂಷಣ.
ಸಹನಶೀಲೆಯಾದ ಹೆಣ್ಣು ಹೆಣ್ತನದ ಪ್ರತೀಕವಾಗಿ, ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾಗಿ, ಸರ್ವಾಲಂಕಾರ ಭೂಷಿತೆಯಾದಾಗ ನೋಡಲು ಅದೆಷ್ಟು ನಯನ ಮನೋಹರ. ಕಣ್ಣಿಗೆ ಹಬ್ಬವನ್ನುಂಟು ಮಾಡುವ ಬೆಳದಿಂಗಳ ಚೆಲುವು ಆಕೆಯಲ್ಲಿ ಮೇಳೈಸಿರುತ್ತದೆ. ಸೀರೆಯಿಂದ ಆಕೆಗೆ ಅಂದವೋ ಆಕೆಯಿಂದ ಸೀರೆಗೆ ಚಂದವೋ ಎಂಬಂತಾಗುತ್ತದೆ. ಅಂತಹ ಚೆಲುವಿನ ಖನಿಯಾದ ಭಾರತೀಯ ಹೆಣ್ಣು ಮಕ್ಕಳ ಉಡುಗೆ-ತೊಡುಗೆಗಳು, ಆಚಾರ ವಿಚಾರಗಳು ಇಂದು ಬದಲಾವಣೆಯ ಹಾದಿ ಹಿಡಿದು ಆಧುನೀಕರಣಗೊಂಡಿವೆ.
ಇಂದು ಸಾಮಾನ್ಯವಾಗಿ ಹಳ್ಳಿಯಿಂದ ದಿಲ್ಲಿಯವರೆಗೂ ಯಾವ ಹೆಣ್ಣು ಮಗಳನ್ನೇ ನೋಡಿ ಹಣೆಯಲ್ಲಿ ಕುಂಕುಮದ ಸುಳಿವೇ ಇರುವುದಿಲ್ಲ. ಕೈಗಳಲ್ಲಿ ಗಾಜಿನ ಬಳೆಗಳ ಸದ್ದೇ ಇರುವುದಿಲ್ಲ.ಯಾರೋ ನೂರಕ್ಕೆ ಒಬ್ಬಿಬ್ಬರು ಮಾತ್ರ ಪ್ಲಾಸ್ಟಿಕ್ ನದ್ದೋ ತಗಡಿನದ್ದೋ ಒಂಟಿ ಬಳೆಯನ್ನು ಹಾಕಿಕೊಂಡಿರುತ್ತಾರೆ. ಅವು ಘಲ್ ಘಲ್ ಶಬ್ದವಿರಲಿ ಬಳೆ ಹಾಕಿಕೊಂಡಿದ್ದಾರೆ ಎಂಬ ಅನುಭವವೂ ಬರುವುದಿಲ್ಲ. ಕೈಗಳಿಗೆ ಪಟ್ಟಿಗಳಂತೆ ಕಾಣಿಸುತ್ತವೆ. ಒಂದು ಕೈಗೆ ವಾಚ್ ಕಟ್ಟುತ್ತಾರೆ, ಇನ್ನೊಂದು ಕೈ ಖಾಲಿ ಖಾಲಿ.ಹೆಣ್ಣಿಗೆ ಗಾಜಿನ ಬಳೆಗಳು ಅಂದ. ಅದರಲ್ಲೂ ಹಸಿರು ಗಾಜಿನ ಬಳೆಗಳು ಶುಭದಾಯಕ. ಯಾವುದೇ ಶುಭ ಕಾರ್ಯಗಳಲ್ಲಿ ಹೆಣ್ಣಿಗೆ ಪ್ರಧಾನವಾಗಿ ಅರ್ಪಿತವಾಗುವುದು ಇವೇ ಹಸಿರು ಗಾಜಿನ ಬಳೆಗಳು.ಹೆಣ್ಣು ಮೈನೆರೆದಾಗ, ಮದುವೆಯ ಸಂದರ್ಭದಲ್ಲಿ, ಸೀಮಂತದ ಶಾಸ್ತ್ರದಲ್ಲಿ, ಗಾಜಿನ ಬಳೆಗಳೆ ಭೂಷಣ.ಆದರೆ ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಗಾಜಿನ ಬಳೆಗಳು ಇಂದು ಮೂಲಗುಂಪಾಗಿವೆ. ಗಾಜಿನ ಬಳೆ ಮಾರಾಟಗಾರರು ಕೇಳುವವರಿಲ್ಲದೆ ದಿಕ್ಕು ತಪ್ಪಿ ಅಲೆಯುತ್ತಿದ್ದಾರೆ. ಹಳ್ಳಿಗಳಲ್ಲಿರುವ ಹಳೆಯ ಕಾಲದ ಹಿರಿಯ ಮಹಿಳೆಯರು ಮಾತ್ರ ಗಾಜಿನ ಬಳೆಯನ್ನು ತೊಟ್ಟು ಅವನ್ನು ಇನ್ನೂ ಜೀವಂತವಾಗಿರಿಸಿದ್ದಾರೆ.

ಈಗ ಮಹಿಳೆಯರ ಉಡುಗೆ ತೊಡುಗೆಗಳ ವಿಚಾರದಲ್ಲೂ ಸಾಕಷ್ಟು ಬದಲಾವಣೆ ಕಂಡಿದೆ.ಹಳ್ಳಿಗಳಲ್ಲಿ ಕೂಡ ಹೊಲಗಳಲ್ಲಿ ದುಡಿಯುವವರು ನೈಟಿ, ಚೂಡಿದಾರ್ ಹಾಕಿಕೊಂಡಿರುತ್ತಾರೆ.ಹಗಲೂ ನೈಟಿಯೇ ರಾತ್ರಿಯೂ ನೈಟಿಯೇ . ನೈಟಿ ಪದವು ಅರ್ಥವನ್ನು ಕಳೆದುಕೊಂಡು ಡೈಟಿಯಾಗಿದೆ ಎಂದರೆ ತಪ್ಪಾಗಲಾರದು. ಇನ್ನು ತಲೆ ತುಂಬಾ ಹರಳೆಣ್ಣೆ ಇಟ್ಟುಕೊಂಡು, ಮಾರುದ್ದ ಜಡೆ ಹೆಣೆದುಕೊಂಡು, ಮುಡಿಯಲ್ಲಿ ಚೆಂಡು ಹೂ ಮುಡಿದುಕೊಳ್ಳುವವರನ್ನು ಬ್ಯಾಟರಿ ಹಾಕಿ ಹುಡುಕಬೇಕು. ಎಲ್ಲೋ ಹಳ್ಳಿಗಾಡಿನ ಗ್ರಾಮಗಳಲ್ಲಿ, ಆಧುನಿಕತೆಯ ಗಂಧ ಗಾಳಿಯ ಸೋಂಕಿಲ್ಲದ ಕಡೆ ಮಾತ್ರ ಇಂಥವರು ನೋಡಲು ಸಿಗುತ್ತಾರೆ. ಈಗೇನಿದ್ದರೂ ಫ್ರೀ ಹೇರ್ ಬಿಟ್ಟುಕೊಂಡು ಕಣ್ಣಿಗೊಂದು ತಂಪು ಕನ್ನಡಕ ಹಾಕಿಕೊಂಡು ಜೀನ್ಸ್ ಪ್ಯಾಂಟ್ ಮೇಲೊಂದು ತೋಳಿಲ್ಲದ ಟಾಪ್ ಧರಿಸಿ ಪೋಸ್ ಕೊಡುವ ಕಾಲ. ಜೀನ್ಸ್ ಪ್ಯಾಂಟ್ ಧರಿಸಿ ಕಾಲ್ಬೆರಳಿಗೆ ಕಾಲುಂಗುರ ಧರಿಸುವುದು ತರವೇ? ಅದಕ್ಕೂ ಈಗ ಕೊಕ್.
ಐದೈದು ನಿಮಿಷಕ್ಕೊಮ್ಮೆ ಚಿಕ್ಕ ಮಿರರ್ ನಲ್ಲಿ ಮುಖ ನೋಡಿಕೊಂಡು, ತುಟಿಗೆ ಬಣ್ಣ ಬಳಿದುಕೊಂಡು ಕೃತಕ ನಗೆ ಬೀರುವ ಮಾನಿನಿಯರಿಗೆ ತಾಳಿಯ ಹಂಗು ಬೇಕಾಗಿಲ್ಲ. ಜೊತೆಗೆ ಅವರು ಧರಿಸುವ ಮಾಡ್ ಡ್ರೆಸ್ ಗಳಿಗೆ ಇದು ಸೂಟ್ ಆಗುವುದಿಲ್ಲ ಎಂಬುದು ಅವರ ಅಂಬೋಣ.ಕಾಲ್ಬೆರಳಿಗೆ ಶೋಭೆ ತರುವ ಬೆಳ್ಳಿ ಕಾಲುಂಗುರವನ್ನೇ ನಿರಾಕರಿಸಿದವರು ಬೆಳ್ಳಿ ಕಾಲ್ಗೆಜ್ಜೆ ಯನ್ನು ಧರಿಸುತ್ತಾರೆಯೇ ? ಅವುಗಳ ಘಲ್ ಘಲ್ ನಾದವು ಸಹೃದಯಿ ಕೇಳುವರ ಕಿವಿಗಳಿಗೆ ಅದೆಷ್ಟು ಇಂಪು. ಆದರೆ ನಮ್ಮ ಆಧುನಿಕ ಮಹಿಳೆಯರಿಗೆ ಕಾಲ್ಗೆಜ್ಜೆ ನಾದ ಒಂದು ರೀತಿಯ ಕರ್ಕಶ ದ್ವನಿ,ಕಿರಿಕಿರಿ ಅವರಿಗೆ. ಎಂತಹ ವಿಪರ್ಯಾಸ ನೋಡಿ ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆ ಎಂದರೆ ಪಂಚಪ್ರಾಣ. ನೃತ್ಯ ಗಾರ್ತಿಯರಿಗಂತು ಅದುವೇ ಉಸಿರು. ಕಾಲ್ಗೆಜ್ಜೆ ಇದ್ದರೆ ಮಾತ್ರ ನಾದ ಹೊಮ್ಮುತ್ತಿತ್ತು. ರಾಗ ಭಾವ ಸಮನ್ವಯದಿ ಕಾಲುಗಳು ನರ್ತಿಸುತ್ತಿದ್ದವು. ಆದರೆ ಈಗಿನ ಕಾಲದ ಹೆಣ್ಣು ಮಕ್ಕಳಿಗೆ ಕಾಲ್ಗೆಜ್ಜೆ ಎಂದರೆ ಅಲರ್ಜಿ.
ಹಿಂದಿನ ಕಾಲದಲ್ಲಿ ಕೇವಲ ಕೈ ಬಳೆಯ ಸದ್ದಿನಿಂದ ಹಾಗೂ ಕಾಲ್ಗೆಜ್ಜೆಯ ನಾದದಿಂದಲೇ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿಯುತ್ತಿತ್ತು. ಆದರೆ ಈಗ ಕೈ ಬಳೆಯ ಸದ್ದಿಲ್ಲ, ಕಾಲ್ಗೆಜ್ಜೆಯ ನಾದವಿಲ್ಲ. ಮುಡಿಯಲ್ಲಿ ಮಲ್ಲಿಗೆಯ ಕಂಪು ಮೊದಲೇ ಇಲ್ಲ.ಇದು ಇಂದಿನ ಸ್ತ್ರೀಯರ ಚಿತ್ರಣ. ಶ್ರೀಮಂತ ಕುಟುಂಬದ ಹೆಣ್ಣು ಮಕ್ಕಳು ಅಪರೂಪಕ್ಕೊಮ್ಮೆ ಮದುವೆ ಸಮಾರಂಭಗಳಲ್ಲಿ ಆಡಂಬರ ಪ್ರದರ್ಶನಕ್ಕಾಗಿ ಭಾರಿ ಮೊತ್ತದ ದೊಡ್ಡ ಅಂಚಿನ ರೇಷ್ಮೆ ಸೀರೆ ಉಡುವುದುಂಟು. ಅದು ಕೇವಲ ತೋರ್ಪಡಿಕೆಗಷ್ಟೇ ಹೊರತು ಸೀರೆಯ ಮೇಲಿನ ಅಭಿಮಾನದಿಂದ ಅಲ್ಲ. ಎಲ್ಲವೂ ಕ್ಷಣಮಾತ್ರದ ತೋರಿಕೆಗೆ ,ಆಕರ್ಷಣೆಗೆ ಅಷ್ಟೇ ಮೀಸಲು. ಇಂದಿನ ಆಧುನಿಕ ಯುಗದಲ್ಲಿ ಎಲ್ಲವೂ ಕೃತಕವೇ. ಕೃತಕ ನಗೆಯ ಮುಖವಾಡ ಧರಿಸಿ ಮಾನವ ಇಂದು ಕೃತಕ ಜೀವಿಯಾಗಿದ್ದಾನೆ. ಭಾಂದವ್ಯಗಳಿಗೆ ಅಸಲೇ ಬೆಲೆ ಇಲ್ಲ. ಇಂದು ಎಲ್ಲಾ ಸಂಬಂಧಗಳು ವ್ಯವಹಾರಿಕವಾಗಿವೆ.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ‘ಚೌಚೌ ಬಾತ್’ ಅಂಕಣ (ಭಾಗ –೧೯)- ‘ಬೀಡಿ ಲಿಂಗಮ್ಮಜ್ಜಿ’
- ‘ಚೌಚೌ ಬಾತ್’ ಅಂಕಣ (ಭಾಗ –೨೦) -ಕುರಿ ಕಳ್ಳರು
- ‘ಚೌಚೌ ಬಾತ್’ ಅಂಕಣ (ಭಾಗ –೨೧) – ನಚ್ಚಗಾಗುವುದೆಂದರೆ
- ‘ಚೌಚೌ ಬಾತ್’ ಅಂಕಣ (ಭಾಗ –೨೨) -ರಾಗಿ ಮುದ್ದೆಗೂ ಒಂದು ಕಾಲ
- ‘ಚೌಚೌ ಬಾತ್’ ಅಂಕಣ (ಭಾಗ – ೨೩)- ಸೋಲೇ ಗೆಲುವಿನ ಸೋಪಾನ
- ‘ಚೌಚೌ ಬಾತ್’ ಅಂಕಣ (ಭಾಗ – ೨೪) – ದೇವರ ಪ್ರತಿರೂಪ
- ‘ಚೌಚೌ ಬಾತ್’ ಅಂಕಣ (ಭಾಗ – ೨೫)- ‘ವಿಚಿತ್ರ ಬಾಲಕ’
- ‘ಚೌಚೌ ಬಾತ್’ ಅಂಕಣ (ಭಾಗ – ೨೬)- ದೆಹಲಿಯ ಸುತ್ತಮುತ್ತ
- ‘ಚೌಚೌ ಬಾತ್’ ಅಂಕಣ (ಭಾಗ – ೨೭) – ಅತಿಮಾನುಷ ಶಕ್ತಿಯ ಅನುಭವ
- ‘ಚೌಚೌ ಬಾತ್’ ಅಂಕಣ (ಭಾಗ – ೨೮) – ಸಬ್ಬಸಿಗೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ – ೨೯) – ಊರ್ ಉಸಾಬರಿ ನಮಗ್ಯಾಕೆ
- ‘ಚೌಚೌ ಬಾತ್’ ಅಂಕಣ (ಭಾಗ – ೩೦) – ಮದುವೆ ಊಟದ ಕಿರಿಕಿರಿ
- ‘ಚೌಚೌ ಬಾತ್’ ಅಂಕಣ (ಭಾಗ – ೩೧) – ‘ಸಂಸ್ಕಾರ ಕಲಿಸಿದ ಪುಸ್ತಕ’
- ‘ಚೌಚೌ ಬಾತ್’ ಅಂಕಣ (ಭಾಗ – ೩೨) – ‘ಭೂತಣ್ಣನ ಹಲಸಿನ ಹಣ್ಣು’
- ಸರ್ವಮಂಗಳ ಜಯರಾಮ್ – ಗೌರಿಬಿದನೂರು
