‘ಚೌಚೌ ಬಾತ್’ ಅಂಕಣ (ಭಾಗ –೧೬)

ನಾನು ನಂದಾ.. ನಂದಾ… ಸೈಕಲ್ ನಿಲ್ಲಿಸೇ… ಸೈಕಲ್ ನಿಲ್ಲಿಸೇ ಎಂದು ಕೂಗಿ ಕೊಳ್ಳುತ್ತಿದ್ದೆ. ಇಳಿಜಾರಿನಲ್ಲಿ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಲು ಅವಳಿಗೆ ಸಾಧ್ಯವಾಗಲಿಲ್ಲ. ನಾವಂತೂ ಶಿವನಪಾದ ಸೇರುತ್ತೇವೆ ಎಂಬುದು ಖಾತ್ರಿಯಾಗಿತ್ತು. ಏಕೆಂದರೆ ಅಲ್ಲಿ ಕಡಿದಾದ ರಸ್ತೆಯ ಪಕ್ಕ ಆಳವಾದ ಕಂದಕ ಇತ್ತು. ಇನ್ನೇನು ನಮ್ಮ ಸೈಕಲ್ ರಸ್ತೆ ಪಕ್ಕದ ಆಳವಾದ ಕಂದಕಕ್ಕೆ ಉರುಳುವುದರಲ್ಲಿತ್ತು. ಮುಂದೇನಾಯಿತು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಸೈಕಲ್ ಸವಾರಿಯ ರೋಮಾಂಚನ’ ತಪ್ಪದೆ ಮುಂದೆ ಓದಿ …

ಆಗ ನಾನಿನ್ನು ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದೆ. ನಮ್ಮ ಹೊಸಕೆರೆ ಗ್ರಾಮದಲ್ಲಿ ಕಾಲೇಜು ಇಲ್ಲವಾದ್ದರಿಂದ ಸಮೀಪದ ಮಿಡಿಗೇಶಿಗೆ ಇಲ್ಲವೇ ಮಧುಗಿರಿಗೆ ಕಾಲೇಜಿಗಾಗಿ ಹೋಗಬೇಕಿತ್ತು. ಮನೆ ಪಕ್ಕದ ಅಂಗಡಿಗೂ ಒಬ್ಬಳೇ ಹೋಗದ ನಾನು ಇನ್ನು ಕಾಲೇಜಿಗೆಂದು ದಿನನಿತ್ಯ ಬಸ್ಸಿನಲ್ಲಿ ಪ್ರಯಾಣಿಸುವುದೆಂದರೆ ಕನಸಿನ ಮಾತೇ ಆಗಿತ್ತು. ಆದ್ದರಿಂದ ಅಪ್ಪ ತುಮಕೂರಿನ ಸಿದ್ಧಗಂಗಾ ಮಹಿಳಾ ಕಾಲೇಜಿಗೆ ನನ್ನನ್ನು ದಾಖಲು ಮಾಡಿದ್ದರು.ಅಲ್ಲಿ ಇರಲು ವಾಸ್ತವ್ಯಕ್ಕೆ ತುಮಕೂರಿನ ರೈಲ್ವೆ ಸ್ಟೇಷನ್ ರೋಡ್ ನಲ್ಲಿರುವ ಬಿಸಿಎಂ ಹಾಸ್ಟೆಲ್ ನಲ್ಲಿ ವ್ಯವಸ್ಥೆ ಮಾಡಿದ್ದರು. ನಮ್ಮ ಹೈಸ್ಕೂಲ್ ಹೆಡ್ ಮಾಸ್ಟರ್ ಚಂದ್ರಪ್ಪನ ಮಗಳು ಕೂಡ ಅದೇ ಕಾಲೇಜ್ ಹಾಗೂ ಅದೇ ಗರ್ಲ್ಸ್ ಹಾಸ್ಟೆಲ್ ನಲ್ಲಿ ಓದುತ್ತಿದ್ದಳು. ಅವಳು ನನಗಿಂತ ಒಂದು ವರ್ಷ ಸೀನಿಯರ್. ನಮ್ಮ ಬಿಸಿಎಂ ಹಾಸ್ಟೆಲ್ ನಲ್ಲಿ ಸುಮಾರು 10-12 ರೂಮುಗಳಿದ್ದವು. ಒಂದೊಂದು ರೂಮಿನಲ್ಲಿ ಐದೈದು ಜನ ವಿದ್ಯಾರ್ಥಿನಿಯರು. ನಾವು ರೂಮ್ ನಂಬರ್ ಎರಡರಲ್ಲಿ ಇದ್ದೆವು. ನಾನು ನಮ್ಮ ಹೆಡ್ ಮಾಸ್ಟರ್ ಮಗಳು ಸವಿತಾ, ನಾಗು ಮತ್ತು ನಂದಾ. ಇವರಲ್ಲಿ ನಾನೊಬ್ಬಳೇ ಫಸ್ಟ್ ಪಿಯುಸಿ. ಉಳಿದವರೆಲ್ಲ ಸೆಕೆಂಡ್ ಪಿಯುಸಿ ವಿದ್ಯಾರ್ಥಿನಿಯರು. ನಮ್ಮೂರಿನ ಸವಿತಾ ಆ ರೂಮಿನಲ್ಲಿ ಇದ್ದುದರಿಂದ ನಾನು ಅಲ್ಲಿಯೆ ಉಳಿದುಕೊಂಡಿದೆ.

15 ದಿನಕ್ಕೆ 20 ದಿನಕ್ಕೆ ಒಮ್ಮೆ ನಮ್ಮ ಊರಿಗೆ ಹೋಗಿ ಬರುತ್ತಿದ್ದೆವು. ಆಗಾಗ ಅಪ್ಪ ಅಮ್ಮ ಕೂಡ ಬಂದು ನಮ್ಮನ್ನು ನೋಡಿಕೊಂಡು ಹೋಗುತ್ತಿದ್ದರು. ಅಲ್ಲಿ ನಾವೆಲ್ಲ ಬರೀ ಹೆಣ್ಣು ಮಕ್ಕಳೇ ಇದ್ದಿದ್ದರಿಂದ ಓದಿನಲ್ಲಿ ಪೈಪೋಟಿ ತೀವ್ರವಾಗಿತ್ತು. ರಾತ್ರಿ 11- 12 ಗಂಟೆಯವರೆಗೂ ಆರಾಮವಾಗಿ ಓದಿಕೊಳ್ಳುತ್ತಿದ್ದೆ. ಒಬ್ಬರನ್ನು ನೋಡಿ ಇನ್ನೊಬ್ಬರು ಜಿದ್ದಿಗೆ ಬಿದ್ದವರಂತೆ ಓದಿಕೊಳ್ಳುತ್ತಿದ್ದೆವು. ಮನೆಯಲ್ಲಾದರೆ ಅಣ್ಣ ಅಣ್ಣಂದಿರ ತರ್ಲೆ ತಾಪತ್ರಯ. ಅಲ್ಲಿ ಯಾರೂ ಗೋಳು ಹೊಯ್ದುಕೊಳ್ಳುವವರು ಇರಲಿಲ್ಲ . ಹಾಗಾಗಿ ಅಲ್ಲಿ ನಮಗೆ ಓದಲು ಪ್ರಶಸ್ತವಾದ ವಾತಾವರಣ ಕೂಡ ಇತ್ತು. ಹಗಲು ರಾತ್ರಿ ಕಷ್ಟಪಟ್ಟು ಓದಿದರ ಫಲವಾಗಿ ಆಗ ನಾನು ನಮ್ಮ ಸೆಕ್ಷನ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದೆ. ಕಲಾವಿಭಾಗದಲ್ಲಿ ನಾನೇ ಪ್ರಥಮ.

ಶನಿವಾರ ಭಾನುವಾರ ಬಂತೆಂದರೆ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದರು. ನಾವು ನಮ್ಮ ಊರು ತುಂಬಾ ದೂರ ಇದ್ದಿದ್ದರಿಂದ 15 – 20 ದಿನಗಳಿಗೊಮ್ಮೆ ಊರಿಗೆ ಹೋಗುತ್ತಿದ್ದೆವು. ಒಮ್ಮೊಮ್ಮೆ ಒಂದು ತಿಂಗಳು ಆಗುತ್ತಿತ್ತು. ನಮ್ಮ ರೂಮಿನಲ್ಲಿದ್ದ ನಂದಾ,ಸವಿತಾ ಕೂಡ ನನ್ನಂತೆ ತಿಂಗಳಿಗೊಮ್ಮೆ ಊರಿಗೆ ಹೋಗುತ್ತಿದ್ದರು. ನಂದಾ ಜಡೆ ಮಾಯಸಂದ್ರದ ಹತ್ತಿರ ಯಾವುದೋ ಹಳ್ಳಿಯವಳು. ಈಗ ಅಮೆರಿಕದಲ್ಲಿ ದಂತ ವೈದ್ಯಳಾಗಿದ್ದಾಳಂತೆ, ಅವಳ ಅಪ್ಪ ಕೂಡ ಮಿಲ್ಟ್ರಿಯಲ್ಲಿ ಡಾಕ್ಟರ್ ಆಗಿದ್ದರು.

ಫೋಟೋ ಕೃಪೆ :google

ಹೀಗೇ ಒಂದು ಶನಿವಾರ ಕಾಲೇಜು ಮುಗಿದ ಮೇಲೆ ತುಮಕೂರಿಗೆ ಸಮೀಪವಿದ್ದ ದೇವರಾಯನ ದುರ್ಗಕ್ಕೆ ಹೋಗುವುದೆಂದು ಪ್ಲಾನ್ ಮಾಡಿದೆವು. ಹೇಗೆ ಹೋಗುವುದು……ಯಾವಾಗ …..ಯಾರ್ಯಾರು…. ಹೋಗುವುದೆಂದು ಹಿಂದಿನ ದಿನ ರಾತ್ರಿ ಯೋಜನೆ ರೂಪಿಸಿದೆವು ನಮಗೆಲ್ಲ ಹೆಡ್ ನಂದಾ. ನಮ್ಮ ರೂಮಿನಿಂದ ನಾನು, ನಾಗು, ನಂದಾ ಹೊರಟೆವು. ಇನ್ನು ಸವಿತಾ ರೆಕಾರ್ಡ್ ಬರೆಯುವುದಿದೆ ಬರಲು ಆಗಲ್ಲ ಎಂದು ಹೇಳಿ ತಪ್ಪಿಸಿಕೊಂಡಳು. ಸರಿ ನಾವು ಮೂವರು ಸೈಕಲ್ನಲ್ಲಿ ಹೋಗುವುದೆಂದು ತೀರ್ಮಾನಿಸಿದೆವು. ನಂದಾಳ ಬಳಿ ಮಾತ್ರ ಸೈಕಲ್ಲಿತ್ತು. ನಂದಾ ಮತ್ತು ನಾನು ಒಂದು ಸೈಕಲ್ನಲ್ಲಿ ಇನ್ನು ನಾಗು ಗೆ ಸೈಕಲ್ ಇರಲಿಲ್ಲ . ಸೈಕಲ್ ಇರುವ ಸವಿತಾ ಬರಲು ತಯಾರಿರಲಿಲ್ಲ. ಏನು ಮಾಡುವುದೆಂದು ಯೋಚಿಸಿದೆವು.ಆಗ ನಂದಾ ತಕ್ಷಣ ಒಂದು ಉಪಾಯ ಹುಡುಕಿದಳು. ಅವಳ ಗೆಳತಿ ಶ್ರೀದೇವಿಯ ಮನೆ ಹಾಸ್ಟೆಲ್ ಸಮೀಪದಲ್ಲಿಯೇ ಇತ್ತು. ಅವಳನ್ನು ಭೇಟಿಯಾಗಿ ಹೊರಡಿಸಿದಳು. ಶ್ರೀದೇವಿ ಕೂಡ ಸೈನ್ಸ್ ಸ್ಟೂಡೆಂಟ್ ಆಗಿದ್ದರಿಂದ ಅವಳ ಬಳಿ ಸೈಕಲ್ ಇತ್ತು. ನಾನು ನಾಗು ಆರ್ಟ್ಸ್ ಸ್ಟೂಡೆಂಟ್ಸ್ . ನಮಗೆ ಸೈಕಲ್ ಅವಶ್ಯಕತೆ ಇರಲಿಲ್ಲ.ನಾವು ಕಾಲೇಜಿಗೆ ನಡೆದುಕೊಂಡು ಹೋಗಿ ಬರುತ್ತಿದ್ದೆವು. ಇನ್ನು ಸೈನ್ಸ್ ಸ್ಟೂಡೆಂಟ್ಸ್ ಫಿಸಿಕ್ಸ್ ಕೆಮಿಸ್ಟ್ರಿ ಮ್ಯಾಥ್ಸ್ ಬಯಾಲಜಿ ಎಲ್ಲ ನಾಲ್ಕು ಸಬ್ಜೆಕ್ಟ್ ಗಳಿಗೂ ನಾಲ್ಕೈದು ಕಿಲೋಮೀಟರ್ ದೂರ ಸೈಕಲ್ ತುಳಿದುಕೊಂಡು ಟ್ಯೂಷನ್ ಗೆ ಹೋಗಬೇಕಾಗಿತ್ತು. ನಾವು ಆರ್ಟ್ಸ್ ನವರು ಯಾವ ಟ್ಯೂಷನ್ ಗೂ ಹೋಗುತ್ತಿರಲಿಲ್ಲ.

ಫೋಟೋ ಕೃಪೆ :google

ಇನ್ನೊಂದು ಇಂಟರೆಸ್ಟಿಂಗ್ ಮ್ಯಾಟರ್ ಏನಪ್ಪ ಅಂದ್ರೆ 10ನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದರಿಂದ ನನ್ನನ್ನು ಅಪ್ಪ ಕಾಲೇಜಿನಲ್ಲಿ ಸೈನ್ಸ್ ಗೆ ಸೇರಿಸಿದ್ದರು. ಹಾಗೂ ಹೀಗೂ ಒಂದೆರಡು ವಾರ ಸೈನ್ಸ್ ಕ್ಲಾಸ್ ಗೆ ಹೋದೆ. ಒಂದರಿಂದ 10ನೇ ತರಗತಿಯವರೆಗೂ ಕನ್ನಡ ಮೀಡಿಯಂನಲ್ಲಿ ಓದಿದ್ದರಿಂದ ಫಿಸಿಕ್ಸ್ ಕೆಮಿಸ್ಟ್ರಿ ತಲೆ ಬುಡ ಅರ್ಥ ಆಗಲಿಲ್ಲ. ನೀಟಾಗಿ ಅರ್ಥ ಆಗಬೇಕೆಂದರೆ ಟ್ಯೂಷನ್ಗೆ ಹೋಗಬೇಕು ಎಂದು ನಂದಾ, ಸವಿತಾ ಹೇಳಿದರು. ಟ್ಯೂಷನ್ ಅಲ್ಲಿ ಹತ್ತಿರದಲ್ಲೆಲ್ಲೂ ಹೇಳಿಕೊಡುತ್ತಿರಲಿಲ್ಲ. ಸುಮಾರು ನಾಲ್ಕೈದು ಕಿಲೋಮೀಟರ್ ದೂರ ಹೋಗಬೇಕು. ಅದೂ ಬೆಳಗಿನ ಜಾವ ಐದಕ್ಕೆ ಎದ್ದು ಚಳಿಯಲ್ಲಿ ನಡುಗುತ್ತಾ ಸೈಕಲ್ ನಲ್ಲಿ ಹೋಗಬೇಕು. ಹೇಳಿ ಕೇಳಿ ನನಗೆ ಸೈಕಲ್ ಬರುತ್ತಿರಲಿಲ್ಲ. ಹೋಗದಿದ್ದರೆ ಅರ್ಥವಾಗುವುದಿಲ್ಲ ಎಂಬ ಭ್ರಮೆ ಬೇರೆ.ಥೋ ಇದರ ಸಹವಾಸವೇ ಬೇಡ ಅಂತಂದುಕೊಂಡು ಮರುದಿನ ಸೀದಾ ಕಾಲೇಜಿಗೆ ಹೋಗಿ ಸೈನ್ಸ್ ನಿಂದ ಆರ್ಟ್ಸ್ ಗೆ ಬದಲಾಯಿಸಿಕೊಂಡಿದ್ದೆ.ಆರ್ಟ್ಸ್ ನಲ್ಲಿ ನನಗೆ ಇಷ್ಟವಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಸಮಾಜಶಾಸ್ತ್ರ ಅಭ್ಯಾಸ ಮಾಡಿದೆ. ಅದರಲ್ಲೇ ಆಳವಾದ ಅಧ್ಯಯನಕ್ಕೆ ತೊಡಗಿ ಮುಂದುವರೆದೆ. ಹೀಗೆ ಸೈಕಲ್ ಕಲಿಯಬೇಕಾಗುತ್ತದೆ ಎಂದು ಸೈನ್ಸ್ ಅನ್ನು ಕೈಬಿಟ್ಟೆ. ಸೈನ್ಸ್ ಓದಬೇಕಾಗುತ್ತದೆ ಎಂದು ಸೈಕಲ್ ಕಲಿಯುವುದನ್ನು ಕೈಬಿಟ್ಟೆ. ಆದರೆ ಆರ್ಟ್ಸ್ ನನ್ನ ಕೈ ಬಿಡಲಿಲ್ಲ. ಅಂದಿನಿಂದ ಇಂದಿನವರೆಗೂ ಆರ್ಟ್ಸನ ವಿಭಾಗದ ವಿದ್ಯಾರ್ಥಿಯೇ ನಾನು. ಬಹುಶಃ ಸೈನ್ಸ್ ಗೆ ಹೋಗಿದ್ದಿದ್ದರೆ ಸಾಹಿತ್ಯದ ಬಗ್ಗೆ ಇಷ್ಟೊಂದು ಒಲವು ಇರುತ್ತಿರಲಿಲ್ಲವೇನೋ. ಆಗಿದ್ದೆಲ್ಲ ಒಳ್ಳೆಯದಕ್ಕೆ ಅಂದುಕೊಳ್ಳಬೇಕಷ್ಟೆ. ಮುಂದೆ ದ್ವಿತೀಯ ಪಿಯುಸಿಯಲ್ಲಿ ಕಾಲೇಜಿಗೆ ಟಾಪರ್ ಆಗಿದ್ದೆ.

ಈಗ ವಿಷಯಕ್ಕೆ ಬರೋಣ ನಂದಾಳ ಸೈಕಲ್ ನಲ್ಲಿ ನಾನು ಶ್ರೀದೇವಿಯ ಸೈಕಲ್ ನಲ್ಲಿ ನಾಗು ಹೊರಡುವುದೆಂದು ತೀರ್ಮಾನವಾಯಿತು. ದೇವರಾಯನ ದುರ್ಗ ತುಮಕೂರಿನಿಂದ ನಾಲ್ಕೈದು ಕಿಲೋಮೀಟರ್ ಇರಬಹುದೆಂದು ಅಂದಾಜಿಸಿದ್ದೆವು.ಯಾವ ಮಾರ್ಗದಲ್ಲಿ ಹೋಗುವುದೆಂದು ತಿಳಿದಿರಲಿಲ್ಲ.ಆಗ ಯಾರೋ ದಾರಿಹೋಕರನ್ನು ಕೇಳಿದಾಗ ಬೆಳಗುಂಬ ಮಾರ್ಗವಾಗಿ ಹೋಗಿ ಎಂದು ಹೇಳಿದರು. ನಂದಾಳಿಗೆ ಆ ಕಡೆ ದಾರಿ ಎಲ್ಲಾ ಚೆನ್ನಾಗಿ ಗೊತ್ತಿತ್ತು. ಕ್ಯಾತ್ಸಂದ್ರದ ವರೆಗೂ ಟ್ಯೂಷನ್ ಗೆ ಓಡಾಡುತ್ತಿದ್ದರಿಂದ ತುಮಕೂರಿನ ರಸ್ತೆಗಳೆಲ್ಲ ಅವಳಿಗೆ ಕರತಲಾಮಲಕವಾಗಿದ್ದವು. ಸೈಕಲ್ ಸವಾರಿ ಬೆಳಗುಂಬ ರಸ್ತೆ ಕಡೆ ಹೊರಟಿತು. ಮಧ್ಯಾಹ್ನದ ರಣ ಬಿಸಿಲು ನೆತ್ತಿ ಕಾದ ಹೆಂಚಾಗಿತ್ತು. ಬೆಳಗ್ಗೆ ಯಾವಾಗಲೋ ಹಾಸ್ಟೆಲ್ ನಲ್ಲಿ ಎರಡು ಇಡ್ಲಿ ತಿಂದ ನೆನಪು. ಏಕೆಂದರೆ ಪ್ರತಿ ಶನಿವಾರ ಹಾಸ್ಟೆಲ್ ನಲ್ಲಿ ಇಡ್ಲಿ ಚಟ್ನಿ ಮಾಡುತ್ತಿದ್ದರು. ಭಾನುವಾರ ಚಪಾತಿ, ಸೋಮವಾರ ಪಲಾವ್ , ಮಂಗಳವಾರ ಪುಳಿಯೋಗರೆ ಹೀಗೆ ದಿನವು ಒಂದೊಂದು ಬಗೆಯ ತಿಂಡಿಗಳು.

ಫೋಟೋ ಕೃಪೆ :google

ಇಲ್ಲೇ ಎಲ್ಲೋ ಸಮೀಪದಲ್ಲಿ ಇರಬೇಕೆಂದು ಅಂದುಕೊಂಡು ಬೆಳಗುಂಬ ತಲುಪಿದೆವು. ಅಲ್ಲಿ ರಸ್ತೆ ಪಕ್ಕದಲ್ಲಿ ನೆಟ್ಟಿದ್ದ ಮೈಲುಗಲ್ಲು ನೋಡಿದರೆ ಬರೋಬರಿ ಹದಿನಾಲ್ಕು ವರೆ ಕಿಲೋಮೀಟರ್ ಇದೆ ದೇವರಾಯನ ದುರ್ಗ. ತುಮಕೂರಿನಿಂದ ಈಗಾಗಲೇ ಬೆಳಗುಂಬಕ್ಕೆ 2 km ಬಂದಿದ್ದೆವು. ಇನ್ನು ವಾಪಸ್ ಹೋಗುವುದು ತರವಲ್ಲವೆಂದುಕೊಂಡು ಮುಂದೆ ಸಾಗಿದೆವು.ನಾನು ನಾಗು ಆರಾಮವಾಗಿ ಸೈಕಲ್ನ ಹಿಂಬದಿಯಲ್ಲಿ ಕುಳಿತಿದ್ದೆವು.ಪಾಪ ನಂದಾ ಮತ್ತು ಶ್ರೀದೇವಿ ನಮ್ಮನ್ನು ಡಬಲ್ ಹಾಕುತ್ತಿದ್ದರು. ಅಂದರೆ ನಮ್ಮನ್ನು ಹಿಂಬದಿಯಲ್ಲಿ ಕೂಡಿಸಿಕೊಂಡು ತುಳಿಯಲಾಗದೆ ತುಳಿಯುತ್ತಾ ಮುಂದೆ ಸಾಗುತ್ತಿದ್ದರು. ನಾವು ಏನು ಮಾಡಲಾಗದೆ ಅಸಹಾಯಕರಂತೆ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದೆವು. ರಸ್ತೆ ತುಂಬಾ ಅಪ್ ಇತ್ತು . ಏರು ರಸ್ತೆ ನಂದಾ ಮತ್ತು ಶ್ರೀದೇವಿ ಬಿಸಿಲಿನ ಝಳಕ್ಕೆ ಬೆವರಿ ತೊಪ್ಪೆ ಆದರು. ನಾನು ನಾಗು ಕೂಡ ಬಿಸಿಲಿಗೆ ಬಸವಳಿದು ಹೋಗಿದ್ದೆವು. ಒಂದು ವಾಟರ್ ಬಾಟಲ್ ಕೂಡ ತಗೊಂಡು ಹೋಗಿರಲಿಲ್ಲ. ಬೆಳಗುಂಬ ಬಿಟ್ಟ ನಂತರ ಒಂದು ಸಣ್ಣ ಹಳ್ಳಿ ಸಿಕ್ಕಿತು. ಅಲ್ಲಿ ರಸ್ತೆ ಪಕ್ಕದಲ್ಲಿ ಮರದ ನೆರಳಿನಲ್ಲಿ ಸೈಕಲ್ ನಿಲ್ಲಿಸಿದೆವು. ಸುತ್ತಮುತ್ತ ನೋಡಿದರೆ ಸಮೀಪದಲ್ಲಿ ಒಂದು ಮನೆ ಇತ್ತು.ಅಲ್ಲಿಗೆ ಹೋಗಿ ಕುಡಿಯಲು ನೀರು ಕೇಳಿದರೆ ಮಜ್ಜಿಗೆ ಕೂಡ ಕೊಟ್ಟರು. ಹಳ್ಳಿ ಮನೆಯ ವಾತಾವರಣ ತುಂಬಾ ಹಿತವಾಗಿತ್ತು. ಅಲ್ಲಿ ಐದಾರು ನಿಮಿಷ ತಂಗಿದ್ದು ಪ್ರಯಾಣ ಮುಂದುವರಿಸಿದೆವು.ಅವರ ಮನೆ ಮುಂದೆ ಆಟವಾಡುತ್ತಿದ್ದ ನಾಲ್ಕೈದು ಜನ ಹುಡುಗರು ಎಲ್ಲಿಗೆ ಅಕ್ಕ ಹೋಗುತ್ತಿರುವುದು ಎಂದು ಕೇಳಿದರು.ನಾವು ದೇವರಾಯನ ದುರ್ಗಕ್ಕೆ ಎಂದ ಕೂಡಲೇ ನಾವು ಬರುವೆವು ಎಂದು ಸೈಕಲ್ ನಲ್ಲಿ ಹೊರಟೆ ಬಿಟ್ಟರು. ಅಲ್ಲಿಯೇ ಇದ್ದ ಅವರ ಅಮ್ಮನನ್ನು ಪರ್ಮಿಷನ್ ಕೇಳಿ ಎರಡು ಸೈಕಲ್ನಲ್ಲಿ ನಾಲ್ಕು ಜನ ಹುಡುಗರು ನಮ್ಮ ಜೊತೆ ಸೇರಿಕೊಂಡರು.ನಮಗಂತೂ ಮತ್ತಷ್ಟು ಉತ್ಸಾಹ, ಖುಷಿ ಹೆಚ್ಚಾಗಿತ್ತು.ನಾವು ಮೊದಲೇ ಹೆಣ್ಣು ಮಕ್ಕಳು ನಾಲ್ಕು ಜನರು ಹೋಗುತ್ತಿರುವುದು ಜೊತೆಯಲ್ಲಿ ಈ ಹುಡುಗರು ಇದ್ದರೆ ನಮಗೆ ಸ್ವಲ್ಪ ರಕ್ಷಣೆ ಸಿಗುವುದು ಎಂದು ಯೋಚಿಸಿ ಅವರನ್ನು ನಮ್ಮ ಜೊತೆಗೆ ಸೇರಿಸಿಕೊಂಡೆವು. ಅವರೆಲ್ಲ ಹೈಸ್ಕೂಲ್ನಲ್ಲಿ ಓದುತ್ತಿದ್ದ ಬಾಲಕರು. ಅವರು ಸೇರಿ ನಮ್ಮ ಸೈಕಲ್ ಸವಾರಿಗೆ ಮತ್ತಷ್ಟು ಬಲ ಬಂತು.

ಮಜ್ಜಿಗೆ, ನೀರು, ಕುಡಿದು ದಣಿವಾರಿಸಿಕೊಂಡು ಹೊರಟಿದ್ದರಿಂದ ಕಾಲಿಗೆ ಬಲ ಬಂದಂತಾಗಿ ನಂದಾ ಶ್ರೀದೇವಿ ಬಿರುಸಾಗಿ ಸೈಕಲ್ ತುಳಿಯುತ್ತಿದ್ದರು. ಆಗೆಲ್ಲ ಈಗಿನಂತೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇರುತ್ತಿರಲಿಲ್ಲ. ಮಧ್ಯಾಹ್ನದ ಹೊತ್ತಿನಲ್ಲಿ ರಸ್ತೆಯಲ್ಲಿ ನೀನೆ ಎಂಬುವವರು ಯಾರು ಇರುತ್ತಿರಲಿಲ್ಲ.ಅಂದರೆ ಅಷ್ಟೊಂದು ನಿರ್ಜನ ಪ್ರದೇಶವಾಗಿರುತ್ತಿತ್ತು. ನಮ್ಮ ಸಮಕ್ಕು ಆ ಹುಡುಗರು ಸೈಕಲ್ ತುಳಿಯುತ್ತಿದ್ದರು. ದಾರಿಯುವುದಕ್ಕೂ ಆ ಹುಡುಗರ ತರಲೇ ತುಂಟಾಟ ಮಧ್ಯ ಮಧ್ಯೆ ಮರ ಗಿಡಗಳಲ್ಲಿ ಜೀಕಾಡುವ ಕೋತಿಗಳ ಮಂಗಾಟ, ಗಿಡ ಮರಗಳ ನಡುವೆ ಉಲಿಯುವ ಹಕ್ಕಿಗಳ ಕಲರವ, ದುಂಬಿಗಳ ಝೇಂಕಾರ. ಇವುಗಳೆಲ್ಲದರ ನಡುವೆ ಕಳೆದು ಹೋಗಿ ಹೊತ್ತು ಸರಿದದ್ದೇ ತಿಳಿಯಲಿಲ್ಲ. ಅಂತೂ ಇಂತೂ ದೇವರಾಯನ ದುರ್ಗ ತಲುಪಿದೆವು.

ತುಮಕೂರಿನಿಂದ 10 – 12 ಕಿಲೋಮೀಟರ್ ದೂರ ಕ್ರಮಿಸುತ್ತಿದ್ದಂತೆಯೇ ದೇವರಾಯನ ದುರ್ಗದ ಕಾಡು ಸಿಕ್ಕಿತು. ದಟ್ಟ ಕಾಡಿನಲ್ಲಿ ಹುಲಿ, ಸಿಂಹ, ಚಿರತೆ, ಜಿಂಕೆ ,ಕಾಡು ಹಂದಿಗಳು ಇರುತ್ತವೆ ಎಂದು ಆ ಪುಟ್ಟ ಬಾಲಕರು ಹೇಳುತ್ತಿದ್ದರು. ನಮಗಂತೂ ಒಂದು ಕಡೆ ಭಯ ಇನ್ನೊಂದು ಕಡೆ ಕಾಡಿನಲ್ಲಿ ಸಂಚರಿಸುತ್ತಿದ್ದೇವೆಂಬ ರೋಮಾಂಚನ .ಅಷ್ಟು ದಟ್ಟ ಅರಣ್ಯವನ್ನು ಬೆಟ್ಟ ಗುಡ್ಡಗಳನ್ನು ಯಾವತ್ತೂ ನೋಡಿರಲಿಲ್ಲ. ಕಾಡಿನೊಳಕ್ಕೆ ಪ್ರವೇಶಿ ಸುತ್ತಿದ್ದಂತೆಯೇ ಹಿತವಾದ ತಂಗಾಳಿ ನಮ್ಮನ್ನು ಸ್ವಾಗತಿಸಿತು.

ಫೋಟೋ ಕೃಪೆ :google

ಮೊದಲಿಗೆ ನಾವು ತಲುಪಿದ್ದು ನಾಮದ ಚಿಲುಮೆ. ನಾಮದ ಚಿಲುಮೆಯ ವೈಶಿಷ್ಟ್ಯವೆಂದರೆ ಸದಾ ಕಾಲ ಕಡು ಬೇಸಿಗೆಯಲ್ಲೂ ಸಹಿತ ಬಂಡೆಯ ಸಂದಿನಿಂದ ನೀರು ಚಿಮ್ಮುತ್ತಲೇ ಇರುತ್ತದೆ. ರಾಮಾಯಣದ ಕಾಲದಲ್ಲಿ ರಾಮ,ಲಕ್ಷ್ಮಣ,ಸೀತೆ ಅಲ್ಲಿ ಸ್ವಲ್ಪ ದಿನಗಳ ಕಾಲ ವಾಸವಾಗಿದ್ದರಂತೆ ಎಂಬ ಪ್ರತೀತಿ. ಆಗ ಒಂದು ದಿನ ರಾಮನಿಗೆ ಹಣೆಗೆ ತಿಲಕವಿಡಲು ನೀರಿನ ಅವಶ್ಯಕತೆ ಉಂಟಾಯಿತಂತೆ. ಸುತ್ತಲೂ ಎಲ್ಲೂ ನೀರಿನ ಸೆಲೆ ಕಾಣದಿದ್ದಾಗ ರಾಮ ಆ ಸ್ಥಳದಲ್ಲೇ ಬಾಣ ಹೂಡಿ ಬಂಡೆಯ ಮೇಲೆ ಬಿಟ್ಟಾಗ ಬಾಣ ಒಳಹೊಕ್ಕು ರಂದ್ರ ಕೊರೆದು ನೀರಿನ ಬಗ್ಗೆ ಚಿಮ್ಮಿತಂತೆ. ಆ ನೀರಿನಿಂದ ರಾಮ ಹಣೆಗೆ ತಿಲಕ ಅಥವಾ ನಾಮ ಧರಿಸಿದನಂತೆ. ಇದು ಯಾವಾಗಲೋ ಅಮ್ಮ ಹೇಳಿದ್ದ ಕಥೆ ನೆನಪಾಗಿ ಆ ಸ್ಥಳವನ್ನು ಪ್ರತ್ಯಕ್ಷವಾಗಿ ನೋಡಿದ್ದಕ್ಕೆ ಮನದಲ್ಲಿ ಧನ್ಯತಾಭಾವ ಮೂಡಿತು. ಮತ್ತೆ ಆ ಕಥೆಯನ್ನು ಅಲ್ಲಿದ್ದ ಎಲ್ಲರಿಗೂ ಹೇಳಿದೆ.ನಾಮದ ಚಿಲುಮೆಯ ನೀರನ್ನು ತಲೆ ಮೇಲೆ ಚಿಮುಕಿಸಿಕೊಂಡು ಮುಂದಿನ ಸ್ಥಳ ನೋಡಲು ಹೋದೆವು.

ಅಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವರ ಎರಡು ದೇವಾಲಯಗಳು ಇದ್ದವು. ಬೆಟ್ಟದ ಮೇಲಕ್ಕೆ ಸೈಕಲ್ ನಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಅಲ್ಲೇ ನಾಮದ ಚಿಲುಮೆಗಿಂತಲೂ ಸ್ವಲ್ಪ ಕೆಳಕ್ಕೆ ಸೈಕಲ್ ಗಳನ್ನು ಬಿಟ್ಟು ಬೆಟ್ಟ ಹತ್ತಿ ಮೇಲೆ ಹೋದೆವು.ಅಲ್ಲಿ ಯೋಗ ನರಸಿಂಹ ದೇವಾಲಯದ ಬಳಿ ಬ್ರಾಹ್ಮಣರ ಯಾವುದೋ ಕಾರ್ಯಕ್ರಮ ನಡೆಯುತ್ತಿತ್ತು. ನಾವು ದೇವಾಲಯದ ಒಳಗೆ ಹೋಗಿ ದೇವರ ದರ್ಶನ ಪಡೆದು ಹೊರ ಬರುತ್ತಿದ್ದಂತೆ ಅಲ್ಲಿನ ಅರ್ಚಕರು ನಮ್ಮನ್ನು ಊಟಕ್ಕೆ ಕರೆದರು. ಆ ವೇಳೆಗಾಗಲೇ ಅವರದ್ದೆಲ್ಲ ಊಟ ಆಗಿತ್ತು ಎಂದು ಕಾಣುತ್ತಿತ್ತು. ಆಗ ಊಟದ ಸಮಯವೂ ಮೀರಿತ್ತು. ಸುಮಾರು ಮಧ್ಯಾಹ್ನ 3:00 ಆಗಿದ್ದಿರಬಹುದು. ನಮ್ಮ ಬಳಿ ವಾಚ್ ಕೂಡ ಇರಲಿಲ್ಲಸಮಯ ತಿಳಿಯಲು. ಸೈಕಲ್ ಸವಾರಿ ಮಾಡಿ ಸುಸ್ತಾಗಿದ್ದ ನಮಗೆ ಹೊಟ್ಟೆ ಚುರ್ ಅನ್ನುತ್ತಿತ್ತು.

ಆ ಬ್ರಾಹ್ಮಣ ಪಂಡಿತರದ್ದೆಲ್ಲ ಊಟ ಆಗಿತ್ತು ಎಂದು ಅವರ ಹಾವ ಭಾವವೇ ಹೇಳುತ್ತಿತ್ತು. ಮೊದಲೇ ಬ್ರಾಹ್ಮಣರು ಭೋಜನ ಪ್ರಿಯರು. ಭೋಜನವೆಂದರೆ ಯೋಜನವಾದರೂ ಹೋಗುವೆವು ಎನ್ನುವವರು. ಯೋಜನವೆಂದರೆ 12 ಮೈಲಿ ದೂರ . ಭೋಜನಕ್ಕಾಗಿ 12 ಮೈಲಿ ದೂರವಾದರೂ ನಡೆದುಕೊಂಡು ಹೋಗುವೆವು ಎನ್ನುತ್ತಿದ್ದರಂತೆ ಆ ಕಾಲದ ಬ್ರಾಹ್ಮಣರು. ಅದಕ್ಕಾಗಿಯೇ ಇರಬಹುದು ಈ ಗಾದೆ. ಹರ್ಷ ಚಿತ್ತರಾಗಿ, ಪ್ರಸನ್ನ ವದನರಾಗಿ,ಜನಿವಾರ ನೀವಿ ಕೊಂಡು, ತಮ್ಮ ನುಣ್ಣನೆಯ ಹೊಟ್ಟೆ ಸವರಿಕೊಂಡು, ದೇವಾಲಯದ ಮುಂಭಾಗದ ಹಜಾರದಲ್ಲಿ ಮಾತುಕತೆಯಲ್ಲಿ ತಲ್ಲೀನರಾಗಿದ್ದರು. ದೇವಸ್ಥಾನಕ್ಕೆ ದರ್ಶನಕ್ಕೆ ಹೋಗಿದ್ದ ನಮ್ಮನ್ನು ಕಂಡ ಅಡುಗೆ ಭಟ್ಟರು ಊಟ ಬಡಿಸಲು ಕರೆದರು. ನಾವು ಮಕ್ಕಳು ಯಾವುದೇ ಬಿಂಕ ಬಿಗುಮಾನ ತೋರದೆ ಹೋಗಿ ಊಟ ಮಾಡಿದೆವು. ಹಸಿದವನಿಗೆ ಹಳಸಿದ ಅನ್ನವು ಅಮೃತ ಎಂಬಂತೆ ಆಗಿತ್ತು ನಮ್ಮ ಪಾಡು. ಸಮಯಕ್ಕೆ ಆ ಊಟವಾದರೂ ಸಿಕ್ಕಿತಲ್ಲ, ಅದೇ ನಮ್ಮ ಪುಣ್ಯ. ಊಟ ಮಾಡಿ ಬೆಟ್ಟದ ಮೇಲೆ ಅತ್ತಿಂದಿತ್ತ ಓಡಾಡುವಷ್ಟರಲ್ಲಿ ಸಮಯ ಸರಿದದ್ದೆ ಅರಿವಾಗಲಿಲ್ಲ. ಆಗ ಅಲ್ಲಿದ್ದವರನ್ನು ಕೇಳಿದರೆ ಸಂಜೆ ನಾಲ್ಕು ಗಂಟೆ ಆಗಿದೆ ಎಂದರು. ಸಂಜೆ ಆರು ಗಂಟೆಗೆ ನಮ್ಮ ಹಾಸ್ಟೆಲ್ ಗೇಟ್ ಕ್ಲೋಸ್ ಮಾಡುತ್ತಿದ್ದರು. ಅಷ್ಟರೊಳಗೆ ನಾವು ಹಾಸ್ಟೆಲ್ ತಲುಪಬೇಕಿತ್ತು, ಕೂಡಲೇ ನಾವು ತಡ ಮಾಡದೆ ಅಲ್ಲಿಂದ ಹೊರಟೆವು. ನಮ್ಮ ಜೊತೆ ಬಂದ ಹುಡುಗರು ಕೂಡ ಉತ್ಸಾಹದಿಂದ ಮುನ್ನಡೆದರು. ದೇವರಾಯನ ದುರ್ಗಕ್ಕೆ ಹೋಗುವಾಗ ಏರು ರಸ್ತೆ ತುಂಬಾ ಅಪ್ ಇತ್ತು. ಬರುವಾಗ ತುಂಬಾ ಇಳಿಜಾರು, ಭಯಂಕರ ತಗ್ಗು ,ಜೊತೆಗೆ ಅಲ್ಲಲ್ಲಿ ಇದ್ದಕ್ಕಿದ್ದಂತೆ ಎದುರಾಗುವ ತಿರುವುಗಳು ಬೇರೆ. ನಂದಾ ಹಾಸ್ಟೆಲ್ ಗೆ ಬೇಗನೇ ತಲುಪಬೇಕೆಂಬ ಬರದಲ್ಲಿ ರಭಸವಾಗಿ ಮುನ್ನುಗ್ಗುತ್ತಿದ್ದಳು. ಇಳಿಜಾರು ಇದ್ದಿದ್ದರಿಂದ ಸೈಕಲ್ ಕಂಟ್ರೋಲ್ ತಪ್ಪಿತು.ಬರೋ ….ಎಂದು ಸೈಕಲ್ ಒಂದೇ ಸಮನೆ ಮುಂದೆ ನುಗ್ಗುತ್ತಿದ್ದರೆ ಹಿಂದೆ ಇದ್ದ ನಾನು ನಂದಾ.. ನಂದಾ… ಸೈಕಲ್ ನಿಲ್ಲಿಸೇ….. ಸೈಕಲ್ ನಿಲ್ಲಿಸೇ ಎಂದು ಕೂಗಿ ಕೊಳ್ಳುತ್ತಿದ್ದೆ. ಇಳಿಜಾರಿನಲ್ಲಿ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಲು ಅವಳಿಗೆ ಸಾಧ್ಯವಾಗಲಿಲ್ಲ. ನಾವಂತೂ ಶಿವನಪಾದ ಸೇರುತ್ತೇವೆ ಎಂಬುದು ಖಾತ್ರಿಯಾಗಿತ್ತು. ಏಕೆಂದರೆ ಅಲ್ಲಿ ಕಡಿದಾದ ರಸ್ತೆಯ ಪಕ್ಕ ಆಳವಾದ ಕಂದಕ ಇತ್ತು. ಇನ್ನೇನು ನಮ್ಮ ಸೈಕಲ್ ರಸ್ತೆ ಪಕ್ಕದ ಆಳವಾದ ಕಂದಕಕ್ಕೆ ಉರುಳುವುದರಲ್ಲಿತ್ತು. ಆಗ ನಮ್ಮ ಸೈಕಲ್ಲನ್ನು ತಡೆದದ್ದು ಒಂದು ಸಣ್ಣ ಪೊದೆ. ಪೊದೆ ಸೈಕಲ್ಲಿಗೆ ಅಡ್ಡ ಬಂದಿದ್ದರಿಂದ ಅದು ಗಕ್ಕನೆ ನಿಂತಿತು. ಅಷ್ಟೊತ್ತಿಗಾಗಲೇ ನಮ್ಮ ಹೃದಯವೇ ಬಾಯಿಗೆ ಬಂದಂತೆ ಆಗಿತ್ತು. ತಕ್ಷಣ ಸೈಕಲ್ ನಿಂದ ನಿಧಾನವಾಗಿ ಇಳಿದು ಎರಡು ನಿಮಿಷ ಸಾವರಿಸಿಕೊಂಡೆವು. ರಸ್ತೆ ಪಕ್ಕದಲ್ಲಿ ಇದ್ದ ಆಳವನ್ನು ಬಗ್ಗಿ ನೋಡಿದರೆ ತಲೆ ಗಿರ್ ಎಂದಿತು. ಆ ಕಂದಕಕ್ಕೆ ಏನಾದರೂ ಉರುಳಿ ಬಿದ್ದಿದ್ದರೆ ನಮ್ಮ ಬಾಡಿ ಪೀಸ್ ಪೀಸ್ ಆಗಿ ಹೋಗುತ್ತಿತ್ತು. ದೇವರು ದೊಡ್ಡವನು ನಮ್ಮ ಪಾಲಿಗೆ ಅವನಿದ್ದ. ಚಿಕ್ಕ ಪೊದೆಯ ರೂಪದಲ್ಲಿ ಅವನು ಪ್ರತ್ಯಕ್ಷವಾಗಿ ನಮ್ಮನ್ನು ಬದುಕಿಸಿದ್ದ. ಹಾಗೂ ಹೀಗೂ ಬೆಟ್ಟ ಇಳಿದು ಮುಖ್ಯರಸ್ತೆಗೆ ನಮ್ಮ ಸೈಕಲ್ ಬಂದಿತ್ತು . ಸಂಜೆಯ ಇಳಿ ಬಿಸಿಲು ಮುಖದ ಮೇಲೆ ಬೀಳುತ್ತಿತ್ತು. ರಸ್ತೆಗೆ ಬಂದ ಮೇಲೆ ನಮ್ಮ ಸೈಕಲ್ ಸರಾಗವಾಗಿ ಮುನ್ನುಗ್ಗಿತು. ನಂದಾ ಮತ್ತು ಶ್ರೀದೇವಿ ಬಹಳ ಚಾಲಾಕಿತನದಿಂದ ಸೈಕಲ್ ತುಳಿದು ಇನ್ನೇನು ಆರು ಗಂಟೆಗೆ 10 ನಿಮಿಷ ಬಾಕಿ ಇದೆ ಎನ್ನುವಾಗಲೇ ಹಾಸ್ಟೆಲ್ ಮುಂದೆ ಸೈಕಲ್ ತಂದು ನಿಲ್ಲಿಸಿದರು. ನಾನು ಮತ್ತು ನಾಗು ಬದುಕಿದೆಯಾ ಬಡಜೀವವೇ ಎಂಬಂತೆ ಹಾಸ್ಟೆಲ್ ಒಳಗೆ ಹೊಕ್ಕು ನಮ್ಮ ರೂಮಿಗೆ ತಲುಪಿ ನಿಶ್ಚಿಂತೆಯಿಂದ ನಿಟ್ಟಿಸಿರು ಬಿಟ್ಟೆವು. ಹೀಗೆ ದೇವರಾಯನ ದುರ್ಗದ ಸೈಕಲ್ ಸವಾರಿ ರೋಮಾಂಚನಕಾರಿಯಾಗಿತ್ತು.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವ ಮಂಗಳ ಜಯರಾಮ್ – ಶಿಕ್ಷಕಿ, ಗೌರಿಬಿದನೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW