ಅಕ್ಕನ ಮಕ್ಕಳಿಬ್ಬರು ಮನೆಯೊಳಗೆ ಹೋಗಿ ಬಾಗಿಲಿಗೆ ಚಿಲ್ಕ್ ಜಡಿದು ಚನ್ನಾಗಿ ನಿದ್ದೆ ಮಾಡಿದ್ದರು…ನಾವೆಲ್ಲ ಮನೆಯ ಹೊರಗೆ ಇದ್ದೆವು…ಎಷ್ಟೇ ಬಾಗಿಲು ಬಡೆದುಕೊಂಡರು, ಮಲಗಿದ್ದ ಮಕ್ಕಳು ಏಳಲೇ ಇಲ್ಲ. ಮುಂದೇನಾಯಿತು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’ ತಪ್ಪದೆ ಮುಂದೆ ಓದಿ…
ನನಗಿನ್ನು ಮದುವೆಯಾಗಿ ಎರಡು ಮೂರು ತಿಂಗಳಾಗಿತ್ತು. ಮದುವೆಯಾದ ಹೊಸತರಲ್ಲಿ ನೆಂಟರೆಲ್ಲರೂ ನಮ್ಮ ಮನೆಗೆ ಬನ್ನಿ ಒಮ್ಮೆ …ಎಂದು ಊಟಕ್ಕೆ ಕರೆಯುತ್ತಿದ್ದರು. ಮದುವೆಯಾದ ಹೊಸ ಗಂಡು- ಹೆಣ್ಣು ನೆಂಟರ ಮನೆಗೆ ಔತಣಕೂಟಕ್ಕೆ ಹೋಗುವುದು ಆಗ ಒಂದು ರೀತಿಯ ಸಂಪ್ರದಾಯವಾಗಿತ್ತು. ಆದರೆ ಈಗ ಆ ಸಂಪ್ರದಾಯ ಕಾಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಯಾರೂ ಕರೆದು ಊಟ ಹಾಕುವವರು ಇಲ್ಲ ಕರೆದರೂ ಊಟಕ್ಕೆ ಹೋಗುವವರೂ ಇಲ್ಲ.
ಹೀಗೆ ಒಮ್ಮೆ ಹೊಸದಾಗಿ ಮದುವೆಯಾದ ನಮ್ಮನ್ನು ನಮ್ಮ ಅಕ್ಕ ಒಂದು ರಾತ್ರಿ ಊಟಕ್ಕೆ ಕರೆದರು. ಊಟಕ್ಕೆ ಒಬ್ಬಟ್ಟು, ಚಿತ್ರಾನ್ನ,ಬೋಂಡಾ ಹಪ್ಪಳದ ಭಾರಿ ಭೋಜನವನ್ನೇ ವ್ಯವಸ್ಥೆ ಮಾಡಿದ್ದರು. ನಾನು ನಮ್ಮವರೊಂದಿಗೆ ಸಂಜೆಯೆ ಹೋಗಿ ಅಕ್ಕನೊಂದಿಗೆ ಅಡುಗೆ ಕೆಲಸದಲ್ಲಿ ಕೈಜೋಡಿಸಿದೆ. ಆಗ ಇನ್ನು ನಾನು ಅಡಿಗೆ ಮಾಡುವುದರಲ್ಲಿ ಎಲ್ ಬೋರ್ಡ್. ಸರಿಯಾಗಿ ಕಾಫಿ ಮಾಡಲು ಕೂಡ ಬರುತ್ತಿರಲಿಲ್ಲ. ಓದುವ ಮಕ್ಕಳಿಗೆ ಅಡುಗೆ ಕೆಲಸ ಕಲಿಸಲು ಅಪ್ಪ ಬಿಡುತ್ತಿರಲಿಲ್ಲ. ಹೆಚ್ಚಾಗಿ ಒಲೆಯ ಮುಂದಕ್ಕೆ ಹೋದದ್ದೇ ನೆನಪಿಲ್ಲ. ಅಡುಗೆ ಮನೆಯ ಎಲ್ಲಾ ಕೆಲಸವನ್ನು ಅಮ್ಮನೇ ಮಾಡುತ್ತಿದ್ದರು. ಇನ್ನು ಮದುವೆ ಆದ ಮೇಲೆ ಮನೆಯಲ್ಲಿ ಅತ್ತೆ ಮಾವ ಯಾವ ಕೆಲಸವನ್ನು ಹೇಳುತ್ತಿರಲಿಲ್ಲ. ಓದಿಕೊಂಡಿದ್ದವಳು ಯಾವ ಕೆಲಸವನ್ನು ಕಲಿತಿಲ್ಲ, ನಿಧಾನಕ್ಕೆ ಕಲಿತುಕೊಳ್ಳುತ್ತಾಳೆ ಎಂದುಕೊಂಡು ಮನೆಯ ಅಷ್ಟು ಕೆಲಸಗಳನ್ನು ತಾವೇ ಮಾಡಿ ಮುಗಿಸುತ್ತಿದ್ದರು. ಹೀಗೆ ನಾನು ಸಾವಕಾಶವಾಗಿ ಅಡುಗೆ ಮಾಡುವುದನ್ನು ಕಲಿತೆ.

ಫೋಟೋ ಕೃಪೆ : google
ಸರಿ ಅಕ್ಕನ ಮನೆಯಲ್ಲಿ ಅಂದು ರಾತ್ರಿ ಭಾರಿ ಭೋಜನವಾಯಿತು. ಊಟದ ನಂತರ ಎಲೆ ಅಡಿಕೆ ಹಾಕಿಕೊಳ್ಳುವುದು ಅಂದು ಸಾಮಾನ್ಯವಾಗಿತ್ತು. ಅದರಲ್ಲೂ ವಿಶೇಷ ಊಟದ ನಂತರ ಎಲೆ ಅಡಿಕೆ ಹಾಕಿಕೊಳ್ಳುವುದು ಕಡ್ಡಾಯವಾಗಿತ್ತು. ಎಲೆ,ಅಡಿಕೆ,ಸುಣ್ಣ, ಕೊಬ್ಬರಿ,ಏಲಕ್ಕಿ ಎಲ್ಲವನ್ನು ಒಂದು ತಟ್ಟೆಯಲ್ಲಿ ಜೋಡಿಸಿಕೊಂಡು ಅಕ್ಕ ಬಂದರು. ಮನೆ ಮುಂದೆ ಇದ್ದ ಪ್ಯಾಸೇಜಿನಲ್ಲಿ ಎಲ್ಲರೂ ಕುಳಿತು ಎಲೆ ಅಡಿಕೆ ಹಾಕಿಕೊಳ್ಳುತ್ತಿದ್ದೆವು. ನಮ್ಮ ಅಕ್ಕನ ಮಕ್ಕಳಿಬ್ಬರು ತುಂಬಾ ತರ್ಲೆ ಮಾಡುತ್ತಾ ಕಾಟ ಕೊಡುತ್ತಿದ್ದರು. ನಾವು ಏನಾದರೂ ಮಾತನಾಡುತ್ತಿದ್ದರೆ ಮಧ್ಯ ಮಧ್ಯ ಬಾಯಿ ಹಾಕಿ ನಮ್ಮ ಗಮನವನ್ನು ಸೆಳೆಯುತ್ತಿದ್ದರು. ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಜಗಳ ಆಡುತ್ತಿದ್ದರು. ರಾತ್ರಿ ತಣ್ಣಗೆ ಬೀಸುತ್ತಿದ್ದ ಗಾಳಿಗೆ ಮೈಯೊಡ್ಡಿ ಕೆಲಕಾಲ ಮಾತನಾಡುತ್ತಾ ಕಳೆಯಲು ಅವರಿಬ್ಬರೂ ಅಡ್ಡಿ ಪಡಿಸುತ್ತಿದ್ದರು. ಆಗ ನಮ್ಮ ಅಕ್ಕ ” ಎದ್ದು ಹೋಗಿ ಒಳಗೆ ಮಲಗಿಕೊಳ್ಳಿ “ಎಂದು ಹೇಳಿದರು. ಸರಿ ಎಂದು ಅಕ್ಕನ ಮಕ್ಕಳಿಬ್ಬರು ಒಳಕ್ಕೆ ಹೋಗಿ ಬಾಗಿಲಿಗೆ ಚಿಲಕ ಹಾಕಿಕೊಂಡು ಒಳ ಕೋಣೆಗೆ ಹೋಗಿ ಮಲಗಿದ್ದಾರೆ. ನಾವು ನಾಲ್ಕು ಜನ ಮಾತಾಡುತ್ತಾ ಮಾತಾಡುತ್ತಾ, ಅವರ ಬಗ್ಗೆ ಗಮನ ಹರಿಸಲೇ ಇಲ್ಲ. ರಾತ್ರಿ ಸುಮಾರು ಹತ್ತು ವರೆ ಹನ್ನೊಂದು ಗಂಟೆ ಆಗಿರಬಹುದು. ಮಲಗೋಣ ಇನ್ನು ಎಂದುಕೊಂಡು ಒಳಗಡೆ ಹೋಗಲು ನೋಡಿದರೆ ಒಳಗಿನಿಂದ (ಬೋಲ್ಟ್) ಚಿಲಕ ಹಾಕಿದ್ದಾರೆ. ನಾನು ನಮ್ಮ ಅಕ್ಕ ಎಷ್ಟು ನೂಕಿದರೂ ಬಾಗಿಲು ತೆಗೆಯುತ್ತಿಲ್ಲ. ಬಾಗಿಲು ತೆಗೆಯಿರೇ ಎಂದು ಗಂಟಲು ಹರಿಯುವಂತೆ ಕಿರುಚಿದರೂ ಅವರಿಗೆ ಕೇಳಿಸುತ್ತಿಲ್ಲ. ಚೆನ್ನಾಗಿ ನಿದ್ರೆ ಮಾಡಿ ಬಿಟ್ಟಿದ್ದಾರೆ. ಪಾಪ ಎಂಟು ಒಂಬತ್ತು ವರ್ಷದ ಮಕ್ಕಳು ಬೆಳಗ್ಗೆಯಿಂದ ಚೆನ್ನಾಗಿ ಆಟ ಆಡಿ ದಣಿದಿರುತ್ತಾರೆ. ನಿದ್ರಾದೇವಿ ಅವರನ್ನು ಚೆನ್ನಾಗಿ ಆವರಿಸಿ ಬಿಟ್ಟಿರುತ್ತಾಳೆ. ಅವರು ನಡು ಮನೆಯಲ್ಲಿ ಮಲಗಿದ್ದರೆ ನಮ್ಮ ಕೂಗು ಕೇಳಿಸುತ್ತಿತ್ತು. ಆದರೆ ಅವರು ಒಳಗಿನ ಕೋಣೆಯಲ್ಲಿ ಮಲಗಿಬಿಟ್ಟಿದ್ದಾರೆ. ಹಾಲ್ ನಲ್ಲಿ ಟಿವಿ ಅದರ ಪಾಡಿಗೆ ಅದು ಹೊಡೆದುಕೊಳ್ಳುತ್ತಿದೆ. ಟಿವಿ ನೋಡುತ್ತಾ ನೋಡುತ್ತಾ ಹಾಗೇ ನಿದ್ರೆ ಬಂದು ರೂಮಿಗೆ ಹೋಗಿ ಮಲಗಿದ್ದಾರೆ. ಇದರಲ್ಲಿ ಅವರದ್ದೇನೂ ತಪ್ಪಿಲ್ಲ. ನಾವೆಲ್ಲರೂ ಸುಮಾರು ಅರ್ಧ ಗಂಟೆ ಪ್ರಯತ್ನ ಪಟ್ಟೆವು. ಏನೂ ಪ್ರಯೋಜನವಾಗಲಿಲ್ಲ.

ಆಗ ನಮ್ಮ ಅಕ್ಕ ಕೆಳಗಡೆ ಓನರ್ ಮನೆಗೆ ಹೋಗಿ ನಡೆದ ವಿಚಾರವನ್ನೆಲ್ಲ ತಿಳಿಸಿ ಒಂದೆರಡು ಚಾಪೆ ದಿಂಬುಗಳನ್ನು ತೆಗೆದುಕೊಂಡು ಬಂದರು. ಮೇಲ್ಗಡೆ ಎರಡು ಮನೆಗಳನ್ನು ಬಾಡಿಗೆ ಕೊಟ್ಟಿದ್ದರು. ಒಂದರಲ್ಲಿ ನಮ್ಮ ಅಕ್ಕ ಭಾವ ಇದ್ದರು.ಇನ್ನೊಂದು ಮನೆ ಖಾಲಿ ಇತ್ತು. ಮೊದಲು ಬಾಡಿಗೆ ಇದ್ದವರು ಮನೆ ಖಾಲಿ ಮಾಡಿ ಹೋಗಿದ್ದರು. ಸದ್ಯ ನಮಗೆ ಆ ರಾತ್ರಿ ಮಲಗಲು ಅನುಕೂಲವಾಯಿತು. ಇಲ್ಲವಾಗಿದ್ದರೆ ಮನೆಯ ಈಚೆಯ ವರಂಡದಲ್ಲಿ ಮಲಗಬೇಕಿತ್ತು. ಅದೊಂದು ಅದೃಷ್ಟ ಚೆನ್ನಾಗಿತ್ತು.
ಪಕ್ಕದ ಖಾಲಿ ಮನೆಯಲ್ಲಿ ಆ ರಾತ್ರಿ ನಾವೆಲ್ಲ ಮಲಗಿದೆವು. ಅಲ್ಲಿ ಫ್ಯಾನ್ ಇಲ್ಲ, ಕರೆಂಟ್ ಇಲ್ಲ. ಸೊಳ್ಳೆಗಳು ಗುಯ್ ಎಂದು ಕಿವಿಯ ಬಳಿ ಬಂದು ರಾಗ ಹಾಡಿ ಮುತ್ತಿಕ್ಕುತ್ತಿದ್ದವು. ರಾತ್ರಿ ಪೂರ್ತಿ ಸರಿಯಾಗಿ ನಿದ್ರೆಯೇ ಇಲ್ಲ. ಬೆಳಗಿನ ಜಾವ ಬೇಗನೆ ಎಚ್ಚರವಾಯಿತು. ಬೆಳಗ್ಗೆ ಆರು ಗಂಟೆಯಿಂದ ಬಾಗಿಲು ತೆಗೆಸಲು ಮತ್ತೆ ಎಲ್ಲರೂ ಪ್ರಯತ್ನಪಟ್ಟೆವು. ಅವರು ಮಾಮೂಲಿಯಾಗಿ ದಿನವೂ ಏಳುತ್ತಿದ್ದಂತೆ ಎಂಟು ಗಂಟೆಗೆ ಎದ್ದು ಈಚೆ ಬಂದರು. ಎದ್ದು ಕಣ್ಣು ಉಜ್ಜಿಕೊಂಡು ಬಂದು ಬಾಗಿಲು ತೆಗೆದರು. ಅಷ್ಟೊತ್ತಿಗೆ ನಾವಂತೂ ಕೂಗಿ ಕೂಗಿ ಹೈರಾಣಾಗಿದ್ದೆವು. ಸದ್ಯ ಈಗಲಾದರೂ ಬಾಗಿಲು ತೆಗೆದರಲ್ಲ ಅಂದುಕೊಂಡು ಒಳಗೆ ಹೋದೆವು. ಆ ವಯಸ್ಸಿನಲ್ಲಿ ಅವರಿಗೆ ಏನು ಹೇಳಿದರು ಅರ್ಥ ಆಗುತ್ತಿರಲಿಲ್ಲ. ಸುಮ್ಮನೆ ಬೈದು ಹೊಡೆದು ಮಾಡಿದರೆ ಪ್ರಯೋಜನ ಇಲ್ಲವೆಂದು ಅಕ್ಕನನ್ನು ನಾನೇ ಸುಮ್ಮನಾಗಿಸಿದೆ. ಆದರೆ ಆ ದಿನವೆಲ್ಲ ಹಿಂದಿನ ರಾತ್ರಿ ನಡೆದ ಘಟನೆ ನೆನೆದು ನಕ್ಕಿದ್ದೇ ನಕ್ಕಿದ್ದು. ಈಗಲೂ ಅಂದಿನ ದಿನ ನೆನಪಿಸಿಕೊಂಡರೆ ನಗು ಬರುತ್ತದೆ. ಮಕ್ಕಳನ್ನು ಅವರ ಪಾಡಿಗೆ ಅವರನ್ನು ಒಳಗಡೆ ಬಿಟ್ಟಿದ್ದು ನಮ್ಮ ತಪ್ಪು . ಜೊತೆಗೆ ಮಕ್ಕಳ ಮಾತನ್ನು ಆಲಿಸಿ ಅವರ ಭಾವನೆಗೆ ಸ್ಪಂದಿಸಬೇಕಾದ್ದು ಹಿರಿಯರ ಕರ್ತವ್ಯ ಎಂಬುದು ಮನದಟ್ಟಾಗಿತ್ತು. ಮಕ್ಕಳು ಒಳಗಡೆ ಇನ್ನೇನಾದರೂ ಅಪಾಯ ಮಾಡಕೊಂಡಿದ್ದರೆ ಎಂಬ ಆತಂಕವೂ ಉಂಟಾಯಿತು. ಮಕ್ಕಳಿಗೂ ಸಮಯ ಮೀಸಲಿಡಬೇಕೆಂದು ಅರಿವಾಗಿತ್ತು.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ಸರ್ವಮಂಗಳ ಜಯರಾಮ್ – ಶಿಕ್ಷಕಿ ಗೌರಿಬಿದನೂರು.
