‘ಚೌಚೌ ಬಾತ್’ ಅಂಕಣ (ಭಾಗ –೧೧)

ಮಿಸ್ ಮಿಸ್…… ಹಾವು ಎನ್ನತ್ತಾ ಓಡಿ ಬಂದ. ನಾವು ಹೊರಗೆ ಬಂದು ನೋಡಿದರೆ….. ಹಾವು ಖಾಲಿಯಾದ ಪೆಪ್ಸಿ ಜ್ಯೂಸ್ ಟಿನ್ ನೊಳಕ್ಕೆ ತಲೆ ಸಿಕ್ಕಿಸಿಕೊಂಡು ಗಾಬರಿಯಿಂದ ಕಂಗೆಟ್ಟು ಕಣ್ಣು ಕಾಣದೆ ಸಿಕ್ಕಾಪಟ್ಟೆ ಎಗರಾಡುತ್ತಿದೆ. ಅತ್ತಿಂದಿತ್ತ ಸರಿದಾಡುತ್ತ ರೌದ್ರ ನರ್ತನವನ್ನು ಮಾಡುತ್ತಿರುವ ನಾಗಪ್ಪನನ್ನು ಕಂಡು ಮಕ್ಕಳು ಹೋ… ಎಂದು ಕಿರುಚುತ್ತಿದ್ದಾರೆ. ಮುಂದೇನಾಯಿತು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಬುಸ್ ಬುಸ್ ನಾಗಪ್ಪ’ ತಪ್ಪದೆ ಮುಂದೆ ಓದಿ…

ನಾನು ಈ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯಲ್ಲಿ ಮೂವರು ಶಿಕ್ಷಕಿಯರು , ಒಬ್ಬರು ಹೆಡ್ ಮಾಸ್ಟರ್ …. ಒಟ್ಟು ನಾಲ್ಕು ಜನ ಶಿಕ್ಷಕರು ಇದ್ದೆವು. ಹೆಡ್ ಮಾಸ್ಟರ್ ಯಾವಾಗಲಾದರೂ ರಜೆ ಹಾಕಿದಾಗ ಇಲ್ಲವೇ ಮೀಟಿಂಗ್, ಟ್ರೈನಿಂಗ್ ಎಂದು ಹೋದಾಗ ಶಾಲಾ ಜವಾಬ್ದಾರಿಯೆಲ್ಲಾ ನನ್ನ ಮೇಲೇ ಬೀಳುತ್ತಿತ್ತು. ಏಕೆಂದರೆ ಅವರ ನಂತರ ನಾನೇ ಸೀನಿಯರ್ ಟೀಚರ್.

ಅಂಥಾ ದಿನಗಳಲ್ಲಿ ನನಗೆ ತಲೆ ಕೆಟ್ಟು ಹೋಗುತ್ತಿತ್ತು. ಇತ್ತ ತರಗತಿಗೆ ಹೋಗಿ ಮಕ್ಕಳ ಅಟೆಂಡೆನ್ಸ್ ಹಾಕುವಷ್ಟರಲ್ಲಿ ಬಿಸಿ ಊಟ ತಯಾರಿಕೆಗಾಗಿ ಹೆಡ್ ಕುಕ್ ಬಂದು ಅಕ್ಕಿ ಎಷ್ಟು ಹಾಕಬೇಕು ಮೇಡಂ… ಬೇಳೆ ಎಷ್ಟು ತಗೋಬೇಕು ಮೇಡಂ ಎಂದು… ಒಂದೇ ವರಾತ… ಮಕ್ಕಳ ಲೆಕ್ಕ ತೆಗೆದುಕೊಂಡು ಅಡಿಗೆಯವರಿಗೆ ದಿನಸಿ ಕೊಟ್ಟು ಮತ್ತೆ ತರಗತಿಗೆ ವಾಪಸ್ ಬರುವಷ್ಟರಲ್ಲಿ ಯಾರಾದರೂ ಅಧಿಕಾರಿಗಳು ವಿಸಿಟ್ ಕೊಟ್ಟಿರುತ್ತಿದ್ದರು. ಕಾಕತಾಳೀಯವೆಂಬಂತೆ ನಾನು ಚಾರ್ಜ್ ನಲ್ಲಿ ಇದ್ದಾಗಲೆಲ್ಲಾ ಯಾರಾದರೂ CRP, BRP, ಇಲ್ಲವೆ ECO ಗಳು ವಕ್ಕರಿಸುತ್ತಿದ್ದರು. ಸರಿ… ಶಾಲಾ ರೆಕಾರ್ಡ್ಗಳನ್ನೆಲ್ಲಾ ಅವರ ಅವಗಾಹನೆಗೆ ತಂದು ಟೀ , ಬಿಸ್ಕೆಟ್ ಸಮಾರಾಧನೆ ಮಾಡಿಸಿ ಅವರನ್ನು ಸಾಗ ಹಾಕುವಷ್ಟರಲ್ಲಿ ಸಾಕಾಗಿ ಹೋಗುತ್ತಿತ್ತು. ನಾನು ಯಾಕಾಗಿ ಚಾರ್ಜ್ ನಲ್ಲಿ ಇದ್ದೇನೋ ಅನಿಸುತ್ತಿತ್ತು. ಸರಿ… ಅವರು ಹೋದ ನಂತರ ಬುಸ್ ಬುಸ್ ನಾಗಪ್ಪ ನಮ್ಮ ಅತಿಥಿಯಾಗುತ್ತಿದ್ದ.

ಫೋಟೋ ಕೃಪೆ : google

ಒಂದು ದಿನ ಮಧ್ಯಾಹ್ನ ಹೀಗೇ ಆಯಿತು. ಅವರನ್ನು ಅತ್ತ ಕಳಿಸಿ ತರಗತಿ ಒಳ ಬರುವಷ್ಟರಲ್ಲಿ ಒಂದಿಬ್ಬರು ಹುಡುಗರು ಓಡಿ ಬಂದು ಮಿಸ್… ಮಿಸ್… ಹಾವು….. ಹಾವು… ಎಂದು ಬುಸುಗುಟ್ಟಿದರು. ಪಾಪ , ಅಷ್ಟು ದೊಡ್ಡ ಹಾವನ್ನು ಹತ್ತಿರದಿಂದ ಕಂಡು ಅವರಿಗೆ ಮಾತೇ ಹೊರಡುತ್ತಿಲ್ಲ. ತಕ್ಷಣ ನಾವು ಮೂವರು ಶಿಕ್ಷಕಿಯರು ತರಗತಿಯಿಂದ ಈಚೆ ಬಂದು ಹಾವಿದ್ದ ಜಾಗಕ್ಕೆ ಬಂದೆವು. ನಮ್ಮ ಹಿಂದೆಯೇ ಮಕ್ಕಳು ಹೋ…. ಎಂದು ಕಿರುಚುತ್ತಾ ಈಚೆ ಬಂದರು. ಸರಿಯಾಗಿ ಆಟದ ಮೈದಾನದ ಮಧ್ಯೆಯೇ ಒಂದು ಹುತ್ತ ಇದೆ.ಅದರ ಪಕ್ಕದಲ್ಲೇ ದೊಡ್ಡದೊಂದು ಹಾವು ದೊಡ್ಡ ಕಪ್ಪೆಯನ್ನು ನುಂಗಲಾರದೆ…. ಬಿಡಲಾರದೆ ಬಾಯಲ್ಲಿ ಅದನ್ನು ಕಚ್ಚಿ ಹಿಡಿದು ಅತ್ತಿತ್ತ ಸರಿಯದೆ ನಿಶ್ಚಲವಾಗಿತ್ತು.

ಮಕ್ಕಳೆಲ್ಲ ಜೋರಾಗಿ ಕೇಕೆ ಹಾಕುತ್ತ, ಹಾವಿಗೆ ಕಲ್ಲು ಎಸೆಯುತ್ತಾ ಗಲಾಟೆ ಮಾಡುತ್ತಿದ್ದರು. ಹಾವು ಮಾತ್ರ ಅತ್ತಿಂದಿತ್ತ ಕದಲುತ್ತಿಲ್ಲ. ಅದರಲ್ಲೂ ಇಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಕಂಟ್ರೋಲ್ ಮಾಡುವುದೇ ಒಂದು ದೊಡ್ಡ ಹರ ಸಾಹಸ. ತರಗತಿಯಿಂದ ಆಚೆ ಬಂದ ತಕ್ಷಣ ಅವರಿಗೆ ಬಾಲ ಬೆಳೆದು ಕೋತಿಗಳಾಗಿಬಿಡುತ್ತಾರೆ. ಮೊದಲೇ ಕಪಿ ಚೇಷ್ಟೆ ಬೇರೆ…… ಕೇಳಬೇಕೆ ….ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ….. ನಮಗೆ ಉಭಯ ಸಂಕಟ… ಕಲ್ಲಿನಿಂದ ಏಟು ತಿಂದ ಹಾವು ಕಪ್ಪೆಯನ್ನು ಬಿಟ್ಟು ಯಾರಾದರೂ ಹತ್ತಿರ ಸಿಕ್ಕ ಹುಡುಗರನ್ನು ಹಿಡಿದು ಕಚ್ಚಿ ಬಿಟ್ಟರೇ….. ಪೋಷಕರು ನಮ್ಮನ್ನು ಸುಮ್ಮನೆ ಬಿಡುತ್ತಾರೆಯೇ… ನಮ್ಮ ಗತಿ ಗೋವಿಂದ.

ಅದ್ರಲ್ಲೂ ನಾನು ಇನ್ ಚಾರ್ಜ್ ಹೆಡ್ ಮೇಡಂ. …ನಾವು ಮೂವರೂ ಶಿಕ್ಷಕಿಯರು… ಬೇರೆ…. ಗಂಡು ದಿಕ್ಕಿಲ್ಲದ ಮನೆಯಂತಾಗುತ್ತಿತ್ತು ಆಗ ನಮ್ಮ ಶಾಲೆ….. ಮನೆಯಲ್ಲಿ ಜಿರಲೆಯೋ , ಹಲ್ಲಿಯೋ ಪಕ್ಕದಲ್ಲಿ ಸರಿದರೆ ಸಾಕು ಎಗರಿ ಬೀಳುವ ನಾನು ಮಕ್ಕಳ ಮುಂದೆ ಧೈರ್ಯ ವಂತೆ ಎಂಬಂತೆ ಮುಖವಾಡ ಧರಿಸಬೇಕಿತ್ತು. ಇನ್ನಿಬ್ಬರು ಶಿಕ್ಷಕಿಯರ ಮುಂದೆ ಹಾಗೆ ನಡೆದುಕೊಳ್ಳುವುದು ಅನಿವಾರ್ಯ ವಾಗಿತ್ತು. ಕಷ್ಟಪಟ್ಟು ಹೇಗೋ ಅವರಿವರನ್ನು ಕೇಳಿ ಫೋನ್ ನಂಬರ್ ತೆಗೆದುಕೊಂಡು ಫೋನ್ ಮಾಡಿ ಹಾವು ಹಿಡಿಯುವನನ್ನು ಕರೆಸಿ ನಾಗಪ್ಪನನ್ನು…. ಕಪ್ಪೆ ಸಹಿತ ಭರ್ಜರಿಯಾಗಿ ಉಪಚರಿಸಿ ಬೀಳ್ಕೊಟ್ಟೆವು .ಅಲ್ಲಿಗೆ ಅಂದಿನ ಆತಂಕ ಕೊನೆಗೊಂಡಿತು. ಮತ್ತೊಂದು ದಿನ ಹೆಡ್ ಮಾಸ್ಟರ್ ರಜೆ ಹಾಕಿದ್ದರು. ಅಂದೂ ಕೂಡ ನಾನೇ ಹೆಡ್ ಮೇಡಂ.

ಫೋಟೋ ಕೃಪೆ : google

ಆಫೀಸ್ ರೂಂ ಪಕ್ಕದಲ್ಲಿ ಆಳೆತ್ತರದ ಗಿಡ ಗೆಂಟೆಗಳು ಬೆಳೆದಿದ್ದವು. ಅವನ್ನು ಕೀಳಿಸಿ ಸ್ವಚ್ಛ ಮಾಡಿಸಿ ಎಂದು ಹೆಡ್ ಮಾಸ್ಟರ್ ಗೆ ಎಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿರಲಿಲ್ಲ . ಮಧ್ಯಾನ್ಹ ಊಟದ ಸಮಯ …ನಾವು ಮೂವರು ಶಿಕ್ಷಕಿಯರು ನಿರಾಳವಾಗಿ ಎರಡು ತುತ್ತು ಹೊಟ್ಟೆಗಿಳಿಸಿದ್ದೆವು….. ಅಷ್ಟರಲ್ಲಿ ಆ ಕಡೆಗೆ ಚೆಂಡು ತೆಗೆದುಕೊಳ್ಳಲು ಬಂದ ಹುಡುಗನೊಬ್ಬ ಏನೋ…. ಬರ್ ಬರ್ ಎಂಬ ಶಬ್ದ ಬಂದಂತಾಗಿ ಅತ್ತ ನೋಡಿ ಗಾಬರಿಯಾಗಿ….. ಮಿಸ್ ಮಿಸ್…… ಹಾವು ಎನ್ನತ್ತಾ ಓಡಿ ಬಂದ. ನಾವು ಹೊರಗೆ ಬಂದು ನೋಡಿದರೆ….. ಹಾವು ಖಾಲಿಯಾದ ಪೆಪ್ಸಿ ಜ್ಯೂಸ್ ಟಿನ್ ನೊಳಕ್ಕೆ ತಲೆ ಸಿಕ್ಕಿಸಿಕೊಂಡು ಗಾಬರಿಯಿಂದ ಕಂಗೆಟ್ಟು ಕಣ್ಣು ಕಾಣದೆ ಸಿಕ್ಕಾಪಟ್ಟೆ ಎಗರಾಡುತ್ತಿದೆ. ಅತ್ತಿಂದಿತ್ತ ಸರಿದಾಡುತ್ತ ರೌದ್ರ ನರ್ತನವನ್ನು ಮಾಡುತ್ತಿರುವ ನಾಗಪ್ಪನನ್ನು ಕಂಡು ಮಕ್ಕಳು ಹೋ… ಎಂದು ಕಿರುಚುತ್ತಿದ್ದಾರೆ. ಹಾವು ಹಿಡಿಯಲು ಯಾರನ್ನಾದರೂ ಕರೆಯಿರೋ ಎಂದು ಮಕ್ಕಳನ್ನು ಕಳಿಸಿದರೆ… ಒಂದಿಬ್ಬರು ಪೋಷಕರು…. ಬಂದವರೇ ತಮ್ಮ ಮೊಬೈಲ್ನಲ್ಲಿ ವೀಡಿಯೋ ಮಾಡುತ್ತ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಇವರ ಬೇಜವಾಬ್ದಾರಿ ತನಕ್ಕೆ ಏನೆಂದು ಹೇಳುವುದು…. ಮಕ್ಕಳ ಸುರಕ್ಷತೆ ಬಗ್ಗೆ ಇವರಿಗೆ ಕಾಳಜಿಯೇ ಇಲ್ಲ.

ಸಿಕ್ಕಿಹಾಕಿಕೊಂಡ ಡಬ್ಬಿಯಿಂದ ಈಚೆ ಬರಲಾಗದೆ ಒದ್ದಾಡುತ್ತಾ ಹಾವು ಎಗರೆಗರಿ ಬೀಳುತ್ತಿತ್ತು. ಬಿಡಿಸಿಕೊಳ್ಳಲು ಪಾಪ ಹಾವಿಗೆ ನಮ್ಮಂತೆ ಕೈಗಳಿಲ್ಲವಲ್ಲ. ಅಬ್ಬಾ… ಆ ದೃಶ್ಯ ನೋಡಿ ನಮಗಂತೂ ಹೃದಯ ಬಾಯಿಗೆ ಬಂದಂತ ಅನುಭವ…. ಜಂಘಾಬಲವೇ ಉಡುಗಿ ಹೋಗಿತ್ತು. ಅಷ್ಟರಲ್ಲಿ ಯಾರೋ ಒಬ್ಬ ಧೈರ್ಯವಂತ ಒಂದು ಗೋಣಿ ಚೀಲ ತಂದು ಹಾವನ್ನು ಅದರಲ್ಲಿ ಬಂಧಿಸಿ ತೆಗೆದುಕೊಂಡು ಹೋದ. ಆಗ ನಿರಾಳವಾಗಿ ಉಸಿರಾಡಿದೆವು. ಮರುದಿನ ಹೆಡ್ ಮಾಸ್ಟರ್ ಬಂದಾಗ ಈ ವಿಷಯವನ್ನು ಹೇಳಿ ನಾವು ನಕ್ಕಿದ್ದೆ ನಕ್ಕಿದ್ದು. ಅದೇನು ಮಂತ್ರ ಹಾಕಿದ್ದೀರಿ ಸರ್.. ಹಾವುಗಳಿಗೆ ….ನೀವು ಇಲ್ಲದಿದ್ದಾಗಲೇ ಅವು ಬರುತ್ತವೆ ಎನ್ನುತ್ತಾ ನಕ್ಕು ನಕ್ಕು ಸುಸ್ತಾದೆವು.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವಮಂಗಳ ಜಯರಾಂ –  ಶಿಕ್ಷಕಿ. SSEA ಪ್ರೌಢಶಾಲೆ, ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading