ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ನಮ್ಮ ಪ್ರತಿಯೊಂದು ಸೋಲು – ಗೆಲುವಿನಲ್ಲಿಯೂ ನಮ್ಮ ಜೊತೆಯಾಗಿ ಇದ್ದವರು ಆಕಸ್ಮಿಕವಾಗಿ ನಮ್ಮಿಂದ ದೂರವಾದರು ಅಂತ ಕಣ್ಣೀರು ಸುರಿಸುತ್ತ ಬದುಕುವ ಹೃದಯಗಳ ಭಾರ ಯಾರಿಗೂ ತಿಳಿಯಲ್ಲ. ಚಂದನ್ ಅವರ ಮನಸ್ಸಿನ ಪಿಸುಮಾತನ್ನು ತಪ್ಪದೆ ಮುಂದೆ ಓದಿ…
ಆ ಗತಕಾಲದ ಸವಿ ನೆನಪುಗಳ ಕ್ಷಣಗಳು ಕಣ್ಮುಂದೆ ಬಂದು ಇಂದು ನೀನು ಒಂಟಿ, ನಿನಗೆ ಯಾರೂ ಇಲ್ಲ. ನಿನ್ನ ಜೀವನದ ಪ್ರತಿಯೊಂದು ಸೋಲು – ಗೆಲುವಿನಲ್ಲಿ ಜೊತೆಯಾಗಿ ಇರುವವರು ಯಾರೂ ನಿನಗಿಂದು ಇಲ್ಲವೆಂದು ಅಣುಕಿಸುವಂತೆ ಮಾಡುವ ಈ ವಿಧಿಯಾಟದಲ್ಲಿ ನನ್ನವರು ಅಂತ ನಿಜವಾಗಿಯೂ ಯಾರೂ ಇಲ್ಲವೇ? ಅನ್ನುವ ಪ್ರಶ್ನೆಯನ್ನು ಹೊತ್ತು ಸಾಗುವುದು ನಿಜವಾಗಿಯೂ ದುರದೃಷ್ಟಕರ.
ಈ ಪ್ರಪಂಚದಲ್ಲಿ ನಾವು ಸಾಧನೆ ಮಾಡಿದ ನಂತರ ಜನರ ಕಣ್ಣಿಗೆ ಬೀಳುವ ನಾವು, ನಮ್ಮ ಸಾಧನೆಗೆ ಪ್ರಶಂಸೆ, ಹೊಗಳಿಕೆ, ಗೌರವಗಳನ್ನು ಬೇಡವೆಂದುಕೊಂಡರೂ ಪಡೆಯಬಹುದು. ಅದೇ ನಾವು ಸಾಧನೆ ಮಾಡುವ ಪ್ರಯತ್ನದಲ್ಲಿ ನಮಗೆ ಯಾವುದೇ ಸಹಾಯ, ಸಹಕಾರ, ಬೆಂಬಲವನ್ನು ನಿರೀಕ್ಷೆ ಮಾಡಲೇಬಾರದು. ಯಾಕೆಂದರೆ ನಿರೀಕ್ಷೆ ಅನ್ನೋದು ವಾಸ್ತವಕ್ಕೆ ಎಂದಿಗೂ ದೂರ.
ನಮ್ಮ ನಿರೀಕ್ಷೆ ಸಮಾನ್ಯವಾಗಿ ನಿಜವಾಗಲಾರದು. ನಮ್ಮ ಪ್ರಯತ್ನಕ್ಕೆ ಬೆಂಬಲ ಅನ್ನೋದು ಅಷ್ಟು ಸುಲಭವಾಗಿ ಯಾರಿಂದಲೂ, ಎಂದಿಗೂ ಸಿಗಲಾರದು. ಯಾಕೆಂದರೆ ಈ ಪ್ರಪಂಚದಲ್ಲಿ ಪ್ರತಿಫಲಕ್ಕೆ ಸಿಗುವ ಬೆಲೆ ಗೌರವಗಳು ಪ್ರಯತ್ನಕ್ಕೆ ಬೆಂಬಲವಾಗಿ ಯಾರಿಂದಲೂ ಸಿಗಲಾರದು.

ಫೋಟೋ ಕೃಪೆ :google
ಇಂತಹ ಆಲೋಚನೆಗಳ ಮಧ್ಯೆ ನನಗೆ ಬಹಳ ದಿನಗಳಿಂದ ಕಾಡುತ್ತಿರುವ ಒಂದು ಪ್ರಶ್ನೆ ಯಾರು ಹಿತವರು ನನಗೆ? ಯಾರನ್ನು ಹಿತವರೆಂದು ಕರೆಯುತ್ತಾರೆ? ಅನ್ನೋದು.
ನನ್ನಲ್ಲಿನ ಪ್ರತಿಭೆ ಬೆಳಕಾಗಿ ಹೊಮ್ಮಿ, ಇನ್ನೊಬ್ಬರ ಜೀವನಕ್ಕೆ ದಾರಿದೀಪವಾಗಿ ಬೆಳಗಬೇಕೆಂದು ಚಿಕ್ಕಂದಿನಿಂದಲೂ ಅಂದುಕೊಂಡು ಬಂದವನು ನಾನು. ಆದರೆ ಅದಕ್ಕೆ ಸೂಕ್ತ ಸಹಾಯ, ಸಹಕಾರಗಳ ಕೊರತೆ ಜೊತೆಗೆ ಈ ಹಾಳಾದ ಆರ್ಥಿಕತೆಯ ಕೊರತೆಯಿಂದ ಸಾಧಿಸಲು ಆಗದೆ ಕನಸು ಕನಸಾಗಿಯೇ ಉಳಿದಿತ್ತು. ಅದನ್ನು ಮತ್ತೆ ನನಸಾಗಿಸಲು ಪ್ರಯತ್ನ ಪಡುತ್ತಿರುವ ನನಗೆ ಹಂತ-ಹಂತವಾಗಿ ಸೋಲು, ಕಷ್ಟಗಳೇ ಎದುರಾಗಿಹುದು. ನನ್ನ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ, ಸಹಕರಿಸುವವರು ಇಲ್ಲದೆ ಒಂಟಿಯಾದ ನನಗೆ ಕಣ್ಣೀರು ಮಾತ್ರವೇ ಆತ್ಮೀಯತೆಯನ್ನು ನೀಡುತ್ತಿದೆ.
ಎಷ್ಟೇ ಹರಿಸಿದರೂ ನಿಲ್ಲದ ಕಣ್ಣೀರಿನ ಸೆಲೆಯನ್ನು ಹೊತ್ತು, ಸದಾ ಒಂಟಿತನದಲ್ಲಿ ನನ್ನನ್ನು ಅರ್ಥ ಮಾಡಿಕೊಳ್ಳುವವರು ಸಿಗಲಿಲ್ಲವಲ್ಲ ಅನ್ನುವ ನೋವಲ್ಲಿ ಕೊರಗುತ್ತಾ, ಜನರ ನಿಜ ಸ್ವರೂಪವನ್ನು ಕಣ್ಣಾರೆ ಕಂಡು ಏನೂ ಮಾಡಲಾಗದೆ ಒಂಟಿಯಾಗಿ ಬದುಕುವ ಬದುಕು ನನ್ನದು…
ಹಿಂದಿನ ಸಂಚಿಕೆಗಳು :
- ಚಂದನ್
