ಕಾಲ ಅಥವಾ ಸಮಯ ಅನ್ನೋದು ಎಷ್ಟು ವಿಚಿತ್ರ ಅಂದರೆ ಅದು ಪ್ರತಿಯೊಬ್ಬರ ಜೀವನದಲ್ಲಿ ನೀಡುವ ಅನುಭವ ಕೇವಲ ಗಡಿಯಾರದ ಲೆಕ್ಕಾಚಾರವಷ್ಟೇ ಆಗಿರಲ್ಲ, ಹಾಗೆಯೇ ದಿನಗಳ, ಮಾಸಗಳ ಅಥವಾ ವರ್ಷಗಳ ಲೆಕ್ಕಾಚಾರವಷ್ಟೇ ಆಗಿರಲ್ಲ. ಚಂದನ್ ಅವರ ಮನಸ್ಸಿನ ಪಿಸುಮಾತನ್ನು ತಪ್ಪದೆ ಮುಂದೆ ಓದಿ…
ಅದು ನೆನಪುಗಳ ಸರಮಾಲೆಯ ಹೊರೆಯನ್ನೇ ನಮ್ಮ ಜೀವನದಲ್ಲಿ ನೀಡಿಹೋಗಿರುತ್ತೆ. ಆ ನೆನಪುಗಳ ಜೊತೆಗೆ ನಮ್ಮ ಜೀವನ ಸಾಗುತ್ತಿದೆ ಅಂತ ಯಾರಿಗೂ ಅಷ್ಟು ಸುಲಭವಾಗಿ ತಿಳಿಯಲು ಆಗದು. ಯಾಕೆಂದರೆ, ಆ ಅನುಭವಗಳ ಸರಮಾಲೆಯ ಹೊರೆಯ ಭಾರ ಅದನ್ನು ಹೊತ್ತುಕೊಂಡು ಸಾಗುವವರಿಗೆ ಮಾತ್ರ ಚಿರಪರಿಚಿತವಾಗಿರಲು ಸಾಧ್ಯ.
ಸೋಲು – ಗೆಲುವಿನ, ಸುಖ – ದುಃಖಗಳ ಅನುಭವಗಳು ಬದುಕಿನ ದಾರಿಯಲ್ಲಿ ಎದುರಾದರೂ ಅದರ ಅನುಭವ ಹಾಗು ಅದರಿಂದ ದೊರೆತ ಪ್ರತಿಫಲಗಳ ನೆನಪಾಗುವುದು ಕಾಲ ಸರಿದು ಮುಂದೆ ಸಾಗಿ ಹಿಂದಿರುಗಿ ನೋಡಿಕೊಂಡಾಗಲೇ.
ನೆನಪುಗಳ ಜೊತೆಗೆ ಎಲ್ಲರ ಬದುಕಿನ ಪಯಣ ಸಾಗುತ್ತಲೇ ಇರುತ್ತೆ. ಆ ನೆನಪುಗಳ ಪುಟಗಳಲ್ಲಿ ಚಿರಪರಿಚಿತ ವ್ಯಕ್ತಿಗಳ, ಪ್ರೀತಿಪಾತ್ರರ ನೆನಪುಗಳ ಪುಟಗಳು ಮರೆಯಲು ಯಾರಿಂದಲೂ ಸಾಧ್ಯವೇ ಇರಲ್ಲ. ಆ ನೆನಪುಗಳನ್ನು ನೆನೆಸಿಕೊಂಡಾಗ ನಗುವೋ ಅಥವಾ ಕಣ್ಣೀರ ಧಾರೆಯೋ ಹರಿಸಲ್ಪಡುವುದು ಎಲ್ಲರ ಬದುಕಿನಲ್ಲಿ ಸರ್ವೇಸಾಮಾನ್ಯ.

ಫೋಟೋ ಕೃಪೆ :google
ಕೆಲವರ ನೆನಪುಗಳೇ ಅಷ್ಟು ಅಳಿಸಲಾಗದ್ದು. ಅವು ಕಣ್ಣಿನ ಮುಂದೆ ನೆನಪಾಗುತ್ತಲೇ ನೆನಪುಗಳಾಗಿ ಜೀವನ ಸಾಗುವವರೆಗೂ ಅಂದರೆ ಬದುಕಿನ ಅಂತ್ಯ ಕಾಣುವ ಕೊನೆ ಕ್ಷಣದವರೆಗೂ ಉಳಿದುಬಿಡುತ್ತವೆ. ಏನೇ ಮಾಡಿದರೂ, ಎಲ್ಲೇ ದೂರ ಸರಿದು ಹೋದರೂ ಅವು ನಮ್ಮನ್ನು ಬಿಟ್ಟುಕೊಡಲ್ಲ. ಸದಾ ನಮ್ಮೊಂದಿಗೆ ಸಾಗುತ್ತಲೇ ಇರುತ್ತವೆ. ಕಾಡುತ್ತಲೇ ಇರುತ್ತವೆ.
ಮೆದುಳಿನಲ್ಲಿ ಉಳಿದ ನೆನೆಪುಗಳು ಇಂದಲ್ಲಾ ನಾಳೆ ಎಂದೋ ಒಂದು ದಿನ ಕಾಲ ಕಳೆದಂತೆ ನಿಧಾನವಾಗಿ ಮರೆವಿಗೆ ದಾಸನಂತಾಗಿ ನಶಿಸಬಹುದು. ಕಳೆದುಕೊಂಡದ್ದು ಬೇರೆ ಇನ್ಯಾವುದೋ ಒಂದು ರೂಪದಲ್ಲಿ ನಮಗೆದುರಾದರೆ ನೆನಪುಗಳ ಸಂಕೋಲೆಯನ್ನು ಬಿಡಿಸಿಕೊಂಡು ಹೊರಬರಬಹುದು. ಆದರೆ ಮನಸ್ಸಿನ ವಿಷಯದಲ್ಲಿ ಇದು ತದ್ವಿರದ್ಧ.
ಕೆಲವರು ಮನಸ್ಸಿನ ಅಂತಾರಾಳಕ್ಕೆ ಲಗ್ಗೆ ಇಟ್ಟು, ಶಾಶ್ವತವಾದ ಸ್ಥಾನಮಾನವನ್ನು ನಮ್ಮ ಮನಸ್ಸಿನಲ್ಲಿ ಸಂಪಾದಿಸಿಕೊಂಡು, ನಮ್ಮ ಹೃದಯದ ಪ್ರತಿ ಬಡಿತದಲ್ಲಿಯೂ ನೆಲೆಯೂರಿ ಬಿಟ್ಟಿರುತ್ತಾರೆ. ಅಂತಹವರು ನಮ್ಮ ಹೃದಯಬಡಿತ ನಿಲ್ಲುವವರೆಗೂ ಚಿರಾಯುವಾಗಿ ಉಳಿದುಕೊಳ್ಳುವ ವಿಶೇಷ ವ್ಯಕ್ತಿಗಳಾಗಿ ಬಿಟ್ಟಿರುತ್ತಾರೆ.
ಅಂತಹ ವ್ಯಕ್ತಿಗಳ ಮರೆಯುವುದು ನಮ್ಮ ಸಾವಿಗೆ ಸಮವಾಗಿರುತ್ತೆ. ಹೃದಯ ಬಡಿತ ನಿಂತ ಮೇಲೆ ಮನುಷ್ಯ ಕೇವಲ ಜೀವಂತ ಶವದಂತೆ. ಆದರೆ ಪ್ರತಿಯೊಬ್ಬರ ಹೃದಯ ಬಡಿತದಲ್ಲಿ ತನ್ನದೇ ಆದಂತಹ ವಿಶೇಷ ಸ್ಥಾನಮಾನವನ್ನು ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡಿರುವವರನ್ನು ಪ್ರತಿಯೊಂದು ಹೃದಯ ಬಡಿತದಲ್ಲಿ ನೆನಪುಗಳಾಗಿ ಜೋಪಾನ ಮಾಡಿಕೊಂಡು ಕಣ್ಣೀರ ಧಾರೆಯಲ್ಲಿ ಬದುಕುವ ಹಾಗು ಆ ಕಣ್ಣೀರ ಧಾರೆ ಯಾರಿಗೂ ಕಾಣದಂತೆ ನಗುವಿನ ಪಾತ್ರದಲ್ಲಿ ನಟಿಸುತ್ತ ಬದುಕುವುದು ಮನುಷ್ಯನಿಗೆ ಅಭ್ಯಾಸವಾಗಿ ಹೋಗಿದೆ.
ಭಾವನೆಗಳಿಗೆ ಬೆಲೆಯಿಲ್ಲದ ಬದುಕಿನಲ್ಲಿ ಮನಸ್ಸಿನಲ್ಲಿರುವ ಭಾವನೆಗಳನ್ನು ಇತರರಲ್ಲಿ ವ್ಯಕ್ತಪಡಿಸುವ ಸಾಹಸ ಮಾಡಲೇಬಾರದು ಅನ್ನುವಷ್ಟು ಪ್ರಪಂಚ ಬದಲಾಗಿ ಹೋಗಿದೆ. ಯಾಕೆಂದರೆ, ಪ್ರಪಂಚದಲ್ಲಿ ಕಣ್ಣಿಗೆ ಅಂದವಾಗಿ ಕಾಣುವ ವಸ್ತುಗಳಿಗೆ ಸಿಗುವ ಬೆಲೆ ಗೌರವಗಳು ಮನುಷ್ಯನ ನೈಜ ಹಾಗು ನಿಷ್ಕಲ್ಮಶ ಭಾವನೆಗಳಿಗೆ ಎಂದಿಗೂ, ಎಲ್ಲಿಯೂ ಸಿಗಲಾರದು…
ಹಿಂದಿನ ಸಂಚಿಕೆಗಳು :
- ಮನಸ್ಸಿನ ಪಿಸುಮಾತು – (ಭಾಗ-೧)
- ಮನಸ್ಸಿನ ಪಿಸುಮಾತು – (ಭಾಗ-೨)
- ಮನಸ್ಸಿನ ಪಿಸುಮಾತು – (ಭಾಗ-೩)
- ಮನಸ್ಸಿನ ಪಿಸುಮಾತು – (ಭಾಗ-೪)
- ಮನಸ್ಸಿನ ಪಿಸುಮಾತು – (ಭಾಗ-೫)
- ಮನಸ್ಸಿನ ಪಿಸುಮಾತು – (ಭಾಗ-೬)
- ಮನಸ್ಸಿನ ಪಿಸುಮಾತು – (ಭಾಗ-೭)
- ಮನಸ್ಸಿನ ಪಿಸುಮಾತು – (ಭಾಗ-೮)
- ಮನಸ್ಸಿನ ಪಿಸುಮಾತು – (ಭಾಗ-೯)
- ಮನಸ್ಸಿನ ಪಿಸುಮಾತು – (ಭಾಗ-೧೦)
- ಮನಸ್ಸಿನ ಪಿಸುಮಾತು – (ಭಾಗ-೧೧)
- ಮನಸ್ಸಿನ ಪಿಸುಮಾತು – (ಭಾಗ-೧೨)
- ಮನಸ್ಸಿನ ಪಿಸುಮಾತು – (ಭಾಗ-೧೩)
- ಚಂದನ್
