ಭಾರತೀಯ ಪ್ರಾಚೀನ ತತ್ವ ದರ್ಶನಗಳು

ಉದಯ್ ಕುಮಾರ್ ಹಬ್ಬು ಅವರು ಪುಸ್ತಕಕಕ್ಕೆ ಹಿಂದೂ ದರ್ಶನಗಳು ಎಂದು ಕರೆಯದೆ “ಭಾರತೀಯ ತತ್ವ ದರ್ಶನಗಳು” ಎಂದು ಕರೆಯುವುದರ ಮೂಲಕ ಅದಕ್ಕೆ ಧರ್ಮಾತೀತ ನೆಲೆಯೊಂದನ್ನು ಕಲ್ಪಿಸಿ ಹೊಸ ದೃಷ್ಟಿಯಿಂದ ನೋಡಬೇಕಾದ ವೇದಿಕೆಯೊಂದನ್ನು ನಿರ್ಮಾಣ ಮಾಡಿದ್ದಾರೆ.ರಘುನಾಥ್ ಕೃಷ್ಣಮಾಚಾರ್ ಅವರು ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಭಾರತೀಯ ಪ್ರಾಚೀನ ತತ್ವ ದರ್ಶನಗಳು
ಲೇಖಕರು : ಉದಯ್ ಕುಮಾರ್ ಹಬ್ಬು

ಅಡಿಗರು ತಮ್ಮ ಕವಿತೆ ಯೊಂದರಲ್ಲಿ ” ಪುರೋಹಿತರ ನೆಚ್ಚಿ ಪಶ್ಚಿಮ ಬುದ್ದಿಯಾದೆವೊ, ಇನ್ನಾದರೂ ಪೂರ್ವ ಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು” ಎಂದು ಕರೆಕೊಟ್ಟರು. ಇದರಲ್ಲಿ ಲೇಖಕರು ಕರ್ಮಕಾಂಡಗಳನ್ನು ಬಿಟ್ಟು ಕೊಟ್ಟು, ಪೂರ್ವ ಮೀಮಾಂಸೆಯ ಕಡೆಗೆ ತಿರುಗಿದ್ದಾರೆ . ಪ್ರಾಚೀನ ಭಾರತೀಯ ತತ್ವದರ್ಶನಗಳು ಮತ್ತು ಅವುಗಳನ್ನು ಕುರಿತು ಉಳಿದವರ ವ್ಯಾಖ್ಯಾನ ( ಅಭಿಪ್ರಾಯ ಮತ್ತು ಭಿನ್ನಾಭಿಪ್ರಾಯ) ಗಳ ಸಮೇತ ಮಂಡಿಸಿದ್ದಾರೆ.

ಮೊದಲ ಅಧ್ಯಾಯದಲ್ಲಿ ಸಾಂಖ್ಯ ದರ್ಶನ ಕುರಿತು – ಅದರ ಮೂಲ ದರ್ಶನವನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ . ಪ್ರಕೃತಿ ಮತ್ತು ಪುರುಷ ಇವುಗಳ ಅಂತರವನ್ನು ಸ್ಪಷ್ಟವಾಗಿ ನಿರೂಪಿಸಲಾಗಿದೆ. ಪ್ರಕೃತಿ ಕಾರಣ ಮತ್ತು ಪರಿಣಾಮಗಳನ್ನು ಒಳಗೊಂಡಿದೆ . ಇದನ್ನು ಮಣ್ಣು ಮತ್ತು ಮಡಕೆಯ ಸಂಬಂಧದ ಮೂಲಕ ವಿವರಿಸಿದ್ದಾರೆ. ಮಣ್ಣು ಕಾರಣವಾದರೆ ಮಡಕೆ ಪರಿಣಾಮವಾಗಿದೆ. ಆದ್ದರಿಂದ ಪರಿಣಾಮವು ಕಾರಣದಲ್ಲಿ ಅಡಕವಾಗಿದೆ. ಅದಲ್ಲದೇ ಪ್ರಕೃತಿ ಸತ್ವ, ರಜಸ್ಸು, ತಮಸ್ಸ್ ಗಳೆಂಬ ಮೂರು ಗುಣಗಳನ್ನು ಹೊಂದಿದೆ. ಪುರುಷ ಸಾಕ್ಷಿಯಾದ್ದರಿಂದ ಅವನಿಗೆ ಯಾವುದೇ ರೀತಿಯ ಬಂಧನವಿಲ್ಲ.. ಅದರ ವ್ಯಾಖ್ಯಾನಗಳನ್ನು ಕಾಲಾನುಕ್ರಮವಾಗಿ ಪ್ರಸ್ತುತ ಪಡಿಸಿದ್ದರೆ, ಅವುಗಳ ಬೆಳವಣಿಗೆಯ ವಿನ್ಯಾಸವನ್ನು ಗುರುತಿಸಲು ಸುಲಭವಾಗುತ್ತಿತ್ತು.

ನಾಸ್ತಿಕ ದರ್ಶನವಾಗಿದ್ದ ಸಾಂಖ್ಯವನ್ನು ಆಸ್ತಿಕವನ್ನಾಗಿಸಿದ ಪ್ರಕ್ರಿಯೆ ಉಳಿದವುಗಳದು.-ಎರಡರ( ಪ್ರಕೃತಿ- ಪುರುಷ) ನಡುವೆ ಮೂರನೇ ಈಶ್ವರ ಪರಿಕಲ್ಪನೆಯನ್ನು ತರುವುದರ ಮೂಲಕ. ಇದಕ್ಕೆ ವಿದ್ವತ್ಪೂರ್ಣ ಮುನ್ನುಡಿ ಬರೆದಿರುವ ಡಾ.ಜಿ.ಬಿ.ಹರೀಶ್ ಇಲ್ಲಿ ಬರುವ ಪ್ರಕೃತಿ ಪುರುಷರನ್ನು ಕುರುಡ ಮತ್ತು ಹೆಳವರಿಗೆ ಹೋಲಿಸಿದ್ದಾರೆ. ಕುರುಡನಿಗೆ ದಾರಿತೋರಿಸಲು ಅವನ ಹೆಗಲನ್ನು ಹತ್ತಿದ ಹೆಳವ ಕುರುಡನಿಗೆ ಮರುಳಾಗಿ ಅಲ್ಲಿ ಯೆ ಉಳಿದುಬಿಡುತ್ತಾನೆ . ಬಹುಶಃ ಅಡಿಗರು ಇದನ್ನು ಬದಲಾಯಿಸಿ ” ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿಸಾಗುವುದೆಂತೋ ನೋಡಬೇಕು ” ಎಂದು ನಮ್ಮ ಸಮಕಾಲೀನ ಸ್ಥಿತಿಗೆ ಭಾಷ್ಯಬರೆದಿದ್ದಾರೆ.

ಎರಡು: ಯೋಗ ಮತ್ತು ತಂತ್ರ ದರ್ಶನ: ಇದನ್ನು ಐದು ಭಾಗಗಳಲ್ಲಿ ವಿವರಿಸಲಾಗಿದೆ. ೧.ಉಪನಿಷತ್ತುಗಳಲ್ಲಿನ ಯೋಗದ ಉಲ್ಲೇಖ. ೨: ಪತಂಜಲಿ ಯೋಗ ೩ ಹಠ ಮತ್ತು ರಾಜಯೋಗ. ೪. ಬೌದ್ಧ ಧರ್ಮದ ಯೋಗ ೫.ಶಾಕ್ತ ಯೋಗ. ಮೊದಲು ಉಪನಿಷತ್ತುಗಳಲ್ಲಿನ ಯೋಗದ ವಿವರಗಳನ್ನು ಸಂಗ್ರಹಿಸಲಾಗಿದೆ. ಎರಡು ಪತಂಜಲಿ ಅಷ್ಟಾಂಗ ಯೋಗದ ವಿವರಗಳನ್ನು ನೀಡುತ್ತದೆ. ಮೂರು ಹಠ ಮತ್ತು ರಾಜ ಯೋಗ ತಂತ್ರಕ್ಕೆ ಪ್ರಾಧಾನ್ಯ ನೀಡುತ್ತದೆ.

ನಾಲ್ಕು ಬೌದ್ಧ ಧರ್ಮ ವಜ್ರಯಾನದ ಯೋಗದ ವಿಧಾನವನ್ನು ಮತ್ತು ಕ್ರಮೇಣ ಅದರ ಅವನತಿಯನ್ನು ನಿರೂಪಿಸುತ್ತದೆ. ಶಾಕ್ತ ಪದ್ದತಿಯಲ್ಲಿ ಶಿವಯೋಗ ಅತ್ಯುನ್ನತ ಸ್ಥಿತಿಯನ್ನು ಕುಂಡಲಿನಿಯ ಜಾಗೃತಿಯ ಮೂಲಕ ಸಾಧಿಸಬಹುದು .ಸಾಂಖ್ಯ ಜ್ಞಾನ ಮಾರ್ಗವಾಗಿ ಅಲ್ಲಿ ದೇವರ ಕಲ್ಪನೆಗೆ ಅವಕಾಶ ಇಲ್ಲ. ಯೋಗದ ಗುರಿ ದೇವರಲ್ಲಿ ಸಮಾಧಿಯನ್ನು ಸಾಧಿಸುವುದು. ಅವುಗಳ ನಡುವೆ ಇರುವ ಭಿನ್ನತೆಯನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ.

ಮೂರು: ನ್ಯಾಯ ದರ್ಶನ: ಪ್ರಾಚೀನ ಭಾರತೀಯ ನ್ಯಾಯ ದರ್ಶನ ನಾಲ್ಕನ್ನು ಅವಲಂಬಿಸಿದೆ. ಅವು:ಪ್ರಮಾಣ, ಪ್ರಮೇಯ, ವಿಚಾರ ಮತ್ತು ಜ್ಞಾನ ಮೀಮಾಂಸೆಗಳು. ಇದನ್ನು ಆರಂಭಿಸಿದವ ಗೌತಮ. ಅವನ’ ನ್ಯಾಯ ಸೂತ್ರಗಳು’ ಪ್ರಸಿದ್ಧ ಗ್ರಂಥ. ಅದರಲ್ಲಿ ‌ಮೇಲಿನ ನ್ಯಾಯದರ್ಶನದ ನಾಲ್ಕು ಅಂಗಗಳನ್ನು ವಿವರಿಸಲಾಗಿದೆ. ಮೊದಲಿಗೆ ಮನುಷ್ಯರ ಕಾರ್ಯ ಮತ್ತು ಪರಿಣಾಮಗಳಿಗೆ ಅವನೆ ಹೊಣೆಯೆಂದು ಪರಿಗಣಿಸಿದ್ದರಿಂದ ಅದಕ್ಕೆ ದೇವರ ಸಂಬಂಧವನ್ನು ಆರೋಪಿಸಿರಲಿಲ್ಲ.ಆಗ ಅದು‌ ಸಾಂಖ್ಯ ದರ್ಶನಕ್ಕೆ ಹತ್ತಿರವಾಗಿತ್ತು.ನಂತರ ದೇವರ ಅಸ್ತಿತ್ವವನ್ನು ಆರೋಪಿಸಲಾಯಿತು. ಮುಂದೆ ಆಧುನಿಕ ವಿಜ್ಞಾನದ ಬೆಳವಣಿಗೆಯಲ್ಲಿ ನ್ಯಾಯ ದರ್ಶನದ ಪಾತ್ರವನ್ನು ಗುರುತಿಸಲಾಗಿದೆ.ಅಲಂಕಾರಗಳಲ್ಲಿ ಒಂದಾದ ಉಪಮೆಯನ್ನು ಸಾದೃಶ್ಯ ಸಂಬಂಧವಾಗಿ, ನ್ಯಾಯದರ್ಶನದ ಸಾಧನವಾಗಿ ಇಲ್ಲಿ ವಿವರಿಸಲಾಗಿದೆ. ಅದು ನ್ಯಾಯದರ್ಶನದಿಂದ ಅಲಂಕಾರ ಶಾಸ್ತ್ರ ಪಡೆಯಿತೊ ಎಂಬ ವಿವೇಚನೆಗೆ ಎಡಗೊಡುತ್ತದೆ. ಲೇಖಕರು ಅದನ್ನು ಸ್ಪಷೀಕರಿಸಿದರೆ ಒಳ್ಳೆಯದು.

ನಾಲ್ಕು: ವೈಶೇಷಿಕ ದರ್ಶನ: ಇದು ವಿಶ್ವವನ್ನು ದ್ರವ್ಯ, ಗುಣ,ಕರ್ಮ,ಸಾಮಾನ್ಯ, ವಿಶೇಷ ಮತ್ತು ಸಮನ್ವಯ ಎಂದು ಆರು ವರ್ಗಗಳನ್ನಾಗಿ ವಿವರಿಸುತ್ತದೆ.ಇದನ್ನು ಪ್ರಾರಂಭ ಕಣಾದನಿಂದ ಆಯಿತು .ಪ್ರತಿಯೊಂದನ್ನೂ ಪರಮಾಣು ಎಂದು ಅರ್ಥೈಸಲಾಗಿದೆ. ಪರಮಾಣುಗಳು ಅವಿಭಾಜ್ಯ ಮತ್ತು ಶಾಶ್ವತ. ಅವನ್ನು ಸೃಷ್ಟಿಸಲಾಗದು ಮತ್ತು ನಾಶಮಾಡಲಾಗದು.ಪ್ರತಿ ಯೊಂದು ಪರಮಾಣು ಅದರದೆ ಆದ ವಿಶೇಷತೆಯನ್ನು ಹೊಂದಿರುತ್ತದೆ.

ಐದು: ಪೂರ್ವ ಮೀಮಾಂಸೆ: ಜೈಮಿನಿಯಿಂದ ಪ್ರಾರಂಭವಾಯಿತು. ಅವನ ಪ್ರಕಾರ ವೇದಗಳೆ ಅಂತಿಮ. ಅವುಗಳಲ್ಲಿ ಹೇಳಿರುವಂತೆ ಮಾಡುವುದೆ ಪೂರ್ವ ಮೀಮಾಂಸೆ. ಅವು: ನಿತ್ಯಕರ್ಮ( ತ್ರಿಕಾಲ ಸಂಧ್ಯಾವಂದನೆ) ನೈಮಿತ್ತಿಕ ಕರ್ಮಗಳು ( ವ್ರತಗಳು) ಕಾಮ್ಯಕರ್ಮ( ಯಾಗ) ನಿಷಿದ್ಧ ಕರ್ಮ: ಮಾಡಬಾರದೆಂದು ಹೇಳಿದ ಕರ್ಮಗಳು.

ಆರು: ವೇದಾಂತ ಅಥವಾ ಉತ್ತರ ಮೀಮಾಂಸೆ: ವ್ಯಾಸ ಮಾಡಿದ ಬ್ರಹ್ಮ ಸೂತ್ರಗಳನ್ನು ವೇದಾಂತ ಎಂದು ಕರೆಯಲಾಗುತ್ತದೆ. ಉಪನಿಷತ್ತುಗಳನ್ನು ಆಧರಿಸಿದೆ.ಬ್ರಹ್ಮ ಸಾಧನೆ ಇದರ ಮೂಲ ಗುರಿ.ಇವುಗಳ ಕುರಿತು ವಿಭಿನ್ನ ವ್ಯಾಖ್ಯಾನಗಳು ಇದ್ದು ಪರಸ್ಪರ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಏಳು : ಬೌದ್ದ ದರ್ಶನ: ನಾಲ್ಕು ಆರಿಯ ಸತ್ಯ ಗಳು : ದುಃಖ, ದುಃಖದ ಅರಿವು, ದುಃಖದ ಕಾರಣ, ದುಃಖದಿಂದ ಬಿಡುಗಡೆ. ಅದಕ್ಕೆ ಅಷ್ಟಾಂಗ ಮಾರ್ಗದಲ್ಲಿ ನಡೆಯುವ ದಾರಿಯನ್ನು ತೋರಿಸಿತು. ಸ್ವತಃ ಮಾಂಸಾಹಾರಿ ಯಾದ ಬುದ್ಧ ಮಾಂಸ ವ್ಯಾಪಾರ ನಿಷೇಧ ಮಾಡುವುದರ ಔಚಿತ್ಯ ಅರ್ಥವಾಗುವುದಿಲ್ಲ. ವೈಜ್ಞಾನಿಕ ಸ್ವರೂಪವನ್ನು ಹೊಂದಿದ್ದು ಹೆಚ್ಚು ಸಂಗತವಾಗಿದೆ.

ಎಂಟು: ಜೈನ ದರ್ಶನ: ಅನೇಕಾಂತವಾದ, ರತ್ನ ತ್ರಯ( ಸಮ್ಯಕ್ ದರ್ಶನ, ಸಮ್ಯಕ್ ….) ವೇದಗಳ, ದೇವರ ನಿರಾಕರಣೆ ಬೌದ್ಧ ಜೈನ ಚಾರ್ವಾಕ ದರ್ಶನ ಗಳ ಸಾಮಾನ್ಯ ಲಕ್ಷಣ. ನಾಸ್ತಿಕ ಧರ್ಮಗಳು ಎಂದು ಕರೆಯಲಾಗುತ್ತದೆ

ಒಂಬತ್ತು: ಶಂಕರ : ಬ್ರಹ್ಮನ್,ಆತ್ಮನ್, ಮೋಕ್ಷ, ಅವಿದ್ಯಾ ಮತ್ತು ಮಾಯಾಗಳು.ಕೊನೆಯ ಎರಡು ಮೊದಲಿನವನ್ನು ತಲುಪಲು ಅಡ್ಡ ಬರುತ್ತವೆ. ಅವುಗಳಿಂದ ಬಿಡುಗಡೆ ಹೊಂದುವ ಮೂಲಕ ಅವನ್ನು ತಲುಪಲು ಸಾಧ್ಯ. ಬೌದ್ಧಧರ್ಮ ಮತ್ತು ಸಾಂಖ್ಯದಿಂದ ಪ್ರಕೃತಿತತ್ವವನ್ನು ಸ್ವೀಕರಿಸಿದರು. ಉಪನಿಷತ್ತುಗಳು ಮತ್ತು ವೇದಗಳಿಗೆ ಋಣಿಯಾಗಿದ್ದಾರೆ.ಅವರ ಅದ್ವೈತ ಸಿದ್ಧಾಂತ ವಿಶಿಷ್ಟವಾಗಿದೆ.ಶಂಕರರ ಮೇಲಿನ ಟೀಕೆಗಳನ್ನು ಉಲ್ಲೇಖ ಮಾಡಿದ್ದಾರೆ.

ಹತ್ತು: ನಾಗಾರ್ಜುನ ಸಾಂಖ್ಯ ಪ್ರಕೃತಿ ವಿಕಸನವಾದವನ್ನು ನಿರಾಕರಿಸಿದರು. ಅವರ ಪ್ರಕಾರ ಯಾವುದೇ ವಸ್ತುವಿಗೂ ತನ್ನದೆ ಆದ ಸ್ವಭಾವ ಇಲ್ಲ. ಎಲ್ಲಾ ಪರಸ್ಪರ ಸಂಬಂಧವನ್ನು ಹೊಂದಿವೆ ಮತ್ತು ಅವಲಂಬಿಸಿವೆ.ಆದ್ದರಿಂದಲೆ ಸ್ವಭಾವ ಶೂನ್ಯವಾಗಿವೆ.

ಸಾಧನೆಗಳು: ೧: ಅಡಿಗರು ತಮ್ಮ ಕವಿತೆಯಲ್ಲಿ “ಪರಂಗಿ ರೋಗದಿಂದ ತಪ್ಪಿಸಿಕೊಳ್ಳಲು , ಇನ್ನಾದರೂ ಪೂರ್ವ ಮೀಮಾಂಸೆಯ ಕಡೆಗೆ ತಿರುಗಬೇಕು” ಎಂದು ಕರೆಕೊಟ್ಟರು. ಮಾತ್ರವಲ್ಲ.ತಮ್ಮ ಕಾವ್ಯದ ಮೂಲಕ ಅದಕ್ಕೆ ಸಾಕ್ಷಿಯಾದರು.ಆದರೆ ಅವರ ಸಮಕಾಲೀನ ಲೇಖಕರಾಗಲಿ, ನಂತರ ಬಂದವರಾಗಲಿ ಅದರ ಕಡೆಗೆ ತಿರುಗಿ ನೋಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಪೂರ್ವ ಮೀಮಾಂಸೆ ಮತ್ತು ಇತರ ದರ್ಶನಗಳ ಕಡೆಗೆ ತಿರುಗಿ ನೋಡುವಂತೆ ಮಾಡಿದ ಶ್ರೇಯಸ್ಸು ಈ ಪುಸ್ತಕದ ಮೂಲಕ ನನ್ನ ಸರ್ವಕುತೂಹಲಿ ಪ್ರಾಧ್ಯಾಪಕ ಗೆಳೆಯರಾದ ಉದಯಕುಮಾರ್ ಹಬ್ಬು ಅವರಿಗೆ ಸಲ್ಲಬೇಕು.

೨.ತಮ್ಮ ಪುಸ್ತಕಕಕ್ಕೆ ಹಿಂದೂ ದರ್ಶನಗಳು ಎಂದು ಕರೆಯದೆ “ಭಾರತೀಯ ತತ್ವ ದರ್ಶನಗಳು” ಎಂದು ಕರೆಯುವುದರ ಮೂಲಕ ಅದಕ್ಕೆ ಧರ್ಮಾತೀತ ನೆಲೆಯೊಂದನ್ನು ಕಲ್ಪಿಸಿ ಹೊಸ ದೃಷ್ಟಿಯಿಂದ ನೋಡಬೇಕಾದ ವೇದಿಕೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

೩:ಪ್ರಾಚೀನ ಭಾರತೀಯ ತತ್ವ ದರ್ಶನಗಳು ಎಷ್ಟರಮಟ್ಟಿಗೆ ವೈಜ್ಞಾನಿಕ ಎಂಬ ಪ್ರಶ್ನೆಯನ್ನು ಕೇಳಿಕೊಂಡು ಅದಕ್ಕೆ ತಕ್ಕ ಉತ್ತರವನ್ನು ಒದಗಿಸಿರುವುದು.

೪: ಒಂದು ದರ್ಶನವನ್ನು ಪರಿಚಯ ಮಾಡಿಸಿ ಅದನ್ನು ಕುರಿತ ಟೀಕೆಗಳನ್ನು.ಕೊಟ್ಟು ಅದು ಏಕಮುಖಿಯಾಗದಂತೆ ಎಚ್ಚರಿಕೆ ವಹಿಸಿರುವುದು.

೫.ಅವೈದಿಕವಾಗಿದ್ದ ದರ್ಶನಗಳನ್ನು ವೈದಿಕೀಕರಣಗೊಳಿಸಿ ಆಸ್ತಿಕವನ್ನಾಗಿಸಿದ ಪರಿವರ್ತನೆಯನ್ನು ಖೇದಕರ ಎಂದು ಗುರುತಿಸಿರುವುದು .

ಮಿತಿಗಳು: ೧ ಶಂಕರಾಚಾರ್ಯರದನ್ನು ಸೇರಿಸಿ ರಾಮಾನುಜ, ಬಸವ ಮತ್ತು ಮಾಧ್ವದರ್ಶನಗಳನ್ನು ಕೈಬಿಟ್ಟಿರುವುದು. ಬಹುಶ: ಅವು ಮಧ್ಯಕಾಲೀನ ಎಂದಿರಬೇಕು.

೨: ನಿರ್ದಿಷ್ಟ ಪಾರಿಭಾಷಿಕ ಪದಗಳ ಅರ್ಥ ವ್ಯಾಪ್ತಿಯನ್ನು ಒದಗಿಸದಿರುವುದು.ಇದು ಅವುಗಳಲ್ಲಿ ಪ್ರವೇಶವಿಲ್ಲದ ನಮ್ಮಂತಹವರಿಗೆ ತೊಡಕುಗಳನ್ನು ಒಡ್ಡುತ್ತದೆ.

೩: ಅಲ್ಲಲ್ಲಿ ಪುನರುಕ್ತಿ ದೋಷಗಳನ್ನು ಒಳಗೊಂಡಿದೆ. ಅವರ ಸಾಧನೆಗಳ ಮುಂದೆ ಇರುವ ಮಿತಿಗಳು ಗೌಣ. ಪುಸ್ತಕವನ್ನು ಕಳಿಸಿ ಕೊಟ್ಟು ಪ್ರಾಚೀನವನ್ನು ಕುರಿತು ನನ್ನ ಅರಿವನ್ನು( ಯಂ ಶೈವೊ ಸಮುಪಾಸತೆ, ಶಿವ ಇತಿ ಬ್ರಹ್ಮೇತಿ, ವೇದಾಂತಿನೋ ಬೌದ್ಧಾ ಬುದ್ಧ ,ಇತಿ ಪ್ರಮಾಣ ಪಟವಹ ನೈಯಾಯಿಕಾ:) ವಿಸ್ತರಿಸಲು ಕಾರಣವಾದ ಅವರ ಸೌಜನ್ಯಕ್ಕೆ ವಂದನೆ ಮತ್ತು ಅಭಿನಂದನೆ.


  • ರಘುನಾಥ್ ಕೃಷ್ಣಮಾಚಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW