ಧರೆಯ ಮೇಲೆ ಜನಿಸಿದ ದಿನದಿಂದ ಮರಣಿಸುವವರೆಗಿನ ನಮ್ಮ ಬದುಕು ಅನೇಕ ತಿರುವುಗಳನ್ನು ಕಾಣುತ್ತಲೇ ಸಾಗುತ್ತದೆ. ಸ್ವತಂತ್ರವಾಗಿ ಓಡಾಡುವ ,ಮಾತನಾಡುವ, ಶಾಲೆಗೆ ಹೋಗಿ ಕಲಿಯುವ ಹಂತಗಳು ವರ್ಣಮಯ. ಟೀಕಾ. ಸುರೇಶ ಗುಪ್ತ ಅವರ ಜೀವನದ ವಿಚಾರಧಾರೆಯನ್ನು ತಪ್ಪದೆ ಮುಂದೆ ಓದಿ…
ಮನೆಯಲ್ಲಿ ಸದಾ ಆರೈಕೆ ಮಾಡುವ ತಾಯಿ, ಅಣ್ಣ, ಅಕ್ಕ , ಅಪ್ಪ ಹೀಗೆ ಹಲವರ ಪ್ರೀತಿಯ ಆರೈಕೆಗಳ ಮೂಲಕ ನಮ್ಮ ಬೆಳವಣಿಗೆ ನಮಗೇ ಅರಿವಿಲ್ಲದಂತೆ ಮುಂದಡಿಯಿಡುತ್ತಲೇ ಬದುಕಿನ ಪಾಠ ಬೋಧಿಸುತ್ತವೆ. ಸ್ವತಂತ್ರ ವಾಗಿ ಬದುಕು ಸಾಗಿಸುವ ಹಿನ್ನೆಲೆಯಲ್ಲಿ ಇವುಗಳು ನಮ್ಮನ್ನು ನಾವು ರೂಪಿಸಿ ಕೊಳ್ಳುವ ಗಟ್ಟಿತನ ಒದಗಿಸುತ್ತವೆ. ಬದುಕಿನ ಹುಡುಕಾಟದ ಹುದುಗು ಒದಗಿಸುತ್ತಾ ಅನೇಕ ಸ್ಥಿತ್ಯಂತರಗಳನ್ನು ಕಾಣುವಂತೆ ಮಾಡುತ್ತವೆ.
ನೀರ ಮೇಲೆ ರೂಪುಗೊಳ್ಳುವ ವಿವಿಧ ಗಾತ್ರದ ಗುಳ್ಳೆಗಳು ಜೊತೆ ಜೊತೆಯಾಗಿ ಸಾಗಿದಂತೆ ಕಂಡು ಬಂದರೂ ಅನೇಕತೆಯಿಂದ ಏಕತೆ ಎಂಬಂತೆ ಹಲವಾರು ಗುಳ್ಳೆಗಳು ಒಡೆದು ಮಾಯವಾಗಿ ಬಿಡುವುದೇ ವಿಸ್ಮಯ ಎನಿಸಬಹುದು. ಆದರೂ ಅದೇ ವಾಸ್ತವ. ಯಾವುದೋ ಒಂದು ಹಂತದಲ್ಲಿ ನಮ್ಮ ಬದುಕಿನ ಗುಳ್ಳೆಯೂ ಚೂರಾಗಿ ನೀರಿನಲ್ಲಿ ಲೀನವಾದಂತೆ ಕಾಣದಾಗುತ್ತದೆ.
ಬದುಕು ಕೊನೆಯಾಗುವ ಮುನ್ನ ನಮ್ಮ ಒಡನಾಟ, ಬಾಂಧವ್ಯ ಸಾಧನೆಗಳು ಜನರ ಮನಸಿನಲ್ಲಿ ದಾಖಲಾಗಿ ಸಮಾಜಕ್ಕೆ ಒಳಿತೆಸಿದ್ದರೆ ನಮ್ಮ ಭೌತಿಕ ಬದುಕು ಮಾಯವಾದರೂ ಇನ್ನೊಂದು ಬದಿಯ ಸಾಧನೆಗಳು ಉಳಿದೇ ಇರುತ್ತವೆ. ಆಗಾಗ ಕೆಲವರ ನೆನಪಿನ ಕೋಶದಿಂದ ಹೊರಪ್ರಪಂಚಕ್ಕೆ ರವಾನೆಯೂ ಆಗುತ್ತವೆ. ಇದೇ ಜೀವಿತದ ಸಂಕ್ಷೇಪೀಕರಣ.
- ಟೀಕಾ. ಸುರೇಶ ಗುಪ್ತ
