ಮನಸ್ಸಿನ ಪಿಸುಮಾತು – (ಭಾಗ-೧೩)

ಪ್ರತಿಯೊಬ್ಬರ ಜೀವನದಲ್ಲಿಯೂ ಕಷ್ಟ ಅಂತ ಬಂದಾಗ ಆ ದೈವ ನಿರ್ಣಯದಂತೆ ಯಾರೋ ಒಬ್ಬರು, ಯಾವುದೋ ಒಂದು ರೀತಿಯಲ್ಲಿ ತಮ್ಮ ಕೈಲಾದಷ್ಟು ಸಹಾಯ, ಸಹಕಾರ ನೀಡುತ್ತಾರೆ ಅಂತ ಭರವಸೆ ಇಟ್ಟು ಸಾಗುವುದು ಪ್ರತಿಯೊಬ್ಬರ ಜೀವನದಲ್ಲಿ ಸರ್ವೇ ಸಾಮಾನ್ಯವಾಗಿರುವ ಅನಿಸಿಕೆ. ಚಂದನ್ ಅವರ ಮನಸ್ಸಿನ ಪಿಸುಮಾತಿನ ಮುಂದಿನ ಸಂಚಿಕೆಯನ್ನು ತಪ್ಪದೆ ಮುಂದೆ ಓದಿ…

ಎಲ್ಲವೂ ಒಳ್ಳೆಯದೇ ಆಗುತ್ತೆ, ತಾಳ್ಮೆಯಿಂದ ಇರಬೇಕು. ಸಮಯ ಕೂಡಿಬಂದಾಗ ಸಮಸ್ಯೆಗಳು ತಾವಾಗಿಯೇ ಪರಿಹಾರ ಕಂಡುಕೊಳ್ಳುವಂತಾಗುತ್ತವೆ ಅಂತಲೂ ಕೆಲವರ ಅನಿಸಿಕೆ. ಅಂತಹ ಭರವಸೆಯಿಂದ ಜೀವನ ಸಾಗಿಸುವವರು ಸಾಕಷ್ಟು ಜನ ನಮ್ಮ ಜೊತೆಯಲ್ಲಿಯೇ ಇರುತ್ತಾರೆ.

ಕಷ್ಟ ಬಂದಾಗ ಕಾಪಾಡೋಕೆ ಅಥವಾ ಸಹಾಯ ಮಾಡೋಕೆ ಎಲ್ಲರ ಜೀವನದಲ್ಲಿಯೂ ಯಾರೋ ಒಬ್ಬರು ಇರುತ್ತಾರೆ ಅಂತಲೂ ಹೇಳಲಿಕ್ಕಾಗದು. ಯಾಕಂದರೆ ಹಣೆಬರಹ ಅಥವಾ ವಿಧಿಲಿಖಿತ ಹೇಗೆ ಬರೆದಿರುತ್ತದೆಯೋ ಹಾಗೆಯೇ ನಮ್ಮ ಜೀವನ ಸಾಗುತ್ತಿರುತ್ತೆ. ಇಲ್ಲಿ ಜನನ ಹಾಗು ಮರಣದ ಮಧ್ಯೆ ಸಂಘರ್ಷ ಅಥವಾ ಹೋರಾಟ ಅನ್ನೋದು ನಾವು ಅಂದುಕೊಂಡಂತೆಯೇ ಅಥವಾ ನಾವು ಹಣೆದ ಕಾರ್ಯತಂತ್ರದಂತೆಯೇ ಸಾಗುತ್ತೆ ಅಂತ ಯಾವುದೇ ಖಚಿತತೆ ಇಡಲು ಸಾಧ್ಯವೇ ಇರಲ್ಲ.

ಕಷ್ಟ ಅಂತ ಬಂದಾಗ ನಮಗೆ ಸಹಾಯ ಮಾಡೋಕೆ ಜನರು ನಾ ಮುಂದು ತಾ ಮುಂದು ಅಂತ ಬರಬಹುದು ಅಥವಾ ನಮಗೆ ಕಷ್ಟವಿದೆ ಸಹಾಯ ಮಾಡಿ ಅಂತ ಕಾಡಿ – ಬೇಡಿ ಎಲ್ಲೋ ಒಂದುಕಡೆ ಸಹಾಯ ಯಾಚಿಸಿ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಅದು ಅವರವರ ನಿರ್ಣಯ ನಿರ್ಧಾರಗಳು. ಇದು ಯಾರ ಜೀವನದಲ್ಲಿಯೂ ಪರಿಣಾಮ ಬೀರದು.

ಅದೇ ನಮ್ಮನ್ನು ಅರಿತು, ನಮ್ಮ ಭಾವನೆಗಳೊಂದಿಗೆ ಬೆರೆತು, ಸದಾ ನಮ್ಮ ಮನಸ್ಸಿನ ಭಾವನೆಗಳನ್ನು ಗೌರವಿಸಿ, ಕಷ್ಟ – ನಷ್ಟ, ನೋವು – ನಲಿವುಗಳಲ್ಲಿ ಪಾಲುದಾರರಾಗಿದ್ದು, ಎಂತಹ ಪರಿಸ್ಥಿತಿಗಳು ನಮಗೆ ಎದುರಾದರೂ ನಮ್ಮನ್ನು ಎಂದಿಗೂ, ಯಾರ ಮುಂದೆಯೂ ಬಿಟ್ಟುಕೊಡದೆ, ನಮ್ಮ ಜೀವನದಲ್ಲಿ ನಗುವನ್ನು ತುಂಬುವ, ನಮ್ಮಲ್ಲಿ ಸದಾ ಧೈರ್ಯವನ್ನು ತುಂಬುವ ಕೆಲಸ ಮಾಡುವ ಒಬ್ಬರು ನಮ್ಮ ಜೀವನದಲ್ಲಿ ಇದ್ದರೆ ಅದು ಅದೃಷ್ಟವೇ ಸರಿ.

ಕಷ್ಟವೇ ಬಾರದ ಹಾಗೆ ಒಂದು ವೇಳೆ ಬಂದರೆ ನಮ್ಮನ್ನು ಮುನ್ನಡೆಸುವ ವ್ಯಕ್ತಿ ಅಂತ ಪ್ರತಿಯೊಬ್ಬರ ಜೀವನದಲ್ಲಿ ಯಾರೋ ಒಬ್ಬರು ಇರಬೇಕು. ನಿಸ್ವಾರ್ಥ ಗುಣದ ವ್ಯಕ್ತಿತ್ವದಿಂದ, ಹೃದಯಪೂರ್ವಕವಾಗಿ ಸದಾ ನಮ್ಮ ಶ್ರೇಯೋಭಿಲಾಷಿಯಾಗಿದ್ದು, ನಮಗೆ ನೋವಾದಾಗ ತಾನೂ ಆ ನೋವನ್ನು ಅನುಭವಿಸಿ, ನಮಗೆ ಕಷ್ಟ ಅಂತ ಬಂದಾಗ ತಾನೂ ಆ ಕಷ್ಟದಲ್ಲಿ ಇರುವಂತೆ ಭಾವಿಸಿ ನಮ್ಮೊಂದಿಗೆ ನಿಲ್ಲುವವರು ನಮ್ಮ ಜೀವನದಲ್ಲಿ ಇರಬೇಕಾದವರು.

ಅಂತಹ ವ್ಯಕ್ತಿ ನಮ್ಮ ಜೀವನಕ್ಕೆ ಹಾಗು ನಮ್ಮ ಬದುಕಿಗೆ ಒಂದು ಶಕ್ತಿಯಂತೆ, ಅಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಇದ್ದರೆ ಒಂದು ಇಡೀ ಸೈನ್ಯವೇ ನಮ್ಮೊಂದಿಗೆ ಇದ್ದಂತೆ. ಅಂತಹವರು ನಮ್ಮ ಜೀವನದಲ್ಲಿ ಇದ್ದರೆ ಈ ಪ್ರಪಂಚವೇ ನಮಗೆದುರಾಗಿ ನಿಂತರೂ ನಾವು ಎದುರಿಸಬಲ್ಲೆವು. ಎಂತಹ ಕಷ್ಟ, ನಷ್ಟ, ಸೋಲು, ಅವಮಾನಗಳು ಎದುರಾದರೂ ನಮ್ಮನ್ನು ಕುಗ್ಗಿಸಲಾರದಷ್ಟು ಮಾನಸಿಕವಾಗಿ ನಮ್ಮನ್ನು ನಾವು ದೃಢಪಡಿಸಿಕೊಳ್ಳಬಹುದು.

ಆದರೆ, ದುರಾದೃಷ್ಟವೇನೆಂದರೆ, ಅಂತಹ ವ್ಯಕ್ತಿ ಎಲ್ಲರ ಜೀವನದಲ್ಲಿ ಸಿಗಲ್ಲ. ಅಂತಹ ವ್ಯಕ್ತಿಯನ್ನು ಪಡೆಯುವ ಅದೃಷ್ಟ ಎಲ್ಲರಿಗೂ ಸಿಗಲ್ಲ. ಅವಕಾಶ ಇದ್ದರೂ ಅಂತಹ ವ್ಯಕ್ತಿಗಳಾಗಲು ಯಾರೂ ಬಯಸಲ್ಲ. ಯಾಕೆಂದರೆ, ಮನುಷ್ಯನ ಸ್ವಭಾವವೇ ಅಷ್ಟು ತನಗೆ ಏನು ಬೇಕೋ ಅದನ್ನು ಪಡೆಯಬಲ್ಲ ಆದರೆ ತಾನು ಮಾತ್ರ ತನ್ನಿಂದ ನೀಡಲು ಸಾಧ್ಯವಿದ್ದರೂ ಸಹ ನೀಡಲಾರ. ಈ ಸ್ವಾರ್ಥದ ವ್ಯಕ್ತಿತ್ವದಿಂದಲೇ ಇಂದು ಮಾನವೀಯತೆಯ ಗುಣ ಕಡಿಮೆಯಾಗುತ್ತಾ, ಪ್ರೀತಿ – ವಿಶ್ವಾಸಗಳು ಇಲ್ಲದಂತಾಗಿ, ಅವುಗಳ ಬದಲಾಗಿ ಮನುಷ್ಯ ಬರೀ ಲಾಭ – ನಷ್ಟಗಳ ಲೆಕ್ಕಾಚಾರದಲ್ಲಿಯೇ ಪ್ರತಿಯೊಬ್ಬರ ಜೊತೆ ವ್ಯವಹಾರ ಮಾಡುವಷ್ಟು ಬದಲಾಗಿ ಹೋಗಿದೆ….

ಹಿಂದಿನ ಸಂಚಿಕೆಗಳು :


  • ಚಂದನ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading