ನಿಸರ್ಗದ ‘ಪಥ್ಯೆ’ಯಲ್ಲಿ ಸುಳಿದಾಡಿದ ‘ಕಾವ್ಯ ದರ್ಶಿನಿ’

ಮಂಡ್ಯ ಜಿಲ್ಲೆಯಲ್ಲಿನ ಉಪನ್ಯಾಸಕಿ, ಕವಯಿತ್ರಿ ‘ನಂದಾದೀಪ’ ಅವರು ಪ್ರಥಮವಾಗಿ ‘ಸ್ಕೆಚ್’ ಎಂಬ ಕಾದಂಬರಿ ಮುಖೇನ ಸಾಹಿತ್ಯ ರಂಗವನ್ನು ಪ್ರವೇಶಿಸಿ, ಇದೀಗ ಅವರ ಚೊಚ್ಚಲ ಕವನ ಸಂಕಲನ ‘ಕಾವ್ಯ ದರ್ಶಿನಿ’ ಕೃತಿ ಹೊರತಂದಿದ್ದಾರೆ, ಅವರ ‘ಕಾವ್ಯ ದರ್ಶಿನಿ’ ಕೃತಿಯ ಕುರಿತು ವಾಯ್.ಎಂ.ಕೋಲಕಾರ  ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕವನ ಸಂಕಲನ : ಕಾವ್ಯ ದರ್ಶಿನ
ಲೇಖಕರು : ನಂದಾದೀಪ.
ಪ್ರಕಾಶನ : ಶ್ರೀ ಗೌರಿ ರಾಯಚೂರ.
ಮುಖಪುಟ ವಿನ್ಯಾಸ : ರಶ್ಮಿ ಪ್ರಶಾಂತ.
ರೇಖಾಚಿತ್ರ : ಆದರ್ಶ ಕೆ.ಎನ್.
ಪುಟಗಳು : 70. ಬೆಲೆ : 100.
ಪುಸ್ತಕ ಬೇಕಿದ್ದಲ್ಲಿ ಸಂಪರ್ಕ : 9972767961.

ಕನ್ನಡ ಸಾರಸ್ವತ ಲೋಕ ಇತ್ತೀಚಗೆ ಸಿರಿ ಸಂಪನ್ನವಾದಂತೆ ಗೋಚರಿಸುತ್ತಿದೆ. ಹಾಗಂತ ಮಿನುಗುವ ನಕ್ಷತ್ರಗಳಿಗೇನು ಕೊರತೆ ಇಲ್ಲ ಬಿಡಿ, ಕನ್ನಡಮ್ಮನ ಸೇವೆ ಮಾಡುವ ಸದಾಶಯದಿಂದ ಮತ್ತು ಸಾಹಿತ್ಯ ಕೃಷಿ ಮಾಡುವಲ್ಲಿ ಬಹುಪಾಲು ಸಾಂಘಿಕ, ಅಸಂಖ್ಯಾತವಾಗಿ ತೆರೆಮೆರೆಯಲ್ಲಿ ವಿಭಿನ್ನವಾಗಿ ಬರೆಯುವ ಬರಹಗಾರರ ದಂಡೆ ಈ ಲೋಕಕ್ಕೆ ಲಗ್ಗೆಯಿಡುವಂತೆ ಅಪಾರ ಸಂಖ್ಯೆಯ ಯುವಕ, ಯುವತಿಯರು ಪಯಣಿಸುತ್ತಿದ್ದಾರೆ.

ಇಂತಹ ಗಟ್ಟಿ ಸಾಹಿತ್ಯ ಕೃಷಿ ಮಾಡುವ ತುಡಿತದಲ್ಲಿ ಹೊರಟಿರುವ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿನ ಉಪನ್ಯಾಸಕಿ, ಕವಯಿತ್ರಿ ‘ನಂದಾದೀಪ’ ಅವರು ಓರ್ವರು. ಪ್ರಥಮವಾಗಿ ‘ಸ್ಕೆಚ್’ ಎಂಬ ಕಾದಂಬರಿ ಮುಖೇನ ಸಾಹಿತ್ಯ ರಂಗವನ್ನು ಪ್ರವೇಶಿಸಿ, ಓದುಗ ಬಳಗವನ್ನ ತಮ್ಮತ್ತ ಸೆಳೆಯುವಲ್ಲಿ ಮತ್ತು ಇದೀಗ ಅವರ ಚೊಚ್ಚಲ ಕವನ ಸಂಕಲನ ‘ಕಾವ್ಯ ದರ್ಶಿನಿ’ ಕೃತಿ ಹೊರ ಬಂದಿರುವದು ಸಾಹಿತ್ಯಾಸಕ್ತರಿಗೆ ಸಂಭ್ರಮದ ವಿಚಾರ. ಇವರು ವೃತ್ತಿಯಲ್ಲಿ ಉಪನ್ಯಾಸಕಿಯಾದರೂ ಸಹ ಪ್ರವೃತ್ತಿಯಲ್ಲಿ ಬರಹದ ಹವ್ಯಾಸವನ್ನು ಕಂಡುಕೊಂಡಿದ್ದಾರೆ. ನಿಸರ್ಗದ ಕತ್ತಲಲ್ಲಿ ಕೆಲವರಿಗೆ ಬೆಳಕಿದೆ ಎಂಬ ಊಹೆಯಲ್ಲಿ ತೇಲುತ್ತಿದ್ದರೆ, ಇನ್ನೂ ಹಲವರು ಕವಿದ ಕತ್ತಲಲ್ಲೇ ಸಂಬೆಳಕಿದೆ ಎನ್ನುವುದನ್ನು ಕಾಲ್ಪನಿಕದ ಜೊತೆಜೊತೆಗೆ ಬಹುತೇಕ ಕೆಲವು ವಾಸ್ತವದ ಹಾದಿಗೆ ಹತ್ತಿರದಂತೆ ಬರಹದ ಛಾಪಿನ ಮೂಲಕ ಓದುಗರನ್ನು ಗ್ರಹಿಸುತ್ತಿರುತ್ತಾರೆ. ಇಂತಹ ಕಾವ್ಯದೊನಲನ್ನು ಉಣಬಡಿಸುವ ನಿಟ್ಟಿನಲ್ಲಿ ಈ ಕಾವ್ಯ ದರ್ಶಿನಿ ಕವನ ಸಂಕಲನ ಓದುಗರನ್ನು ಹಿಡಿದಿಟ್ಟಿದೆ ಎಂದು ವ್ಯಾಖ್ಯಾನಿಸಬಹುದು.ಏಕೆಂದರೆ..? ನಾನು ಓದಿದಂತೆ ಕಾವ್ಯ ಕನ್ನಿಕೆಯ ಘಮ, ಸುಮ ಎಲ್ಲಡೆಯೂ ಪಸರಿಸಿದೆ. ಇಂದಿನ ಒಂದಕ್ಕೊಂದು ಸಂಬಂಧದ ಕೊಂಡಿಗಳು ಕೇವಲ ವ್ಯಾಪರೀಕರಣದ ಧಾವಂತದ ಲಾಭದಾಯಕಕ್ಕೆ ಸೀಮಿತವಾಗುತ್ತಿರುವದೇನು ಗುಟ್ಟಾಗಿ ಉಳಿದಿಲ್ಲ ಎಂಬುದನ್ನು ಕವಯಿತ್ರಿ ‘ನಂದಾದೀಪ’ ಅವರು ಮಾರ್ಮಿಕ ಚಾಟಿಯಲ್ಲಿ ಬಾರಿಸಿದ್ದಾರೆ. ಹಾಗಂತಹ ಕವಿ ಆದವರು ಅವುಗಳನ್ನು ಹೆಕ್ಕಿ ತಗೆಯದೇ ವಿಷಯ, ವಸ್ತುಗಳನ್ನು ಸುಖಸುಮ್ಮನೇ ಬಿಟ್ಟಿಲ್ಲ, ಆದರೂ ಅರ್ಥವನ್ನು ಕಾಲ್ಪನಿಕ ದಿಕ್ಕಿನಡೆ ಹೋಗುತ್ತಿರುವದು ಮಾತ್ರ ನಿಂತಿಲ್ಲ. ಪ್ರಾಯಶಃ ಈ “ಕಾವ್ಯ ದರ್ಶಿನಿ” ಅಲ್ಲಿ ಬರುವ ಅನೇಕ ಶೀರ್ಷಿಕೆಗಳು ಮತ್ತು ಉಡಿತುಂಬಿದಂತಹ ಸಾಲುಗಳು ಓದುಗರಿಗೆ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿವೆ.

ಸಮಾಜದಲ್ಲಿ ನಡೆಯುವ ಮತ್ತು ನಡೆಯುತ್ತಿರುವ ನಗ್ನ ಸತ್ಯಗಳನ್ನು ಕವನಗಳ ಮೂಲಕ ಕೆಣಕಿ ಬರೆದಿರುವದು ಸಹ ಓದುಗರನ್ನು ಚಿಂತೆಗೆ ಹಚ್ಚಿವೆ. ಹೆಣ್ಣಿನ ಆಶಾಭಾವಗಳು, ಸಂವೇದನಾಶೀಲತೆ, ವೇದನೆಯ ವಿಶಿಷ್ಟ ಪ್ರಕಾರಗಳು, ಬದಲಾವಣೆ ಸಾಧಕಗಳು, ಕನಸುಗಳ ಗೋಪುರದಂತಹ ಬಹು ಎತ್ತರದ ಬಾಧೆಗಳು, ಮಾನವಿಯತೆ ಮರೀಚಿಕೆಯಾದ ಪ್ರಸಂಗಗಳು, ಚುಚ್ಯ ಮಾತಿನ ಶೈಲಿಗಳ ಅನಾವರಣ, ಹೊಸತನದಂತಹ ನವಚೇತನ, ತಂದೆ, ತಾಯಿ, ಗುರು, ಆವಿಷ್ಕಾರಗಳ ಚಿತ್ತಾರ, ಹೃದಯ ಸ್ಪರ್ಶಿಯ ಏಕಾಂತಗಳು, ಒಂದೇ ಎರಡೆ..! ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ತಕಾಲಕ್ಕೂ ಇರುವ ವ್ಯತ್ಯಾಸಗಳಲ್ಲಿನ ಭಾವನಾತ್ಮಕ ಬಂಧನಗಳ ಸಾರಗಳು ಸವಿಯಾಗಿದೆ.

ಒಮ್ಮೆ ಓದಿದರೆ ಮಗದೊಮ್ಮೆ ಓದಬೇಕು ಎಂಬ ಸ್ವಂತಿಕೆಯ ಕುತೂಹಲ ಮೂಡುವುದಂತೂ ಸತ್ಯ. ನಾನು ಇಲ್ಲಿ ಶೀರ್ಷಿಕೆಯಲ್ಲಿನ ಸಾಲುಗಳನ್ನು ಪರಿಚಯಿಸಲಿಕ್ಕೆ ಹೋಗುವುದಿಲ್ಲ. ಕಾರಣವೇನಂದರೆ..? ಒಂದನ್ನು ಪರಿಚಯಿಸಿದರೆ ಇನ್ನೊಂದು ಶೀರ್ಷಿಯಲ್ಲಿನ ಸಾಲುಗಳು ಬಹುತೇಕ ನನ್ನನ್ನು ಬೈಗುಳದಲ್ಲಿ ಮಜ್ಜನನ್ನಾಗಿ ಮಾಡುತ್ತವೆ ಎಂಬ ಭಯದಿಂದ ಸಂಕ್ಷಿಪ್ತವಾಗಿ ಹೇಳಿದ್ದೇನೆ. ಓದುಗರಾದ ನಾವುಗಳು ಕಂಡು ಓದುವುದಕ್ಕಿಂತ ಕೊಂಡುವುದು ಸಹ ಪ್ರತಿಯೊರ್ವ ಓದುಗನ ಆದ್ಯ ಕರ್ತವ್ಯ. ಅದರಂತೇ ನಾವು ಕೂಡ ಇಂತಹ ಕೃತಿಗಳನ್ನು ಬೆನ್ನಟ್ಟಿ ಓದಿದಾಗ ಮನಸ್ಸಿಗೆ ಮುದವೆನಿಸುವುದು. ಕವಯಿತ್ರಿ ನಂದಾದೀಪ ಅವರು ಮಾಗುತ್ತಿರುವ ಬರಹಗಾರ್ತಿ ಎಂಬ ಅಭಿಮತ ನನ್ನದಾಗಿದೆ. ಈ ಕೃತಿಯ ರುಚಿಕಟ್ಟಿನ ವ್ಯಾಖ್ಯಾನಗಳು ನನ್ನನ್ನಂತು ನಿದ್ದೆಗೆಡಿಸಿವೆ. ತಾವು ಸಹ ಇಂತರ ಕವಯಿತ್ರಿಯನ್ನು ಬೆನ್ನುತಟ್ಟಿ ಬೆಳೆಸುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರದ್ದಾಗಿದೆ. ಕನ್ನಡ ಸಾರಸ್ವತ ಲೋಕದಲ್ಲಿ ಈ ಕೃತಿ ಸದ್ಧು ಮಾಡಲಿ, ಯಶದತ್ತ ಸಾಗಲಿ, ಇವರಿಂದ ಇನ್ನು ಹತ್ತು ಹಲವು ಕೃತಿಗಳು ಜನಿಸಿ ಬರಲಿ ಎಂಬ ಮನದ ಹಾರೈಕೆಯು ನನ್ನದಾಗಿದೆ.


  • ವಾಯ್.ಎಂ.ಕೋಲಕಾರ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading