ಮನಸ್ಸಿನ ಪಿಸುಮಾತು – (ಭಾಗ-೧)

ಕನ್ನಡಿಯಂತೆ ಬದುಕು ನಮ್ಮದು. ಎಷ್ಟೇ ಮನಸ್ಸಿಗೆ ನೋವಾದರೂ, ಎಷ್ಟೇ ದುಃಖ ಎದುರಾದರೂ, ಎಷ್ಟೇ ಬೇಡವೆಂದುಕೊಂಡು ಯಾರಿಗೂ ತಿಳಿಯದಂತೆ ಎಲ್ಲರಲ್ಲಿ ಒಂದಾಗಿ ಎಲ್ಲರಂತೆ ಬದುಕಬೇಕೆಂದು ಬದುಕಲು ಪ್ರಯತ್ನಿಸುತ್ತೇವೆ. ಚಂದನ್ ಅವರ ‘ಮನಸ್ಸಿನ ಪಿಸುಮಾತು’ ಸರಣಿ ಇಂದಿನಿಂದ ಆರಂಭ, ತಪ್ಪದೆ ಮುಂದೆ ಓದಿ…

ಆದರೆ, ಕನ್ನಡಿ ಎಷ್ಟೇ ಚೂರುಗಳಾಗಿ ಒಡೆದು ಹೋದರೂ ತನ್ನಲ್ಲಿನ ಪ್ರತಿಬಿಂಬವನ್ನು ತೋರಿಸುವ ಹಾಗೆ ನಮ್ಮ ಬದುಕು ಸಹ ಈ ಪ್ರಪಂಚದ ಎದುರು ಎಷ್ಟೇ ಮುಚ್ಚಿಟ್ಟುಕೊಂಡು ಹೋರಾಡಲು ಪ್ರಯತ್ನಿಸಿದರೂ ಸಹ ಅದು ಎಲ್ಲೋ ಒಂದು ಕಡೆ ಪ್ರತಿಬಿಂಬದಂತೆ ಈ ಪ್ರಪಂಚದ ಎದುರು ಕಾಣಿಸಿಯೇ ಬಿಡುತ್ತದೆ.

ನಮ್ಮ ಜೀವನದಲ್ಲಿನ ಕೆಲವೊಂದು ಸಹಜ ಬದಲಾವಣೆಗಳೇ ನಮ್ಮ ಶತ್ರುಗಳು. ಯಾಕೆಂದರೆ ನಾವು ಎಷ್ಟೇ ಗೌಪ್ಯವಾಗಿ ಯಾರಿಗೂ ತಿಳಿಯದ ಹಾಗೆ ಮರೆಮಾಚಿ ನಟಿಸಿದರೂ ಸಹ ನಮ್ಮ ಕಣ್ಣಲ್ಲಿ ಜಿನುಗುವ ಕಣ್ಣೀರನ್ನು ಮರೆಮಾಚಬಹುದು ಆದರೆ ಕಣ್ಣೀರಿಗೆ ಕಾರಣವನ್ನು ನಮ್ಮ ಕಳೆಯಿಲ್ಲದ ನಿಸ್ತೇಜ ಕಣ್ಣುಗಳೇ ವ್ಯಕ್ತಪಡಿಸಿಬಿಡುತ್ತದೆ. ಮನಸ್ಸಿನಲ್ಲಿರುವ ದುಃಖವನ್ನು ನಮ್ಮ ಆಸಕ್ತಿಯಿಲ್ಲದ ನಡೆಯಿಂದ ಹಾಗು ನಾವಾಡುವ ನಿರಾಸಕ್ತಿಯುತ ಮಾತುಗಳು ವ್ಯಕ್ತಪಡಿಸಿಬಿಡುತ್ತದೆ.

ಫೋಟೋ ಕೃಪೆ :google

ಈ ಮನಸ್ಥಿತಿಯಲ್ಲಿನ ಬದುಕೇ ನೀರಸವಾಗಿ ಬಿಡುತ್ತೆ. ಯಾವುದರ ಬಗ್ಗೆಯೂ ಆಸಕ್ತಿ ಇಲ್ಲದ ಕೇವಲ ಮೌನ ಹಾಗು ಏಕಾಂತತೆಯನ್ನು ಬಯಸಿ, ಆ ಏಕಾಂತತೆಯಲ್ಲಿ ಒಂಟಿಯಾಗಿದ್ದು ಗತಕಾಲದ ನೆನಪುಗಳ ಮೆಲಕು ಹಾಕುತ್ತಾ ಸುರಿವ ಕಣ್ಣೀರಿನ ಬೆಲೆ ಎಲ್ಲರಿಗೂ ಅರ್ಥವಾಗಲ್ಲ. ನೊಂದ ಮನಸ್ಸಿನ ಒಡೆದು ಹೋದ ಮನಸ್ಸಿನ ಕನ್ನಡಿಯ ಒಂದೊಂದು ಚೂರುಗಳೂ ಗತಕಾಲದ ಮರೆಯಲಾಗದ ನೆನಪುಗಳ ಪ್ರತಿಬಿಂಬವನ್ನು ತನ್ನಲ್ಲಿ ಬಿಂಬಿಸಿ ತೋರಿಸುವ ಹಾಗೆ ನೆನಪುಗಳು ಸದಾ ಕಾಡುತ್ತಲೇ ಕಣ್ಣೀರಿಡಿಸುತ್ತದೆ.

ಹಣೆ ಬರಹದಲ್ಲಿ ಬರೆದ ವಿಧಿಯಾಟವೇನ್ನಬೇಕೋ, ನತದೃಷ್ಟ ಜನ್ಮವೆಂದುಕೊಳ್ಳಬೇಕೋ, ತಿಳಿಯದೆ ಸದಾ ಗೊಂದಲದಲ್ಲೇ ಬದುಕು ಸಾಗಿಸಬೇಕು. ಯಾಕೆಂದರೆ ಈ ಪ್ರಪಂಚ ಅಂತಹವರನ್ನು ನೋಡುವ ದೃಷ್ಟಿಕೋನ ವಿಭಿನ್ನ. ಅಂತಹವರ ಕುರಿತು ಆಲೋಚಿಸುವ ರೀತಿಯೂ ವಿಭಿನ್ನ. ನಮ್ಮ ಮನಸ್ಥಿತಿ ಇನ್ನೊಬ್ಬರಿಗೆ ಅರ್ಥವಾಗಲ್ಲ. ಅವರ ಮನಸ್ಸಿನಲ್ಲಿನ ಆಲೋಚನೆಯ ಅರ್ಥ ನಮಗೆ ಅರ್ಥವಾಗಲ್ಲ. ಒಂದುವೇಳೆ ಅರ್ಥವಾದರೂ ಅದಕ್ಕೆ ಒಪ್ಪಿಕೊಂಡು ಹೊಂದಿಕೊಳ್ಳೋದು ಸುಲಭವಲ್ಲ.

ಈ ಪ್ರಪಂಚ ಇನ್ನೊಬ್ಬರ ಪರಿಸ್ಥಿತಿ ಹಾಗು ಅವರ ಮನಸ್ಥಿತಿಯನ್ನು ಅವರ ಆಲೋಚನೆ ಹಾಗು ಪರಿಸ್ಥಿತಿಗಳ ಆಧಾರದ ಮೇಲೆ ನಿರ್ಧರಿಸಲ್ಲ. ಬರೀ ಮಾರ್ಗದರ್ಶನ ಹಾಗು ಹಿತೋಪದೇಶ ಮಾಡಲು ಹಾಗು ತಮಗೆ ತಾವೇ ಎಲ್ಲವನ್ನೂ ತಿಳಿದಿರುವ ಸರ್ವಜ್ಞರಂತೆ ಭವಿಸಿರುತ್ತೆ. ಸಮಸ್ಯೆ ಹಾಗು ಪರಿಸ್ಥಿತಿಗಳು ಒಬ್ಬರಿಗೆ ಇದ್ದಂತೆ ಇನ್ನೊಬ್ಬರಿಗೆ ಇರಲ್ಲ ಅನ್ನುವ ಆಲೋಚನೆ ಯಾರಿಗೂ ಬರಲ್ಲ.

ಸಮಸ್ಯೆ ಹಾಗು ಪರಿಸ್ಥಿತಿಗಳು ಎಷ್ಟೇ ಘೋರವಾಗಿ ಇದ್ದರೂ ಬದಲಾಸಿಕೊಳ್ಳಬಹುದು. ನಮ್ಮ ಆಲೋಚನೆಗಳು ಜೀವನವನ್ನು ಬದಲಾಯಿಸುತ್ತವೆ ಅಂತಾರೆ ಆದರೆ ಕೇವಲ ಆಲೋಚನೆಗಳು ಬದಲಾದ ಮಾತ್ರಕ್ಕೆ ಬದುಕು ಬದಲಾಗಲ್ಲ. ಆಲೋಚನೆಗಳ ಜೊತೆಗೆ ಅವಕಾಶಗಳು ಎದುರಾಗಬೇಕು. ಆ ಅವಕಾಶಗಳ ಬಾಗಿಲು ತೆರೆದಾಗ ಮಾತ್ರವೇ ಬದುಕು ಬದಲಾಗಲು ಸಾಧ್ಯ. ಅಂತಹ ಅವಕಾಶಗಳು ಎಲ್ಲರ ಜೀವನದಲ್ಲಿಯೂ ಸಿಗುತ್ತೆ ಅನ್ನುವ ಭರವಸೆ ಹುಟ್ಟುವ ತನಕ ಯಾರ ಬದುಕಿನಲ್ಲಿಯೂ ಬದಲಾವಣೆ ಕಾಣಲು ಸಾಧ್ಯವಿಲ್ಲ…


  • ಚಂದನ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW