ಈಗೀಗ್ ನಾನೂ ನಾಕ್ ಅಕ್ಸರ ಕಲೀತೀವ್ನಿ…ನಾ ಓದಾಕ್ ಬರ್ಯಾಕ ಕಲ್ತಿದ್ ನೋಡಿ ನನ್ಗಂಡ ಆಗ್ಯಾನ ಬೆಪ್ಪ…ರೂಪಶ್ರೀ ಎಂ ಅವರ ಲೇಖನಿಯಲ್ಲಿ ಹಳ್ಳಿಸೊಗಡಿನಲ್ಲಿ ಮೂಡಿಬಂದ ಒಂದು ಕವಿತೆಯನ್ನು ತಪ್ಪದೆ ಮುಂದೆ ಓದಿ…
ಗ್ವಾಡಿ ಮ್ಯಾಲ ಏನೋ ಬರ್ದಾರ
ನನಗ ಓದಾಕ್ ಬರಾವಲ್ದ
ಸಣ್ಣಾಕಿ ಇದ್ದಾಗ್ ಕಲಿಯೋವಾಸೆ ನಂಗೂ ಇತ್ತ
ದ್ಯಾವರ್ಕೊಟ್ಟ ಬಡ್ತನಾನೂ ನನ್ ಕೂಡೇ ಬಂದಿತ್ತ…
ನನ್ಕೂಸ್ ನನ್ನಂಗ್ ಆಗಾದ್ ಬ್ಯಾಡಾ
ಚಲೋತಂಗ್ ಕಲೀಲಿ ಅಂತ
ಪ್ಯಾಟಿ ಸಾಲಿಗ್ ಸೇರ್ಸೀನಿ, ಸಂಗ್ದಾಗ್
ಸಾಲಾ ತಗ್ದೂ ತಗ್ದೂ ಸಾಲಿ ರೊಕ್ಕ ಕಟ್ಟೀನಿ
ಭಾಳ ಛಂದ್ ಓದ್ತಾ ಇದ್ಲು ಮಗ್ಳು
ಚಲೋ ಅಂಕ ತಗ್ದಿದ್ಲು
ಈ ಅವ್ವನ್ ಹಿಂದ ಮುಂದ ಓಡಾಡ್ಕೊಂಡು
ಆಡ್ಕೋತಾ ಕುಣ್ಕೋತ ಪಾಟ ಪದ್ಯ ಓದ್ತಿದ್ಲು
ಅವ್ವ…ನಂಗೊಂದ್ ಪೋನ್ಬೇಕಂತ ಹಟ ಹಿಡ್ದಾಳ
ಆಕೀ ಗೆಳ್ತಿ ಅದನ್ ಬಳ್ಸಿ ಭಾಳ ಚಾಲೂ ಆಗ್ಯಾಳ
ಕೊಡ್ಸೋಣು ಏನೋ ಕೂಸ್ ಕೇಳಾಕ್ ಹತ್ತೈತಿ
ಅದಕ್ಕಿಂತ ಬ್ಯಾರೆ ಹೆಚ್ಚಿಂದೇನೈತಿ ?
ಪೋನು ತಂದಿದ್ದಿನಾ ಕೂಸು ಭಾಳ್ ಕುಸೀಲಿತ್ತ
ನಮ್ಮವ್ವ ನನ್ ದ್ಯಾವ್ತೆ ಅಂತ ಹೊಗಳಿತ್ತ
ಹೆಂಗಾರಾ ಆಗ್ಲೀ ನನ್ ಮಗಳ ಶಾಣ್ಯಾಕಿ
ಚಿಲ್ಕ ಹಾಕಂಡ್ ಕ್ವಾಣೆ ಒಳಗ್ ಓದಾಕಿ
ಆಗೊಮ್ಮೆ ಈಗೊಮ್ಮೆ ಪ್ಪೌಡರ್, ಲಿಪ್ಟಿಕ್ ಹಚ್ಛಾಕಿ
ಪರೀಕ್ಸೆ ಬಂದಾಗ್ಯಾಕೊ ಚಿಂತಿ ಮಾಡಾಕ್ ಹತ್ಯಾಳಿಕಿ
ಈಟ್ ದಿನಾ ಕುಣಿದಾಡಾಕಿ ಈಗ್ಯಾಕ್ ಮಂಕಾಗ್ಯಾಳು
ಸಾಲಿಗ್ ಹೋಗ್ ಇಚಾರಿಸ್ಕೊಂಡ್ ಬಂದ್ರೆ ನಂಗ ಅಳು
ಎಲ್ಲಾ ಆ ಪೋನಿನ್ ಕಿತಾಪತಿ ಐತಿ ಅನ್ನದ್ ಗೊತ್ತಾತು
ಸಂಗದ್ ಸಾಲ ಕಟ್ಟಾಕ್ ನಂಗೂ ರೊಕ್ಕ ಬೇಕಿತ್ತು
ನನ್ ಕೂಸಿನ ಹಾಳ್ ಮಾಡಿದ್ ಪೋನು ಮಾರ್ಬಿಟ್ನಿ
ನನ್ ಬಂಗಾರ್ದಂತ ಮಗ್ಳನ್ ಹೊಳ್ಳಿ ಪಡ್ದಾಬಿಟ್ನಿ
ಈಗೀಗ್ ನಾನೂ ನಾಕ್ ಅಕ್ಸರ ಕಲೀತೀವ್ನಿ
ಪರ್ಪಂಚದ್ ಗ್ಯಾನ ಈಟೀಟೆ ತಿಳಕೊತೀವ್ನಿ
ನಮ್ ಮ್ಯಾಲೆ ಹಿಂಗ ಕರಣೆ ತೋರು ಶಿವಪ್ಪ
ನಾ ಓದಾಕ್ ಬರ್ಯಾಕ ಕಲ್ತಿದ್ ನೋಡಿ ನನ್ಗಂಡ
ಆಗ್ಯಾನ ಬೆಪ್ಪ
- ರೂಪಶ್ರೀ ಎಂ
