ಅಪ್ಪ ತಿಂಡಿ ತಿಂದ ನಂತರ ಒಂದು ಊಟದ ನಂತರ ಒಂದು ಹೀಗೆ ದಿನದಲ್ಲಿ ಎರಡು ಮೂರು ಸಿಗರೇಟ್ ಎಳೆದು ಬಿಸಾಕುತ್ತಿದ್ದ. ಲಿಂಗಮ್ಮಜ್ಜಿಯೂ ಅಪರೂಪಕ್ಕೆ ಬೀಡಿ ಸಿಗರೇಟು ಸೇದುತ್ತಿದ್ದಳು. ಎಲೆ ಅಡಿಕೆ ಅಂತೂ ಬಾಯಿ ತುಂಬಾ ಯಾವಾಗಲೂ ಇರಬೇಕಿತ್ತು, ಮುಂದೇನಾಯಿತು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಬೀಡಿ ಲಿಂಗಮ್ಮಜ್ಜಿ’, ತಪ್ಪದೆ ಮುಂದೆ ಓದಿ …
ಆಗಿನ ಕಾಲದಲ್ಲಿ ಜಡಿ ಮಳೆ ಏನಾದರೂ ಹಿಡಿದು ಬಿಟ್ಟರೆ ಒಂದು ವಾರ ಇಲ್ಲವೇ ಹತ್ತು ದಿನಗಳಾದರೂ ಬಿಡುತ್ತಿರಲಿಲ್ಲ. ಸಣ್ಣಗೆ ರಾಗಿ ಅಸೀಟಿನಂತೆ (ಹಿಟ್ಟಿನಂತೆ) ಉದುರುತ್ತಿದ್ದ ಮಳೆ ಹನಿಗಳು ಎಲ್ಲವನ್ನು ನೆನೆಸಿ ತೊಪ್ಪೆ ಮಾಡುತ್ತಿದ್ದವು. ಜನರೇನೋ ಮನೆಯಲ್ಲಿ ಬೆಚ್ಚಗೆ ಕುಳಿತು ಬಿಸಿ ಬಿಸಿ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದರು. ಆದರೆ ಜಾನುವಾರುಗಳ ಕಥೆ ಹೇಳುವಂತಿಲ್ಲ. ಹಸು, ಕುರಿ, ಮೇಕೆಗಳನ್ನು ಮೇಯಲು ಬಯಲಿಗೆ ಕರೆದುಕೊಂಡು ಹೋಗಲೂ ಆಗುತ್ತಿರಲಿಲ್ಲ . ಒಳಗೆ ಕೊಟ್ಟಿಗೆ, ರಪ್ಪದಲ್ಲಿ ಕೂಡಿದರೆ ಅವಕ್ಕೆ ಮೇವು ಒದಗಿಸುವುದು ಬಹಳ ಕಷ್ಟ. ಮಳೆಯಲ್ಲಿ ಮೇವು (ಹುಲ್ಲು) ತರಲು ಹೋಗುವುದು ಇನ್ನೂ ಕಷ್ಟ. ಒಟ್ಟಿನಲ್ಲಿ ಅಂತಹ ಜಡಿ ಮಳೆಯ ದಿನಗಳಲ್ಲಿ ದನ, ಕರು, ಮೇಕೆ ಮುಂತಾದ ಜಾನುವಾರುಗಳನ್ನು ಸಾಕಿದ ರೈತರಿಗೆ ತುಂಬಾ ಕಷ್ಟದಾಯಕ ದಿನಗಳಾಗಿದ್ದವು.

ಇನ್ನು ಬಡವರ, ಕೂಲಿಕಾರರ ಬವಣೆಯನ್ನಂತು ಹೇಳುವಂತಿಲ್ಲ. ಹೊಲ ಗದ್ದೆಗಳಲ್ಲಿ ಕೆಲಸವಿದ್ದರೆ ಮಾತ್ರ ಅವರ ಜೀವನ ನಡೆಯುತ್ತಿತ್ತು. ಅವತ್ತಿನ ಗಾಳಿ ಅವತ್ತಿನ ಮಳೆ ಎಂಬಂತೆ ಅಂದಿನ ದುಡಿಮೆ ಅಂದಿನ ಖರ್ಚಿಗೆ ಆಗುತ್ತಿತ್ತು. ಹೀಗಿರುವಾಗ ವಾರ ಹತ್ತು ದಿನಗಳಾದರೂ ಮಳೆ ಬಿಡದಿದ್ದರೆ ಅವರ ಗತಿ ಏನಾಗಬೇಕು. ಕುಳಿತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ಎಂಬಂತೆ ಮನೆಯಲ್ಲಿದ್ದ ದಿನಸಿ ಸಾಮಗ್ರಿ ಮುಗಿದು ಹೋಗಿ ಪರಿತಪಿಸುತ್ತಿದ್ದರು.
ಹೀಗೇ ಒಮ್ಮೆ ಅಕ್ಟೋಬರ್ , ನವೆಂಬರ್ ತಿಂಗಳಿನಲ್ಲಿ ಜಡಿ ಮಳೆ ಹಿಡಿದು ಬಿಟ್ಟಿತ್ತು. ಆಗ ನೆರೆಮನೆಯ ಬೀಡಿ ಲಿಂಗಮ್ಮಜ್ಜಿಯ ಬಟ್ಟೆ ಗಂಟು, ಮರದ ಪೆಟ್ಟಿಗೆ, ಕಬ್ಬಿಣದ ಟ್ರಂಕು ಮುಂತಾದ ಸಾಮಗ್ರಿಗಳೆಲ್ಲ ನಮ್ಮ ಮನೆಯ ನಡು ಮನೆಯ ಮೂಲೆ ಸೇರುತ್ತಿದ್ದವು. ಅವರದ್ದು ಹಳೆಯ ಮಣ್ಣಿನ ಮನೆ.ಮಾಳಿಗೆಯೆಲ್ಲಾ ಸೋರುತ್ತಿತ್ತು. ಇದ್ದ ಒಂದೇ ಹಜಾರದಲ್ಲಿ ಒಂದು ಕಡೆ ಕುರಿ ಮೇಕೆಗಳಿಗೆ ರಪ್ಪ ( ಕುರಿ ಮೇಕೆಗಳನ್ನು ಕೂಡುವ ಕೊಟ್ಟಿಗೆ). ಇನ್ನೊಂದು ಕಡೆ ಅವರು ವಾಸಿಸುತ್ತಿದ್ದರು.ಇಕ್ಕಟ್ಟಾದ ಮನೆಯಲ್ಲಿ ನಾಲ್ಕೈದು ಜನರ ವಾಸ್ತವ್ಯ. ಮಳೆ ಬಂದರೆ ಅವರ ಮನೆಯೆಲ್ಲ ಬಚ್ಚಲು ಮನೆಯಂತೆ ಆಗುತ್ತಿತ್ತು. ಅದಕ್ಕೆಂದಲೇ ವಿಶಾಲವಾಗಿದ್ದ ನಮ್ಮ ಮನೆಯ ಪಡಸಾಲೆಯಲ್ಲಿ ಲಿಂಗಮ್ಮಜ್ಜಿ ತನ್ನ ಸಾಮಾನು (ವಸ್ತುಗಳು) ಗಳಿಗೆ ಜಾಗ ಕಂಡುಕೊಂಡಿದ್ದಳು. ರಾತ್ರಿ ಏಳು ಗಂಟೆಗೆಲ್ಲ ಬೇಗನೆ ಅಡುಗೆ ಮಾಡಿ ಉಂಡು ಬೆಡ್ ಶೀಟ್ ತೆಗೆದುಕೊಂಡು ಮೊಮ್ಮಕ್ಕಳೊಂದಿಗೆ ಅಜ್ಜಿ ಬಂದು ಬಿಡುತ್ತಿದ್ದಳು. ಮಗ ಸೊಸೆ ಬೇರೊಬ್ಬರ ಮನೆಯಲ್ಲಿ ಮಲಗುತ್ತಿದ್ದರು.ಆಕೆಗೆ ಗಂಡ ಇರಲಿಲ್ಲ, ತಾತನ ಬಗ್ಗೆ ಕೇಳಿದರೆ ಹಳೇ ರಾಗಿ ತರೋಕೆ ಹೋಗಿದಾನೆ ನಿಮ್ಮಜ್ಜ ಎನ್ನುತ್ತಿದ್ದಳು. ಜಡಿ ಮಳೆಯಲ್ಲಿ ರಾತ್ರಿ ಎಲ್ಲಾ ಮಳೆ ಸುರಿಯುತ್ತಿದ್ದರಿಂದ ಮಣ್ಣಿನ ಮನೆಗಳು ಯಾವಾಗ ಬೇಕಾದರೂ ಕುಸಿಯುವ ಸಂಭವ ಇರುತ್ತಿತ್ತು. ಕಣ್ಣ ಮುಂದೆ ಇದ್ದ ಅಪಾಯವನ್ನು ತಪ್ಪಿಸಿಕೊಳ್ಳಲು ಲಿಂಗಮ್ಮಜ್ಜಿ
ನಮ್ಮ ಮನೆಗೆ ಬರುತ್ತಿದ್ದಳು.

ಅಂತಹ ಚಳಿ ಚಳಿ ವಾತಾವರಣದಲ್ಲಿ ದೇಹವನ್ನು ಒಂದಿಷ್ಟು ಬೆಚ್ಚಗೆ ಮಾಡಿಕೊಳ್ಳಲು ಅಪ್ಪ ಸಿಗರೇಟ್ ಸೇದುತ್ತಿದ್ದ. ಹಾಗೆ ಸೇದುವಾಗ ಲಿಂಗಮ್ಮಜ್ಜಿಗೂ ಒಂದು ಸಿಗರೇಟ್ ಕಾಯಂ ಆಗಿ ಸಿಗುತ್ತಿತ್ತು.” ತಗೋ ಲಿಂಗಮ್ಮ ಸೇದು…. ವಾರದಿಂದ ಗೂಡ್ರಾ ಹಿಡ್ಕಂಡೈತೆ, ಯಾವಾಗ ಬಿಡ್ತೈತೋ ಏನೋ,ಚಳಿ ಜಾಸ್ತಿ ಐತೆ….. ರವಷ್ಟು ಬೆಚ್ಚಗೆ ಮಾಡ್ಕಾ ತಕ ” ಎಂದು ಅಪ್ಪ ಲಿಂಗಮ್ಮಜ್ಜಿ ಗೆ ಸಿಗರೇಟ್ ಕೊಡುತ್ತಿದ್ದ. ಯಾವಾಗಲೂ ಬೀಡಿ ಸೇದುತ್ತಿದ್ದ ಲಿಂಗಮ್ಮಜ್ಜಿಗೆ ಸಿಗರೇಟ್ ಕೊಟ್ಟರೆ ಏನೋ ಒಂಥರ ಖುಷಿ. ಕಪ್ಪಗೆ ದಪ್ಪಗೆ ದಢೂತಿ ಹೆಂಗಸಾಗಿದ್ದ ಲಿಂಗಮ್ಮಜ್ಜಿ ನೋಡಲು ತೆಲುಗು ಸಿನಿಮಾದ ಪೋಷಕ ನಟಿ ತೆಲಂಗಾಣ ಶಕುಂತಲಾ ಇದ್ದಂತೆ ಇದ್ದಳು. ಸಿಗರೇಟ್ ಕಂಡೊಡನೆ ಖುಷಿಯಿಂದ ” ತಕ ಬಾ ನಂಜುಂಡಪ್ಪ ಇತ್ತ…ಇವನೌನ್ ಚಳಿ ಜಾಸ್ತಿ ಆಗ್ತಾ ಐತೆ….. ಒಂದ್ ಧಮ್ ಎಳಿಯಾನ ” ಎನ್ನುತ್ತ ಸಿಗರೇಟ್ ತೆಗೆದುಕೊಂಡು ಗಂಡಸರಿಗಿಂತ ಘನವಾಗಿ ಧಮ್ ಎಳೆದು ಊದ್ರ ಬಿಡುತ್ತಿದ್ದಳು.ನಾವೆಲ್ಲ ಚಿಕ್ಕ ಮಕ್ಕಳು ಲಿಂಗಮ್ಮಜ್ಜಿ ಸಿಗರೇಟ್ ಸೇದಿ ಊದ್ರ ( ಹೊಗೆ) ಬಿಡುವ ಪರಿಯನ್ನು ಭಾರೀ ವಿಸ್ಮಯದಿಂದ ನೋಡುತ್ತಿದ್ದೆವು. ಆಗ ನಮ್ಮ ಅಮ್ಮ ಬಂದು ಕೋಪದಿಂದ “ಮಕ್ಕಳ ಮುಂದೆ ಎಲ್ಲಾ ಹಿಂಗೆ ಮಾಡ್ತಾ ಇದ್ರೆ ಏನ್ ಗತಿ ನಿಂಗಮ್ಮ….. ನಮ್ಮ ಯಜಮಾನಪ್ಪನಿಗಂತೂ ಬುದ್ಧಿ ಇಲ್ಲ ಅಂದ್ರೆ ನಿಂಗಾದ್ರೂ ಬೇಡ್ವೆ… ಎಂದು ಹುಸಿ ಮುನಿಸು ತೋರಿ ಗದರಿಕೊಳ್ಳುತ್ತಿದ್ದಳು. ಆಗ ಅಪ್ಪ ” ಏಯ್ ಸುಮ್ನಿರೇ….ನಿಂಗಮ್ಮಜ್ಜಿ ಏನಾರ ದಿನಾ ಸಿಗರೇಟ್ ಸೇದ್ತಾಳಾ, ಪಾಪ ವರ್ಷಕ್ಕೆ ಒಂದ್ಸಾರಿ ಜಡಿ ಮಳೆ ಬಂದಾಗ ನಾನ್ ಕೊಟ್ರೆ ಸಿಗರೇಟ್ ಸೇದ್ತಾಳೆ, ಅಷ್ಟೇ ಬಿಡು……ಯಾವಾಗ್ಲೂ ಬೀಡೀನೇ ಅಲ್ವೇ ಸೇದೋದು…ಅಲ್ವೇ ನಿಂಗಮ್ಮಜ್ಜಿ ಎಂದು ನಗಾಡುತ್ತಿದ್ದ. ಆಗ ಅಮ್ಮ ನಿಮಗೆ ಬುದ್ಧಿ ಹೇಳೋಕಾಗಲ್ಲ ಏನಾರ ಮಾಡ್ಕೊಳ್ಳಿ ಎಂದು ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದಳು. ಲಿಂಗಮ್ಮಜ್ಜಿಯ ಮೊಮ್ಮಕ್ಕಳು ಮಂಗ್ಳಿ, ರಾಜ, ತಿಮ್ಮ, ನಾನು,ಅಕ್ಕ,ಅಣ್ಣಂದಿರು ಎಲ್ಲಾ ಲಿಂಗಮ್ಮಜ್ಜಿಯ ಸುತ್ತ ಮುತ್ತಿಕೊಂಡು ತಮಾಷೆ ನೋಡುತ್ತಿದ್ದೆವು. ಆಗ ಅಪ್ಪ ಅಮ್ಮನಿಗೆ ” ನಿಂಗೊತ್ತಿಲ್ಲ ಕಣೆ ಗಂಡಸಿಗೊಂದು ಚಟ ಹೆಂಗಸಿಗೊಂದು ಹಠ ಇರಬೇಕಂತೆ, ನನಗಿರೋದು ಇದೊಂದೇ ಚಟ ಅಲ್ವೇನೇ, ಅದಕ್ಕೂ ಕಲ್ಲು ಹಾಕ್ತೀಯಲ್ಲೇ ಸಿಗರೇಟ್ ಸೇದೋದು ಒಂದೇ ನನ್ನ ಚಟ ಅಲ್ವಾ, ಸೇದಬಾರದು ಅನ್ನೋದು ನಿನ್ನ ಹಠ.. ಇರ್ಲಿ ಬಿಡು, “ಎಂದು ತಮಾಷೆ ಮಾಡುತ್ತಿದ್ದ. ಎಲ್ಲಾ ಸದ್ಗುಣಗಳನ್ನು ಹೊಂದಿದ್ದ ಅಪ್ಪ ಅದು ಯಾಕೋ ಏನೋ ಸಿಗರೇಟಿನ ಅಮಲಿಗೆ ಬಿದ್ದಿದ್ದ. ತಿಂಡಿ ತಿಂದ ನಂತರ ಒಂದು ಊಟದ ನಂತರ ಒಂದು ಹೀಗೆ ದಿನದಲ್ಲಿ ಎರಡು ಮೂರು ಸಿಗರೇಟ್ ಎಳೆದು ಬಿಸಾಕುತ್ತಿದ್ದ. ಲಿಂಗಮ್ಮಜ್ಜಿಯೂ ಅಪರೂಪಕ್ಕೆ ಬೀಡಿ ಸಿಗರೇಟು ಸೇದುತ್ತಿದ್ದಳು. ಎಲೆ ಅಡಿಕೆ ಅಂತೂ ಬಾಯಿ ತುಂಬಾ ಯಾವಾಗಲೂ ಇರಬೇಕಿತ್ತು, ತನ್ನ ಸೊಂಟಕ್ಕೆ ಎಲೆ ಅಡಿಕೆ ಚೀಲ ಸಿಕ್ಕಿಸಿಕೊಂಡೇ ಇರುತ್ತಿದ್ದಳು.ನಮ್ಮ ಊರಿನಲ್ಲಿ ಇಬ್ಬರು ಮೂವರು ಲಿಂಗಮ್ಮಜ್ಜಿಗಳಿದ್ದರು. ಆದ್ದರಿಂದ ಅವರನ್ನು ಗುರ್ತಿಸಲು ಅವರ ಹೆಸರಿನ ಮುಂದೆ ನಿಕ್ ನೇಮ್ (ನಾಮ ವಿಶೇಷಣ) ಸೇರಿಸಿ ಕರೆಯುತ್ತಿದ್ದರು. ಶಿಶುವಿಹಾರದ ಆಯ ಲಿಂಗಮ್ಮಜ್ಜಿ, ಬೀಡಿ ಲಿಂಗಮ್ಮಜ್ಜಿ, ದುಬ್ಲು ಲಿಂಗಮ್ಮಜ್ಜಿ ಹೀಗೆ ಮೂವರು ಲಿಂಗಮ್ಮಜ್ಜಿಯರಿದ್ದರು.
ಹೀಗೆ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಜಡಿ ಮಳೆ ಬಂದಾಗ ಲಿಂಗಮ್ಮಜ್ಜಿ ಅಪ್ಪನೊಡನೆ ಕುಳಿತು ಬೀಡಿ, ಸಿಗರೇಟ್ ಸೇದುತ್ತಿದ್ದ ದೃಶ್ಯಗಳು, ಆಗ ಅಪ್ಪ ಹಾರಿಸುತ್ತಿದ್ದ ನಗೆ ಚಟಾಕಿಗಳು ನೆನಪಾಗುತ್ತವೆ. ಈಗ ಅಪ್ಪನೂ ಇಲ್ಲ, ಲಿಂಗಮಜ್ಜಿಯೂ ಇಲ್ಲ. ಆ ದಿನಗಳ ನೆನಪುಗಳು ಮಾತ್ರ ನನ್ನ ಮನದ ಭಿತ್ತಿಯಲ್ಲಿ ಭದ್ರವಾಗಿವೆ. ವರ್ಷಕ್ಕೊಮ್ಮೆ ಬರುವ ಜಡಿ ಮಳೆಯಂತೆ ಅಂದಿನ ನೆನಪುಗಳು ಕಣ್ಣಮುಂದೆ ಹಾಯ್ದು ಮನವನ್ನು ಆರ್ದ್ರವಾಗಿಸಿ ತೋಯಿಸುತ್ತವೆ.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ‘ಚೌಚೌ ಬಾತ್’ ಅಂಕಣ (ಭಾಗ –೧೩)- ‘ಒನ್ ಫೋರ್ ಥ್ರೀ’
- ‘ಚೌಚೌ ಬಾತ್’ ಅಂಕಣ (ಭಾಗ –೧೪) – ‘ಮಕ್ಕಳ ನಿರ್ಲಕ್ಷ್ಯ ತಂದ ಆಪತ್ತು’
- ‘ಚೌಚೌ ಬಾತ್’ ಅಂಕಣ (ಭಾಗ –೧೫)- ‘ಎಲ್ಲಿಗೆ ಬಂದಿದೆ ಸ್ವಾತಂತ್ರ್ಯ’
- ‘ಚೌಚೌ ಬಾತ್’ ಅಂಕಣ (ಭಾಗ –೧೬) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೭) – ತಾಳ್ಮೆ ಇಲ್ಲದ ಜೀವನ
- ‘ಚೌಚೌ ಬಾತ್’ ಅಂಕಣ (ಭಾಗ –೧೮)-ಮೊಲೆ ಮೂಡದ ಹೊತ್ತಿನಲ್ಲಿ
- ಸರ್ವಮಂಗಳ ಜಯರಾಮ್ – ಶಿಕ್ಷಕಿ ಗೌರಿಬಿದನೂರು.
